Site icon Vistara News

Makar Sankranti 2023 | ರಾಜ್ಯದೆಲ್ಲೆಡೆ ಮನೆಮಾಡಿದ ಸಂಕ್ರಾಂತಿ ಸಂಭ್ರಮ; ದೇಗುಲದಲ್ಲಿ ನಡೆದ ವಿಶೇಷ ಪೂಜೆ ಪುನಸ್ಕಾರ

ಬೆಂಗಳೂರು: ನಾಡಿನೆಲ್ಲೆಡೆ ಮಕರ ಸಂಕ್ರಾಂತಿ (Makar Sankranti 2023) ಸಂಭ್ರಮ ಮನೆಮಾಡಿದ್ದು, ವರ್ಷದ ಮೊದಲ ಹಬ್ಬವನ್ನು ಜನ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಎಳ್ಳು-ಬೆಲ್ಲವನ್ನು ಹಂಚಲು ಮಾರುಕಟ್ಟೆಗಳಲ್ಲಿ ಭರ್ಜರಿ ಖರೀದಿಯಲ್ಲಿ ತೊಡಗಿದ್ದರೆ, ಇತ್ತ ವಿವಿಧ ಜಿಲ್ಲೆಗಳ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಪುನಸ್ಕಾರ ನೆರವೇರಿದ್ದು, ಭಕ್ತರ ದಂಡು ಹರಿದು ಬಂತು. ಯಾವ್ಯಾವ ಜಿಲ್ಲೆಯಲ್ಲಿ ಏನೆಲ್ಲ ವಿಶೇಷತೆಗಳು ಜರುಗಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಉಡುಪಿಯ ಮಕರ ಸಂಕ್ರಾಂತಿ ಉತ್ಸವ
800 ವರ್ಷಗಳ ಹಿಂದೆ ಆಚಾರ್ಯ ಮಧ್ವರು ಮಕರ ಸಂಕ್ರಾಂತಿಯಂದು ಕಡೆಗೋಲು ಕೃಷ್ಣನನ್ನು ಉಡುಪಿ ಕೃಷ್ಣ ಮಠದಲ್ಲಿ ಪ್ರತಿಷ್ಠಾಪನೆ ಮಾಡಿದರು ಎನ್ನುವ ಪ್ರತೀತಿ ಇದೆ. ಹೀಗಾಗಿ ಮಕರ ಸಂಕ್ರಾಂತಿಯಂದು ಉಡುಪಿ ಕೃಷ್ಣ ಮಠದ ರಥ ಬೀದಿಯಲ್ಲಿ ಏಕಕಾಲದಲ್ಲಿ ಮೂರು ತೇರುಗಳ ಉತ್ಸವ ನಡೆಯುತ್ತದೆ. ಈ ಬಾರಿಯೂ ಶನಿವಾರ ಮಕರ ಸಂಕ್ರಾಂತಿ ಅಂಗವಾಗಿ ಕೃಷ್ಣ ಮಠದಲ್ಲಿ ತೇರುಗಳ ಅದ್ಧೂರಿ ಉತ್ಸವ ಮೇಳೈಸಿತ್ತು. ಆರಂಭದಲ್ಲಿ ಮಧ್ವಸರೋವರದಲ್ಲಿ ತೆಪ್ಪೋತ್ಸವ ನಡೆಯಿತು.

ಬ್ರಹ್ಮ ರಥದಲ್ಲಿರುವ ಕೃಷ್ಣನ ದರ್ಶನ ಮಾಡಿದ ಭಕ್ತರ ದಂಡು

ನಂತರ ಪಲ್ಲಕ್ಕಿಯಲ್ಲಿ ದೇವರನ್ನು ತಂದು ಮೂರು ರಥಗಳಲ್ಲಿ ಉತ್ಸವ ಮಾಡಲಾಯಿತು. ಬ್ರಹ್ಮ ರಥದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರ ಮೂರ್ತಿ, ಮಹಾಪೂಜಾ ರಥ ಹಾಗೂ ಗರುಡ ರಥದಲ್ಲಿ ಅನಂಥೇಶ್ವರ ಹಾಗೂ ಚಂದ್ರಮೌಳೇಶ್ವರ ದೇವರ ಮೂರ್ತಿ ಇಟ್ಟು ಮೆರವಣಿಗೆ ಮಾಡಲಾಯಿತು. ಮೂರು ರಥಗಳ ಉತ್ಸವ ವಿಹಂಗಮ ನೋಟ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಸಾವಿರಾರು ಮಂದಿ ಈ ದಿನದ ಆಚರಣೆಗೆ ಸಾಕ್ಷಿಯಾದರು. ಎಂಟು ಮಠದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ವಿದ್ಯುತ್‌ ದೀಪಾಲಂಕಾರ, ಸಾಂಪ್ರದಾಯಿಕ ಪಟಾಕಿ, ವೈಭವದ ಮೆರವಣಿಗೆ ಸಂಕ್ರಾಂತಿಯ ವಿಶೇಷವಾಗಿತ್ತು.

ಕಾಶಿ ಚಂದ್ರಮೌಳೇಶ್ವರನಿಗೆ ಪ್ರಥಮ ಸೂರ್ಯ ರಶ್ಮಿ ಸ್ಪರ್ಶ
ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿಯಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿರುವ ಕಾಶಿ ಚಂದ್ರಮೌಳೇಶ್ವರನಿಗೆ ಪ್ರಥಮ ಸೂರ್ಯ ರಶ್ಮಿ ಸ್ಪರ್ಶವಾಗಿದೆ.

ಈ ಬಾರಿ 7.15ಕ್ಕೆ ಮಕರ ಶುಭ ಲಗ್ನದಲ್ಲಿ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಸ್ಪರ್ಶವಾಗಿದೆ. ಸೂರ್ಯ ರಶ್ಮಿ ಸ್ಪರ್ಶದ ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ದೇಗುಲದ ಆವರಣದಲ್ಲಿ ಇಷ್ಟಲಿಂಗ ಪೂಜೆ
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ಥಾನಕ್ಕೆ ಭಕ್ತಗಣ ಹರಿದು ಬರುತ್ತಿದೆ. ಕೋವಿಡ್‌ನಿಂದಾಗಿ ಎರಡು ವರ್ಷ ಸಂಕ್ರಾಂತಿ ವೇಳೆ ನದಿ ಸ್ನಾನವನ್ನು ನಿಷೇಧಿಸಲಾಗಿತ್ತು. ಎರಡು ವರ್ಷಗಳ ಬಳಿಕ ಭಕ್ತರಿಗೆ ಸಂಕ್ರಾಂತಿಯ ದಿನ ನದಿ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನದಿ ಸ್ನಾನದ ಬಳಿಕ ದಡದ ಹಾಗೂ ದೇಗುಲದ ಆವರಣದಲ್ಲಿ ಇಷ್ಟಲಿಂಗ ಪೂಜೆ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹೊನ್ನಹಮ್ಮಿಗಿ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿತ್ತು. ಹೊನ್ನಹಮ್ಮಿಗಿಯ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಶಾಲಾ ವಾತಾವರಣವು ಹಳ್ಳಿ ಸೊಗಡಿನಿಂದ ಕಂಗೊಳಿಸುತ್ತಿದ್ದು, ಇಳಕಲ್ ಸೀರೆ, ಪೈಜಾಮ, ಧೋತಿ ಧರಿಸಿ ವಿದ್ಯಾರ್ಥಿಗಳು ಮಿಂಚಿದರು. ಗೋವು ಪೂಜೆಯೊಂದಿಗೆ ರೈತರು ಬೆಳೆದ ಜೋಳ ರಾಶಿಗೆ ಪೂಜೆ ಸಲ್ಲಿಸಲಾಯಿತು. ಆವರಣದಲ್ಲಿ ಮಕ್ಕಳು ಬಿಡಿಸಿದ ರಂಗೋಲಿಯ ಚಿತ್ತಾರ ಆಕರ್ಷಿಸುತ್ತಿತ್ತು.

ಮಂತ್ರಾಲಯದಲ್ಲಿ ಸಂಕ್ರಾಂತಿ ಸಂಭ್ರಮ

ಮಂತ್ರಾಲಯಕ್ಕೆ ಹರಿದು ಬಂತು ಭಕ್ತರ ದಂಡು
ನಾಡಿನಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದು, ಮಂತ್ರಾಲಯಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ರಾಜ್ಯ ಮತ್ತು ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದು, ವರ್ಷದ ಮೊದಲ ಹಬ್ಬ ಹಿನ್ನೆಲೆ ರಾಯರಿಗೆ ಪೂಜೆ ಸಲ್ಲಿಸಲಾಯಿತು. ಭಕ್ತರು ಮೊದಲು ತುಂಗೆಯಲ್ಲಿ ಪುಣ್ಯಸ್ನಾನ ಮಾಡಿ ಬಳಿಕ ರಾಯರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಬಸವೇಶ್ವರ ಸ್ವಾಮಿ ರಥೋತ್ಸವ
ಬೆಂಗಳೂರಿನ ಸೋಂಪುರದಲ್ಲಿ ಕಡಲೆಕಾಯಿ ಪರಿಷೆ ಹಾಗೂ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ. ರುದ್ರೇಶ್ ನೇತೃತ್ವದಲ್ಲಿ ಚಾಲನೆ ದೊರೆಯಿತು. ಪರಿಷೆಯ ಅಂಗವಾಗಿ ಬರುವ ಭಕ್ತಾದಿಗಳಿಗೆ ಉಚಿತವಾಗಿ ತಿನ್ನಲು ಬೇಯಿಸಿದ ಕಡಲೇಕಾಯಿ, ಕಬ್ಬು, ಗೆಣಸು, ಗಿಣ್ಣು, ಅವರೆಕಾಯಿಯನ್ನು ವಿತರಣೆ ಮಾಡಲಾಗಿದೆ.

ಇದನ್ನೂ ಓದಿ | Makar Sankranti 2023 | ಗವಿಗಂಗಾಧರನಿಗೆ ಸೂರ್ಯರಶ್ಮಿಯ ಅಭಿಷೇಕದ ನಮನ; ವಿಸ್ಮಯ ದರ್ಶನಕ್ಕೆ ಕಾದುನಿಂತ ಭಕ್ತಗಣ

Exit mobile version