Site icon Vistara News

Makara Jyothi 2023 | ಶ್ರೀ ಅಯ್ಯಪ್ಪನ ಸನ್ನಿಧಾನದಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ

Makara Jyothi 2023

ಶಬರಿಮಲೆ: ಇಲ್ಲಿಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ “ಮಕರ ಜ್ಯೋತಿ” (Makara Jyothi 2023) ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾವಿರಾರು ಭಕ್ತರು “ಮಕರ ಜ್ಯೋತಿʼʼ ಮತ್ತು “ಮಕರವಿಳಕ್ಕುʼʼ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಮಕರವಿಳಕ್ಕು ಕರ್ಪೂರದ ಆರತಿಯು ಶನಿವಾರ ಸಂಜೆ 6.30 ರಿಂದ 6.40 ರವರಗೆ ನಡೆಯಲಿದೆ. ಮಕರ ಜ್ಯೋತಿ ದರ್ಶನವು ರಾತ್ರಿ 8.45 ಕ್ಕೆ ಸಂಭವಿಸಲಿದೆ. ದೂರದ ಪೊನ್ನಂಬಲ ಮೇಡಿನಲ್ಲಿ ಮಕರ ಜ್ಯೋತಿ ಬೆಳಗಲಿದೆ. ಸುಮಾರು ಒಂದೂವರೆ ಲಕ್ಷ ಮಾಲಾಧಾರಿಗಳು ಈ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಲು ಕಾತುರರಾಗಿದ್ದಾರೆ.

ಇಂದು ರಾತ್ರಿ 8.45 ರ ವೇಳೆಗೆ ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಲಿದ್ದು, ಈ ಹೊತ್ತಿನಲ್ಲಿಯೇ ಮಕರ ಜ್ಯೋತಿ ದರ್ಶನವಾಗಲಿದೆ. ಆಕಾಶದಲ್ಲಿ ನಕ್ಷತ್ರಗಳು ಗೋಚರಿಸಲಿದ್ದು, ಅಯ್ಯಪ್ಪನ ಗರ್ಭಗುಡಿಯ ಮೇಲೆ ಗರುಡ ಪ್ರದಕ್ಷಿಣೆ ಮಾಡಲಿದೆ ಎಂಬ ನಂಬಿಕೆಯಿದೆ.

ಪಂದಳ ರಾಜನ ಅರಮನೆಯಿಂದ ಶ್ರೀ ಅಯ್ಯಪ್ಪನ ತಿರುವಾಭರಣ ಪೆಟ್ಟಿಗೆಯನ್ನು ಮೆರವಣಿಗೆಯಲ್ಲಿ ತಂದು ಶ್ರೀ ಅಯ್ಯಪ್ಪ ಸ್ವಾಮಿಯನ್ನು ಅಲಂಕಾರ ಮಾಡಲಾಗಿದೆ. ಈ ಪ್ರಮುಖ ಆಚರಣೆ ಸಂದರ್ಭದಲ್ಲಿ ನೂಕುನುಗ್ಗಲು ಸಂಭವಿಸದಂತೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಮಕರ ಜ್ಯೋತಿಯ ನಂತರ ಮಾಳಿಗಪುರತ್ತಮ್ಮ ದೇವರು ಅಯ್ಯಪ್ಪ ಸನ್ನಿಧಿಗೆ ಆಗಮಿಸಲಿದೆ. ಜ.15ರಿಂದ 19ರ ತನಕ ಮೆಟ್ಟಿಲ ಪೂಜೆ, 18ರಂದು ಭಸ್ಮಾಭಿಷೇಕ, 19ರಂದು ಗುರುಪೂಜೆ ನಡೆಯಲಿದೆ. ಜ.20ಕ್ಕೆ ಪಂದಳ ರಾಜ ಪ್ರತಿನಿಧಿ ಅಯ್ಯಪ್ಪ ದರ್ಶನ ಪಡೆದ ಬಳಿಕ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಭಕ್ತರಿಗೆ ಜ.19ರ ತನಕ ಮಾತ್ರವೇ ಅಯ್ಯಪ್ಪ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ | Makar Sankranti 2023 | ಸಂಕ್ರಾಂತಿ ಹಬ್ಬದಂದು ಯಾವ ರಾಶಿಯವರು ಏನು ದಾನ ಮಾಡಬೇಕು?

Exit mobile version