Site icon Vistara News

Makara Jyothi 2023 | ಶ್ರೀ ಅಯ್ಯಪ್ಪನ ಸನ್ನಿಧಾನದಲ್ಲಿ ಮಕರ ಜ್ಯೋತಿ ದರ್ಶನ; ಪುನೀತರಾದ ಲಕ್ಷಾಂತರ ಭಕ್ತರು

Makara Jyothi 2023

ಶಬರಿಮಲೆ: ಇಲ್ಲಿಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ “ಮಕರ ಜ್ಯೋತಿ” (Makara Jyothi 2023) ಎಂದೇ ಕರೆಯಲ್ಪಡುತ್ತಿರುವ “ಮಕರವಿಳಕ್ಕುʼʼ ದರ್ಶನವನ್ನು ಸಾವಿರಾರು ಭಕ್ತರು ಶನಿವಾರ ಸಂಜೆ ಪಡೆದುಕೊಂಡಿದ್ದಾರೆ.

ನಿಗದಿಯಂತೆ ಶನಿವಾರ ಸಂಜೆ 6.40 ವೇಳೆಗೆ ದೂರದ ಪೊನ್ನಂಬಲ ಗುಡ್ಡದಲ್ಲಿ ಮಕರ ಜ್ಯೋತಿ ಮೂರು ಬಾರಿ ಬೆಳಗಿತು. ಇದನ್ನು ದರ್ಶಿಸಿದ ಮಾಲಾಧಾರಿಗಳು ಭಕ್ತಿಪರವಶರಾಗಿ “ಸ್ವಾಮಿಯೇ ಶರಣಂ ಅಯ್ಯಪ್ಪ ʼʼಎಂದು ಕೂಗಿದರು. ಸುಮಾರು ಒಂದೂವರೆ ಲಕ್ಷ ಮಾಲಾಧಾರಿಗಳು ಈ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಿದ್ದರು. ಇದರ ನೇರ ಪ್ರಸಾರವನ್ನು ಲಕ್ಷಾಂತರ ಭಕ್ತರು ವೀಕ್ಷಿಸಿದರು.

ಏನಿದು ಮಕರವಿಳಕ್ಕು?

ಮಕರ ಸಂಕ್ರಾಂತಿಯ ಈ ದಿನ ಸಂಜೆ ಕತ್ತಲಾಗುತ್ತಿದ್ದಂತೆಯೇ ಶ್ರೀ ಅಯ್ಯಪ್ಪ ಸನ್ನಿಧಾನದ ಮುಂಭಾಗದಲ್ಲಿರುವ ಪೊನ್ನಂಬಲ ಗುಡ್ಡದಲ್ಲಿ ಜ್ವಾಲೆ ಕಾಣಿಸಿಕೊಳ್ಳುತ್ತದೆ. ಇದು ಮಕರ ಜ್ಯೋತಿ ಅಲ್ಲ ಎಂದು ಈಗಾಗಲೇ ಟ್ರಾವಂಕೂರ್‌ ದೇವಸ್ವಂ ಬೋರ್ಡ್‌ ಸ್ಪಷ್ಟಪಡಿಸಿದೆ. ಇದನ್ನು “ಮಕರವಿಳಕ್ಕುʼʼ ಎಂದು ಕರೆಯಲಾಗುತ್ತದೆ. ಇಲ್ಲಿ “ವಿಳಕ್ಕುʼʼ ಎಂದರೆ ಬೆಳಕು ಎಂದು ಅರ್ಥ. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಈ ಬೆಳಕು ಕಾಣುವುದರಿಂದ ಇದನ್ನು “ಮಕರ ವಿಳಕ್ಕುʼʼ ಎನ್ನಲಾಗುತ್ತದೆ. ಪೊನ್ನಂಬಲ ಬೆಟ್ಟದಲ್ಲಿ ಪುರಾತನ ಕಾಲದಿಂದಲೂ ಮಲಾ ಆರ್ಯರು ಅನ್ನುವ ಬುಡಕಟ್ಟು ಜನರು ವಾಸವಾಗಿದ್ದು, ಅವರು ಮಕರ ಸಂಕ್ರಮಣದ ದಿನ ಕರ್ಪೂರದೊಂದಿಗೆ ಬೆಂಕಿಯನ್ನು ಹಾಕಿ ದೀಪೋತ್ಸವ ಆಚರಿಸುತ್ತಾ ಬಂದಿದ್ದಾರೆ. ಈಗಲೂ ಅದನ್ನೇ ಮುಂದುವರಿಸಿಕೊಂಡು ಬರಲಾಗಿದೆ. ಹೀಗಾಗಿ ಬೆಟ್ಟದಲ್ಲಿ ಈ ಜ್ಯೋತಿ ಪ್ರತಿ ವರ್ಷ ಕಾಣುತ್ತಿದೆ. ಈ ಬಾರಿಯೂ ಇದರ ದರ್ಶನವಾಗಿದೆ.

ಇಂದು ರಾತ್ರಿ 8.45 ರ ವೇಳೆಗೆ ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಲಿದ್ದು, ಈ ಹೊತ್ತಿನಲ್ಲಿ ವಿಶೇಷವಾದ ನಕ್ಷತ್ರವೊಂದು ಮಿನುಗುತ್ತದೆ. ಇದನ್ನೇ “ಮಕರ ಜ್ಯೋತಿʼʼ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಅಯ್ಯಪ್ಪನ ಗರ್ಭಗುಡಿಯ ಮೇಲೆ ಗರುಡ ಪ್ರದಕ್ಷಿಣೆ ಮಾಡಲಿದೆ ಎಂಬ ನಂಬಿಕೆಯಿದೆ.

ಶನಿವಾರ ಪಂದಳ ರಾಜನ ಅರಮನೆಯಿಂದ ಶ್ರೀ ಅಯ್ಯಪ್ಪನ ತಿರುವಾಭರಣ ಪೆಟ್ಟಿಗೆಯನ್ನು ಮೆರವಣಿಗೆಯಲ್ಲಿ ತಂದು ಶ್ರೀ ಅಯ್ಯಪ್ಪ ಸ್ವಾಮಿಯನ್ನು ಅಲಂಕಾರ ಮಾಡಲಾಗಿದೆ. ವಿಶೇಷ ಪೂಜೆ-ಪುನಸ್ಕಾರಗಳೂ ನಡೆದಿವೆ. ಮಕರ ಜ್ಯೋತಿಯ ದರ್ಶನವನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಭಕ್ತರು ಆಗಮಿಸಿದ್ದರು.

ಮಕರ ಜ್ಯೋತಿಯ ನಂತರ ಮಾಳಿಗಪುರತ್ತಮ್ಮ ದೇವರು ಅಯ್ಯಪ್ಪ ಸನ್ನಿಧಿಗೆ ಆಗಮಿಸಲಿದೆ. ಜ.15ರಿಂದ 19ರ ತನಕ ಮೆಟ್ಟಿಲ ಪೂಜೆ, 18ರಂದು ಭಸ್ಮಾಭಿಷೇಕ, 19ರಂದು ಗುರುಪೂಜೆ ನಡೆಯಲಿದೆ. ಜ.20ಕ್ಕೆ ಪಂದಳ ರಾಜ ಪ್ರತಿನಿಧಿ ಅಯ್ಯಪ್ಪ ದರ್ಶನ ಪಡೆದ ಬಳಿಕ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಭಕ್ತರಿಗೆ ಜ.19ರ ತನಕ ಮಾತ್ರವೇ ಅಯ್ಯಪ್ಪ ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ | Makar Sankranti 2023 | ಸಂಕ್ರಾಂತಿ ಹಬ್ಬದಂದು ಯಾವ ರಾಶಿಯವರು ಏನು ದಾನ ಮಾಡಬೇಕು?

Exit mobile version