Site icon Vistara News

ಗುರು ರಾಯರ ಮಠದ ಹೆಸರಿನಲ್ಲಿಯೂ ಆನ್‌ಲೈನ್‌ನಲ್ಲಿ ವಂಚನೆ; ಇಬ್ಬರ ಬಂಧನ

mantralayam plastics

ಮಂತ್ರಾಲಯ: ಗಾಣಗಾಪುರದಲ್ಲಿರುವ ಪ್ರಸಿದ್ಧ ಶ್ರೀ ಗುರು ದತ್ತಾತ್ರೇಯ ದೇಗುಲದ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ರೂಪಿಸಿ ಕೋಟ್ಯಂತರ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಯೂ ಇದೇ ರೀತಿಯ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಇಬ್ಬರನ್ನು ಇಲ್ಲಿಯ ಪೊಲೀಸರು ಬಂಧಿಸಿದ್ದಾರೆ.

ಶ್ರೀ ರಾಘವೇಂದ್ರ ಸ್ವಾಮಿ ಮಠದ ಹೆಸರಿನಲ್ಲಿ ವೆಬ್‌ಸೈಟ್‌ ರೂಪಿಸಿಕೊಂಡು ವಿವಿಧ ಸೇವೆಯ ಹೆಸರಿನಲ್ಲಿ ಭಕ್ತರಿಂದ ಹಣ ಸಂಗ್ರಹಿಸಲಾಗಿದೆ. ಅಲ್ಲದೆ, ಕೊರೊನಾ ಕಾಲದಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಮಠ ಆರ್ಥಿಕ ಸಂಕಷ್ಟದಲ್ಲಿದ್ದು, ಸಿಬ್ಬಂದಿಗೆ ವೇತನ ನೀಡಲೂ ಹಣವಿಲ್ಲ. ಹೀಗಾಗಿ ದಯವಿಟ್ಟು ಧನ ಸಹಾಯ ಮಾಡಿ ಎಂದು ಆನ್‌ಲೈನ್‌ನಲ್ಲಿ ಮನವಿ ಮಾಡಿಕೊಂಡು, ಸಾರ್ವಜನಿಕರಿಂದ ಹಣ ಸಂಗ್ರಹಿಸಿರುವುದೂ ಬೆಳಕಿಗೆ ಬಂದಿದೆ.

ಮಠದಲ್ಲಿ ೨೫ ರೂ.ಗೆ ಮಾರಾಟ ಮಾಡಲಾಗುವ ಪರಿಮಳ ಪ್ರಸಾದವನ್ನು ಆನ್‌ಲೈನ್‌ನಲ್ಲಿ ೪೦೦-೫೦೦ ರೂ.ಗೆ ಮಾರಾಟ ಮಾಡಿ ಹಣ ಸಂಗ್ರಹಿಸಲಾಗಿದೆ. ಆರೋಪಿಗಳು ತಮ್ಮ ದೂರವಾಣಿ ಸಂಖ್ಯೆ ಮತ್ತು ಅಕೌಂಟ್‌ ನಂಬರ್‌ ಅನ್ನು ನೀಡಿ ಈ ವಂಚನೆ ನಡೆಸಿದ್ದಾರೆ.

ಈ ಸಂಬಂಧ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಈಗ ಇಬ್ಬರನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳು ಒಟ್ಟು ಎಷ್ಟು ಹಣ ಸಂಗ್ರಹಿಸಿದ್ದಾರೆ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ.

ಈ ಹಿಂದೆ ಕೂಡ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ, ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಮಠಕ್ಕೆ ದೇಣಿಗೆ ನೀಡುವಂತೆ ಮನವಿ ಮಾಡಿಕೊಂಡು, ಕೆಲ ಆರೋಪಿಗಳು ಹಣ ಸಂಗ್ರಹಿಸಿರುವುದು ಬೆಳಕಿಗೆ ಬಂದಿತ್ತು.

ಭಕ್ತರು ಆನ್‌ಲೈನ್‌ನಲ್ಲಿ ಸೇವೆಗೆ ಹಣ ಪಾವತಿಸುವುದು, ಮತ್ತಿತರ ವ್ಯವಹಾರ ನಡೆಸುವಾಗ ಎಚ್ಚರಿಕೆಯಿಂದಿರಬೇಕು. ಮಠದ ಅಧಿಕೃತ ವೆಬ್‌ಸೈಟ್‌ ಮೂಲಕ ಮಾತ್ರ ವ್ಯವಹಾರ ನಡೆಸಬೇಕು. ಪರಿಮಳ ಪ್ರಸಾದವನ್ನು ಆನ್‌ಲೈನಲ್ಲಿ ವಿತರಿಸಲು ವ್ಯವಸ್ಥೆ ಮಾಡಲಾಗಿಲ್ಲ ಎಂದು ಮಠದ ವ್ಯವಸ್ಥಾಪಕರಾದ ಎಸ್‌ ಕೆ ಶ್ರೀನಿವಾಸ್‌ ತಿಳಿಸಿದ್ದಾರೆ. ಮಠದ ಅಧಿಕೃತ ವೆಬ್‌ಸೈಟ್‌ ವಿಳಾಸ ಇಂತಿದೆ: https://srsmatha.org

ಇದನ್ನೂ ಓದಿ | ಗಾಣಗಾಪುರ ದತ್ತ ದೇವರ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌; ಅರ್ಚಕರಿಂದ ವಂಚನೆ

Exit mobile version