Site icon Vistara News

Ayodhya Ram Mandir: ಚಂಪತ್ ರಾಯ್; ಕೆಮಿಸ್ಟ್ರಿ ಟೀಚರ್ ಅಯೋಧ್ಯೆ ರಾಮ ಮಂದಿರದ ಶಿಲ್ಪಿಯಾದ ಕತೆಯಿದು!

champat rai

ದಶಕಗಳ ಹಿಂದೆ ಅವರು ಕ್ಲಾಸ್‌ನಲ್ಲಿ ಆಮ್ಲ- ಪ್ರತ್ಯಾಮ್ಲ ಎಂದೆಲ್ಲ ಪಾಠ ಮಾಡುತ್ತ ಇದ್ದ ಕೆಮಿಸ್ಟ್ರಿ ಟೀಚರ್‌ ಆಗಿದ್ದ ಕಾಲದಲ್ಲಿ, ಮುಂದೊಂದು ದಿನ ತಾನು ಇಡೀ ದೇಶದ ಗಮನದ ಕೇಂದ್ರವಾಗಬಲ್ಲ ದೇವಾಲಯವೊಂದರ (Ayodhya Ram Mandir) ನಿರ್ಮಾಣದ ಸಂಪೂರ್ಣ ಹೊಣೆ ಹೊರಲಿದ್ದೇನೆ ಎಂಬ ಕನಸನ್ನೂ ಕಂಡಿರಲಿಕ್ಕಿಲ್ಲ.

ಇವರು ಚಂಪತ್‌ ರಾಯ್ (champat rai).‌ ವಿಶ್ವ ಹಿಂದೂ ಪರಿಷತ್ (VHP) ಉಪಾಧ್ಯಕ್ಷ ಹಾಗೂ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ. ರಾಮಮಂದಿರ ಚಳವಳಿಯ ಹೋರಾಟಗಾರ. ಹಿಂದೆ ಅವರು ರಸಾಯನಶಾಸ್ತ್ರದ ಶಿಕ್ಷಕರಾಗಿದ್ದರು. ಸುಪ್ರೀಂ ಕೋರ್ಟ್‌ನಿಂದ ಮಂದಿರ ಚಳವಳಿಗೆ ಅನುಕೂಲಕರವಾದ ನ್ಯಾಯಾಂಗ ತೀರ್ಪು ಬಂದ ನಂತರ ಅವರು ಭಾರಿ ನಿರೀಕ್ಷಿತ ದೇವಾಲಯದ ಅಭಿವೃದ್ಧಿಯ ಮೇಲ್ವಿಚಾರಣೆಯ ನಿರ್ಣಾಯಕ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

“ನಮ್ಮ ಕನಸು ನನಸಾಗುವುದನ್ನು ನೋಡುವ ಸಮಯವಿದು. ಸುಮಾರು 500 ವರ್ಷಗಳ ನಂತರ ರಾಮ್ ಲಲ್ಲಾ ಅಯೋಧ್ಯೆಯಲ್ಲಿ ʼವಿರಾಜಮಾನ’ನಾಗಲಿರುವುದರಿಂದ ಇದು ಅಪರೂಪದ ಘಟನೆಯಾಗಿದೆ. 2024ರ ಜನವರಿ 22 ನಿಜವಾದ ಅರ್ಥದಲ್ಲಿ ದೀಪಾವಳಿ ಆಗಿರುತ್ತದೆ. ಆ ದಿನ ದೇವಾಲಯದಲ್ಲಿ ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ” ಎಂದು ಚಂಪತ್ ರಾಯ್ ಹೇಳುತ್ತಾರೆ.

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗೀನಾ ತಹಸಿಲ್‌ನ ಮೊಹಲ್ಲಾ ಸರೈಮರ್‌ನ ನಿವಾಸಿ ರಾಮೇಶ್ವರ ಪ್ರಸಾದ್ ಬನ್ಸಾಲ್ ಅವರ ಕುಟುಂಬದಲ್ಲಿ 1946ರಲ್ಲಿ ಜನಿಸಿದ ರಾಯ್ ಅವರು ಚಿಕ್ಕವರಿದ್ದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜೊತೆಗೆ ಸಂಬಂಧ ಹೊಂದಿದ್ದರು. ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಧಂಪುರದ ಆಶ್ರಮ ಪದವಿ ಕಾಲೇಜಿನಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾದರು.

1977ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಮ ಜನ್ಮಭೂಮಿ ಆಂದೋಲನದ ಹಿನ್ನೆಲೆಯಲ್ಲಿ ರೈ ಅವರನ್ನು ಜೈಲಿಗೆ ಕಳಿಸಲಾಯಿತು. 18 ತಿಂಗಳ ಕಾಲ ಅವರು ಜೈಲಿನಲ್ಲಿ ಇದ್ದರು. ಚಿತ್ರಹಿಂಸೆಗೊಳಗಾದರು. ವಿವಿಧ ಜಿಲ್ಲಾ ಕಾರಾಗೃಹಗಳಿಗೆ ಅವರನ್ನು ಸ್ಥಳಾಂತರಿಸಲಾಯಿತು. ರಾಯ್ ಜೈಲಿನಲ್ಲಿ ಕಳೆದ ಆ 18 ತಿಂಗಳುಗಳು ಅವರನ್ನು ಸಂಪೂರ್ಣವಾಗಿ ಬದಲಾಯಿಸಿದವು. ಅವರು ಇನ್ನೂ ದೃಢವಾದ ನಿರ್ಣಯದೊಂದಿಗೆ ವಿಭಿನ್ನ ವ್ಯಕ್ತಿಯಾಗಿ ಹೊರಬಂದರು. ಆ 18 ತಿಂಗಳುಗಳು ಅವರನ್ನು ಗಟ್ಟಿಗೊಳಿಸಿದವು. ಬಿಡುಗಡೆಯಾದ ಕೂಡಲೇ ಅವರು ಹಿಂತಿರುಗಿ ಬಂದು ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆಯ ತಮ್ಮ ಗುರಿಯತ್ತ ಪ್ರಯಾಣವನ್ನು ಪುನರಾರಂಭಿಸಿದರು.

ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಂದರೆ 1980ರಲ್ಲಿ ರೈ ವಿಶ್ವ ಹಿಂದೂ ಪರಿಷತ್ತಿಗೆ ಸೇರಿ ಸಮಾಜಕ್ಕಾಗಿ ಕೆಲಸ ಮಾಡುವುದನ್ನು ಮುಂದುವರೆಸಿದರು. ರಾಯ್ ಅವರನ್ನು ಹತ್ತಿರದಿಂದ ಬಲ್ಲವರು ಅವರು ಯಾವಾಗಲೂ ಅರ್ಪಣೆಯುಳ್ಳ, ಶ್ರದ್ಧಾವಂತ ಮತ್ತು ಹೆಚ್ಚು ಮಾತನಾಡದ ಕೆಲಸಗಾರ ಎನ್ನುತ್ತಾರೆ. ರಾಮಮಂದಿರ ಆಂದೋಲನಕ್ಕೆ ಅವರು ನೀಡಿದ ಕೊಡುಗೆಗಳಲ್ಲಿ ಈ ಗುಣಗಳು ಪ್ರತಿಫಲಿಸುತ್ತವೆ. ದೇಗುಲದ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಯ್‌ ಅವರು 35 ವರ್ಷಗಳಿಂದ ಜನಮನದಿಂದ ದೂರ ಉಳಿದು ಅದರ ಸಾಕಾರಕ್ಕಾಗಿ ಶ್ರಮಿಸುತ್ತಿದ್ದಾರೆ.

ಆಗ ಅಶೋಕ್ ಸಿಂಘಾಲ್ ಶ್ರೀರಾಮ ಜನ್ಮಭೂಮಿ ಆಂದೋಲನದ ಮುಖವಾಗಿದ್ದರು. ಆದರೆ ನೇಪಥ್ಯದಲ್ಲಿ ಇದ್ದುಕೊಂಡು, ದೇವಾಲಯದ ಅಭಿಯಾನಕ್ಕೆ ರೂಪ ನೀಡುವಲ್ಲಿ ರೈ ನಿರ್ಣಾಯಕ ಪಾತ್ರ ವಹಿಸಿದ್ದರು. 20 ವರ್ಷಗಳ ಕಾಲ ವಿಎಚ್‌ಪಿಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್ ಅವರ ಮರಣದ ನಂತರ, ರಾಯ್‌ ಅವರು ದೇವಾಲಯದ ಅಭಿಯಾನದ ಜವಾಬ್ದಾರಿ ವಹಿಸಿಕೊಂಡರು. ಆಗಸ್ಟ್ 5, 2020ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭವ್ಯ ಮಂದಿರದ ನಿರ್ಮಾಣಕ್ಕೆ ಚಾಲನೆ ನೀಡಿದಾಗ, ಕಾರ್ಯಕ್ರಮದ ರೂಪುರೇಷೆಗಳನ್ನು ರೂಪಿಸಿ ಅದರ ಅನುಷ್ಠಾನಕ್ಕೆ ಚಾಲನೆ ನೀಡಿದವರೇ ಚಂಪತ್ ರಾಯ್.

ಇವರ ಮೇಲೆ ವಿವಾದಗಳೂ ಇವೆ. 2021ರಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ರಾಯ್ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಹೊರಿಸಿದರು. ಇಬ್ಬರು ರಿಯಲ್ ಎಸ್ಟೇಟ್ ಡೀಲರ್‌ಗಳು 2 ಕೋಟಿ ರೂಪಾಯಿಗೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದರು. ಅದನ್ನು ಖರೀದಿಸಿದ 10 ನಿಮಿಷಗಳಲ್ಲಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ಗೆ 18.5 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ.

ರಾಮಜನ್ಮಭೂಮಿ ಟ್ರಸ್ಟ್ ಖರೀದಿಸಿದ ಭೂಮಿಯನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲಾಗಿದೆ ಎಂಬ ಆರೋಪಗಳನ್ನು ರಾಯ್‌ ತಳ್ಳಿಹಾಕಿದ್ದಾರೆ. ಇದಲ್ಲದೆ, ಪಾರದರ್ಶಕತೆ ಕಾಪಾಡಲಾಗಿದೆ ಎಂದು ಹೇಳಿದ್ದಾರೆ. 2023ರಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೊಸ ವಿವಾದಕ್ಕೆ ಸಿಲುಕಿತು. ರಾಮ ಮಂದಿರದ ಸ್ಥಳದ ಸಮೀಪವಿರುವ ಅಂಗದ್ ತಿಲಾದಲ್ಲಿ ಮೋಸದಿಂದ ಭೂಮಿಯನ್ನು ಕಬಳಿಸಲು ಟ್ರಸ್ಟ್‌ ಪ್ರಯತ್ನಿಸುತ್ತಿದೆ ಎಂದು ಹನುಮಾನ್ ಗಢಿ ದೇವಸ್ಥಾನದ ನಾಗಾ ಸಾಧುಗಳು ಆರೋಪಿಸಿದರು. ಟ್ರಸ್ಟ್ ತನ್ನ ಪ್ರತಿಕ್ರಿಯೆಯಲ್ಲಿ, ಆಡಳಿತದ ಕ್ರಮವು ತನ್ನ ನಿಯಂತ್ರಣವನ್ನು ಮೀರಿದೆ ಮತ್ತು ಆದ್ದರಿಂದ ನಿರ್ಧಾರಕ್ಕೆ ಜವಾಬ್ದಾರನಾಗಿರುವುದಿಲ್ಲ ಎಂದು ಹೇಳಿದೆ.

ಕೆಲವು ವಿವಾದಗಳ ನಡುವೆಯೂ ರಾಮ ಮಂದಿರ ನಿರ್ಮಾಣವು ಸಮರೋಪಾದಿಯಲ್ಲಿ ಮುಂದುವರಿದಿದೆ. “ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಎಲ್ಲವೂ ಸಿದ್ಧವಾಗಿದೆ. ಇದು ಅದ್ಧೂರಿಯಾಗಿ ನಡೆಯಲಿದೆ. ದೇಗುಲಕ್ಕಾಗಿ ಮಡಿದ ಕರಸೇವಕರ ಕುಟುಂಬಗಳು ಮತ್ತು ಚಳವಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಕುಟುಂಬಗಳನ್ನು ಹೊರತುಪಡಿಸಿ ಸುಮಾರು 50 ದೇಶಗಳ ಪ್ರತಿನಿಧಿಗಳನ್ನು ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಆಹ್ವಾನಿಸಲಾಗಿದೆ” ಎಂದು ರಾಯ್‌ ಹೇಳಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಮಾರು 3,000 ವಿವಿಐಪಿಗಳು, 4,000 ಸಂತರು ಸೇರಿದಂತೆ ಸುಮಾರು 7,000ಕ್ಕೂ ಹೆಚ್ಚು ಜನರಿಗೆ ಆಮಂತ್ರಣಗಳನ್ನು ಕಳುಹಿಸಿದೆ. ಟ್ರಸ್ಟ್‌ನ ವಿವಿಐಪಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಲಿವುಡ್ ತಾರೆಗಳಾದ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಮತ್ತು ಕಂಗನಾ ರನೌತ್, ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯೋಗ ಗುರು ರಾಮ್‌ದೇವ್ ಮುಂತಾದ ದೊಡ್ಡ ಹೆಸರುಗಳಿವೆ. ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಅದಾನಿ ಇತರರು. 1987-88ರ ಟಿವಿ ಶೋ ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿದ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರದಲ್ಲಿ ನಟಿಸಿದ ದೀಪಿಕಾ ಚಿಖ್ಲಿಯಾ ಅವರನ್ನು ಸಹ ಆಹ್ವಾನಿಸಲಾಗಿದೆ.

ಇದನ್ನೂ ಓದಿ: Ayodhya Ram Mandir: ಡಿ.30ರಂದು ಪ್ರಧಾನಿಯಿಂದ ಅಯೋಧ್ಯೆ ವಿಮಾನ ನಿಲ್ದಾಣ, ರೈಲು ನಿಲ್ದಾಣ ಉದ್ಘಾಟನೆ, ರೋಡ್ ಶೋ

Exit mobile version