ವಂ. ಡಾಕ್ಟರ್ ಫ್ರಾನ್ಸಿಸ್ ಫೆರ್ನಾಂಡಿಸ್
ದೇವರ ಪ್ರೀತಿ, ಅನನ್ಯ, ಅಪರಿಮಿತ ಅಗಣಿತ! ಈ ಪ್ರೀತಿಯೇ ಸರ್ವಜನರಿಗೂ ಸರ್ವಕಾಲದಲ್ಲೂ ದಾರಿದೀಪ, ಕಾಲಿನ ನಡೆಗೆ ಕೈದೀಪ. ಆದರೆ ಮಾನವನು ಈ ಪ್ರೀತಿಯ ಪರಮದೀಪದ ಸತ್ಯದ ಬೆಳಕಿನಲ್ಲಿ ನಡೆಯದೆ, ಕೆಡುಕಿನ ಕತ್ತಲೆಯಲ್ಲಿ ನಡೆದನು, ಪಾಪದಕೂಪದಲ್ಲಿ ಬಿದ್ದನು. ದೇವರು ದೀರ್ಘದರ್ಶಿಯರ, ಮಹಾಪುರುಷರ ಮತ್ತು ಪ್ರವಾದಿಗಳ ಮುಖಾಂತರ ನೀಡಿದ ಉಪದೇಶ ಎಚ್ಚರಿಕೆಗಳು, ರಕ್ಷಿಸಲು ಮಾಡಿದ ಎಲ್ಲಾ ಪ್ರಯತ್ನಗಳು, ಕೈಗೂಡದೆ ಹೋದವು.
2000 ವರ್ಷಗಳ ಹಿಂದೆ ಕಂದ ಯೇಸು ಬಾಲನು ಈ ಧರೆಗಿಳಿದು ಬಂದದ್ದು ಪ್ರೀತಿಯ ಭಾಷೆಯನ್ನು ಸರ್ವರಿಗೂ ಕಲಿಸಲು, ಪ್ರೀತಿಯ ಪ್ರತೀಕವಾಗಿರುವ ಪುಣ್ಯ ಪ್ರಭಾತ ಪಿತದೇವರನ್ನು ಅವರ ಪ್ರೀತಿ ವಾತ್ಸಲ್ಯದ ಸಾಮ್ರಾಜ್ಯವನ್ನು, ನಮ್ಮ ತನುಮನಗಳಲ್ಲಿ ಹೃದಯ ಹೃನ್ಮನಗಳಲ್ಲಿ ಸಂಜೀವಿನಿಯಾಗಿ, ನಿತ್ಯ ನೂತನ ಚೇತನದ ಮರೀಚಿಕೆಯಾಗಿ ಬಿತ್ತಿ ಬೆಳೆಯಲು.
“ಪ್ರೀತಿಯೇ ಪರಮಾತ್ಮ-ಪ್ರೀತಿಯೇ ಪರಂಧಾಮʼʼ ಎನ್ನುವ ಸತ್ಯವನ್ನು ನೈಜವಾಗಿಸಲು ದೇವರು ಮಾನವರಾದರು. ಜಗದಲ್ಲಿರುವ ಅಸತ್ಯವನ್ನು ಅಳಿಸಿ, ಸತ್ಯವನ್ನು ಉಳಿಸಿ, ಮೇಳೈಸಲು. ನಮ್ಮಲ್ಲಿರುವ ಕತ್ತಲನ್ನು ತೊಲಗಿಸಿ, ಜ್ಯೋತಿಯನ್ನು ಬೆಳಗಿಸಲು, ಸಾವಿನ ಕರಾಳ ಛಾಯೆಯ ಬಂಧನ ಬಿಡಿಸಿ, ಪುನರುತ್ಥಾನದ ಮೂಲಕ ನಿತ್ಯಜೀವಕ್ಕೆ ನಮ್ಮನ್ನು ಎಬ್ಬಿಸಲು ದೇವರು ದೀನ ಮಾನವರಾದರು. ಮಾತ್ರವಲ್ಲ, ದೇವ ಮಾನವನ ನಡುವೆ ಸತ್ಸಂಬಂಧ ಬೆಳೆಸುವ, ಮಾನವ ಮಾನವರ ಮಧ್ಯೆ ಮೈತ್ರಿಯನ್ನು ಮೊಳಗಿಸುವ ಮಹಾಪುರುಷ ಪ್ರಭುಯೇಸುವಾದರು; ಪ್ರೀತಿಯ ಸೆಳೆತವಿರುವ, ಪ್ರೇಮದ ಸ್ಪಂದನ ಇರುವ, ವಾತ್ಸಲ್ಯವ ಸ್ಪರ್ಶವಿರುವ ಸೇತುವೆ ಅವರಾದರು.
ಕ್ರಿಸ್ಮಸ್, ದೀನಸ್ಮಿತಿಯ ನೆರಳಲ್ಲೂ ದೈವತ್ವದಛಾಯೆ!!
“ಜಗದಲ್ಲಿ ಜನಿಸಿದ ಪ್ರತಿಯೊಂದು ಮಗುವೂ ಕೂಡಾ ಒಂದು ಸಂದೇಶವನ್ನು ಹೊತ್ತು ತರುತ್ತದೆ. ಅದೇನೆಂದರೆ ದೇವರು ನಮ್ಮನ್ನು ಪ್ರೀತಿಸುತ್ತಾರೆ” ಹೀಗೆಂದು ನುಡಿದವರು ರಾಷ್ಟ್ರ ಕವಿ ರವೀಂದ್ರನಾಥ ಟಾಗೋರ್. ಈ ಮಾತು ಎಷ್ಟು ಅರ್ಥಪೂರ್ಣ! ಆದರೆ, ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಜನಿಸಿದ ಮುಗು, ದೇವ ಮಗು, ಯೇಸುಕಂದ, ದೇವರೇ ಪ್ರೀತಿಯೆಂದು ಸಾರಿತು. ದೇವರು ನಮ್ಮ ಮಧ್ಯೆ ಇದ್ದಾರೆ ಎಂದು ತೋರಿಸಿತು. ದೇವರ ಪ್ರೀತಿಗೆ ಪಾತ್ರರಾಗ ಬೇಕಾದರೆ ದೀನತಾಭಾವ ಅತ್ಯಗತ್ಯ ಎಂದು ಜನಿಸಿದ ಕ್ಷಣದಲ್ಲೇ ಬೋಧಿಸಿತು. ದೀನತೆಯೇ ನೈಜಭಕ್ತನಿಗೆ ಶ್ರೇಷ್ಠತೆ! ಈ ಸದ್ಗುಣ, ಆತನಿಗೆ ಶ್ರೇಷ್ಠತೆಯನ್ನು ಸಾರುವ ಸಂಕೇತಗಳು. Humility is the mother of salvation ದೀನತೆರಕ್ಷಣೆಯ ಮಾತೆ ಎಂದು ಸಂತ ಬರ್ನಾಡ್ ಷಾ ಹೇಳಿರುವರು. ಹೆನ್ರಿದೆಥೋರೆಯು ಎಂಬುವರು “ದೀನತೆಯು ಸ್ವರ್ಗೀಯ ಬೆಳಕನ್ನು ಬಿಂಬಿಸುವ ದೀವಿಗೆʼʼ ಎಂದು ಹೇಳುತ್ತಾರೆ.
ವಾಸ್ತವವಾಗಿ ಮಾನವಜೀವನದಲ್ಲಿ ದೀನ ವಿನಯನಾಗಿ ಬಾಳಿದ ವ್ಯಕ್ತಿಗೆ ತಿರಸ್ಕಾರ-ಬಹಿಷ್ಕಾರ ಕಟ್ಟಿಟ್ಟ ಬುತ್ತಿ. ಇದನ್ನು ಪ್ರತಿಪಾದಿಸಲೆಂದೇ ಪ್ರಭುಕ್ರಿಸ್ತರು ದೀನರಲ್ಲಿ ದೀನರಾದರು, ದರಿದ್ರರಲ್ಲಿ ದರಿದ್ರರಾದರು! ಎಲ್ಲಿ ದೀನತ್ವ ಅಲ್ಲಿ ದೈವತ್ವ ಎಂಬುದನ್ನು ಸಾಕ್ಷಾತ್ಕರಿಸಿದರು. ಆದರೆ ಅವರಿಗೆ ದಕ್ಕಿದ್ದು ತಿರಸ್ಕಾರದ ಪುರಸ್ಕಾರದ ಅವಮಾನದ ಬಹುಮಾನ. ಅವುಗಳಲ್ಲಿರುವುದೇ ನಿಜವಾದ ಶಾಶ್ವತ ಸುಖ ನೆಮ್ಮದಿಯ ಸಿಹಿ ಎಂಬುದನ್ನು ಸವಿದು ತೋರಿಸಿದರು. ಪ್ರತಿಯೊಬ್ಬ ಮನುಷ್ಯನು ನೋವಿನಲ್ಲಿ ನೀನಾದವನ್ನು ಕಾಣಬಯಿಸಿದರೆ, ಸೋಲಿನಲ್ಲಿ ಗೆಲುವನ್ನು ಕಾಣ ಪ್ರಯತ್ನಿಸಿದರೆ, ದೀನತೆಯಲ್ಲಿ ಶ್ರೇಷ್ಠತೆಯನ್ನು ಕಾಣ ನಡೆದರೆ, ತಿರಸ್ಕಾರದಲ್ಲೂ ಪುರಸ್ಕಾರವನ್ನು ಗುರುತಿಸಿದರೆ ಅಸಮಾನ್ಯ ಸಮಸ್ಯೆಗಳು ಸಾಮಾನ್ಯ ಸಮಸ್ಯೆಗಳಾಗಬಹುದಲ್ಲವೇ? ಇಂದಿನ ಹಬ್ಬದ ಈ ಸಂದೇಶ ನಮ್ಮ ಬಾಳಿನ ಪರಿವರ್ತನಾ ಸಂದೇಶ ಏಕಾಗಬಾರದು?.
ಗೋದಲಿ ಮತ್ತು ಗೊಲ್ಗೊಥಾ
ಕೆಸರಿನಲ್ಲಿನ ಕಮಲದಂತೆ, ಗೋದಲಿಯೊಳಗೆ ಪರಮ ಶುಭ್ರತೆಯ ಜನನ. ಸರ್ವತಿರಸ್ಕೃತ ಕಡು ಬಡತನದಲ್ಲೂ ಮನೋದಾರಿದ್ರ್ಯತೆಯಲ್ಲೂ ಕ್ರಿಸ್ತರ ದೈವತ್ವವು ಎದ್ದು ಕಾಣುತ್ತಿತ್ತು. ಮಾನವ ಸ್ಥಿತಿಯಲ್ಲಿ ತಮ್ಮನ್ನೇ ತಗ್ಗಿಸಿಕೊಂಡಷ್ಟೂ ಅವರ ದೈವ ಸ್ವಭಾವ ವ್ಯಕ್ತವಾಗುತ್ತಿತ್ತು, ಹೊಳೆಯುವ ಚಿನ್ನದಂತೆ ಮಿರಮಿರನೆ ಮಿನುಗುತ್ತಿತ್ತು. ಮುಂದೆ ಅವರೇ ತಮ್ಮ ಬೋಧನೆಯಲ್ಲಿ ಹೀಗೆಂದರು; “ಯಾರು ತನ್ನನ್ನೇ ಮೇಲಕ್ಕೇರಿಸಿಕೊಳ್ಳುತ್ತಾನೋ, ಅಂಥವನನ್ನು ಕೆಳಕ್ಕೆ ಇಳಿಸಲಾಗುವುದು. ಯಾರು ತನ್ನನ್ನೇ ತಾನೇ ತಗ್ಗಿಸಿಕೊಳ್ಳುತ್ತಾನೋ ಅಂಥವನನ್ನು ಉನ್ನತಿಗೆ ಏರಿಸಲಾಗುವುದುʼʼ
ಬಡ ಕನ್ನಿಕೆಯೊಬ್ಬಳ ಉದರದಲ್ಲಿ ಜನಿಸಿ, ವಸತಿ ವಸ್ತ್ರ ರಹಿತಗೋದಲಿಯಲ್ಲಿ ಮಲಗಿದ್ದಾಗ ದೇವದೂತರ ಸಮೂಹ ಅವರ ಸ್ತುತಿಗೀತೆ ಹಾಡುತ್ತಿತ್ತು. ಕತ್ತೆ ಕುರಿಗಳ ಮಧ್ಯೆ ಜನಿಸಿರುವ ಅವರ ಘನತೆಯನ್ನು ಎತ್ತಿ ಹಿಡಿಯಿತು. ದೂರ ದಿಗಂತದ ನಕ್ಷತ್ರ!
ಕೆಸರಿನಲ್ಲಿ ಕಮಲ ಅರಳಿದಂತೆ, ಅತ್ಯಂತ ಮಲೀನ ಗೋದಲಿಯೊಳಗೆ ಪರಮ ಶುಭ್ರತೆಯು ಜನ್ಮತಾಳಿತು. ತಾನೇ ಉತ್ತಮನು ನನ್ನ ಹೊರತು ಬೇರೆ ಯಾರು ಇಲ್ಲ ನಾನೇ ಶ್ರೇಷ್ಠ ಎನ್ನುವ ನಿಲುವು ನಮ್ಮ ಅನೇಕ ತೊಂದರೆ ತೊಡಕು ಗಳಿಗೆ ಕಾರಣವಾಗಿದೆ. ಪರರಲ್ಲಿನ ಶ್ರೇಷ್ಠತೆ ಅರಿತಾಗ, ಪರರಲ್ಲಿ ಪ್ರಭುವನ್ನು ಕಂಡಾಗ, ಸಹೋದರತೆ ತಾನೇ ತಾನಾಗಿ ಮನೆ ಮಾಡುತ್ತದೆ.
ಸೂರ್ಯನಿಗೆ ಶಾಖವನ್ನು ಬೆಂಕಿಗೆ ಉರಿಯನ್ನು ಇತ್ತ ದೇವಕುಮಾರನು ಸ್ವತಃ ಬೆಚ್ಚಗಿರಲು, ಕತ್ತೆ ಕುರಿಗಳಂತಹ ದೀನ ಹೀನ ಪ್ರಾಣಿಗಳನ್ನು ಆಶ್ರಯಿಸಿದ್ದು ಸಾಮಾನ್ಯ ಮತಿಗೆ ಅರ್ಥವಾಗದ ವಿಷಯವಲ್ಲವೇ? ಪ್ರಾಣಿಗಳಿಗೆ ಬೆಚ್ಚನೆಯ ಹೊದಿಕೆಯನ್ನಿತ್ತು, ಭೂಮಿಗೆ ಹಸಿರು ಹುಲ್ಲಿನ ದೋತರವನ್ನಿತ್ತಂತಹ ದೇವಾದಿ ದೇವರು ಹೊದಿಕೆಯಿಲ್ಲದೆ ನಗ್ನವಾಗಿ ಗೋದಲಿಯೊಳಗೆ ಮಲಗಿದ್ದುದು ನಂಬಲು ಕಷ್ಟವಲ್ಲವೇ? ಆದರೆ ಇದು ಪರಮ ಸತ್ಯ. ಮನುಷ್ಯನಾಗಿ ಜನಿಸಿದ ಸೃಷ್ಠಿಕರ್ತನನ್ನು ಅವರಿಂದಲೇ ಸೃಷ್ಟಿಸಲ್ಪಟ್ಟ ಸೃಷ್ಟಿಯ ಹಿಂಬಾಗಿಲಿನಿಂದ ಸ್ವೀಕರಿಸಿತು. ಉತ್ತಮ ಸಮಾಜವು ಅವರನ್ನು ಆದರಿಸಲು ನಿರಾಕರಿಸಿತು. ಆದರೂ ಅವರು ಗೋದಲಿಯಲ್ಲಿ ಜನಿಸಲು ಒಪ್ಪಿದರು. ಗೋದಲಿ ಮತ್ತು ಗೊಲ್ಗೊಥಾ ಒಂದು ಜನನದ ಸ್ಥಳ, ಮತ್ತೊಂದು ಮರಣದ ಸ್ಥಳ. ಇವೆರಡು ಯೇಸುಕ್ರಿಸ್ತರ ಜೀವನದ ಎರಡು ಮಹಾ ದಿಗಂತಗಳು; ಒಂದಕ್ಕೊಂದು ಪ್ರೇರಕ ಹಾಗೂ ಪೂರಕ.
ಸಹೋದರತೆಯ ಸಿಂಚನವೆರೆಯುವ ಹಬ್ಬ ಕ್ರಿಸ್ಮಸ್
ನಾವೀಗಲೇ ಕ್ರಿಸ್ತ ಜಯಂತಿಯ ಬೆಚ್ಚನೆಯ ಅನುಭವದಲ್ಲಿದ್ದೇವೆ. ಈ ಮಧುರ ಅನುಭವದಲ್ಲಿ ನಮ್ಮ ಸೃತಿ ಪಟಲದಲ್ಲಿ ಪ್ರಶ್ನೆಯೊಂದು ಮೂಡುವುವುದು ಸಹಜ. ಕ್ರಿಸ್‌ಮಸ್ ಎಂದರೇನು ನನಗನಿಸಿದಂತೆ ಕ್ರಿಸ್‌ಮಸ್ (Merry Christmas 2022), ದೈವ ಪ್ರೀತಿಯು ಮನುಜರಾದ ಪ್ರೀತಿಯ ಕಥನ. ಕ್ರಿಸ್‌ಮಸ್ ದೇವರು ಮನುಜನನ್ನು ಅರಸಿಕೊಂಡು ಬಂದ ಸಂಭ್ರಮದ ಹಬ್ಬ. ಕ್ರಿಸ್‌ಮಸ್, ದೇವ ಮನುಜನಾಗಿ, ಮನುಜನನ್ನು ದೇವನನ್ನಾಗಿಸಿ ದೇವನೆಡೆಗೆ ಕರೆದೊಯ್ದ ಹಬ್ಬ. ಕ್ರಿಸ್‌ಮಸ್ ಭಾವನೆಗಳ ಸಂಗಮ, ಮಮತೆ ಮಮಕಾರಗಳ ದೇವ, ಮನುಜನಾದ ಅವಿಸ್ಮರಣೀಯ ದಿನ.
ಕ್ರಿಸ್‌ಮಸ್ ಸಂಭ್ರಮ, ಸಂತೋಷಗಳ ಸಮ್ಮಿಳಿತ, ಉಡುಗೊರೆ ನೀಡುತ್ತಾ ಪಡೆಯುತ್ತಾ ಸಾಗುವ ಪ್ರೀತಿಯ ಆಚರಣೆ. ಸಂಬಂಧ ಬೆಸೆಯುವ ಭಾತೃತ್ವಮೈಗೂಡಿಸುವ, ಐಕ್ಯತೆ ಮೂಡಿಸಿ, ಕ್ಷಮೆಯಾಚಿಸಿ, ಕ್ಷಮೆ ನೀಡಿ, ಜಾತಿ ಭಾಷೆ, ಬಣ್ಣ ಭೇದ ಸರ್ವವನ್ನೂ ಉಲ್ಲಂಘಿಸಿ ಇತರರನ್ನು ಅಪ್ಪಿ ಒಪ್ಪಿಕೊಳ್ಳುವುದು ಕ್ರಿಸ್‌ಮಸ್ ಸಂದೇಶ.
ಎಲ್ಲರೂ ಅಣ್ಣತಮ್ಮ, ಎಲ್ಲರೂ ಅಕ್ಕತಂಗಿ, ನಮಗೆಲ್ಲಾ ಅವನೇ ತಂದೆ, ಅವರೇನೆ ನಮ್ಮ ತಾಯಿ ಎಂದು ಹೇಳಲು, ಸಾರಲು ನಮ್ಮ ಮೈಮನಗಳನ್ನು ನವಿರೇಳಿಸಿ, ಪಂಥಾಹ್ವಾನ ನೀಡುವಂತಹುದು ಕ್ರಿಸ್ಮಸ್. ಅಪರಿಮಿತವಾಗಿ ನಮ್ಮನ್ನು ಪ್ರೀತಿಸಿದ ದೇವ, ಮನುಜ ದೈವತ್ವದ ಪಡಿಯಚ್ಚಾಗಲು ದೀನ ಮನುಜನಾದ. ಮೊದಲನೆಯದಾಗಿ ದೇವನೇ ತನ್ನ ವಿನಾಭಾವದ ಕುರುಹಾಗಿ ತನ್ನ ಏಕೈಕ ಪುತ್ರನನ್ನೇ ಧಾರೆಯೆರೆದು. ಉಡುಗೊರೆಯನ್ನಾಗಿ ನೀಡಿರುವಾಗ ಪ್ರಭುವಿನ ಮೌಲ್ಯವನ್ನು ನಮ್ಮ ಮನಸ್ಸು ಕಲ್ಪಿಸುವಂತಿಲ್ಲ.
ಎರಡನೆಯದಾಗಿ, ದೇವನ ಪ್ರೀತಿಯ ಸಿಂಚನ ಕ್ರಿಸ್ತ ಜಯಂತಿಯ ಮೂಲಕ ನಮಗಾಗಿರುವಾಗ ನಾವೂ ಕೂಡಾ ಪರರನ್ನು ಪ್ರೀತಿಸುವ ಪ್ರೀತಿಯೇ ಪರಂಧಾಮ ಎಂದು ಸಾರುವ ಮಾನವರಾಗಬೇಕು. ಪರರನ್ನು ದ್ವೇಷಿಸುವ, ಪರರ ವ್ಯಕ್ತಿತ್ವವನ್ನು ಹಾಳು ಮಾಡುವ, ಇತರ ಪ್ರತಿಷ್ಠೆ ಯನ್ನು ಕುಂದಿಸುವ, ವ್ಯಕ್ತಿತ್ವ ನಮ್ಮದಾಗಬಾರದು. ಜಾತಿ, ವರ್ಣ, ನೀತಿಧರ್ಮದ ಆಧಾರದ ಮೇಲೆ ಇತರರನ್ನು ದ್ವೇಪಿಸದೇ, ಬಾಂಧವ್ಯ ಬೆಸೆಯುವ, ಭ್ರಾತೃತ್ವ ಸಾರುವ ಪ್ರೀತಿಯ ಸೇತುವೆಗಳು ನಾವಾಗಬೇಕು. ನಾವೆಲ್ಲರೂ ಒಂದೇ, ನಮ್ಮ; ದೇವರು ಒಂದೇ, ನಮ್ಮ. ವಿಶ್ವಾಸವು ಒಂದೇ ಎಂದು ಸಾರುವ ದೇವನ ಪ್ರೀತಿಯ ಸಾಧನ ನಾವಾಗ ಬೇಕು. ಈ ಸಂದೇಶ ನಿಮ್ಮಮನದಾಳದಲ್ಲಿ ನೆಲೆಯೂರಲಿ.
“ಆ ದೇವ ಪ್ರೀತಿಸಿಹನು ನನ್ನ, ಅಮೂಲ್ಯನಾಗಿಸಿಹನು ಸನ್ನಿಧಾನದಲ್ಲಿ ತನ್ನʼʼ ಈ ನಿಮಿತ್ತ ಯಾರು ನನಗೆ ಅಪಾತ್ರರಲ್ಲ, ಅಪರಿಚಿತರಲ್ಲ, ಸಹೋದರ ಸಹೋದರಿಯಾಗಿದ್ದಾರೆ ಎಲ್ಲ. ಪ್ರಪಂಚವೆಂಬ ದೊಡ್ಡ ಕುಟುಂಬದ ಸದಸ್ಯರು ನಾವು, ನೀಡಲು ಸಂತಸ, ನೀಗಲು ನೋವು. ಕ್ರಿಸ್ತಜಯಂತಿ ಇಂದು ನಮ್ಮೆಲ್ಲರಿಗೂ ಪ್ರೀತಿಯ, ಸುಖಶಾಂತಿಯ ಹಬ್ಬವಾಗಿದೆ. ಆ ಯೇಸುದೇವನ ಪ್ರೀತಿಯ ಪ್ರತೀಕವಾಗಿದ್ದೇವೆ. ಈ ಪ್ರೀತಿಯ ಭಾಷೆಯನ್ನು ನಾವು ಮೊದಲು ಕಲಿತು, ಸಕಲ- ಸದ್ಗುಣಗಳ ವಲ್ಲಭರಾಗಿ ಪ್ರೀತಿಯ ಪ್ರತಿನಿಧಿಗಳಾಗಿ ಪ್ರೀತಿ ಸೌಹಾರ್ದತೆಯಿಂದ ಬಾಳುತ್ತಾ ಇತರರಿಗೂ ಅದನ್ನು ಕಲಿಸಲು ಕಂಕಣ ಬದ್ಧರಾಗೋಣ.
ಲೇಖಕರು ಪ್ರಾಚಾರ್ಯರು, ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು, ಶಿವಮೊಗ್ಗ.
ಇದನ್ನೂ ಓದಿ | Christmas Fashion | ಕ್ರಿಸ್ಮಸ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ನಾಲ್ಕು ಆಕರ್ಷಕ ವಿನ್ಯಾಸದ ಗೌನ್‌ಗಳು