Site icon Vistara News

Mesha Sankranti 2023 : ನಾಳೆ ಮೇಷ ಸಂಕ್ರಾಂತಿ; ತುಳುವರ ಬಿಸು ಪರ್ಬ

Mesha Sankranti 2023 Significance, Importance and more about this auspicious festival

#image_title

ಎಲ್ಲರಿಗೂ ತಿಳಿದಿರುವಂತೆ ಪ್ರತಿ ಮಾಸದಲ್ಲಿಯೂ ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಾನೆ. ಹೀಗೆ ಸೂರ್ಯ ಮೇಷ ರಾಶಿಯನ್ನು ಪ್ರವೇಶಿಸುವ ದಿನವನ್ನು ಮೇಷ ಸಂಕ್ರಾಂತಿ (Mesha Sankranti 2023) ಎಂದು ಕರೆಯಲಾಗುತ್ತದೆ. ಸೌರಮಾನ ಪಂಚಾಂಗದ ಪ್ರಕಾರ ಮೇಷ ಸಂಕ್ರಾಂತಿಯು ಹೊಸ ವರ್ಷದ ದಿನವಾಗಿದೆ. ಮೇಷವು ರಾಶಿ ಚಕ್ರದ ಮೊದಲ ತಿಂಗಳು ಮತ್ತು ಮೀನವು 12 ನೇ ಹಾಗೂ ಕೊನೆಯ ತಿಂಗಳು.

ಈ ಸಂಕ್ರಾಂತಿಯನ್ನು ನಮ್ಮ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ (ತುಳುನಾಡಿನಲ್ಲಿ) ಸೌರಮಾನ ಯುಗಾದಿ ಅಂದರೆ ‘ವಿಷು’ ಹಬ್ಬವಾಗಿಯೂ ಆಚರಿಸುತ್ತಾರೆ. ಕರಾವಳಿಯಲ್ಲಿ ಬಿಸು ಪರ್ಬ ಅಥವಾ ವಿಷು ಹಬ್ಬ (ತುಳುವಿನಲ್ಲಿ ಪರ್ಬ ಎ೦ದರೆ ಹಬ್ಬ) ಎಂದು ಕರೆಯಲ್ಪಡುವ ಈ ಹಬ್ಬವನ್ನು ನೆರೆಯ ಕೇರಳ ಹಾಗೂ ತಮಿಳುನಾಡಿನಲ್ಲೂ ಹೊಸ ವರ್ಷದ ಆರ೦ಭವಾಗಿ ಆಚರಿಸಲಾಗುತ್ತದೆ.

ತುಳುನಾಡಿನಲ್ಲಿ ʻಬಿಸು ಕಣಿ’ ಈ ಹಬ್ಬದ ವಿಶೇಷವಾಗಿದೆ. ‘ಬಿಸು ಕಣಿ’ ಎಂದರೆ ಈ ಹಬ್ಬದಲ್ಲಿ ನಡೆಯುವ ಒ೦ದು ಆಚರಣೆ. ತೋಟದಲ್ಲಿ ಬೆಳೆದ ಫಲಪುಷ್ಪಗಳನ್ನು ಹಾಗೂ ಹೊಲದಲ್ಲಿ ಬೆಳೆದ ದವಸ ಧಾನ್ಯಗಳನ್ನು ಮನೆಯ ಒ೦ದು ಕೋಣೆಯಲ್ಲಿ ಇರಿಸಿ ಪೂಜಿಸಲಾಗುತ್ತದೆ. ಈ ಫಲಪುಷ್ಪ, ದವಸ ಧಾನ್ಯಗಳ ರಾಶಿಗೆ ‘ಬಿಸು ಕಣಿ’ ಎ೦ದು ಕರೆಯುತ್ತಾರೆ. ಬಿಸು ಹಬ್ಬದ ದಿನದಂದು ಬೆಳಗ್ಗೆ ಎದ್ದ ಕೂಡಲೇ ಮೊದಲಿಗೆ ‘ಬಿಸು ಕಣಿ’ಯ ದರ್ಶನ ಮಾಡುವುದು ಹಿ೦ದಿನಿ೦ದ ನಡೆದುಕೊ೦ಡು ಬ೦ದ ಪದ್ಧತಿ.

ಬಿಸು ಕಣಿ

ಮೇಷ ಸಂಕ್ರಾಂತಿ ಆಚರಣೆ ಹೇಗೆ?

ಪಂಚಾಂಗದ ಪ್ರಕಾರ ಏಪ್ರಿಲ್ 14 ರ ಶುಕ್ರವಾರದಂದು ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಬೆಳಗ್ಗೆ 6.08 ರಿಂದ ಮಧ್ಯಾಹ್ನ 12.6 ರವರೆಗಿನ ಸಮಯ ಸಂಕ್ರಾಂತಿಯ ಪುಣ್ಯಕಾಲವಾಗಿದೆ.

ಸೂರ್ಯ ಸಂಕ್ರಾಂತಿಯಂದು ನದಿಗಳಲ್ಲಿ ಸ್ನಾನ ಮಾಡಿ ದಾನ ಮಾಡುವ ಸಂಪ್ರದಾಯವಿದೆ. ಸೂರ್ಯನ ಆರಾಧನೆ ಮಾಡುವುದರಿಂದ ಸಂತೋಷ, ಸಮೃದ್ಧಿ, ಐಶ್ವರ್ಯ, ಸಂಪತ್ತು, ಅದೃಷ್ಟ, ವೈಭವ, ಕೀರ್ತಿ, ಗೌರವ, ಶಕ್ತಿ, ಸಂಪತ್ತು ಮತ್ತು ಯಶಸ್ಸನ್ನು ಪಡೆಯಬಹುದು ಎನ್ನುವ ನಂಬಿಕೆಯಿದೆ. ಸೂರ್ಯನಿಗೆ ಕೆಂಪು ಹೂವುಗಳು, ಕೆಂಪು ಚಂದನ, ಅಕ್ಷತೆ ಮತ್ತು ಸಕ್ಕರೆಯನ್ನು ನೀರಿನಲ್ಲಿ ಬೆರೆಸಿ ಅರ್ಪಿಸಬೇಕು. ಗೋಧಿ, ಕೆಂಪು ಚಂದನ, ಕೆಂಪು ಬಟ್ಟೆ, ತುಪ್ಪ, ಬೆಲ್ಲ ಇತ್ಯಾದಿಗಳನ್ನು ಬಡವರಿಗೆ ಅಥವಾ ಬ್ರಾಹ್ಮಣರಿಗೆ ಅಥವಾ ಸತ್ಪಾತ್ರರಿಗೆ ದಾನ ಮಾಡಬಹುದು. ಸೂರ್ಯ ಮಂತ್ರವನ್ನು ಸಹ ಈ ದಿನ ಪಠಿಸಬೇಕು. ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬಹುದು.

ಮೇಷ ಸಂಕ್ರಾಂತಿಗೆ ಹಲವು ಹೆಸರು

ಮೇಷ ಸಂಕ್ರಾಂತಿಯನ್ನು ದೇಶದಲ್ಲಿ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಮೇಷ ಸಂಕ್ರಾಂತಿಯನ್ನು ಪಂಜಾಬ್‌ನಲ್ಲಿ ಬೈಸಾಖಿ, ಅಸ್ಸಾಂನಲ್ಲಿ ಬಿಹು, ಕೇರಳದಲ್ಲಿ ವಿಷು, ಬಂಗಾಳದಲ್ಲಿ ಪೋಹ್ಲಾ ಬೋಯಿಶಾಖ್ ಎಂದು ಕರೆಯಲಾಗುತ್ತದೆ. ತಮಿಳುನಾಡಿನಲ್ಲಿ ‘ವರುಷ ಪಿರಪ್ಪು’, ‘ಚಿತಿರೈವಿಶು’, ‘ಪುತಂಡು’ ಎಂದು ಆಚರಿಸಲಾಗುತ್ತದೆ. ಕೇರಳಿಗರು ಈ ಮಲಯಾಳಂ ರಾಶಿಚಕ್ರಗಳ ಹೊಸ ವರ್ಷವನ್ನು ‘ವಿಷು’ ಹೆಸರಿನೊಂದಿಗೆ ಆಚರಿಸುತ್ತಾರೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ನಾವು ಸಮೃದ್ಧವಾಗಿ ಬದುಕಲು ಬೇಕಾದ್ದನ್ನೆಲ್ಲವನ್ನು ಕೊಟ್ಟ ಭೂತಾಯಿಗೆ ಕೃತಜ್ನತೆಗಳನ್ನು ಅರ್ಪಿಸುವ ’ಬಿಸು ಪರ್ಬ’ ವನ್ನು ಆಚರಿಸುವ ಎಲ್ಲರಿಗೂ ಶುಭಾಶಯಗಳು. 

ಇದನ್ನೂ ಓದಿ : Navavidha Bhakti : ಭಕ್ತಿಗೊಂದು ಸಾಧನ – ಅರ್ಚನೆ

Exit mobile version