Site icon Vistara News

ಕಾಶಿಗೆ ಹೋಗಲು ಸರ್ಕಾರದಿಂದ 5,000 ರೂ. ಧನಸಹಾಯ: ಹಣ ಪಡೆಯುವ ಕುರಿತು ಮಾಹಿತಿ ಇಲ್ಲಿದೆ

ಶಶಿಕಲಾ ಜೊಲ್ಲೆ

ಬೆಂಗಳೂರು: ರಾಜ್ಯದ ಜನರು ಕಾಶಿಗೆ ಭೇಟಿ ನೀಡುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ʼಕಾಶಿ ಯಾತ್ರೆʼ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದೆ. ಕಾಶಿ ಯಾತ್ರ ಕೈಗೊಂಡವರಿಗೆ ತಲಾ 5,000 ಸಹಾಯಧಣ ನೀಡುವ ಯೋಜನೆಯ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿ‌ ರಾಜ್ಯ ಸರ್ಕಾರದಿಂದ ಅಂತಿಮ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಭವ್ಯ ಕಾಶಿ-ದಿವ್ಯ ಕಾಶಿಯ ಭವ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ಅಭಿವೃದ್ಧಿಗೊಳಿಸಲಾಗಿದೆ. ಈ ಭವ್ಯ ಕಾಶಿಯ ಯಾತ್ರೆ ಬಹಳಷ್ಟು ಜನರ ಜೀವನದ ಅಭಿಲಾಷೆಯಾಗಿರುತ್ತದೆ. ಈ ಯಾತ್ರೆಯ ಅಭಿಲಾಷೆಯನ್ನು ಪೂರೈಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಯೋಜನೆಯನ್ನು ಪ್ರಾರಂಭಿಸಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಇದಕ್ಕೆ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಆಯವ್ಯಯದಲ್ಲಿ ಘೋಷಣೆ ಮಾಡಿದ್ದರು ಎಂದು ತಿಳಿಸಿದ್ದಾರೆ.

ರಾಜ್ಯದ 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ.ನಂತೆ ಸಹಾಯಧನ ನೀಡುವ ಯೋಜನೆಗೆ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿದ್ದು, ಸರ್ಕಾರದಿಂದ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಏಪ್ರಿಲ್‌ 1, 2022ಕ್ಕೆ ಪೂರ್ವಾನ್ವಯವಾಗುವಂತೆ ಈ ಆದೇಶವನ್ನು ಹೊರಡಿಸಲಾಗಿದ್ದು, ಸೂಕ್ತ ದಾಖಲಾತಿಗಳೊಂದಿಗೆ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ | Kempegowda Jayanti | ವಿಧಾನಸೌಧ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ: ಸಿಎಂ ಬೊಮ್ಮಾಯಿ ಘೋಷಣೆ

ಮಾರ್ಗಸೂಚಿಯ ಅಂಶಗಳು:

  1. ಕರ್ನಾಟಕ ರಾಜ್ಯದಿಂದ ಕಾಶಿಯಾತ್ರೆ ಕೈಗೊಂಡ ಅರ್ಹ ಯಾತ್ರಾರ್ಥಿಗಳಿಗೆ ತಲಾ 5,೦೦೦ ರೂ. ಸಹಾಯ ಧನವಾಗಿ ನೀಡಲಾಗುವುದು.
  2. ರಾಜ್ಯದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಈ ಉದ್ದೇಶಕ್ಕಾಗಿ ಯಾವುದಾದರೂ ಒಂದು ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸತಕ್ಕದ್ದು (ರಾಜ್ಯ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಅಥವಾ ಆಧಾರ್‌ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್).
  3. ರಾಜ್ಯದಿಂದ ಕಾಶಿಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳ ವಯಸ್ಸು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಏಪ್ರಿಲ್‌ 1ಕ್ಕೆ 18 ವರ್ಷ ಮೇಲ್ಪಟ್ಟಿರಬೇಕು. 18 ವರ್ಷದೊಳಗಿನವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹಾಜರುಪಡಿಸಬೇಕು.
  4. ದಿನಾಂಕ: 01-04-2022 ರಿಂದ 30-06-2022 ರವರೆಗೆ ಕಾಶಿ ಶ್ರೀ ವಿಶ್ವನಾಥಸ್ವಾಮಿಯ ದರ್ಶನಕ್ಕೆ ತೆರಳಿದ ಯಾತ್ರಾರ್ಥಿಗಳು ಸಂಬಂಧಿಸಿದ ದಾಖಲಾತಿಗಳನ್ನು (ಕಾಶಿ ಶ್ರೀ ವಿಶ್ವನಾಥ ಸ್ವಾಮಿ ದೇವಾಲಯಕ್ಕೆ ತೆರಳಲು ಮುಂಗಡವಾಗಿ ಕಾಯ್ದಿರಿಸಿದ ಮತ್ತು ಹಿಂದಿರುಗಿದ ಬಗ್ಗೆ ಕಾಯ್ದಿರಿಸಿದ ಟಿಕೆಟ್, ಛಾಯಾಚಿತ್ರ ಪೂಜಾ ರಶೀದಿ, ಅಥವಾ ದೇವಾಲಯಕ್ಕೆ ತೆರಳಿ ಮರಳಿದ ಬಗ್ಗೆ ಯಾವುದಾದರೂ ಇತರೆ ದಾಖಲೆ) ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಕಚೇರಿಗೆ ಸಲ್ಲಿಸಬೇಕು.
  5. ದಿನಾಂಕ: 01-07-2022ರಿಂದ ಅನ್ವಯವಾಗುವಂತೆ ಯಾತ್ರಾರ್ಥಿಗಳು ಕಾಶಿ ಯಾತ್ರೆ ಕೈಗೊಂಡಿರುವ ಬಗ್ಗೆ ಸಂಬಂಧಿಸಿದ ದಾಖಲೆಗಳನ್ನು ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಛತ್ರ, ವಾರಣಾಸಿ ಇವರ ಕಚೇರಿಯಿಂದ ಬಯೋಮೆಟ್ರಿಕ್‌ ದೃಢೀಕರಣದೊಂದಿಗೆ, ಆನ್‌ಲೈನ್‌ ಅಥವಾ ಖುದ್ದು/ನೊಂದಾಯಿತ ಅಂಚೆ ಮೂಲಕ, ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರ ಕಚೇರಿಗೆ ಸಲ್ಲಿಸಬೇಕು. ಒಂದು ವೇಳೆ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಛತ್ರ, ವಾರಣಾಸಿ ಇವರ ದೃಢೀಕರಣ ಇಲ್ಲದಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  6. ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ, ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ.
  7. ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳ ಬ್ಯಾಂಕ್‌ ಖಾತೆಯು ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಾಗಿರಬೇಕು ಮತ್ತು ಕಡ್ಡಾಯವಾಗಿ ಆಧಾರ್ ಲಿಂಕ್‌ ಆಗಿರಬೇಕು.
  8. ಯಾತ್ರೆಯನ್ನು ಪೂರ್ಣಗೊಳಿಸಿ ಸಂಬಂಧಿಸಿದ ದಾಖಲೆಗಳನ್ನು ನಿಗದಿತ ನಮೂನೆ ಅರ್ಜಿಯನ್ನು ಭರ್ತಿ ಮಾಡಿ ಒದಗಿಸಿದ ನಂತರ ಅರ್ಜಿಗಳನ್ನು ಧಾರ್ಮಿಕ ದತ್ತಿ ಆಯುಕ್ತರು ಸ್ವೀಕರಿಸಿ, ಪರಿಶೀಲಿಸಿ ನಂತರ ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು.

ಕಾಶಿಗೆ ವಿಶೇಷ ರೈಲು ಸದ್ಯದಲ್ಲೆ

“ಭಾರತ್‌ ಗೌರವ್‌” ಯೋಜನೆ ಅಡಿಯಲ್ಲಿ ಕಾಶಿ ಯಾತ್ರೆಗೆ ವಿಶೇಷ ರೈಲು ಸೇವೆಯನ್ನು ಸದ್ಯದಲ್ಲೆ ಆರಂಭಿಸಲಾಗುತ್ತದೆ ಎಂದು ಶಶಿಕಲಾ ಜೊಲ್ಲೆ ಹೇಳಿದರು.

ಕೇಂದ್ರ ಸರಕಾರದ ʼಭಾರತ ಗೌರವʼ ಯೋಜನೆಯ ಅಡಿಯಲ್ಲಿ ಮುಜರಾಯಿ ಇಲಾಖೆಯ ರೈಲ್ವೇ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಾಶಿಗೆ ವಿಶೇಷ ರೈಲಿನ ಕಾರ್ಯಾಚರಣೆ ಸದ್ಯದಲ್ಲೇ ಪ್ರಾರಂಭಿಸಲು ಸಿದ್ದತೆಗಳನ್ನು ಭರದಿಂದ ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೇ ಇಲಾಖೆಯಲ್ಲಿ ನೊಂದಣಿ ಮಾಡಿಸಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಜೊಲ್ಲೆ ಮಾಹಿತಿ ನೀಡಿದರು.

ಇದನ್ನೂ ಓದಿ | ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆಗಸ್ಟ್ 5ರಿಂದ 15 ತನಕ ಆಕರ್ಷಕ ಫಲಪುಷ್ಪ ಪ್ರದರ್ಶನ

Exit mobile version