Site icon Vistara News

ರಾಜ್ಯದಲ್ಲೂ ಧಾರ್ಮಿಕ ಕಾರಿಡಾರ್‌ಗಳ ಅಭಿವೃದ್ಧಿಗೆ ಚಿಂತನೆ: ಸಚಿವೆ ಶಶಿಕಲಾ ಜೊಲ್ಲೆ

ಶಶಿಕಲಾ ಜೊಲ್ಲೆ

ಕೆ.ಆರ್‌.ಪೇಟೆ: ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ದೇಶದಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸುತ್ತಿರುವಂತೆ ರಾಜ್ಯದಲ್ಲೂ ಧಾರ್ಮಿಕ ಕಾರಿಡಾರ್‌ಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಲವು ತೋರಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ವರದಿ ನೀಡುವಂತೆ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯ ಅಂಬಿಗರಹಳ್ಳಿ-ಸಂಗಾಪುರ-ಪುರ ಗ್ರಾಮಗಳ ತ್ರಿವೇಣಿ ಸಂಗಮದಲ್ಲಿ ನಾಲ್ಕು ದಿನಗಳ ಐತಿಹಾಸಿಕ ಮಹಾಕುಂಭಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೆ.ಆರ್‌.ಪೇಟೆಯಲ್ಲಿ ದಕ್ಷಿಣ ಭಾರತದ ಮಹಾಕುಂಭಮೇಳವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದರು.

ಇದನ್ನೂ ಓದಿ | Kumbhamela | ಜಲಕ್ಕೆ ಕೃತಜ್ಞತೆ ಸಲ್ಲಿಸೋಣ; ನೀರಿನ ಮಹತ್ವ ಬಗ್ಗೆ ಪಾಠ ಮಾಡಿದ ಡಾ. ವೀರೇಂದ್ರ ಹೆಗ್ಗಡೆ

ಮಲೈ ಮಹದೇಶ್ವರರು ಶ್ರೀ ಶೈಲದಿಂದ ಬಂದಾಗ ಪಾದಸ್ಪರ್ಶ ಮಾಡಿದ್ದ ಪವಿತ್ರ ಸ್ಥಳದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಬಹಳ ವಿಶೇಷ. ಪೂಜ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಮೂಲ ಧಾರ್ಮಿಕ ಸಂಸ್ಕೃತಿಯನ್ನು ಜನ ಮಾನಸದಲ್ಲಿ ಬಿತ್ತಿ ಬೆಳೆಸುವ ಕಾರ್ಯ ನಡೆಸಲಾಗುತ್ತಿದೆ. ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರವೂ ಚಿಂತನೆ ನಡೆಸಿದ್ದು, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

2014 ರಲ್ಲಿ ಭಾರತದ ಪ್ರಧಾನಿ ಸ್ಥಾನ ವಹಿಸಿಕೊಂಡಾಗಿನಿಂದಲೂ ನರೇಂದ್ರ ಮೋದಿ ಅವರು ಹಲವಾರು ಹಿಂದು ದೇವಾಲಯಗಳ ಗತ ವೈಭವ ಮರಳುವಂತೆ ಕ್ರಮವಹಿಸಿದ್ದಾರೆ. ಪ್ರಖ್ಯಾತ ದೇವಸ್ಥಾನಗಳ ಜೀರ್ಣೋದ್ಧಾರವೂ ನಡೆಸಲಾಗಿದೆ. ಕಾಶಿ ವಿಶ್ವನಾಥ ಧಾಮ, ಶ್ರೀ ಮಹಾಕಾಲ್‌ ಲೋಕ, ಕೇದಾರನಾಥ್‌ ದೇವಾಲಯ, ಸೋಮನಾಥ ದೇವಾಲಯ ಹಾಗೂ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದಾಗಿನಿಂದ ಅಲ್ಲೂ ದೇವಸ್ಥಾನಗಳ ಜೀರ್ಣೋದ್ಧಾರ ನಡೆಸಲಾಗುತ್ತಿದೆ. ಇದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಧಾರ್ಮಿಕ ಕಾರಿಡಾರ್‌ಗಳನ್ನು ಅಭಿವೃದ್ಧಿ ಗೊಳಿಸುವತ್ತ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಧಾರ್ಮಿಕ ಕಾರಿಡಾರ್‌ಗೆ ಸಿಎಂ ಒಲವು
ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನ ನೀಡುವ ಮೂಲಕ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಜರಾಯಿ ಇಲಾಖೆಗೆ ಮಹತ್ವ ನೀಡಿದೆ. ಇದರಿಂದಾಗಿ 10 ಹಲವು ವಿಶೇಷ ಯೋಜನೆಗಳನ್ನು ಪ್ರಾರಂಭಿಸಲು ಸಾಧ್ಯವಾಗಿದೆ. ರಾಜ್ಯದಲ್ಲೂ ಕಾಶಿ, ಉಜ್ಜಯಿನಿ ಮಹಾಕಾಲ್‌ ಲೋಕ ಮಾದರಿ ಕಾರಿಡಾರ್‌ ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಒಲವು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಇದನ್ನೂ ಓದಿ | Kumbhamela | ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳ ಆರಂಭ, ತ್ರಿವಳಿ ಜ್ಯೋತಿಗಳ ಮೆರವಣಿಗೆ ವೈಭವ

Exit mobile version