Site icon Vistara News

Modi In Bengaluru | ಕರ್ನಾಟಕ ಭಾರತ್‌ ಗೌರವ್‌ ಕಾಶಿ ಯಾತ್ರೆಗೆ ಹೋಗುವುದು ಹೇಗೆ?

Modi In Bengaluru

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ “ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌” ರೈಲು ಸಾರ್ವಜನಿಕರಿಗೆ ಮುಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಚಾಲನೆ (Modi In Bengaluru) ನೀಡಿರುವ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ರೈಲಿನ ವಿಶೇಷತೆ ಕುರಿತಾದ ಮಾಹಿತಿ ಇಲ್ಲಿದೆ.

ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಭಾರತ್‌ ಗೌರವ್‌ ರೈಲನ್ನು ಪ್ರಾರಂಭಿಸುತ್ತಿರುವ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಪಾತ್ರವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 3 ಟಯರ್‌ ಎಸಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, 14 ಬೋಗಿಗಳ ಮೇಲೂ ರಾಜ್ಯದ 28 ದೇವಸ್ಥಾನಗಳ ಛಾಯಾಚಿತ್ರಗಳ ಬ್ರ್ಯಾಂಡಿಂಗ್‌ ಮಾಡಲಾಗಿದೆ. ನಮ್ಮ ರಾಜ್ಯದ ದೇವಸ್ಥಾನಗಳನ್ನು ಭಾರತದ ಉದ್ದಗಲಕ್ಕೂ ಸಂಚರಿಸಲಿರುವ ಟ್ರೈನ್‌ ಮೂಲಕ ಪ್ರಚಾರ ಮಾಡುವುದು ಇದರ ಉದ್ದೇಶವಾಗಿದೆ.

Modi In Bengaluru

ಉತ್ತರ ಕರ್ನಾಟಕದಲ್ಲೂ ರೈಲು ಹತ್ತುವ ಅವಕಾಶ
ಬೆಂಗಳೂರಿನಿಂದ ಈ ರೈಲು ಹೊರಡಲಿದ್ದು, ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲೂ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ಗೆ ಸಂಚರಿಸಲಿದೆ.

ಕೆಎಸ್‌ಟಿಡಿಸಿ ಹಾಗೂ ಐಆರ್‌ಸಿಟಿಸಿ ಬುಕ್ಕಿಂಗ್‌ ಅವಕಾಶ
ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ ರೈಲಿನಲ್ಲಿ ಯಾತ್ರೆಯನ್ನು ಕೈಗೊಳ್ಳಲು ಬುಕ್ಕಿಂಗ್‌ ಮಾಡಲು ಕೆಎಸ್‌ಟಿಡಿಸಿ ಹಾಗೂ ಐಆರ್‌ಸಿಟಿಸಿ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. 15 ಸಾವಿರ ರೂಪಾಯಿಗಳಲ್ಲಿ 8 ದಿನಗಳ ಕಾಶಿ ದರ್ಶನ ಪ್ಯಾಕೇಜ್‌ ಟೂರ್‌ ಇದಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯೆ ರಾಮನ ದೈವ ಭೂಮಿಯ ವೈಭವವನ್ನು ಕಣ್ತುಂಬಿಕೊಳ್ಳುವ ಅವಕಾಶ ನೀಡಲಾಗಿದೆ.

ಕರ್ನಾಟಕ ಸರ್ಕಾರದಿಂದ 5 ಸಾವಿರ ರೂಪಾಯಿಗಳ ಸಹಾಯಧನ
ಐಆರ್‌ಸಿಟಿಸಿ ಸಹಭಾಗಿತ್ವದ ಈ ಟೂರ್‌ ಪ್ಯಾಕೇಜ್‌ ತಗೆದುಕೊಳ್ಳುವ ಪ್ರತಿ ವ್ಯಕ್ತಿಗೂ 5 ಸಾವಿರ ರೂಪಾಯಿಗಳ ಸಹಾಯಧನವನ್ನು ಕರ್ನಾಟಕ ಸರ್ಕಾರ ನೀಡಲಿದೆ. ಈ ಪ್ಯಾಕೇಜ್‌ನ ದರ 20 ಸಾವಿರ ರೂಪಾಯಿಗಳಾಗಿದ್ದು, ಪ್ರಯಾಣಿಕರು ಕೇವಲ 15,000 ರೂಪಾಯಿಗಳನ್ನು ನೀಡಿದರೆ ಸಾಕು. ಉಳಿದ 5000 ರೂಪಾಯಿಗಳನ್ನು ಕರ್ನಾಟಕ ಸರ್ಕಾರ ಸಹಾಯಧನದ ರೂಪದಲ್ಲಿ ನೀಡಲಿದೆ.

Modi In Bengaluru

ಊಟ ಉಪಚಾರವೂ ಉಂಟು
8 ದಿನಗಳ ಈ ಟೂರ್‌ ಪ್ಯಾಕೇಜ್‌ನಲ್ಲಿ ಎಲ್ಲ ಸವಲತ್ತುಗಳನ್ನು ಒಳಗೊಂಡಿರಲಿದೆ. ಟ್ರೈನ್‌ ದರ, ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್‌ ವ್ಯವಸ್ಥೆ, ಉಳಿದುಕೊಳ್ಳಲು ಹೋಟೆಲ್‌ ಮತ್ತು 8 ದಿನಗಳಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆಯನ್ನು ಸಹ ಈ ಪ್ಯಾಕೇಜ್‌ ಒಳಗೊಂಡಿರಲಿದೆ. ಐಆರ್‌ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಊಟ, ಉಪಾಹಾರ, ಯಾತ್ರಾ ಸ್ಥಳದಲ್ಲಿ ತಂಗುವ ವ್ಯವಸ್ಥೆ ಹಾಗೂ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಸಾರಿಗೆ ವ್ಯವಸ್ಥೆ ಹಾಗೂ ತುರ್ತು ವೈದ್ಯಕೀಯ ಸೇವೆ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಯಾತ್ರೆ ಎಲ್ಲಿಂದ ಶುರು?
ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ರೈಲು ಪ್ರವಾಸವು ಬೆಂಗಳೂರಿನಿಂದ ನವೆಂಬರ್‌ 11ರಂದು ಹೊರಟು 23ಕ್ಕೆ ತಲುಪಲಿದೆ. 7 ರಾತ್ರಿಗಳು, 08 ದಿನಗಳನ್ನು ಒಳಗೊಂಡಿದೆ. ಬೆಂಗಳೂರು – ವಾರಾಣಸಿ – ಅಯೋಧ್ಯೆ – ಪ್ರಯಾಗರಾಜ್ – ಬೆಂಗಳೂರು ಪ್ರವಾಸ ಮಾರ್ಗವಾಗಿದೆ. ರೈಲು ಹತ್ತಲು ಮತ್ತು ಇಳಿಯಲು ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಭಾಗಗಳಲ್ಲಿ ಅವಕಾಶ ಇದೆ.

Modi In Bengaluru

ಎಲ್ಲೆಲ್ಲಿ ಏನೇನು ನೋಡಬಹುದು?
– ವಾರಾಣಸಿಯಲ್ಲಿ ತುಳಸಿ ಮಾನಸ ದೇವಸ್ಥಾನ, ಸಂಕಷ್ಟ ಮೋಚನ್ ಹನುಮಾನ್ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾ ಆರತಿ.
– ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ, ಸರಯುಘಾಟ್.
– ಪ್ರಯಾಗರಾಜ್‌ನಲ್ಲಿ ಗಂಗಾ-ಯಮುನಾ ಸಂಗಮ, ಹನುಮಾನ್ ದೇವಸ್ಥಾನ.

ಕಾಶಿ ದರ್ಶನ ಯಾತ್ರೆಗೆ ಎರಡನೇ ಟ್ರಿಪ್‌ ಸೋಲ್ಡ್‌ ಔಟ್‌
ನವೆಂಬರ್‌ 23ರಂದು ಎರಡನೇ ಟ್ರಿಪ್‌ ಕರ್ನಾಟಕ–ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರೆಯ ಟ್ರಿಪ್‌ನ ದಿನಾಂಕವನ್ನು ಘೋಷಣೆ ಮಾಡಲಾಗಿತ್ತು. ಟಿಕೆಟ್‌ ಬುಕ್ಕಿಂಗ್‌ ಪ್ರಾರಂಭ ಮಾಡಿದ ಎರಡೇ ದಿನಗಳಲ್ಲಿ ಎರಡನೇ ಟ್ರಿಪ್‌ನ ಎಲ್ಲ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ. ಕೆಲವೇ ದಿನಗಳಲ್ಲಿ ಮುಂದಿನ ಟ್ರಿಪ್‌ಗಳ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ.

ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಮೋದಿ ಹಸಿರು ನಿಶಾನೆ
ರಾಜ್ಯದ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ವಿಶೇಷ ರೈಲಿಗೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಎಂಟು ದಿನಗಳ ಕಾಶಿ ದರ್ಶನದ ಈ ರೈಲು ವಾರಾಣಸಿ, ಪ್ರಯಾಗ್ ರಾಜ್, ಅಯೋಧ್ಯೆ ಮುಂತಾದ ಪವಿತ್ರ ಸ್ಥಳಗಳಿಗೆ ಯಾತ್ರಿಕರನ್ನು ಕರೆದೊಯ್ಯುತ್ತದೆ.

ಚಾಲನೆ ವೇಳೆ ಮೋದಿ ಜತೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಕಾನೂನು‌ ಮತ್ತು ಸಂಸದೀಯ, ಗಣಿ ಮತ್ತು ಕಲ್ಲಿದ್ದಿಲು ಸಚಿವ ಪ್ರಹ್ಲಾದ್ ಜೋಷಿ, ರಾಜ್ಯದ ಮುಜರಾಯಿ, ಹಜ್ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಪಿ‌.ಸಿ. ಮೋಹನ್, ತೇಜಸ್ವಿ ಸೂರ್ಯ ಹಾಗೂ ಇತರ ಗಣ್ಯರು ಹಾಜರಿದ್ದರು.

ಇದನ್ನೂ ಓದಿ | Modi in Bengaluru | ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

Exit mobile version