Site icon Vistara News

Monsoon culture: ಮಳೆಯ ಜತೆಗುಂಟು ಸಂಸ್ಕೃತಿಯ ನಂಟು; ಆಚರಣೆ, ಕತೆ, ಹಾಡು ನೂರೆಂಟು

farmer in monsoon

ಮಳೆ ಹನಿಯಲು (monsoon) ಆರಂಭವಾದರೆ ಸಾಕು, ಹಸಿರು ಮೆಲ್ಲಗೆ ನೆಲದಿಂದ ಜಿಗಿಯಲು ಆರಂಭವಾಗುತ್ತದೆ. ನಾಡು ಹರ್ಷದಿಂದ ಚಿಮ್ಮುತ್ತದೆ. ಮಳೆಗೆ ಪುಳಕಗೊಂಡ ಗಿಡಮರಗಳು ತಲೆದೂಗುತ್ತವೆ. ಹೊಲಗದ್ದೆಗಳಲ್ಲಿ ರೈತರ ಉಳುಮೆ ಮತ್ತಿತರ ಚಟುವಟಿಕೆ ಆರಂಭವಾಗುತ್ತದೆ. ಮೊದಲ ಮಳೆ ನೋಡಿ ಆ ವರ್ಷದ ಭವಿಷ್ಯ ಲೆಕ್ಕಿಸಿಬಿಡುತ್ತಾರೆ ರೈತರು. ಹೀಗೆ ನಾಡಿನ ಜೀವನಾಡಿಯಾದ ಮಳೆಗೂ ನಾಡಿನ ಸಂಸ್ಕೃತಿಗೂ (monsoon culture) ಆಚರಣೆಗಳಿಗೂ ಅವಿನಾಭಾವ ಸಂಬಂಧ.

ನಕ್ಷತ್ರ ಲೆಕ್ಕಾಚಾರ

ನಮ್ಮ ಹಿಂದಿನವರು ಮಳೆಯನ್ನು ನಕ್ಷತ್ರಗಳಿಂದ ಗುರುತಿಸುತ್ತಾರೆ. ಪ್ರತಿ ಮಳೆಗೂ ನಕ್ಷತ್ರ ಲೆಕ್ಕಾಚಾರವಿದೆ. ಇಂತಿಂಥ ನಕ್ಷತ್ರದಲ್ಲಿ ಸುರಿಯುವ ಮಳೆಗೆ ಇಂತಿಂಥ ಕೃಷಿ ಚಟುವಟಿಕೆ ಎಂಬ ಲೆಕ್ಕಾಚಾರವಿದೆ. ಮೂಲ, ವಿಶಾಖ, ಮುಖ, ಸ್ವಾತಿ. ಪುನರ್ವಸು, ಶ್ರವಣ, ಧನಿಷ್ಠ, ಶತಭಿಷ, ಉತ್ತರಭಾದ್ರ, ರೋಹಿಣಿ ನಕ್ಷತ್ರಗಳಲ್ಲಿ ಸಾಮಾನ್ಯವಾಗಿ ಆರಂಭಿಸುತ್ತಾರೆ. ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ ನಕ್ಷತ್ರಗಳು ಬೇಸಿಗೆಯ ಮಳೆ ನಕ್ಷತ್ರಗಳು. ಮೃಗಶಿರಾದಿಂದ ಹಸ್ತ ನಕ್ಷತ್ರವರೆಗಿರುವ 9 ನಕ್ಷತ್ರಗಳು ಮಳೆಗಾಲದ ನಕ್ಷತ್ರಗಳು. ನಂತರದ ನಕ್ಷತ್ರಗಳು ಹಿಂಗಾರು. “ಆಶ್ವಿನಿ ಮಳೆಗೆ ಆರು ಕಟ್ಟು, ಭರಣಿ ಮಳೆಗೆ ಬೀಜ ಬಿತ್ತು” “ಭರಣಿ ಮಳೆ ಬಂದರೆ ಧರಣಿಯೆಲ್ಲ ಬೆಳೆ” “ಕೃತ್ತಿಕೆ ಮಳೆ ಕಿರುಬನ ಹಿಡಿದಂತೆ” “ರೋಹಿಣಿ ಮಳೆ ಬಂದರೆ ಒಣಿಯೆಲ್ಲ ಕೆಸರು” ಮುಂತಾದ ಗಾದೆಗಳು ನಮ್ಮ ಜನರಲ್ಲಿವೆ.

chudi puja and other monsoon festivals

ಆಷಾಢದ ವಿರಹ

ಆಷಾಢದಲ್ಲಿ ಹೊಸದಾಗಿ ಮದುವೆಯಾದ ಗಂಡ- ಹೆಂಡತಿ, ಸೊಸೆ- ಅತ್ತೆ ಜತೆಯಾಗಿ ಇರಬಾರದು, ಇದ್ದರೆ ಜಗಳವಾಗುತ್ತದೆ ಎಂಬ ನಂಬಿಕೆ. ಹೀಗಾಗಿ ಆಷಾಢದಲ್ಲಿ ನವವಧು ತವರಿಗೆ ತೆರಳುತ್ತಾಳೆ. ಹೀಗಾಗಿ ಗಂಡನಿಗೆ ಆಷಾಢವೆಂದರೆ ವಿರಹ. “ಆಷಾಢದ ಗಾಳಿ ಬೀಸಿ ಬಡಿವಾಗ ಹೇಸಿದೆ ನನ್ನ ಒಂಟಿ ಜೀವʼʼ ಎಂಬುದು ಜನಪದದ ಹೊಸ ಗಂಡನ ಗೋಳು. ಹಬ್ಬಗಳ ಶ್ರಾವಣ ಆಗಮಿಸಿದಾಗ ಮರಳಿ ಬರುವ ಮಡದಿ ಆತನ ಪಾಲಿಗೆ ಭಾಗ್ಯಲಕ್ಷ್ಮಿ. ಇತ್ತೀಚೆಗೆ ಈ ರೂಢಿ ಕಡಿಮೆಯಾಗಿದೆ.

ಮಳೆಗಾಲದ ಆಚರಣೆಗಳು

ಮಳೆಗಾಲದ ಹಲವು ಆಚರಣೆಗಳು ಕುತೂಹಲಕಾರಿಯಾಗಿವೆ. ಈ ಮಾಸದಲ್ಲಿ ಜನ ಹೊರಗೆ ಬರುವುದಿಲ್ಲ ಹಾಗೂ ಹೆಚ್ಚಿನವರು ಹೊಲಗದ್ದೆಗಳಲ್ಲಿ ಕೆಲಸದಲ್ಲಿ ನಿರತರಾಗಿ ಇರುತ್ತಾದ್ದರಿಂದ, ಜನರನ್ನು ಹೆಚ್ಚಾಗಿ ಸೇರಿಸುವ ಹಬ್ಬಗಳಿಲ್ಲ. ಆದರೆ ಕೆಲವು ಅರ್ಥಪೂರ್ಣ ಆಚರಣೆಗಳಿವೆ.

ಇನ್ನು ಮಳೆಗಾಲ ಮುಗಿಯುವವರೆಗೂ ಶ್ರಾವಣ ಶನಿವಾರ, ಮಂಗಳ ಗೌರಿ ವ್ರತ, ಉಪಾಕರ್ಮ, ಸಿರಿಯಾಳ ಷಷ್ಠಿ, ವರಮಹಾಲಕ್ಷ್ಮಿ ವ್ರತ ಮೊದಲಾದ ಆಚರಣೆಗಳು ಬರುತ್ತಲೇ ಇರುತ್ತವೆ. ನಾಡಿನ ಎಲ್ಲರೂ ಭಕ್ತಿಭಾವದಿಂದ ನಡೆದುಕೊಳ್ಳುವ ಎರಡು ಮಳೆಗಾಲದ ಹಬ್ಬಗಳೆಂದರೆ ನಾಗರ ಪಂಚಮಿ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ. ನಾಗರ ಪಂಚಮಿಯಂದು ನಾಗನಿಗೆ ತನಿ ಎರೆಯುವುದು ಮತ್ತು ಜನ್ಮಾಷ್ಟಮಿಯಂದು ಮೊಸರು ಕುಡಿಕೆಗಳು ಜಗತ್‌ ಪ್ರಸಿದ್ಧ.

ಮಣ್ಣೆತ್ತಿನ ಅಮಾವಾಸ್ಯೆ

chudi puja and other monsoon festivals

ಉತ್ತರ ಕರ್ನಾಟಕದಲ್ಲಿ ಮಳೆಗಾಲದ ವೇಳೆ ಮಣ್ಣೆತ್ತಿನ ಅಮಾವಾಸ್ಯೆ ಬರುತ್ತದೆ. ಕಾರ ಹುಣ್ಣಿಮೆ ನಂತರ ಬರುವ ಅಮಾವಾಸ್ಯೆಯ ದಿನ ರೈತರು ಹೊಳೆ ಅಥವಾ ಜಮೀನಿನಿಂದ ಮಣ್ಣು ತಂದು, ಜೋಡೆತ್ತುಗಳನ್ನು ಮಾಡಿ, ಅವುಗಳನ್ನು ಜಗಲಿ ಮೇಲೆ ಇರಿಸಿ ಪೂಜೆ ಮಾಡುತ್ತಾರೆ. ಪೂಜೆ ಜತೆಗೆ ನೈವೇದ್ಯ ಸಮರ್ಪಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಉತ್ತಮ ಕೃಷಿ, ಅಧಿಕ ಇಳುವರಿಗೆ ರೈತರು ಮಾಡುವ ಪ್ರಾರ್ಥನೆಯೂ ಆಗಿದೆ. ಸಂಜೆ ವೇಳೆಗೆ ಮಣ್ಣೆತ್ತುಗಳನ್ನು ಹೊಳೆಗೆ ಬಿಡುವ ಮೂಲಕ ಆಚರಣೆ ಮುಗಿಯುತ್ತದೆ.

ಜೋಕುಮಾರಸ್ವಾಮಿ

chudi puja and other monsoon festivals

ಇನ್ನು ಮಳೆ ತರಿಸುವುದಕ್ಕೂ ಕೆಲವು ಆಚರಣೆಗಳಿವೆ. ಉತ್ತರ ಕರ್ನಾಟಕದಲ್ಲಿ ಮಾಡುವ ಜೋಕುಮಾರನ ಹಬ್ಬ ಅಂಥದೊಂದು. ಈತನ ಪೂಜೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ. ಇದು ಭಾದ್ರಪದ ಶುದ್ದ ನವಮಿಯಿಂದ ಪೌರ್ಣಿಮೆಯವರೆಗೆ ಏಳು ದಿನ ಆಚರಿಸುವ ಜಾನಪದ ಹಬ್ಬ. ಕುಂಬಾರರ ಮನೆಯ ಮಣ್ಣಿನಲ್ಲಿ ಜೋಕುಮಾರನ ಮೂರ್ತಿ ಮಾಡಿ ಪೂಜಿಸಿ, ಜನಪದ ಹಾಡುಗಳನ್ನು ಹಾಡಿ, ಆತನ ಪ್ರಸಾದವನ್ನು ಹೊಲಗಳಲ್ಲಿ ಚರಗ ಚೆಲ್ಲುತ್ತಾರೆ.

ಕೆಡ್ಡಸ, ಚೂಡಿ ಪೂಜೆ

chudi puja and other monsoon festivals

ಕರಾವಳಿ ಜಿಲ್ಲೆಗಳಲ್ಲಿ ತುಳು ಮಾಸದ ಪೊನ್ನಿ ತಿಂಗಳು ಅಂದರೆ ಮಕರ ಮಾಸದ 27ನೇ ದಿನ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸ ಎಂಬ ಹಬ್ಬ ಆಚರಿಸಲಾಗುತ್ತದೆ. ಮೂರು ದಿನ ನಡೆಯುವ ಈ ಹಬ್ಬದ ಆಚರಣೆಯಲ್ಲಿ ನೆಲ ಅಗೆಯುವುದು, ಮರಗಳನ್ನು ಕಡಿಯುವುದು ನಿಷಿದ್ಧ. ಯಾಕೆಂದರೆ ಈ ಸಂದರ್ಭದಲ್ಲಿ ಭೂಮಿ ರಜಸ್ವಲೆಯಾಗಿರುತ್ತಾಳೆ, ಹೀಗಾಗಿ ಕೃಷಿಕಾರ್ಯದಲ್ಲಿ ತೊಡಗಿ ಭೂಮಿಗೆ ನೋವುಂಟು ಮಾಡಿದರೆ ಆಕೆ ಬಂಜೆಯಾಗುತ್ತಾಳೆ ಎಂಬ ನಂಬಿಕೆ. ಕೆಡ್ಡಸ ವೇಳೆ ಪೂಜಿಸುವವರು ಸ್ತ್ರೀಯರು. ಅಂಗಳದ ಒಂದು ಮೂಲೆಯಲ್ಲಿ ಗೋಮಯದಿಂದ ಶುದ್ಧೀಕರಿಸಿದ ಜಾಗದಲ್ಲಿ ವಿಭೂತಿಯಿಂದ ವೃತ್ತ ರಚಿಸಿ ಅದರಲ್ಲಿ ಬಿಳಿಯ ಮಡಿಬಟ್ಟೆ, ಗೆಜ್ಜೆಕತ್ತಿ (ಕಿರುಗತ್ತಿ), ತೆಂಗಿನ ಗರಿಯ ಹಸಿ ಕಡ್ಡಿಯನ್ನಿಟ್ಟು ಮಾಡಿದ ಸಾಂಕೇತಿಕವಾದ ʼಭೂಮಿ’ತಾಯಿಯನ್ನು ಪೂಜಿಸಲಾಗುತ್ತದೆ.

ಇನ್ನು ಶ್ರಾವಣ ಮಾಸದ ಕೇಂದ್ರ ಬಿಂದು ಚೂಡಿ ಪೂಜೆ. ಶ್ರಾವಣ ಮಾಸದ ಶುಕ್ರವಾರ ಮತ್ತು ಆದಿತ್ಯವಾರ ತುಳಸಿ ಮತ್ತು ಹೊಸ್ತಿಲಿಗೆ ಮಾಡುವ ಪೂಜೆಯೇ ಈ ಚೂಡಿ ಪೂಜೆ. ಗರಿಕೆ, ರತ್ನಗಂಧಿ, ಶಂಖ ಪುಷ್ಪ, ಕಣಗಿಲೆ, ಕರವೀರ, ರಥದ ಹೂ, ಗೌರಿ ಹೂ ಮೊದಲಾದ ಹೂಗಳನ್ನು ಕಲಾತ್ಮಕವಾಗಿ ಜೋಡಿಸಿ ಬಾಳೆ ನಾರಿನಲ್ಲಿ ಕಟ್ಟಿದ ಸೂಡಿಯನ್ನು ಹೊಸ್ತಿಲಲ್ಲಿ ಇಟ್ಟು ಪೂಜಿಸಲಾಗುತ್ತದೆ. ಸೂಡಿಯೇ ಈ ಚೂಡಿ.

ಇದನ್ನೂ ಓದಿ: Monsoon Travel: ಮಳೆಗಾಲದಲ್ಲಿ ಈ ಸ್ವರ್ಗಸಮಾನ 5 ಹಿನ್ನೀರಿನ ತಾಣಗಳನ್ನು ಕಣ್ಣು ತುಂಬಿಕೊಳ್ಳಿ!

Exit mobile version