ಉತ್ತರ ಕರ್ನಾಟಕದ ಬೀದರ್‌ನಿಂದ ದಕ್ಷಿಣ ಕರ್ನಾಟಕದ ತುಳುನಾಡಿನವರೆಗೂ ಮಳೆಗಾಲ ಎಂದರೆ ಹಬ್ಬ ಆಚರಣೆಗಳಿಲ್ಲದ ದಿನಗಳು ಎಂದು ಭಾವಿಸಲಾಗುತ್ತದೆ. ಹಾಗೇನೂ ಇಲ್ಲ. ಮಳೆಗಾಲವೆಂದು ಭಾವಿಸಲಾಗುವ ಜೂನ್‌ನಿಂದ ಸೆಪ್ಟೆಂಬರ್‌ವರೆಗೂ ಹಲವು ಮನಸೆಳೆವ ಹಬ್ಬ- ಆಚರಣೆಗಳು (monsoon festivals) ನಾಡಿನಾದ್ಯಂತ ಇವೆ.
ಕೆಡ್ಡಸ
ಇದು ತುಳುನಾಡಿನ ಹಬ್ಬ. ತುಳು ಮಾಸದ ಪೊನ್ನಿ ತಿಂಗಳು ಅಂದರೆ ಮಕರ ಮಾಸದ 27ನೇ ದಿನ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸವನ್ನು ಆಚರಿಸಲಾಗುತ್ತದೆ. ಮೂರು ದಿನ ನಡೆಯುವ ಈ ಹಬ್ಬದ ಆಚರಣೆಯಲ್ಲಿ ನೆಲ ಅಗೆಯುವುದು, ಮರಗಳನ್ನು ಕಡಿಯುವುದು ನಿಷಿದ್ಧ. ಯಾಕೆಂದರೆ ಈ ಸಂದರ್ಭದಲ್ಲಿ ಭೂಮಿ ರಜಸ್ವಲೆಯಾಗಿರುತ್ತಾಳೆ, ಹೀಗಾಗಿ ಕೃಷಿಕಾರ್ಯದಲ್ಲಿ ತೊಡಗಿ ಭೂಮಿಗೆ ನೋವುಂಟು ಮಾಡಿದರೆ ಆಕೆ ಬಂಜೆಯಾಗುತ್ತಾಳೆ ಎಂಬ ನಂಬಿಕೆ. ಕೆಡ್ಡಸ ವೇಳೆ ಪೂಜಿಸುವವರು ಸ್ತ್ರೀಯರು. ಅಂಗಳದ ಒಂದು ಮೂಲೆಯಲ್ಲಿ ಗೋಮಯದಿಂದ ಶುದ್ಧೀಕರಿಸಿದ ಜಾಗದಲ್ಲಿ ವಿಭೂತಿಯಿಂದ ವೃತ್ತ ರಚಿಸಿ ಅದರಲ್ಲಿ ಬಿಳಿಯ ಮಡಿಬಟ್ಟೆ, ಗೆಜ್ಜೆಕತ್ತಿ (ಕಿರುಗತ್ತಿ), ತೆಂಗಿನ ಗರಿಯ ಹಸಿ ಕಡ್ಡಿಯನ್ನಿಟ್ಟು ಮಾಡಿದ ಸಾಂಕೇತಿಕವಾದ ʼಭೂಮಿ’ತಾಯಿಯನ್ನು ಪೂಜಿಸಲಾಗುತ್ತದೆ.
ಚೂಡಿ ಪೂಜೆ
ಶ್ರಾವಣ ಮಾಸದ ಕೇಂದ್ರ ಬಿಂದು ಚೂಡಿ ಪೂಜೆ. ಶ್ರಾವಣ ಮಾಸದ ಶುಕ್ರವಾರ ಮತ್ತು ಆದಿತ್ಯವಾರ ತುಳಸಿ ಮತ್ತು ಹೊಸ್ತಿಲಿಗೆ ಮಾಡುವ ಪೂಜೆಯೇ ಈ ಚೂಡಿ ಪೂಜೆ. ಗರಿಕೆ, ರತ್ನಗಂಧಿ, ಶಂಖ ಪುಷ್ಪ, ಕಣಗಿಲೆ, ಕರವೀರ, ರಥದ ಹೂ, ಗೌರಿ ಹೂ ಮೊದಲಾದ ಹೂಗಳನ್ನು ಕಲಾತ್ಮಕವಾಗಿ ಜೋಡಿಸಿ ಬಾಳೆ ನಾರಿನಲ್ಲಿ ಕಟ್ಟಿದ ಸೂಡಿಯನ್ನು ಹೊಸ್ತಿಲಲ್ಲಿ ಇಟ್ಟು ಪೂಜಿಸಲಾಗುತ್ತದೆ. ಸೂಡಿಯೇ ಈ ಚೂಡಿ.
ನಾಗರ ಪಂಚಮಿ
ನಾಗರ ಪಂಚಮಿ ನಾಡಿಗೆ ದೊಡ್ಡದಂತೆ. ಇದು ಒಡಹುಟ್ಟಿದವರ ಹಬ್ಬ. ಅಕ್ಕ-ತಮ್ಮ, ಅಣ್ಣ-ತಂಗಿಯರ ಹಬ್ಬ. ನಾಗಪ್ಪನಿಗೆ ತನಿ ಎರೆಯುತ್ತಾರೆ. ಜಾತಕದಲ್ಲಿ ಸರ್ಪ ದೋಷ, ಕಾಳಸರ್ಪಯೋಗ ಮತ್ತು ರಾಹು ದೋಷ ಇರುವವರು ಅಂದು ಬೆಳ್ಳಿ ನಾಗಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರೆ ದೋಷಗಳು ಪರಿಹಾರವಾಗುವುದು ಎಂಬ ನಂಬಿಕೆಯಿದೆ.
ಸಿರಿಯಾಳ ಷಷ್ಠಿ
ಸಿರಿಯಾಳ ಷಷ್ಠಿ ಹಬ್ಬವನ್ನು ಗಂಡು ಮಕ್ಕಳು ಇರುವ ತಾಯಂದಿರು ಆಚರಿಸುತ್ತಾರೆ. ಈ ದಿನ ಬೇಳೆ, ಅಕ್ಕಿ, ಎಣ್ಣೆ, ಹಾಲು, ಮೊಸರು ಜತೆಗೆ ದಕ್ಷಿಣೆ ಇಟ್ಟು ಮುತ್ತೈದೆಯರಿಗೆ ದಾನ ಕೊಡುತ್ತಾರೆ. ಇದರಿಂದ ಗಂಡುಮಕ್ಕಳಿಗೆ ಆಯಸ್ಸು, ಆರೋಗ್ಯ, ಸಂಪತ್ತು ಹೆಚ್ಚುವುದು ಎಂಬ ನಂಬಿಕೆಯಿದೆ.
ವರಮಹಾಲಕ್ಷ್ಮಿ ವ್ರತ
ಶ್ರಾವಣ ಮಾಸದ 2ನೇ ಶುಕ್ರವಾರ ಈ ವ್ರತದ ಆಚರಣೆ. ಈ ವ್ರತವನ್ನು ಸಂಜೆ ಸಮಯದಲ್ಲಿ ಲಕ್ಷ್ಮಿಯ ಪೂಜೆ ಮಾಡುವ ಮೂಲಕ ಆಚರಿಸುತ್ತಾರೆ. ಜಾತಕದಲ್ಲಿ ದೋಷ ಇರುವವರು ಲಕ್ಷ್ಮಿಯನ್ನು ಆರಾಧಿಸಿದರೆ ಸಂಪತ್ತು ಪ್ರಾಪ್ತಿ ಆಗುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ: Monsoon Diet: ಮಳೆಗಾಲದಲ್ಲಿ ಆಹಾರ ಸೇವನೆ ಹೀಗಿರಲಿ
ಉಪಾಕರ್ಮ ಮತ್ತು ರಕ್ಷಾ ಬಂಧನ
ಶ್ರಾವಣ ಮಾಸದ ಹುಣ್ಣಿಮೆ ದಿನ ಯಜುರ್ವೇದ ಉಪಾಕರ್ಮವನ್ನು, ಚತುರ್ದಶಿ ದಿನ ಋಗ್‌ವೇದ ಉಪಾಕರ್ಮವನ್ನು ಆಚರಿಸುತ್ತಾರೆ. ಒಮ್ಮೊಮ್ಮೆ ಎರಡೂ ಒಟ್ಟಿಗೆಯೂ ಬರಬಹುದು. ಸಾಮಾನ್ಯವಾಗಿ ದೇವಾಲಯದಲ್ಲಿ ಸಾಮೂಹಿಕವಾಗಿ ಆಚರಿಸುತ್ತಾರೆ. ಅದೇ ದಿನ ರಕ್ಷಾ ಬಂಧನವನ್ನು ಸೋದರ ಸೋದರಿಯರು ಆಚರಿಸುತ್ತಾರೆ. ಸಹೋದರನ ಕೈಗೆ ಸಹೋದರಿ ರಾಖಿ ಕಟ್ಟುತ್ತಾಳೆ. ಇದಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ.
ಶ್ರೀಕೃಷ್ಣ ಜನ್ಮಾಷ್ಟಮಿ
ಕೃಷ್ಣ ಪಕ್ಷದ ಅಷ್ಟಮಿ ದಿನ ರೋಹಿಣಿ ನಕ್ಷತ್ರ ಬರುವ ಪುಣ್ಯ ಕಾಲದಲ್ಲಿ ಶ್ರೀ ಕೃಷ್ಣನ ದಿವ್ಯ ಅವತಾರ. ಆದ್ದರಿಂದ ಈ ದಿನ ಕೃಷ್ಣನ ಪೂಜೆಯನ್ನು ಮಧ್ಯರಾತ್ರಿಯಲ್ಲಿ ಆಚರಿಸುತ್ತಾರೆ. ಹಲವಾರು ಕಡೆ ಮೊಸರು ಕುಡಿಕೆ ಉತ್ಸವ ಆಚರಿಸಲಾಗುತ್ತದೆ.
ಮಂಗಳ ಗೌರಿ ವ್ರತ
ಶ್ರಾವಣ ಮಾಸದ ಮೊದಲು ಮಂಗಳ ವಾರದಿಂದ ನಾಲ್ಕು ಮಂಗಳವಾರ ಮಂಗಳ ಗೌರಿ ವ್ರತವನ್ನು ಆಚರಿಸುತ್ತಾರೆ. ಹೊಸದಾಗಿ ಮದುವೆ ಆದ ಹೆಣ್ಣು ಮಕ್ಕಳು ಅವರ ತವರು ಮನೆಯಲ್ಲಿ ಈ ವ್ರತವನ್ನು ಆಚರಿಸುತ್ತಾರೆ. 5 ವರ್ಷ ಸತತವಾಗಿ ಈ ವ್ರತವನ್ನು ಆಚರಿಸಬೇಕು. ಕೊನೆಯಲ್ಲಿ ಉದ್ಯಾಪನೆ ಮಾಡಬೇಕು ಎನ್ನಲಾಗುತ್ತದೆ.
ಶ್ರಾವಣ ಶನಿವಾರ
ಪ್ರತಿ ಶ್ರಾವಣ ಶನಿವಾರದಂದು ಕುಲದೇವತೆ ವೆಂಕಟರಮಣ ಸ್ವಾಮಿ ಒಕ್ಕಲಿನವರು ಪಡಿ ಬೇಡುತ್ತಾರೆ. ಬಿಳಿ ಮತ್ತು ಕೆಂಪು ನಾಮವನ್ನು ಹಾಕಿಕೊಂಡು ಮನೆ ಮನೆಗೆ ಹೋಗಿ ಭಿಕ್ಷೆಯನ್ನು ಬೇಡಬೇಕು ಎಂದು ಹೇಳುತ್ತಾರೆ.
ಇದನ್ನೂ ಓದಿ: Monsoon Precautions : ಮಳೆಗಾಲದಲ್ಲಿ ಅಪಾಯಗಳಿಂದ ದೂರವಿರಲು ಹೀಗೆ ಮಾಡಿ