Site icon Vistara News

Muharram 2022 | ಈ ಮಠದಲ್ಲಿ ಆಚರಿಸುತ್ತಾರೆ ಮೊಹರಂ! ಇಲ್ಲಿದೆ ಭಾವೈಕ್ಯತೆಯ ಸಂಗಮ

Muharram 2022

ಕೊಪ್ಪಳ: ಇಲ್ಲಿನ ಶ್ರೀ ಸಿರಸಪ್ಪಯ್ಯಸ್ವಾಮಿಗಳ ಮಠ ಭಾವೈಕ್ಯತೆಯ ಸಂಕೇತವಾಗಿ ಸರ್ವಧರ್ಮದ ಭಕ್ತರ ಆರಾಧನಾ ಸ್ಥಳವಾಗಿದೆ. ಮಠದಲ್ಲಿ ಹಿಂದು ಸಂಪ್ರದಾಯದ ಪೂಜೆ ಪುನಸ್ಕಾರಗಳು ಮತ್ತು ಆಚರಣೆಗಳ ಜತೆಗೆ ಮೊಹರಂ ಹಬ್ಬವನ್ನು (Muharram 2022) ಅಷ್ಟೆ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ಈ ಮೂಲಕ ಆ ಮಠ ಭಾವೈಕ್ಯತೆಯ ತಾಣವಾಗಿದೆ.

ಅಲ್ಲಾಹು ಬೇರೆಯಲ್ಲ, ಅಲ್ಲಮ ಬೇರೆಯಲ್ಲ. ಎಲ್ಲರೂ ಒಂದೇ ಎಂಬ ಸೌಹಾರ್ದತೆ, ಭಾವೈಕ್ಯತೆ ಸಾರಿದ ಅನೇಕ ಸಂತ-ಮಹಾಂತರ, ಪೀರ ಫಕೀರರ ಮಠ ಮಂದಿರಗಳು, ದರ್ಗಾಗಳು ಈ ನಾಡಿನಲ್ಲಿ ಇಂದಿಗೂ ಸಾಕ್ಷಿಭೂತವಾಗಿ ನಿಂತಿವೆ. ಜಾತಿ – ಧರ್ಮದ ಹೆಸರಿನಲ್ಲಿ ದೇಶದಲ್ಲಿ ಅನೇಕ ಅಹಿತಕರ ಘಟನೆಗಳು ನಡೆಯುತ್ತಿವೆ. ಇದರ ನಡುವೆಯೂ ಸೌಹಾರ್ದತೆ ಸಾರುವ, ಭಾವೈಕ್ಯತೆಯನ್ನು ಬಿತ್ತುವ ಕೆಲಸಗಳು ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿವೆ. ಅಂತಹ ಭಾವೈಕ್ಯತೆಯ ಪರಂಪರೆಯನ್ನು ಮುಂದುವರಿಸಿಕೊಂಡು ಈ ಮಠ ಮುನ್ನಡೆದಿದೆ.

ಈ ಮಠದಲ್ಲಿ ಹಿಂದೂಗಳು ಕಾಯಿ – ಕರ್ಪೂರ ಮಾಡಿಸಿದರೆ, ಮುಸ್ಲಿಂ ಭಕ್ತರು ಮೊಹರಂ ಸಂದರ್ಭದಲ್ಲಿ ಸಕ್ಕರೆಯನ್ನು ಕೊಡುವ ಪರಿಪಾಠವಿದೆ. ತಲೆತಲಾಂತರದಿಂದ ಮೊಹರಂ ಹಬ್ಬ ವಿಶೇಷವಾಗಿ ನಡೆದುಕೊಂಡು ಬಂದಿದೆ.

ಇದನ್ನೂ ಓದಿ | ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿ ಭಾವೈಕ್ಯತೆಗೆ ಸಾಕ್ಷಿಯಾದ ಮುಸ್ಲಿಂ ಕುಟುಂಬ

ಶ್ರೀಶೈಲ ಸ್ವಾಮಿಗಳ ಪವಾಡ

ಬೀದರ್‌ ಕೋಟೆಯ ಸಂಸ್ಥಾನ ಮೂಲದ ವಿಶ್ವಕರ್ಮ ಸಮುದಾಯದ ಶ್ರೀಶೈಲ ಸ್ವಾಮಿಗಳು ನೂರಾರು ವರ್ಷಗಳ ಹಿಂದೆ ಕೊಪ್ಪಳಕ್ಕೆ ಆಗಮಿಸಿದ್ದರು. ಅವರು ಮಾಡುವ ಪವಾಡಗಳಿಂದ ಅವರನ್ನು ಸಿರಸಪ್ಪಯ್ಯಸ್ವಾಮಿಗಳು ಎಂದು ಕರೆಯಲಾಯಿತು. ಅಂದಿನಿಂದ ಈ ಮಠಕ್ಕೆ ಸಿರಸಪ್ಪಯ್ಯಸ್ವಾಮಿ ಮಠ ಎಂದೇ ಕರೆಯಲಾಗುತ್ತಿದೆ. ಶ್ರೀಗಳು ಹಿಂದೂ- ಮುಸ್ಲಿಮರ ಭಾವೈಕ್ಯತೆಯನ್ನು ಬೋಧಿಸಿದ್ದು, ಆಗಿನಿಂದಲೂ ಮಠದಲ್ಲಿ ಮೊಹರಂ ಆಚರಣೆ ಮಾಡಲಾಗುತ್ತಿದೆ.

ಗರ್ಭಗುಡಿಯಲ್ಲಿ ಕತೃಗದ್ದುಗೆಯ ಜತೆಗೆ ಪಂಜಾಗಳನ್ನು ಪೂಜಿಸಲಾಗುತ್ತದೆ. ಮೊಹರಂ ಸಂದರ್ಭದಲ್ಲಿ ಈ ಹಿಂದೆ ಮಠದಲ್ಲಿಯೇ ಅಲಾಯಿ ದೇವರುಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಕಳೆದ ಎರಡು ಮೂರು ವರ್ಷಗಳಿಂದ ಅಲಾಯಿ ದೇವರನ್ನು ಪ್ರತಿಷ್ಠಾಪಿಸದೆ ಮೊಹರಂ ಸಂದರ್ಭದಲ್ಲಿ ಪಂಜಾಗಳನ್ನು (ಅಲಾಯಿ ದೇವರ ಮುಖಗಳು)  ಕತೃಗದ್ದುಗೆಯಲ್ಲಿ ಪೂಜಿಸಲಾಗುತ್ತಿದೆ.

ಮೊಹರಂ ಸಂದರ್ಭದಲ್ಲಿ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಅಲಾಯಿ ದೇವರುಗಳು 10 ದಿನದಂದು ಶ್ರೀ ಸಿರಸಪ್ಪಯ್ಯಸ್ವಾಮಿ ಮಠಕ್ಕೆ ಬಂದು ಹೋಗುತ್ತವೆ. ಮಠದಲ್ಲಿ ಖತಲ್ ರಾತ್ರಿಯ ದಿನದಂದು ಮಠದ ಆವರಣದಲ್ಲಿರುವ ಅಲಾಯಿ ಕುಣಿಯಲ್ಲಿ ಬೆಂಕಿ ಹೊತ್ತಿಸಿ ಅಲಾಯಿ ಹಬ್ಬದ ಸಂಪ್ರದಾಯಗಳನ್ನು ಇಂದಿಗೂ ಆಚರಣೆ ಮಾಡಲಾಗುತ್ತದೆ.

ಉಪವಾಸವಿರುವ ಮಠದ ಸ್ವಾಮಿಗಳು

ಮೊಹರಂ ಸಂದರ್ಭದಲ್ಲಿ ಮಠದ ಸ್ವಾಮಿಗಳು ಉಪವಾಸವಿದ್ದು, ಪೂಜೆಯ ವಿಧಿ ವಿಧಾನದ ಮೂಲಕ ರಾತ್ರಿ ಕಾರಣಿಕ ಹೇಳುತ್ತಾರೆ. ಅಂದು ನಡೆಯುವ ಮೊಹರಂ ಹಬ್ಬಕ್ಕೆ ಹಿಂದೂ – ಮುಸ್ಲಿಂ ಸೇರಿದಂತೆ ಎಲ್ಲ ಧರ್ಮೀಯ ಭಕ್ತರು ಬರುವುದಾಗಿ ಸ್ಥಳೀಯರಾದ ವೆಂಕಟೇಶ ವೇದಪಾಠಕ ಹೇಳಿದರು.

ಗುಡಿಯಂತೆಯೂ ಮಸೀದಿಯಂತೆಯೂ ಇರುವ ಮಠ

ಸಿರಸಪ್ಪಯ್ಯಸ್ವಾಮಿಗಳ ಮಠವು ಹಿಂದು ಸಂಪ್ರದಾಯದಂತಹ ಗುಡಿಯನ್ನೂ ಹೊಂದಿದೆ. ಜತೆಗೆ ಮುಸ್ಲಿಂ ಸಂಪ್ರದಾಯದ ಮಸೀದಿ ಆಕಾರವೂ ಇದೆ. ಎರಡೂ ಧರ್ಮದ ಶ್ರದ್ಧಾಕೇಂದ್ರದಂತೆ ಮಠವನ್ನು ನೂರಾರು ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಮಠದೊಳಗಿರುವ ಕತೃ ಗದ್ದುಗೆಯು ಗೋರಿಯ ಆಕಾರದಲ್ಲಿದೆ. ಅದನ್ನು ಮಜಾರ ಎಂದು ಕರೆಯುತ್ತಾರೆ.

ಕತೃ ಗದ್ದುಗೆಯ ಜತೆಗೆ ಅಲಾಯಿ ದೇವರುಗಳ ಪಂಜಾಗಳನ್ನು ಪೂಜಿಸುವ ಪರಿಪಾಠವಿದೆ. ಮೊಹರಂ ಹಬ್ಬದ ಸಂದರ್ಭದಲ್ಲಿ ಕತೃ ಗದ್ದುಗೆಗೆ ಲಾಡಿಯನ್ನು (ಮೊಹರಂ ಸಂದರ್ಭದಲ್ಲಿ ಫಕೀರರಾಗುವವರು ಕೈಗೆ ಧರಿಸುವ ಕೆಂಪು ಬಣ್ಣದ ದಾರ) ಅರ್ಪಿಸಿ ಪೂಜಿಸಲಾಗುತ್ತದೆ. ಮಠದ ಆವರಣದಲ್ಲಿ ಅಲಾಯಿ ಕುಣಿಯೂ ಇದೆ. ಹೀಗಾಗಿ ಸಿರಸಪ್ಪಯ್ಯಸ್ವಾಮಿಗಳ ಮಠ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಶ್ರದ್ಧಾಕೇಂದ್ರವಾಗಿ ಪರಿಗಣಿತವಾಗಿದೆ.

ಭಾವೈಕ್ಯತೆ ಸಾರುವ ಮಠ

ಸಿರಸಪ್ಪಯ್ಯ ಸ್ವಾಮಿಗಳ ಮಠ ಎಂದರೆ ಅದು ಭಾವೈಕ್ಯತೆಯನ್ನು ಸಾರುವ ಮಠ. ಈ ಹಿಂದಿನಿಂದಲೂ ಇಲ್ಲಿ ಹಿಂದೂ ಮುಸ್ಲಿಂ ಸಂಪ್ರದಾಯದ ಆಚರಣೆಗಳು ನಡೆದುಕೊಂಡು ಬರುತ್ತಿವೆ. ಸಾಮಾನ್ಯ ದಿನಗಳಲ್ಲಿ ಭಕ್ತರು ಕಾಯಿ ಕರ್ಪೂರ ಅರ್ಪಿಸಿದರೆ ಮೊಹರಂ ಸಂದರ್ಭದಲ್ಲಿ ಸಕ್ಕರೆಯನ್ನು ಓದಿಕೆ ಮಾಡಿಸುತ್ತಾರೆ. ಮೊಹರಂ ಆಚರಣೆ ಹಾಗೂ ಹಿಂದೂ ಸಂಪ್ರದಾಯದ ಪೂಜೆ ಪುನಸ್ಕಾರಗಳು ಒಂದೇ ಮಠದಲ್ಲಿ ನಡೆಯುತ್ತವೆ. ಮುಸ್ಲಿಂರು ಸೇರಿದಂತೆ ಎಲ್ಲ ಧರ್ಮೀಯರು ಇಲ್ಲಿ ನಡೆಯುವ ಮೊಹರಂ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದೊಂದು ಭಾವೈಕ್ಯತೆಯನ್ನು ಸಾರುವ ಮಠವಾಗಿದೆ ಎಂದು ಸಿರಸಪ್ಪಯ್ಯನ ಮಠದ ಶೇಷಪ್ಪಯ್ಯಸ್ವಾಮಿಗಳು ಹೇಳಿದರು.

ಇದನ್ನೂ ಓದಿ |ಇರುವುದು ಮುಸ್ಲಿಮರ ಒಂದೇ ಮನೆ, ಹಿಂದುಗಳಿಂದಲೇ ಮಸೀದಿ ನಿರ್ಮಾಣ!

Exit mobile version