ಬೆಂಗಳೂರು: ದೇಶದ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಕೇರಳದ ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಕ್ತಿಪರವಶರಾಗಿ ದೇವರಿಗೆ ಕೈ ಮುಗಿಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಶನಿವಾರ ತಮ್ಮ ಪುತ್ರ ಅನಂತ್ ಅಂಬಾನಿ ಮತ್ತು ಅವರ ಭಾವಿ ಪತ್ನಿ ರಾಧಿಕಾ ಮರ್ಚಂಟ್ (ಎನ್‌ಕೋರ್ ಹೆಲ್ತ್‌ಕೇರ್ ಸಿಇಒ ವಿರೇನ್ ಮರ್ಚಂಟ್ ಅವರ ಪುತ್ರಿ) ಅವರೊಂದಿಗೆ ಕೇರಳದ ಪ್ರಸಿದ್ಧ ಗುರುವಾಯೂರಿನ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ದೇವರ ಮುಂದೆ ಕೈಮುಗಿದು ನಿಂತು ಪ್ರಾರ್ಥನೆ ಮಾಡುತ್ತಿರುವ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ.
“ದೇವರ ಎದುರು ಯಾರೂ ದೊಡ್ಡವರಲ್ಲ. ಕೇವಲ ಮನುಷ್ಯ. ಯಾವುದೇ ಇರುವೆ, ಹಕ್ಕಿ, ಗಿಡ ಮರದಂತೆ ಒಂದು ಜೀವಿ. ಅಷ್ಟೇ…ʼʼ ಎಂದೆಲ್ಲಾ ಬರೆದು ಮುಖೇಶ್ ಅಂಬಾನಿಯ ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ದೇಶದ ಎರಡನೇ ಅತ್ಯಂತ ಶ್ರೀಮಂತರಾಗಿರುವ ಮುಕೇಶ್ ಅಂಬಾನಿ ಈ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅನ್ನದಾನದ ನಿಧಿಗೆ 1.51 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದರು. ಇದು ಈ ದೇಗುಲಕ್ಕೆ ದಾನಿಯೊಬ್ಬರು ನೀಡಿದ್ದ ಅತ್ಯಂತ ದೊಡ್ಡ ಮೊತ್ತದ ದೇಣಿಗೆ ಎಂದು ಹೇಳಲಾಗಿದೆ.
ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಗುರುವಾಯೂರ್ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಕೇರಳದ ದೇವಾಲಯಗಳಲ್ಲಿ ಒಂದಾಗಿದೆ. ಮುಕೇಶ್ ಅಂಬಾನಿ ದೇಗಲದ ಗರ್ಭಗುಡಿಯ ಆವರಣವನ್ನು ಪ್ರವೇಶಿಸಿ, ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ದೇಗುಲದ ಆನೆಗಳಾದ ಚೆಂದಮಾರಾಕ್ಷನ್ ಹಾಗೂ ಬಲರಾಮನ್‌ಗೆ ತಿನಿಸು ನೀಡಿ, ಆಶೀರ್ವಾದ ಪಡೆದಿದ್ದರು. ದೇವರ ಮುಂದೆ ನಿಂತು ವಿಶೇಷವಾಗಿ ಪ್ರಾರ್ಥನೆ ಕೂಡ ಮಾಡಿದ್ದರು.
ಇದಕ್ಕೂ ಮೊದಲು ಅಂದರೆ ಶುಕ್ರವಾರದಂದು ಮುಕೇಶ್ ಅಂಬಾನಿ ಪ್ರಖ್ಯಾತ ತಿರುಪತಿಯ ವೆಂಕಟೇಶ್ವರ ದೇಗುಲಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲದೆ, ದೇಗುಲದ ಆಡಳಿತ ಮಂಡಳಿ ಟಿಟಿಡಿಗೆ 1.51 ಕೋಟಿ ರೂ.ಗಳನ್ನು ಕಾಣಿಕೆಯಾಗಿ ನೀಡಿದ್ದರು. ಸುಮಾರು ಒಂದು ಗಂಟೆಗಳ ಕಾಲ ದೇಗುಲದಲ್ಲಿ ಕಳೆದಿದ್ದ ಅವರು ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ | Ambani | 639 ಕೋಟಿ ರೂ.ಗೆ ದುಬೈನ ಅತ್ಯಂತ ದುಬಾರಿ ವಿಲ್ಲಾ ಖರೀದಿಸಿದ ಮುಕೇಶ್ ಅಂಬಾನಿ