Site icon Vistara News

ರಾಮನಿಗಾಗಿ ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಹೊರಟ ಮುಸ್ಲಿಂ ಯುವತಿ; ವಿಡಿಯೊ ನೋಡಿ

Shabnam Shaikh

Mumbai Muslim Girl Shabnam Shaikh Going To Ayodhya Ram Mandir On Foot; Video Goes Viral

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈಗಾಗಲೇ ಸಾವಿರಾರು ಗಣ್ಯರಿಗೆ ರಾಮಮಂದಿರ ಟ್ರಸ್ಟ್‌ನಿಂದ ಆಹ್ವಾನ ಕಳುಹಿಸಲಾಗಿದೆ. ಭರದ ಸಿದ್ಧತೆಯನ್ನೂ ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ, ಶ್ರೀರಾಮನ ದರ್ಶನಕ್ಕಾಗಿ ಮುಂಬೈನ ಮುಸ್ಲಿಂ ಯುವತಿ ಶಬನಮ್‌ ಶೇಖ್‌ (Shabnam Shaikh) ಅವರು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ.

ಹೌದು, ಅಪ್ಪಟ ರಾಮನ ಭಕ್ತೆಯಾಗಿರುವ, ತನ್ನನ್ನು ತಾನು ಸನಾತನಿ ಎಂದು ಕರೆದುಕೊಳ್ಳುವ ಶಬನಮ್‌ ಶೇಖ್‌ ಅವರು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ಶ್ರೀರಾಮನ ಧ್ವಜ ಹಿಡಿದುಕೊಂಡು ಸಾಗುತ್ತಿರುವ ಯುವತಿಯು ಈಗಾಗಲೇ ನೂರಕ್ಕೂ ಅಧಿಕ ಕಿಲೋಮೀಟರ್‌ ಮಾರ್ಗವನ್ನು ನಡೆದುಕೊಂಡೇ ಕ್ರಮಿಸಿದ್ದಾರೆ. ಮಾರ್ಗದ ಮಧ್ಯೆ ಶ್ರೀರಾಮನ ಭಕ್ತರನ್ನು ಭೇಟಿಯಾಗುತ್ತ, ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತ ಸಾಗುತ್ತಿರುವ ಇವರ ವಿಡಿಯೊಗಳು ಭಾರಿ ವೈರಲ್‌ ಆಗಿವೆ. ನಿತ್ಯವೂ ಪಾದಯಾತ್ರೆಯ ವಿಡಿಯೊಗಳನ್ನು ಶಬನಮ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದು, ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

“ಜೈ ಶ್ರೀರಾಮ್.‌ ಶ್ರೀರಾಮನ ದರ್ಶನ ಮಾಡುವುದೇ ನನ್ನ ಜೀವನದ ಗುರಿಯಾಗಿದೆ. ಇದಕ್ಕಾಗಿ ನಾನು ಅಯೋಧ್ಯೆಗೆ ನಡೆದುಕೊಂಡೇ ಸಾಗುತ್ತಿದ್ದೇನೆ” ಎಂದು ಶಬನಮ್‌ ಶೇಖ್‌ ಹೇಳಿದ್ದಾರೆ. ಇವರಿಗೆ ಸ್ನೇಹಿತರು ಕೂಡ ಸಾಥ್‌ ನೀಡಿದ್ದಾರೆ. ಇನ್ನು ಇಸ್ಲಾಂ ಧರ್ಮದಲ್ಲಿ ಜನಿಸಿ, ರಾಮನ ದರ್ಶನಕ್ಕೆ ತೆರಳುತ್ತಿರುವ ಯುವತಿಗೆ ಮಾರ್ಗದುದ್ದಕ್ಕೂ ಹಿಂದುಗಳು, ಹಿಂದು ಸಂಘಟನೆಗಳ ಕಾರ್ಯಕರ್ತರು ಬೆಂಬಲ ನೀಡುತ್ತಿದ್ದಾರೆ.

ಆರ್‌ಎಸ್‌ಎಸ್‌ಗೆ ಕಾರ್ಯಕ್ರಮಗಳ ಆಯೋಜನೆ ಹೊಣೆ

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ಇದನ್ನೂ ಓದಿ: Amith Sha : 550 ವರ್ಷಗಳ ರಾಮಮಂದಿರದ ಕನಸು… ಅಮಿತ್​ ಶಾ ಹೇಳಿಕೆಗೊಂದು ಕಾರಣವಿದೆ

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version