ಚಿತ್ರದುರ್ಗ: ಚಿತ್ರದುರ್ಗದ ಬ್ರಹನ್ಮಠದ ಪೂಜಾ ಕೈಂಕರ್ಯದ ಉಸ್ತುವಾರಿಯಾಗಿ ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಶ್ರೀಗಳನ್ನು ನೇಮಿಸಲಾಗಿದೆ. ಮುರುಘಾಮಠದಲ್ಲಿ ಮಠದ ಆಡಳಿತ ಮಂಡಳಿ ಸದಸ್ಯರು, ಮುಖಂಡರು ಸಭೆ ನಡೆಸಿ ನಿರ್ಧಾರ ಮಾಡಿದ್ದು, ಇದಕ್ಕೆ ಈಗ ಜೈಲಿನಲ್ಲಿರುವ ಶಿವಮೂರ್ತಿ ಮುರುಘಾಶರಣರು ಕೂಡಾ ಒಪ್ಪಿಗೆ ನೀಡಿದ್ದಾರೆ.
ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾಶ್ರೀಗಳನ್ನು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಕಳೆದ ಸೆಪ್ಟೆಂಬರ್ ೧ರಂದು ಬಂಧಿಸಲಾಗಿತ್ತು. ಆಗ ಮಠದಲ್ಲಿ ಪೂಜೆ ಮಾಡಲು ಹೆಬ್ಬಾಳದ ಮಹಾಂತ ರುದ್ರೇಶ್ವರ ಶ್ರೀಗಳನ್ನು ಮುರುಘಾಶರಣರು ಕೋರಿದ್ದರು. ಇದೀಗ ಮಠದ ಆಡಳಿತಾಧಿಕಾರಿಯೂ ಸೇರಿದಂತೆ ಹೊಸ ಸಮಿತಿ ನೇಮಕಗೊಂಡಿದೆ. ಹೀಗಾಗಿ ಪೂಜಾ ಕೈಂಕರ್ಯಕ್ಕೆ ಸಂಬಂಧಿಸಿ ಚರ್ಚೆ ನಡೆದು ಅಂತಿಮವಾಗಿ ಬಸವ ಪ್ರಭುಗಳನ್ನು ನೇಮಿಸಲು ನಿರ್ಧರಿಸಲಾಯಿತು.
ಅಧಿಕೃತ ಆದೇಶ ಹೊರಬೀಳುತ್ತಿದ್ದಂತೆಯೇ ಬಸವಪ್ರಭು ಶ್ರೀಗಳು ಮಠಕ್ಕೆ ಭೇಟಿ ನೀಡಿ ಕರ್ತೃ ಗದ್ದುಗೆ ದರ್ಶನ ಮಾಡಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಪೂಜೆ, ದಾಸೋಹ, ಮಠದ ಕೆಲಸ ನೋಡಿಕೊಳ್ಳಲು ಆದೇಶವಾಗಿದೆ. ಶಿವಮೂರ್ತಿ ಮುರುಘಾ ಶರಣರಿಂದ ಆದೇಶ ಸಿಕ್ಕಿದೆ. ನಿಷ್ಠೆಯಿಂದ, ಭಕ್ತಿಯಿಂದ ಈ ಸೇವಾಕಾರ್ಯ ಮಾಡುತ್ತೇನೆ. ಮುರುಘೇಶ, ಗುರು ಬಸವೇಶನ ಸೇವೆಯನ್ನು ಮುರುಘಾಶ್ರೀಗಳ ಆಶೀರ್ವಾದ, ಮಾರ್ಗದರ್ಶನದಲ್ಲಿ ಮಾಡುತ್ತೇನೆ ಎಂದರು.
ಎಲ್ಲಾ ಮಠದ ಶ್ರೀಗಳು, ಎಲ್ಲಾ ಭಕ್ತರ ಆಶಯದಂತೆ ಸೇವೆ ಮಾಡುವುದಾಗಿ ಹೇಳಿದ ಅವರು, ಮುಂದಿನ ಆದೇಶದವರೆಗೆ ಈ ಸೇವೆ ಸಲ್ಲಿಸುತ್ತೇನೆ. ಭಕ್ತರು ಎಂದಿನಂತೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ. ಬಸವಣ್ಣನ ಆಶೀರ್ವಾದ , ಗುರುವಿನ ಆಶೀರ್ವಾದ, ಮುರುಘಾಶ್ರೀಗಳ ಆಶೀರ್ವಾದವೇ ನನ್ನ ಶಕ್ತಿ. ಆ ಶಕ್ತಿಯಿಂದ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಹೇಳಿದರು.
ಮಠ ಬಿಟ್ಟು ಹೊರಟ ಹೆಬ್ಬಾಳ ಶ್ರೀ
ಹೊಸ ಪೂಜಾ ಉಸ್ತುವಾರಿ ನೇಮಕ ಆಗುತ್ತಿದ್ದಂತೆಯೇ ಇದುವರೆಗೆ ಉಸ್ತುವಾರಿ ಹೊತ್ತಿದ್ದ ಹೆಬ್ಬಾಳದ ಮಹಾಂತ ರುದ್ರೇಶ್ವರ ಶ್ರೀಗಳು ಮಠ ಬಿಟ್ಟು ತೆರಳಿದ್ದಾರೆ. ಕಷ್ಟ ಕಾಲದಲ್ಲಿ ಪೂಜೆ ಸಲ್ಲಿಸಿದ್ದ ಅವರು ಮಠದ ಶರಣ ಸಂಸ್ಕೃತಿ ಉತ್ಸವದ ಜವಾಬ್ದಾರಿ ನಿಭಾಯಿಸಿದ್ದರು. ಇದೀಗ ಬೇರೆಯವರನ್ನು ನೇಮಕ ಮಾಡಿರುವುದು ಅವರಿಗೆ ಬೇಸರ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ.