Site icon Vistara News

ಬಾಬರಿ ಮಸೀದಿ ಪರ ಹೋರಾಟಗಾರ ಈಗ ರೋಡ್ ಶೋನಲ್ಲಿ ಮೋದಿಗೆ ಹೂ ಚೆಲ್ಲಿದ!

Modi In Ayodhya

Narendra Modi's Mega Welcome in Ayodhya Before Mandir Launch, Ex-Babri Petitioner Showers Flowers

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ (Ram Mandir) ಲೋಕಾರ್ಪಣೆಗೂ ಮೊದಲೇ ರಾಮಜಪ ಜೋರಾಗಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಡಿಸೆಂಬರ್‌ 30) ಅಯೋಧ್ಯೆ ವಿಮಾನ ನಿಲ್ದಾಣ ಲೋಕಾರ್ಪಣೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಹಾಗೆಯೇ, ಅವರು ಲೋಕಾರ್ಪಣೆಗೂ ಮೊದಲು ರೋಡ್‌ ಶೋ ಕೈಗೊಂಡರು. ಇದೇ ವೇಳೆ, ಬಾಬರಿ ಮಸೀದಿ ಪರ ಹೋರಾಡಿದ, ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದ ಇಕ್ಬಾಲ್‌ ಅನ್ಸಾರಿ (Iqbal Ansari) ಅವರು ಕೂಡ ನರೇಂದ್ರ ಮೋದಿ ಅವರ ಮೇಲೆ ಹೂಚೆಲ್ಲಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಅಯೋಧ್ಯೆ ವಿಮಾನ ನಿಲ್ದಾಣ, ಅಮೃತ ಭಾರತ ರೈಲುಗಳಿಗೆ ಚಾಲನೆ ಸೇರಿ ಹಲವು ಕಾರ್ಯಕ್ರಮಗಳು ಇರುವ ಕಾರಣ ನರೇಂದ್ರ ಮೋದಿ ಅವರು ಶನಿವಾರ ಅಯೋಧ್ಯೆಗೆ ಆಗಮಿಸಿದರು. ಇದೇ ವೇಳೆ ಅವರು ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದವರೆಗಿನ 15 ಕಿಲೋಮೀಟರ್‌ ಉದ್ದಕ್ಕೂ ರೋಡ್‌ ಶೋ ನಡೆಸಿದರು. ಮಾರ್ಗದ ಬದಿ ನಿಂತಿದ್ದ ಸಾವಿರಾರು ಜನ ಮೋದಿ ಅವರ ಮೇಲೆ ಹೂಗಳನ್ನು ಚೆಲ್ಲುವ ಮೂಲಕ ಅಭಿಮಾನ ಮೆರೆದರು. ಮೋದಿ ಅವರ ರೋಡ್‌ ಶೋ ಧರ್ಮ ಪಥ, ಲತಾ ಮಂಗೇಶ್ಕರ್‌ ಚೌಕ್‌, ರಾಮ ಪಥ ಹಾಗೂ ತೇಢಿ ಬಜಾರ್‌ ಮೂಲಕ ಸಾಗಿತು. ಇದೇ ವೇಳೆ ಬಾಬರಿ ಮಸೀದಿ ಪರ ಹೋರಾಟಗಾರ, ಮಾಜಿ ಅರ್ಜಿದಾರರೂ ಆದ ಇಕ್ಬಾಲ್‌ ಅನ್ಸಾರಿ ಅವರು ರಸ್ತೆಯ ಇಕ್ಕೆಲಗಳ ಮಧ್ಯೆ ನಿಂತು ಮೋದಿ ಅವರ ಮೇಲೆ ಹೂಗಳನ್ನು ಚೆಲ್ಲಿದರು.

ಇಲ್ಲಿದೆ ವಿಡಿಯೊ

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ಬಳಿಕ ಮುಸ್ಲಿಮರ ನಡೆಸಿದ ಹೋರಾಟದಲ್ಲಿ ಇಕ್ಬಾಲ್‌ ಅನ್ಸಾರಿ ಅವರು ಭಾಗಿಯಾಗಿದ್ದರು. ಅಲ್ಲದೆ, ಬಾಬರಿ ಮಸೀದಿ ನೆಲಸಮ ಪ್ರಶ್ನಿಸಿ ಇವರು ಕೂಡ ಕೋರ್ಟ್‌ಗೆ ಅರ್ಜಿ ಸಲ್ಲಸಿದ್ದರು ಎಂದು ತಿಳಿದುಬಂದಿದೆ. ಇಂತಹ ಹಿನ್ನೆಲೆ ಹೊಂದಿರುವ ಇಕ್ಬಾಲ್‌ ಅನ್ಸಾರಿ ಅವರು ಈಗ ನರೇಂದ್ರ ಮೋದಿ ಅವರ ಮೇಲೆ ಹೂಗಳನ್ನು ಚೆಲ್ಲಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದು ಸೌಹಾರ್ದತೆಯ ಸಂಕೇತ ಎಂದು ಕೂಡ ಇಕ್ಬಾಲ್‌ ಅನ್ಸಾರಿಯವರ ನಡೆಯನ್ನು ಹೊಗಳಿದ್ದಾರೆ.

ಮೋದಿ ರೋಡ್‌ ಶೋ ಝಲಕ್

ಇದನ್ನೂ ಓದಿ: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದ ಮೊದಲ ವಿಮಾನ; ಜೈ ಶ್ರೀರಾಮ್‌ ಎಂದ ಪ್ರಯಾಣಿಕರು! ವಿಡಿಯೊ ಇದೆ

ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ನರೇಂದ್ರ ಮೋದಿ ಮಾತನಾಡಿದರು. “ಅಯೋಧ್ಯೆ ರಾಮಮಂದಿರವು ದೇಶದ ಜನರ ದೇಗುಲವಾಗಿದೆ. ರಾಮಮಂದಿರದಿಂದ ದೇಶದ ರಾಮಭಕ್ತರು ಪುನೀತರಾಗುವ ಜತೆಗೆ ಉತ್ತರ ಪ್ರದೇಶದ ಅಭಿವೃದ್ಧಿಗೆ ರಾಮಮಂದಿರ ಸಂಕೇತವಾಗಲಿದೆ. ಭವ್ಯ ರಾಮಮಂದಿರದ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಯೋಧ್ಯೆಯ ರಾಮಮಂದಿರವು ಸಾವಿರಾರು ಜನರ ಪರಿಶ್ರಮದಿಂದ ನಿರ್ಮಾಣ ಮಾಡಲಾಗಿದೆ. ಹಾಗಾಗಿ, ಇದು ಎಲ್ಲ ರಾಮ ಭಕ್ತರಿಗೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು.

“ದೇಶದಲ್ಲಿರುವ ಎಲ್ಲ ರಾಮನ ಭಕ್ತರು ಅಯೋಧ್ಯೆಗೆ ಬರಬೇಕು, ರಾಮನ ದರ್ಶನ ಮಾಡಬೇಕು ಎಂದು ಬಯಸುತ್ತಿದ್ದಾರೆ. ಆದರೆ, ಜನವರಿ 22ರಂದು ಎಲ್ಲ ನಾಗರಿಕರು ಅಯೋಧ್ಯೆಗೆ ಬರದಿರಿ. ಭದ್ರತೆ, ಜನಜಂಗುಳಿಯನ್ನು ತಪ್ಪಿಸಲು ನಿಧಾನವಾಗಿ ಅಯೋಧ್ಯೆಯತ್ತ ಧಾವಿಸಿ. ರಾಮಮಂದಿರಕ್ಕಾಗಿ 550 ವರ್ಷ ಕಾದಿದ್ದೀರಿ. ಈಗ ರಾಮಮಂದಿರ ಕನಸು ನನಸಾಗುತ್ತಿದೆ. ಯಾರು ಕೂಡ ಅವಸರ ಮಾಡದೆ ಉದ್ಘಾಟನೆ ಬಳಿಕ ಸಮಯ ತೆಗೆದುಕೊಂಡು ಅಯೋಧ್ಯೆಗೆ ಬಂದು, ರಾಮನ ದರ್ಶನ ಮಾಡಿಕೊಳ್ಳಿ” ಎಂದು ಸಲಹೆ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version