Site icon Vistara News

Navaratri 2022 | ಐದನೇ ದಿನ ಪೂಜಿಸಲ್ಪಡುವ ಸ್ಕಂದ ಮಾತೆ ಯಾರು? ಆಕೆಯನ್ನು ಏಕೆ ಪೂಜಿಸಬೇಕು?

Navaratri 2022

ಶಕ್ತಿದೇವತೆಯ ಆರಾಧನೆಯ ನವರಾತ್ರಿ ಹಬ್ಬದ (Navaratri 2022) ಐದನೇ ದಿನದ ಆಚರಣೆ ಶುಕ್ರವಾರ ನಡೆಯಲಿದೆ. ದೇವಿ ದುರ್ಗೆ ದುಷ್ಟರನ್ನು ಸಂಹಾರ ಮಾಡಿ ಶಿಷ್ಠರನ್ನು ಸಂರಕ್ಷಿಸಿದ ಮಾತೆ. ಸೃಷ್ಟಿಯ ರೂಪವೇ ಆಗಿರುವ ತಾಯಿಯನ್ನು ನಮ್ಮಲ್ಲಿನ ದುಷ್ಟ ಆಲೋಚನೆಗಳನ್ನು ಸಂಹರಿಸಿ, ಆಧ್ಯಾತ್ಮದ ದಾರಿಯಲ್ಲಿ ಮುನ್ನೆಡೆಸು ಎಂದು ಈ ನವರಾತ್ರಿಯ ಸಂದರ್ಭದಲ್ಲಿ ಪ್ರಾರ್ಥಿಸುತ್ತೇವೆ. ಹೀಗಾಗಿಯೇ ನವರಾತ್ರಿ ಎಂದರೆ ಒಂದು ರೀತಿಯಲ್ಲಿ ಸ್ವಪಕ್ಷೀಯ ಹಬ್ಬ ಮತ್ತೊಂದು ರೀತಿಯಲ್ಲಿ ಸಾರ್ವತ್ರಿಕ ಹಬ್ಬವೂ ಆಗಿದೆ. ಬಾಹ್ಯ ಆಚರಣೆಗಳ ಜತೆ ಜತೆಗೆ ಅಂತರಂಗದ ಮಿತಿ ದಾಟುವ, ಸೀಮೋಲ್ಲಂಘನೆಯೂ ಹೌದು.

ನವರಾತ್ರಿಯ ಐದನೇ ದಿನ ದುರ್ಗೆಯನ್ನು ಸ್ಕಂದ ಮಾತೆಯ ಸ್ವರೂಪದಿಂದ (ಪಂಚಮಂ ಸ್ಕಂದಮಾತೇತಿ) ಆರಾಧಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ (ಷಣ್ಮುಖ). ಕಾರ್ತಿಕೇಯನನ್ನು ರಕ್ಷಿಸಲು ತಾರಕಾಸುರನನ್ನು ಎದುರಿಸಿದ ಧೀರಮಾತೆ ಇವಳು. ಮಾತೆಯು ಪುತ್ರನನ್ನು ನಿಯಂತ್ರಿಸುವಂತೆ ಶಕ್ತಿಯ ಈ ರೂಪವು ಸಕಲವನ್ನೂ ನಿಯಂತ್ರಿಸುತ್ತದೆ. ಕಾರ್ತಿಕೇಯನಿಗೆ ಮಯೂರವಾಹನ, ಕುಮಾರ, ಶಕ್ತಿಧರ, ಮುಂತಾದ ಹೆಸರುಗಳಿವೆ. ಈ ಹೆಸರುಗಳಿಂದ ಪೂಜಿಸಲ್ಪಡುವ ಭಗವಾನ್‌ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ “ಸ್ಕಂದಮಾತಾʼʼ ಎಂದು ಪ್ರಸಿದ್ಧಳಾಗಿದ್ದಾಳೆಂದು ಹೇಳಲಾಗುತ್ತದೆ.

ಸ್ಕಂದಮಾತೆಗೆ ನಾಲ್ಕು ಭುಜಗಳಿರುತ್ತವೆ. ಇವಳು ಬಲಗಡೆಯ ಮೇಲಿನ ಕೈಯಿಂದ ಸ್ಕಂದನನ್ನು ತೊಡೆಯಲ್ಲಿ ಹಿಡಿದಿರುವಳು. ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರನ್ನು ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಇವಳು ಸಿಂಹವಾಹಿನಿ.

ನವರಾತ್ರಿ ಐದನೇ ದಿನ ಪೂಜೆಗೊಳ್ಳುವ ಸ್ಕಂದಮಾತೆಯನ್ನು ಆರಾಧಿಸುವವರ ಮನಸ್ಸು ಆಜ್ಞಾ ಚಕ್ರದಲ್ಲಿ ನೆಲೆಗೊಂಡು ಐಹಿಕ ಬಂಧನಗಳಿಂದ ಮುಕ್ತನಾಗುತ್ತದೆ. ಇವರಿಗೆ ಅಲೌಕಿಕ ತೇಜಸ್ಸು ಹಾಗೂ ಶಾಂತಿ ಲಭಿಸುವುದು.

ಗ್ರಹ: ಬುಧ, ವರ್ಣ: ಹಸಿರು, ನೈವೇದ್ಯ: ಪಾಯಸಾನ್ನ.

ನವಶಕ್ತಿ ಅಲಂಕಾರ: ಗರುಡವಾಹನ

ಶ್ರೀ ಮಾತೆಯ ವೈಷ್ಣವ ರೂಪ. ಮಹಾವಿಷ್ಣುವಿನ ಶಕ್ತಿಯನ್ನು ಪ್ರತಿನಿಧಿಸುತ್ತಿದ್ದಾಳೆ. ಗರುಡ ವಾಹನಳಾಗಿ ಕರದಲ್ಲಿ ಶಂಖ, ಚಕ್ರ ಮತ್ತು ಗದೆಯನ್ನು ಹಿಡಿದುಕೊಂಡಿದ್ದಾಳೆ. ತನ್ನನ್ನು ಆಶ್ರಯಿಸುವ ಭಕ್ತರನ್ನು ರಕ್ಷಿಸುತ್ತಾಳೆ. ಈಕೆಗೆ ವೈಷ್ಣೋದೇವಿ, ತ್ರಿಕೂಟ, ಮಾತಾರಾಣಿ ಎನ್ನುವ ಹೆಸರಿದೆ.

ಐದನೇಯ ದಿನ (ಪಂಚಮಿ) ಹಸಿರು ಬಣ್ಣದ ವಸ್ತ್ರಧಾರಣೆ

ಹಸಿರು ಬಣ್ಣವು ಪ್ರಕೃತಿಯ ಸೌಂದರ್ಯವನ್ನು ಬಿಂಬಿಸುವ ಪ್ರತೀಕ. ಸಕಾರಾತ್ಮಕ ಶಕ್ತಿಯನ್ನು ಹೊಂದಿದ ಬಣ್ಣ. ಇದು ವಸಂತ ಕಾಲದ ಸೌಂದರ್ಯವನ್ನು ಪ್ರತಿಬಿಂಬಿಸುವ ವರ್ಣ. ಪ್ರಕೃತಿಯ ಬೆಳವಣಿಗೆಯ ,ಅಭಿವೃದ್ಧಿಯ ,ಫಲವತ್ತತೆಯ ಸಂಕೇತ ಹಸಿರು. ಒಟ್ಟಾರೆ ಭೂದೇವಿಯ ಸೌಂದರ್ಯದ ವರ್ಣನೆಯ ಸಂಕೇತ ಈ ಹಸಿರು ಬಣ್ಣ.

ಹಿಂದೂ ಸಂಪ್ರದಾಯದಲ್ಲಿ ಸ್ತ್ರೀಯರಿಗೆ ಹಸಿರು ಸೀರೆ, ಹಸಿರು ಬಳೆಗಳು ಮಂಗಳ ಸೂಚಕಗಳಾಗಿವೆ. ಗರ್ಭಿಣಿ ಸ್ತ್ರೀಗೆ ಹಸಿರು ರವಿಕೆಯನ್ನು ತೊಡೆಸುವುದು ಒಂದು ಪ್ರಾಚೀನ ಸಂಪ್ರದಾಯವಾಗಿದೆ. ಹೀಗೆ ಹಸಿರು ಬಣ್ಣ ಮಂಗಳಕರವಾದ ಹಾಗೂ ಸಕಾರಾತ್ಮಕ ಮನೋಭಾವದ ಪ್ರತೀಕವಾಗಿದೆ. ಆಂಗ್ಲ ಭಾಷೆಯ ಎವರ್‌ ಗ್ರೀನ್‌ (Evergreen)ಎಂಬ ಶಬ್ದವು ನಿತ್ಯ ನೂತನತೆ ಹಾಗೂ ಕ್ರಿಯಾಶೀಲತೆಯ ಅರ್ಥವನ್ನು ಬಿಂಬಿಸುತ್ತದೆ. ಹೀಗೆ ನಮ್ಮ ಜೀವನವು ಕ್ರಿಯಾಶೀಲತೆಯಿಂದ ಅಭಿವೃದ್ಧಿಯಿಂದ ಕೂಡಿರಲಿ ಎಂದು ದೇವಿಗೆ ಪ್ರಾರ್ಥಿಸಿ ಐದನೇಯ ದಿನದಂದು ಹಸಿರು ವಸ್ತ್ರಧಾರಣೆಯನ್ನು ಮಾಡಬೇಕು.

ಯಾವ ಮಂತ್ರದಿಂದ ಪ್ರಾರ್ಥಿಸಬೇಕು?

ಸ್ಕಂದ ಮಾತೆಯು ಬುಧಗ್ರಹದ ಅಧಿದೇವತೆಯಾಗಿದ್ದು, ಈಕೆಯನ್ನು ಪೂಜಿಸುವುದರಿಂದ ಸಕಲ ವ್ಯಾಪಾರ, ವ್ಯವಹಾರಗಳು ಅಡೆತಡೆ ಇಲ್ಲದೇ ನಡೆಯುತ್ತವೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಜನ್ಮ (ಜಾತಕ ) ಕುಂಡಲಿಯಲ್ಲಿ ಬುಧನು ಪ್ರತಿಕೂಲದ ಸ್ಥಾನದಲ್ಲಿದ್ದರೆ ಉಂಟಾಗುವ ಎಲ್ಲಾ ತೊಂದರೆಗಳನ್ನು ಈ ದೇವಿ ನಿವಾರಿಸುವಳು. ದೇವಿಯು ಮಾತೃ ಸ್ವರೂಪಿಣಿಯಾಗಿ ಭಕ್ತರನ್ನು ಹರಸುವಳು.

ಸ್ಕಂದ ಮಾತೆಯು ಕೆಂಪು ಬಣ್ಣದ ಹೂವು, ಪಾರಿಜಾತ, ವಿಶೇಷವಾಗಿ ಗುಲಾಬಿ ಹೂವನ್ನು ಇಷ್ಟ ಪಡುತ್ತಾಳೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಹೀಗಾಗಿ ಈ ಹೂವುಗಳಿಂದ ದೇವಿಯನ್ನು ಪೂಜಿಸಬಹುದು. ತಾಯಿಗೆ ಬಾಳೆಹಣ್ಣು, ಪಾಯಸನ್ನ ಅರ್ಪಿಸಿದರೆ ಒಳ್ಳೆಯದಾಗುತ್ತದೆ. ದೇವಿಯ ಆಶೀರ್ವಾದ ಪಡೆಯಲು ಈ ಕೆಳಗಿನ ಮಂತ್ರದಿಂದ ಪ್ರಾರ್ಥಿಸಿ.

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||

(ವರ್ಣದ ಕುರಿತ ಮಾಹಿತಿ: ಮೇಧಾ ಪ್ರಹ್ಲಾದಾಚಾರ್ಯ ಜೋಶಿ)

ಇದನ್ನೂ ಓದಿ | Navaratri 2022 | ನವರಾತ್ರಿಯಲ್ಲಿ ಯಾವೆಲ್ಲಾ ಪಾರಾಯಣ ಮಾಡಬಹುದು? ಅನುಸರಿಸಬೇಕಾದ ಕ್ರಮಗಳೇನು?

Exit mobile version