ಶಕ್ತಿದೇವತೆಯ ಆರಾಧನೆಯ ನವರಾತ್ರಿ ಹಬ್ಬದ (Navaratri 2022) ನಾಲ್ಕನೇ ದಿನದ ಆಚರಣೆಗಳಿಗೆ ಈಗ ಸಿದ್ಧತೆ ನಡೆಯುತ್ತಿದೆ. ಶಕ್ತಿ ದೇವತೆಯರನ್ನು ಪೂಜಿಸುವ ಮೂಲಕ ನಮ್ಮ ಬುದ್ಧಿ ಮತ್ತು ಮನಸ್ಸು ಪರಿಶುದ್ಧವಾಗಿರಬೇಕು ಎಂಬುದು ಈ ಹಬ್ಬದ ಒಂದು ಸಂದೇಶವಾದರೆ, ನಮ್ಮ ಮನಸ್ಸಿನ ಸಾತ್ವಿಕ, ತಾಮಸ, ರಾಜಸ ಗುಣಗಳಿಗೆ ಅಧಿದೇವತೆ ಶ್ರೀ, ಭೂ, ದುರ್ಗಾದೇವಿಯರು. ನಮ್ಮಲ್ಲಿನ ತಾಮಸ ಗುಣ ಕಡಿಮೆಯಾಗಬೇಕು ಎನ್ನುವ ಕಾರಣಕ್ಕೆ ಈ ಮೂರು ದೇವತಾ ಸ್ವರೂಪಗಳನ್ನು ವಿವಿಧ ರೂಪದಲ್ಲಿ ಪೂಜಿಸುವ ಸಂಪ್ರದಾಯ ಬೆಳೆದು ಬಂದಿದೆ.
ನವದುರ್ಗೆಯರಲ್ಲಿ ನಾಲ್ಕನೇ ದಿನದ ಸ್ವರೂಪ ಕೂಷ್ಮಾಂಡ (ಕೂಷ್ಮಾಂಡೇತಿ ಚತುರ್ಥಕಮ್). ‘ಕು’ ಎಂದರೆ ಸ್ವಲ್ಪ. ಊಷ್ಮ ಎಂದರೆ ಬಿಸಿ. ಅಂಡ ಎಂದರೆ ಅಂತರಿಕ್ಷೀಯ ಮೊಟ್ಟೆ. ಅಂದರೆ ಬ್ರಹ್ಮಾಂಡದ ಸಷ್ಟಿಕರ್ತಳು ಎಂದರ್ಥ. ಸಷ್ಟಿಯ ಮೊದಲಲ್ಲಿ ಎಲ್ಲೆಲ್ಲೂ ಕತ್ತಲಿದ್ದು ತಾಯಿಯು ಸೂರ್ಯ ಮಂಡಲದಲ್ಲಿದ್ದು ಎಲ್ಲೆಡೆ ಬೆಳಕು ಹರಸಿದಳು.
ಕೂಷ್ಮಾಂಡ ಹೆಸರಿಗೆ ಇನ್ನೊಂದು ಅರ್ಥವೂ ಇದೆ. “ಕುʼʼಎಂದರೆ ಚಿಕ್ಕದು. ಊಷ್ಮ ಎಂದರೆ ತೇಜಸ್ಸು. ಅಂಡ ಎಂದರೆ ಗರ್ಭ. ಕೂಷ್ಮಾಂಡ ಅಂದರೆ ತೇಜಸ್ಸಿನ ಚಿಕ್ಕ ಬೀಜವೊಂದು ತನ್ನ ಗರ್ಭದಲ್ಲಿ ಇಡೀ ಸೃಷ್ಟಿಯನ್ನೇ ಇರಿಸಿಕೊಂಡು ಪೊರೆಯುತ್ತಿದೆ ಎಂದರ್ಥವೂ ಇದೆ. ಆದಿಶಕ್ತಿಯು ಕೂಷ್ಮಾಂಡ ಸ್ವರೂಪದಲ್ಲಿ ಜಗತ್ತನ್ನು ಪೊರೆಯುತ್ತಿದ್ದಾಳೆ. ಅವಳು ಬ್ರಹ್ಮಾಂಡದ ಪ್ರತೀಕವಾಗಿದ್ದಾಳೆ.
ನವರಾತ್ರಿಯ ನಾಲ್ಕನೇ ದಿನ ಪೂಜಿಸಲ್ಪಡುವ ಈ ದೇವಿ ಅಷ್ಟಭುಜವನ್ನು ಹೊಂದಿದ್ದಾಳೆ. ತಾಯಿಯ ದೇಹದ ಕಾಂತಿಯು ಸೂರ್ಯನಂತೆ ಪ್ರಖರವಾಗಿರುತ್ತದೆ. ತಾಯಿಯ ಏಳು ಕೈಗಳಲ್ಲಿ ಕಮಂಡಲ, ಬಿಲ್ಲು, ಬಾಣ, ಕಮಲದ ಹೂವು, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಇವೆ. ಅದೇ ಸಮಯದಲ್ಲಿ, ಎಂಟನೇ ಕೈಯಲ್ಲಿ ಜಪಮಾಲೆಯಿದೆ ಹಾಗೂ ತಾಯಿಯು ಸಿಂಹದ ಮೇಲೆ ಯಾವಾಗಲೂ ಸವಾರಿ ಮಾಡುತ್ತಾಳೆ.
ಈಕೆಯ ಉಪಾಸನೆಯಿಂದ ಮನಸ್ಸು ಅನಾಹತ ಚಕ್ರದಲ್ಲಿ ನೆಲೆಸಿ, ಪೂಜಿಸಿದವರಿಗೆ ಶೋಕನಾಶ,
ಆಯುರಾರೋಗ್ಯ, ಐಶ್ವರ್ಯಾದಿಗಳ ವದ್ಧಿಸಿ, ಯಶೋಕೀರ್ತಿಗಳ ಲಭ್ಯತೆ, ಪರಮಪದ ಪ್ರಾಪ್ತಿಯಾಗುತ್ತದೆ.
ನವಶಕ್ತಿ ಅಲಂಕಾರ: ಮಯೂರ ವಾಹನ
ಸೃಷ್ಟಿಕರ್ತೆಯ ಸ್ವರೂಪಗಳಲ್ಲಿ ಕೌಮಾರಿ ಸ್ವರೂಪವೂ ಒಂದು. ಈ ದೇವಿಯ ರೂಪ ನವಿಲಿನ ಮೇಲೆ ಆಸೀನಳಾಗಿರುತ್ತಾಳೆ. ಕರದಲ್ಲಿ ಶಕ್ತ್ಯಾಯುಧವನ್ನು ಧರಿಸಿದ್ದಾಳೆ. ಕೌಮಾರಿ ದೇವತೆಯ ಆರಾಧನೆಯಿಂದ ದೇವೀ ಪ್ರಜ್ಞೆಯು ಜಾಗೃತವಾಗುತ್ತದೆ. ಜ್ಞಾನಾರ್ಣವ ರುದ್ರಯಾಮಳ ಗ್ರಂಥದಲ್ಲಿ ಕೌಮಾರಿಯ ಹದಿನಾರು ವರ್ಷಗಳನ್ನು ಹದಿನಾರು ರೂಪದಲ್ಲಿ ವರ್ಣಿಸಲಾಗಿದೆ.
ಗ್ರಹ : ರವಿ, ನೈವೇದ್ಯ: ತುಪ್ಪದನ್ನ, ವರ್ಣ: ಹಳದಿ
ನಾಲ್ಕನೇಯ ದಿನ (ಚತುರ್ಥಿ) ಹಳದಿ ಬಣ್ಣದ ವಸ್ತ್ರಧಾರಣೆ
ಹಳದಿ ಬಣ್ಣ ಅತಿ ಶುಭಕರವಾದ ಬಣ್ಣವಾದ್ದರಿಂದ ಮದುವೆ ಮೊದಲಾದ ಶುಭ ಸಮಾರಂಭಗಳಲ್ಲಿ ಹಳದಿ ಬಣ್ಣದ ವಸ್ತ್ರಗಳನ್ನು ಧರಿಸುವುದು ಆಚರಣೆಯಲ್ಲಿದೆ. ಸಾಕ್ಷಾತ್ ಶ್ರೀಲಕ್ಷ್ಮಿ ನಾರಾಯಣರೂ ಸಹ ಪೀತಾಂಬರವನ್ನು ಧರಿಸಿದ್ದಾರೆ ಎಂಬ ವರ್ಣನೆ ಇದೆ. ಹಳದಿ ಬಣ್ಣವನ್ನು ಗುರು ಗ್ರಹದ ಬಣ್ಣವೆಂದು ಉಲ್ಲೇಖಿಸಿದ್ದಾರೆ ಆದ್ದರಿಂದ ಈ ಹಳದಿ ಬಣ್ಣವು ಮನೋಬಲವನ್ನು ಹೆಚ್ಚಿಸಿ ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡುತ್ತದೆ.
ಮನುಷ್ಯನ ವ್ಯಕ್ತಿತ್ವವನ್ನು ಬಿಂಬಿಸುವುದು ಅವನ ಚಾರಿತ್ರ್ಯ. ಅಂತೆಯೇ ಹಳದಿ ಬಣ್ಣದ ಚಿನ್ನದಂತೆ ನಮ್ಮ ವ್ಯಕ್ತಿತ್ವ ಚಾರಿತ್ರ್ಗಳು ಶುದ್ಧ ಚಿನ್ನದಂತಿರಲಿ ಎಂಬ ಸಂಕೇತ. ಮಂಗಳ ದ್ರವ್ಯವಾದ ಅರಿಷಿಣವೂ ಕೂಡ ಹಳದಿ ಬಣ್ಣದ್ದು. ಈ ಅರಿಷಿಣವೇ ಕುಂಕುಮಕ್ಕೆ ಜನ್ಮ ನೀಡುತ್ತದೆ. ಒಂದು ಮಂಗಳದ್ರವ್ಯದಿಂದ ಮತ್ತೊಂದು ಮಂಗಳದ್ರವ್ಯಕ್ಕೆ ಜನ್ಮ ನೀಡಿದಂತೆ ನಮ್ಮ ಜೀವನದಲ್ಲಿಯೂ ಮತ್ತು ನಮ್ಮಿಂದ ಇನ್ನೊಬ್ಬರ ಜೀವನಕ್ಕೂ ಎಲ್ಲ ಮಂಗಳಕರವಾಗಲಿ ಎಂದು ದೇವಿಗೆ ಪ್ರಾರ್ಥಿಸಿ ನಾಲ್ಕನೇ ದಿನ ಹಳದಿ ಬಣ್ಣದ ವಸ್ತ್ರಧಾರಣೆಯನ್ನು ಮಾಡಬೇಕು.
ಯಾವ ಮಂತ್ರದಿಂದ ಪ್ರಾರ್ಥಿಸಬೇಕು?
ದೇವಿಯ ಪ್ರಖರವಾದ ಮೂಲ ರೂಪ ಕೂಷ್ಮಾಂಡ. ಈ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕುಗಳನ್ನು ನಿವಾರಿಸಬಹುದು ಜತೆಗೆ ಎಲ್ಲ ರೀತಿಯ ಸಂಕಷ್ಟಗಳು ನಿವಾರಣೆಯಾಗುತ್ತವೆ. ಆರೋಗ್ಯ ಭಾಗ್ಯ ಒಲಿಯುತ್ತದೆ.
ಈ ದೇವಿಯನ್ನು ಸಾಮಾನ್ಯವಾಗಿ ಕೆಂಪು ಹೂವುಗಳಿಂದ ಪೂಜಿಸಲಾಗುತ್ತದೆ. ಹಳದಿ ವರ್ಣದ ಉಡುಗೆ ತೊಟ್ಟು, ದೇವಿಯ ಆರಾಧನೆ ಮಾಡಬೇಕು. ತುಪ್ಪದನ್ನವನ್ನು ನೈವೇದ್ಯ ಮಾಡಬೇಕು. ದೇವಿಯ ಆಶೀರ್ವಾದ ಪಡೆಯಲು ಈ ಕೆಳಗಿನ ಮಂತ್ರದಿಂದ ಪ್ರಾರ್ಥಿಸಿ.
ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||
(ವರ್ಣದ ಕುರಿತ ಮಾಹಿತಿ: ಮೇಧಾ ಪ್ರಹ್ಲಾದಾಚಾರ್ಯ ಜೋಶಿ)
ಇದನ್ನೂ ಓದಿ | Navaratri 2022 | ನವರಾತ್ರಿಯಲ್ಲಿ ಯಾವೆಲ್ಲಾ ಪಾರಾಯಣ ಮಾಡಬಹುದು? ಅನುಸರಿಸಬೇಕಾದ ಕ್ರಮಗಳೇನು?