ಡಾ. ಗಣಪತಿ ಆರ್ ಭಟ್
ದಸರಾ ಸಂಭ್ರಮ (Navaratri 2022 ) ಎಲ್ಲೆಲ್ಲೂ ಮನೆ ಮಾಡಿದೆ. ಇದೇ ಹೊತ್ತಲ್ಲಿ ನಮ್ಮ ನಾಡಿನ ಹಳೆ ಮೈಸೂರು ಪ್ರಾಂತಗಳಲ್ಲಿರುವ ಯಾರ ಮನೆಗಾದರೂ ಭೇಟಿಕೊಟ್ಟು ನೋಡಿ. ಒಂದೆಡೆ ನಾನಾ ದೇವತೆಗಳು, ರಾಜರು, ಪ್ರಾಣಿ, ಪಕ್ಷಿ ಹೀಗೆ ಸಾಲುಸಾಲಾಗಿ ಕೂರಿಸಿಟ್ಟ ಸಾಲಭಂಜಿಕೆಗಳು ಚಿತ್ತಾಕರ್ಷಕ ಚಿತ್ತಾರಗಳ ನಿಮ್ಮನ್ನು ಸ್ವಾಗತಿದರೆ, ಇನ್ನೊಂದೆಡೆ, ಸೀತಾ ಸ್ವಯಂವರ, ರಾಮ-ರಾವಣರ ಯುದ್ಧ, ಪಾಂಡವರ ಸಾಹಸ, ಕೋಟೆ, ಅರಮನೆ, ನಗರ ಹೀಗೆ ನಾನಾ ಪ್ರಸಂಗಗಳನ್ನು ಬಿತ್ತರಿಸುತ್ತಾ ಬೊಂಬೆಗಳು ನಿಮ್ಮನ್ನು ಬರಸೆಳೆಯುತ್ತವೆ.
ದಸರಾ ಸಂಭ್ರಮ ಕಳೆಗಟ್ಟುತ್ತಿದ್ದಂತೆ ಮೈಸೂರು ಕರ್ನಾಟಕ ಪ್ರಾಂತದ ಮನೆ-ಮನೆಗಳಲ್ಲಿಯೂ ಗೊಂಬೆಹಬ್ಬದ ಮೂಲಕ ಸಣ್ಣದೊಂದು ವಿಶ್ವ ತೆರೆದುಕೊಳ್ಳುತ್ತದೆ. ಮೊಬೈಲ್ ಫೋನ್, ಹೆಡ್ ಸೆಟ್ ಇತ್ಯಾದಿ ತಂತ್ರಜ್ಞಾನದಿಂದ ಯುವಜನೆರೆಲ್ಲ ತಮ್ಮಷ್ಟಕ್ಕೆ ತಾವಿರುವ ಕಾಲದಲ್ಲೂ ಐತಿಹಾಸಿಕ ಹಿನ್ನೆಲೆಯುಳ್ಳ ಈ ಬೊಂಬೆ ಹಬ್ಬವು ಮನೆಯವರನ್ನೆಲ್ಲ ಒಂದುಗೂಡಿಸುತ್ತಿದೆ.
ಭಾರತೀಯ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬಲ್ಲ ಈ ವಿಶಿಷ್ಟ ಆಚರಣೆಯು ಆಧುನಿಕ ಕಾಲದ ಆಡಂಬರಗಳ ಮಧ್ಯೆಯೂ ಕಳೆಗುಂದದೆ, ಎಲ್ಲರನ್ನೂ ಆಕರ್ಷಿಸುತ್ತಾ, ದೇಶ-ವಿದೇಶಗಳಲ್ಲೂ ಜನಮೆಚ್ಚುಗೆ ಪಡೆದುಕೊಂಡಿದೆ.
ಗೊಂಬೆಹಬ್ಬದ ಐತಿಹ್ಯ
ಜೀವನದ ನಾನಾ ಮೌಲ್ಯ ಮತ್ತು ಪಾರಮಾರ್ಥಿಕ ತತ್ವಗಳನ್ನು ಬೊಂಬೆಗಳ ಮೂಲಕ ಬಿಂಬಿಸುವ ಈ ವಿಶಿಷ್ಟ ಆಚರಣೆಯು ನಮ್ಮ ಮೈಸೂರು ಪ್ರಾಂತದಲ್ಲಿಯೇ ಮೊದಲಿಗೆ ಪ್ರಾರಂಭವಾಯಿತೆಂಬ ಪ್ರತೀತಿಯಿದೆ. ಗೊಲು ಅಥವಾ ಕೋಲು ಎಂಬ ಸ್ಥಳೀಯನಾಮಗಳಲ್ಲಿಯೂ ಕರೆಯಲಾಗುವ ಈ ಆಚರಣೆಯು ನಮಗೆಲ್ಲ ಗೊಂಬೆಹಬ್ಬ ಅಂತಲೇ ಪ್ರಸಿದ್ಧ. ಕರ್ನಾಟಕದ ಹಳೇ ಮೈಸೂರು ಪ್ರಾಂತವಲ್ಲದೆ, ತಮಿಳುನಾಡು, ಆಂಧ್ರಗಳಲ್ಲೂ ಈ ಆಚರಣೆ ಇದೆ.
ತಮಿಳುನಾಡಿನಲ್ಲಿ ಇದನ್ನು ಬೊಮ್ಮೈ ಗೊಲು ಅಂತ ಕರೆದರೆ, ಆಂಧ್ರ, ತೇಲಂಗಾಣ ಭಾಗಗಳಲ್ಲಿ ಬೊಮ್ಮಲ ಕೊಲವು ಅಂತ ಕರೆಯಲಾಗುತ್ತದೆ. ಹಾಗೆಂದರೆ ಗೊಂಬೆಗಳ ಸ್ಥಾಪನೆ ಎಂದರ್ಥವಿದೆ. ನಮ್ಮ ಮೈಸೂರಿನ ಮಹಾರಾಜರು ಈ ಸಂಸ್ಕೃತಿಯನ್ನು ಬೆಳೆಸಿದ್ದಲ್ಲದೆ, ಪಾಂಡ್ಯ, ಚೋಳರಾಜರುಗಳೂ ಈ ಸಂಸ್ಕೃತಿಯನ್ನು ವಿಸ್ತರಿಸಿದಂತೆ ತೋರುತ್ತದೆ. ಒಟ್ಟಾರೆ ಈ ಬೊಂಬೆಹಬ್ಬ ಸಂಪ್ರದಾಯಕ್ಕೆ ಸುಮಾರು 200ರಿಂದ 250ವರ್ಷಗಳ ಇತಿಹಾಸವಿದ್ದಂತೆ ತೋರುತ್ತದೆ.
ಕರುಳಬಳ್ಳಿಗೆ ಬೊಂಬೆಗಳ ಬಳುವಳಿ
ಗೊಂಬೆಹಬ್ಬದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಪಟ್ಟದ ಗೊಂಬೆಗಳು. ಇವು ಭಾರತದಲ್ಲಿರುವ ಕುಟುಂಬ ವ್ಯವಸ್ಥೆಯಲ್ಲಿರುವ ಒಗ್ಗಟ್ಟನ್ನು, ಹಿರಿಮೆಯನ್ನು ಸಮರ್ಥವಾಗಿ ಸಾರುತ್ತವೆ. ರಾಜ-ರಾಣಿಯೆಂದು ಕರೆಸಿಕೊಳ್ಳುವ ಈ ಪಟ್ಟದ ಗೊಂಬೆಗಳನ್ನು ಹೆಣ್ಣುಮಕ್ಕಳು ತಮ್ಮ ಮದುವೆಯ ಸಂದರ್ಭದಲ್ಲಿ ತವರು ಮನೆಯಿಂದ ತರುವ ಸಂಪ್ರದಾಯವಿದೆ. ತಲೆತಲಾಂತರಗಳಿಂದ ಒಂದು ಮನೆಯಲ್ಲಿ ನಡೆದುಕೊಂಡು ಬರುವ ಗೊಂಬೆಗಳ ಹಬ್ಬದಲ್ಲಿ ಆ ಮನೆಯ ಅತ್ತೆ-ಸೊಸೆಯಂದಿರ ತವರುಗೊಂಬೆಗಳೆಲ್ಲ ಒಂದೆಡೆ ಇಡಲ್ಪಡುವುದರಿಂದ ಕುಟುಂಬದೊಳಗಿನ ಬಾಂಧವ್ಯವನ್ನು ಇದು ಸಹಜವಾಗಿಯೇ ಗಟ್ಟಿಗೊಳಿಸುತ್ತದೆ.
ಸದ್ಯ ಬೆಂಗಳೂರಿನ ಜೆ. ಪಿ ನಗರದಲ್ಲಿ ವಾಸವಿರುವ ಗೃಹಿಣಿ ಸರಳಾ ಅವರು ಕಳೆದ ಮೂವತ್ತು ವರ್ಷಗಳಿಂದ ತಪ್ಪದೇ ತಮ್ಮ ಮನೆಯಲ್ಲಿ ದಸರಾ ಬೊಂಬೆಗಳನ್ನು ಕೂರಿಸುತ್ತಾ ಬಂದಿದ್ದಾರೆ. “ನಾನು ಮದುವೆಯಾಗಿ ಗಂಡನ ಮನೆಗೆ ಬಂದಾಗ ನನ್ನ ತವರಿನಿಂದ ತಂದ ಪಟ್ಟದ ಗೊಂಬೆಗಳನ್ನು ನಮ್ಮ ಅತ್ತೆ ತಮ್ಮ ತವರಿನ ಬೊಂಬೆಗಳ ಜೊತೆ ಇಟ್ಟು ಈ ಮನೆಯ ಸಂಪ್ರದಾಯವನ್ನು ನನಗೆ ಹೇಳಿಕೊಟ್ಟರು. ಈಗಲೂ ನಾನು ಪ್ರತಿವರ್ಷ ದಸರಾದಲ್ಲಿ ನನ್ನ ಅತ್ತೆಯವರ ಹಾಗೂ ನನ್ನ ಪಟ್ಟದಗೊಂಬೆಗಳನ್ನು ಒಟ್ಟೊಟ್ಟಿಗೆ ಇಡುತ್ತೇನೆ. ಮುಂದೆ ಬರುವ ಸೊಸೆಯ ಪಟ್ಟದ ಬೊಂಬೆಗಳಿಗೆ ಎದುರು ನೋಡುತ್ತಿದ್ದೇನೆ” ಎನ್ನುತ್ತಾರೆ.
ಬೊಂಬೆಗಳನ್ನು ಜೋಡಿಸಿಡುವ ಸವಾಲು
ಬೊಂಬೆ ಕೂರಿಸಲು ಬೇಕಾಗುವ ಮೆಟ್ಟಿಲಾಕಾರದ ಚೌಕಟ್ಟು ಮಾಡುವುದು, ಬೊಂಬೆಗಳನ್ನು ಕ್ರಮದಲ್ಲಿಯೇ ಜೋಡಿಸುವುದು, ಅಲಂಕರಿಸುವುದು ಇವೆಲ್ಲ ನಿಜಕ್ಕೂ ಸವಾಲಿನ ಕೆಲಸವೇ ಸರಿ. ಐದು, ಏಳು, ಒಂಬತ್ತು ಹೀಗೆ ಬೆಸಸಂಖ್ಯೆಯಲ್ಲಿ ಪಾವಟಿಗೆಗಳನ್ನು ನಿರ್ಮಿಸಿ ಗೊಂಬೆಗಳನ್ನು ಕೂರಿಸುವುದು ನಿಯಮ. ಹೆಚ್ಚಾನೆಚ್ಚು ಕಡೆ ನವರಾತ್ರಿಯ ಸಂಕೇತವಾಗಿ ಒಂಬತ್ತು ಇಲ್ಲವೆ ದಸರಾದ ಸಂಕೇತವಾಗಿ ಹತ್ತು ಪಾವಟಿಗೆಗಳನ್ನು ನಿರ್ಮಿಸಿ ಗೊಂಬೆಗಳನ್ನು ಕೂರಿಸುವ ವಾಡಿಕೆಯಿದೆ.
ನಾನಾ ದೇವತೆಗಳ, ಋಷಿಗಳ, ಯಜ್ಞೋಪಕರಣಗಳ ಆಕೃತಿಯಿಂದ ಹಿಡಿದು ರಾಜ,ರಾಣಿ, ಸೈನಿಕರು, ವ್ಯಾಪಾರ, ವ್ಯವಹಾರ, ಪ್ರಾಣಿ, ಗಿಡ-ಮರ, ನಗರ ಮಹಾನಗರ ಹೀಗೆ ಭೂತ ಹಾಗೂ ವರ್ತಮಾನಗಳ ಬಿಂಬಗಳಾಗುತ್ತವೆ ನಾನಾ ಬೊಂಬೆಗಳು. ಮೇಲಸ್ತರದಿಂದ ಕೆಳ ಸ್ತರದವರೆಗೆ ಕ್ರಮವಾಗಿ ಮೊದಲು ದೇವತೆಗಳ, ಋಷಿಗಳ, ನಂತರ ರಾಜಪುರುಷರ ಗೊಂಬೆ, ಆನಂತರದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ಗೊಂಬೆಗಳನ್ನು ಇಡುವ ನಿಯಮವಿದೆ.
ನವರಾತ್ರಿಯ ಹಿಂದಿನದಿನದ ಅಮವಾಸ್ಯೆಯ ದಿನವೇ ಈ ಜೋಡಣೆ ಅಲಂಕಾರಗಳೆಲ್ಲ ಪ್ರಾರಂಭವಾಗಿ, ವಿಜಯದಶಮಿಯದಿನ ಶಯನೋತ್ಸವದೊಂದಿಗೆ ಬೊಂಬೆಗಳ ಹಬ್ಬ ಪರಿಸಮಾಪ್ತಿಯಾಗುತ್ತದೆ. ಕೆಲವರ ಮನೆಗಳಲ್ಲಿ ಸರಸ್ವತಿ ಪೂಜೆಯಿಂದ ವಿಜಯದಶಮಿಯವರೆಗೆ ಮೂರುದಿನ ಮಾತ್ರವೇ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವೂ ಇದೆ.
ಭಾರತೀಯ ಸಂಸ್ಕೃತಿಯ ಅನಾವರಣ
ಬೊಂಬೆಹಬ್ಬದ ತಯಾರಿಯಲ್ಲಿ ಮಕ್ಕಳಿಂದ ಹಿಡಿದು ವೃದ್ಧಾದಿಯಾಗಿ ಮನೆ ಮಂದಿಯೆಲ್ಲ ಭಾಗಿಯಾಗಿ ಸಂಭ್ರಮಿಸುತ್ತಾರೆ. ಆದರೂ ಗೊಂಬೆಹಬ್ಬದಲ್ಲಿ ಮಹಿಳೆಯರ ಪಾತ್ರ ಬಹಳವೇ ಇರುವುದು ಕಾಣುತ್ತದೆ. ಗೃಹಿಣಿಯರು ಎಲ್ಲೇ ಹೋದರೂ, ತಮಗೆ ಕಂಡ, ಮನಸಿಗೆ ಬಂದ ಗೊಂಬೆಗಳನ್ನು ಖರೀದಿಸಿ ತಂದು, ಸಾಕಷ್ಟು ಮುತುವರ್ಜಿವಹಿಸಿ ವರ್ಷವಿಡೀ ಅವುಗಳನ್ನು ಕಾಪಾಡಿಕೊಳ್ಳುತ್ತಾರೆ. ಕೆಲ ಮನೆಗಳಲ್ಲಂತೂ ಮೂರು ನಾಲ್ಕು ತಲೆಮಾರುಗಳಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದ ಸಾವಿರಾರು ಬೊಂಬೆಗಳಿವೆ.
ಇವೆಲ್ಲವನ್ನು ಒಪ್ಪವಾಗಿರಿಸುವ, ಅಲಂಕರಿಸುವ ಕಾರ್ಯವನ್ನು ಹೆಣ್ಣುಮಕ್ಕಳು ಬಹಳ ಆಸ್ಥೆಯಿಂದ ಮಾಡುವುದನ್ನು ನೋಡಿದರೆ ಸ್ತ್ರೀಯರ ಸೂಕ್ಷ್ಮಗ್ರಾಹಿತ್ವ ಮತ್ತು ಅಲಂಕಾರಿಕ ವಿಷಯದಲ್ಲಿ ಅವರಿಗಿರುವ ಕೌಶಲಮತಿ ವೇದ್ಯವಾಗುತ್ತದೆ. ಒಂದೊಂದು ವರ್ಷವೂ ಒಂದೊಂದು ಬಗೆಯ ವಿಷಯದ ಮೇಲೆ ಬೆಳಕು ಚೆಲ್ಲುವ ಸನ್ನಿವೇಶವನ್ನು ನಿರೂಪಿಸುವ ವಾಡಿಕೆಯೂ ಇರುವುದರಿಂದ ವೃತ್ತ-ವರ್ತಿಷ್ಯಮಾನ ಸಂಗತಿಗಳನ್ನು ಜೋಡಿಸುವ ಕೆಲಸ ಇಲ್ಲಿರುತ್ತದೆ. ಸೀತಾಸ್ವಯಂವರವೋ, ರಾಮ-ರಾವಣರ ಯುದ್ಧವೋ ಇಲ್ಲವೆ ಪಾಂಡವರ ವನವಾಸದ ಪ್ರಸಂಗವೋ ಹೀಗೆ ನಮ್ಮ ಪ್ರಾಚೀನ ಐತಿಹ್ಯಗಳ ಪ್ರದರ್ಶನಕ್ಕೆ ವೇದಿಕೆ ನಿರ್ಮಾಣವಾಗುತ್ತದೆ.
ರಾಮಾಯಣ, ಮಹಾಭಾರತಾದಿ ಗ್ರಂಥಗಳ ಅನೇಕ ವಿಚಾರಗಳು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿ ಜೀವನಮೌಲ್ಯವನ್ನು ಕಲಿಯಲು, ಮಕ್ಕಳಿಗೆ ಪರಂಪರೆಯನ್ನು ಮನದಟ್ಟು ಮಾಡಲು ಒಳ್ಳೆಯ ಅವಕಾಶವನ್ನು ಮಾಡಿಕೊಡುತ್ತದೆ ಈ ಹಬ್ಬ.
ಆಧುನಿಕತೆಯ ಮೈಗೂಡಿಸಿಕೊಂಡ ಹಬ್ಬ
ಕುಟುಂಬಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿದ್ದ ಹಿಂದಿನಕಾಲದಲ್ಲಿ ಗೊಂಬೆಗಳ ಸಂಗ್ರಹ ಮತ್ತು ಅಲಂಕಾರವು ಜೋರಾಗಿಯೇ ನಡೆಯುತ್ತಿತ್ತು. ಮಣ್ಣಿನ ಗೊಂಬೆಗಳ ಜೊತೆ ಸಗಣಿಯಿಂದ ಮಾಡಿದ, ವಿವಿಧ ಮಣಿಗಳ ಕಸೂತಿಯಿಂದ ಮಾಡಿದ, ಹಿತ್ತಾಳೆ ಇತ್ಯಾದಿ ಲೋಹಗಳಿಂದ ಮಾಡಿದ ಬೊಂಬೆಗಳಿರುತ್ತಿದ್ದವು. ಇಂದಿನ ನಗರದ ಜಂಜಡದ ನಡುವೆಯೂ ಲಭ್ಯವಿರುವ ಸೀಮಿತ ಅವಕಾಶದಲ್ಲಿಯೇ ಬೊಂಬೆ ಹಬ್ಬವನ್ನು ಚ್ಯುತಿ ಬರದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ಲಭ್ಯವಿರುವ ಪ್ಲಾಸ್ಟಿಕ್, ಸೆರಾಮಿಕ್, ಫೈಬರ್ ಬೊಂಬೆಗಳೂ ಹಳೆಯ ಗೊಂಬೆಗಳ ಜೊತೆಗೆ ಸ್ಥಾನ ಪಡೆದು ರಾರಾಜಿಸುತ್ತವೆ.
ತುಮಕೂರಿನ ಮಧುಗಿರಿ ಮೂಲದ ಅನುರಾಧಾ ಅವರು ಚಿಕ್ಕವಯಸಿನಿಂದಲೇ ತಮ್ಮ ತಾಯಿ ಆಚರಿಸುತ್ತಿದ್ದ ಬೊಂಬೆ ಸಂಪ್ರದಾಯವನ್ನು ಗಮನಿಸಿಕೊಂಡು ಬೆಳೆದವರು. ಈಗಲೂ ಅವರು ಆ ಕಾಲದ ಪಟ್ಟದ ಗೊಂಬೆಗಳ ವೈಭವವನ್ನು ನೆನಪಿಸಿಕೊಳ್ಳುತ್ತಾರೆ. “ದಸರಾ ಬಂತೆಂದದರೆ ಕಟ್ಟಿಗೆಯ ಪಟ್ಟದಗೊಂಬೆಗಳನ್ನು ಪೆಟ್ಟಿಗೆಯಿಂದ ತೆಗೆದು ಇತರ ಗೊಂಬೆಗಳೊಟ್ಟಿಗೆ ಜೋಡಿಸಿಡುತ್ತಿದ್ದರು. ಆಗೆಲ್ಲ ಬಣ್ಣ-ಬಣ್ಣದ ಕಾಗದಗಳನ್ನು ಸುತ್ತಿ ಅಲಂಕರಿಸಿಡುತ್ತಿದ್ದರು. ಕಾಗದದಲ್ಲಿಯೇ ನೆರಿಗೆಯ ಸೀರೆ, ಬಣ್ಣದ ರವಿಕೆಯನ್ನು ಮಾಡಿ, ಮಿರುಗುವ ಜರತಾರಿಗಳನ್ನು ತೊಡಿಸುತ್ತಿದ್ದರು. ನಾಲ್ಕೈದು ವರ್ಷ ಅವುಗಳ ಬಣ್ಣ, ಅಲಂಕಾರ ಹಾಳಾಗದಂತೆ ಇಡುತ್ತಿದ್ದರು. ಈಗ ಅನೂಕೂಲಕ್ಕೆ ತಕ್ಕಂತೆ ಗೊಂಬೆಯ ಅಲಂಕಾರದ ಪದ್ಧತಿಯೂ ಬದಲಾಗಿದೆ” ಎನ್ನುತ್ತಾರೆ.
ವಿದೇಶಗಳಲ್ಲೂ ಮೆರಗು ಪಡೆದ ಬೊಂಬೆ ಹಬ್ಬ
ಅನೇಕ ಭಾರತೀಯ ಹಬ್ಬ-ಹರಿದಿನಗಳಂತೆಯೇ,ನಮ್ಮ ನಾಡಿನ ಮಣ್ಣಿನ ಈ ಅಪ್ಪಟ ಸಂಸ್ಕೃತಿಯನ್ನು ಮರೆಯದೇ ಇಂದು ಅನೇಕ ಅನಿವಾಸಿ ಭಾರತೀಯರು ತಾವಿರುವಲ್ಲಿಯೇ ಆಚರಿಸಿ ಸಂಭ್ರಮಿಸುತ್ತಾರೆ. ಆ ಪೈಕಿ, ಅಮೆರಿಕದ ನ್ಯೂಯಾರ್ಕ ನಲ್ಲಿ ಕಳೆದ ಅನೇಕ ವರ್ಷಗಳಿಂದ ನೆಲೆಸಿರುವ ಬೆಂಗಳೂರು ಮೂಲದ ಶ್ರೀನಿವಾಸ್ ಜಯಶಂಕರ್ ಮತ್ತು ಶ್ರೀಲಕ್ಷ್ಮಿ ತಮ್ಮ ಅಮೆರಿಕದ ನಿವಾಸದಲ್ಲಿ ಪ್ರತಿವರ್ಷ ದಸರಾದಲ್ಲಿ ಬೊಂಬೆ ಹಬ್ಬವನ್ನು ಜೋರಾಗಿ ಮಾಡುತ್ತಾರೆ. ತಾವು ಭಾರತಕ್ಕೆ ಬಂದಾಗಲೆಲ್ಲ ಮರೆಯದೆ, ನಾನಾ ಬೊಂಬೆಗಳನ್ನು ಖರೀದಿಸಿ ಕೊಂಡೊಯ್ಯುವ ಇವರ ಬಳಿ ಬೊಂಬೆಗಳ ಎಷ್ಟು ದೊಡ್ಡ ಸಂಗ್ರಹವಿದೆಯೆಂದು ಕೇಳಿದರೆ ನೀವು ಅಚ್ಚರಿ ಪಡುತ್ತೀರಿ. ಪ್ರತಿವರ್ಷ ಭಾರತೀಯ ಪರಂಪರೆಯನ್ನು ಬಿಂಬಿಸುವ ಒಂದೊಂದು ವಿಷಯವನ್ನು ಅಲ್ಲಿ ವಿಷದಪಡಿಸುತ್ತಾರೆ. ಈ ವರ್ಷವಂತೂ ಮೈಸೂರು ಅರಮನೆ, ಜಂಬೂಸವಾರಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಚೌಕ ಹೀಗೆ ಇಡೀ ಮೈಸೂರಿನ ದಸರಾ ಸಂಭ್ರಮವನ್ನು ಅಮೆರಿಕದ ತಮ್ಮ ಮನೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅಮೆರಿಕದಲ್ಲಿರುವ ತಮ್ಮ ಬಂಧು-ಮಿತ್ರರನ್ನು ಮನೆಗೆ ಆಹ್ವಾನಿಸಿ ಔತಣ ಏರ್ಪಡಿಸುತ್ತಾರೆ. “ಭೌತಿಕವಾಗಿ ತಾಯ್ನೆಲದಿಂದ ದೂರವಿದ್ದರೂ, ಭಾರತೀಯತೆ ತಮ್ಮ ಹೃದಯದಲ್ಲೇ ಇರುವದಕ್ಕಾಗಿಯೇ ಈ ಆಚರಣೆ ಸಾಧ್ಯವಾಯಿತುʼʼ ಎನ್ನುವ ಶ್ರೀನಿವಾಸ್ ಜಯಶಂಕರ್ ಅನೇಕ ವರ್ಷಗಳಿಂದ ತಾವು ಕಳೆದು ಕೊಂಡಿದ್ದ ಬಂಧುಗಳ ಬಾಂಧವ್ಯ ಮತ್ತು ಸಂಸ್ಕೃತಿಯನ್ನು ಕಳೆದ ಆರು ವರ್ಷಗಳಿಂದ ಈ ಬೊಂಬೆ ಹಬ್ಬ ಆಚರಿಸುವ ಮೂಲಕ ಮತ್ತೆ ಪಡೆದುಕೊಂಡಿದ್ದೇವೆ ಎಂದು ಹೆಮ್ಮೆ ಪಡುತ್ತಾರೆ.
ಒಟ್ಟಾರೆಯಾಗಿ ತಾತ್ವಿಕವಾದ ಜೀವನ ಮೌಲ್ಯವನ್ನು ಬಿಂಬಿಸುವುದಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿ ಸಮಾಜ-ಸಮಾಜವನ್ನು ಬೆಸೆಯುವ ಶಕ್ತಿ ಈ ಗೊಂಬೆಹಬ್ಬಗಳಿರುವುದು ನಿಶ್ಚಿತ. ಹಾಗಾಗಿಯೇ ಗೊಂಬೆಹಬ್ಬ ಇಂದು ಕೇವಲ ಪ್ರಾಂತೀಯ ಆಚರಣೆಯಾಗಷ್ಟೇ ಉಳಿಯದೆ ಭಾರತೀಯ ಸಂಸ್ಕೃತಿಯನ್ನು ಆರಾಧಿಸುವ ಪ್ರತಿಯೊಬ್ಬರ ಮನೆಯ, ಊರ ಉತ್ಸವವಾಗಿ ಮಾರ್ಪಡುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಬೊಂಬೆಗಳು ಜಗದಗಲಕ್ಕೆ ಸಾರುತ್ತಿವೆ.
ಲೇಖಕರು ಸಂಸ್ಕೃತ ಪ್ರಾಧ್ಯಾಪಕರು
ಇದನ್ನೂ ಓದಿ | Navaratri 2022 | ಸರಸ್ವತಿ ಪೂಜೆ ಎಂದು? ಪೂಜೆ ಹೇಗೆ ಮಾಡಬೇಕು?