Site icon Vistara News

Navaratri 2022 | ನವತ್ವವನ್ನು ಉಂಟು ಮಾಡುವ ನವರಾತ್ರಿ ಹಬ್ಬ

Navaratri 2022

ವಿದ್ವಾನ್ ಬಿ. ಜಿ. ಅನಂತ
ಸನಾತನ ಆರ್ಯ ಭಾರತೀಯರ ಹಬ್ಬ-ಹರಿದಿನಗಳ ಸಾಲಿನಲ್ಲಿ ಅತ್ಯಂತ ಮುಖ್ಯವಾಗಿರುವ ಪರ್ವ – ನವರಾತ್ರಿ ಮಹೋತ್ಸವ (Navaratri 2022). ವರ್ಣ ಭೇದವಿಲ್ಲದೆ ಸಮಸ್ತ ಭಾರತೀಯರೂ ಗತಿಸಿಹೋದ ತಮ್ಮ ತಮ್ಮ ಪಿತೃಗಳಿಗೆ ಪೂಜೆ ದಾನ-ತರ್ಪಣಗಳನ್ನು ಮಹಾಲಯ ಪಕ್ಷದ ಹದಿನೈದು ದಿನಗಳ ಪರ್ಯಂತ ಕೊಟ್ಟಿರುತ್ತಾರೆ. ಅದರ ಕೊನೆಯ ದಿವಸವಾದ ಮಹಾಲಯ ಅಮಾವಾಸ್ಯೆಯಂದು ಈ ಪಿತೃ ಪೂಜೆಯು ಉತ್ತುಂಗವನ್ನು ಕಂಡು ಸಂಪೂರ್ಣವಾಗಿರುತ್ತದೆ. ಅಂದಿನ ಅಮಾವಾಸ್ಯೆ ಮುಗಿದ ನಂತರ ಪ್ರಾರಂಭವಾಗುವ ಆಶ್ವಯುಜ ಮಾಸದ ಶುಕ್ಲಪಕ್ಷದ ಪ್ರತಿಪತ್ತಿನ ದಿವಸ ಮೊದಲುಗೊಂಡು ನವರಾತ್ರಿ ಪರ್ವವು ಪ್ರಾರಂಭವಾಗುತ್ತದೆ.  

ಪಿತೃದೇವತೆಗಳು ದೇವತಾ ಶಕ್ತಿಗಳಿಗೂ ಹಿಂದೆ ನಿಂತು ಕೆಲಸ ಮಾಡುವವರು. ಪಿತೃಗಳೆಂದರೆ ಅದು ಸಮಸ್ತ ಸೃಷ್ಟಿಗೂ, ಸೃಷ್ಟಿಯ ಭಾಗವಾದ ದೇವತೆಗಳಿಗೂ ಮೂಲವಾದ ಶಕ್ತಿವಿಶೇಷ. ಅವರನ್ನು ಪೂಜಿಸಿದ, ಸಂತೃಪ್ತಿಪಡಿಸಿದ ನಂತರ ದೇವತಾ ಶಕ್ತಿಗಳನ್ನು ಪೂಜಿಸುವ ಕಾಲವೇ ಈ ನವರಾತ್ರಿ ಮಹೋತ್ಸವ (Navaratri 2022).

ಭಾರತದ ಎಲ್ಲ ಭಾಗಗಳಲ್ಲಿಯೂ ವಿಶೇಷವಾಗಿ ಆಚರಿಸಲ್ಪಡುವ ಹಬ್ಬವಿದು. ಎಲ್ಲ ವರ್ಣ, ಎಲ್ಲ ಆಶ್ರಮಗಳಿಗೆ ಸೇರಿದವರು ಮತ್ತು ಪೂರ್ಣವಾಗಿ ಆರ್ಯಧರ್ಮಕ್ಕೆ ಸೇರದಿರುವ ಮ್ಲೇಚ್ಛರೂ ಕೂಡ ಆಚರಿಸಲು ಅಧಿಕಾರವಿರುವ ಪರ್ವವೂ ಕೂಡ ಇದಾಗಿದೆ ಎಂಬುದಾಗಿ ಹಿರಿಯರು ಅಪ್ಪಣೆ ಕೊಡಿಸಿರುತ್ತಾರೆ. ಶೈವ ವೈಷ್ಣವ ಶಾಕ್ತ ಸೌರ ಗಾಣಪತ್ಯ ಮತ್ತು ಕೌಮಾರ ಎಂಬ ಭಕ್ತಪಂಥಗಳು ಪ್ರಸಿದ್ಧವಷ್ಟೇ. ಆ ಎಲ್ಲ ಬೇರೆ ಬೇರೆ ಭಕ್ತ ವರ್ಗದವರೂ ಕೂಡಾ ಆಚರಣೆ ಮಾಡಲು ಬರುವ ಹಬ್ಬ ಈ ನವರಾತ್ರಿ.

ನವರಾತ್ರಿಕಾಲದ ಆರಾಧ್ಯದೇವತೆ

ಏಕೆಂದರೆ ಈ ಪರ್ವದಲ್ಲಿ ವಿಶೇಷವಾಗಿ ಪೂಜಿಸಲ್ಪಡುವವಳು – ಶಕ್ತಿ.
“ಸಂಜೀವಯತ್ಯಖಿಲಶಕ್ತಿಧರಸ್ಸ್ವಧಾಮ್ನಾʼʼ ಎಂದು ಶ್ರೀಮದ್ಭಾಗವತವು ಹೇಳುವಂತೆ ಭಗವಂತನು ಶಕ್ತಿ ವಿಶಿಷ್ಟನೇ ಆಗಿದ್ದಾನೆ. ಹಾಗಿರುವ ಅವನ ಶಕ್ತಿಯ ಅಂಶವನ್ನು ವಿಶೇಷವಾಗಿ ಆರಾಧಿಸುವ ಹಬ್ಬವಿದು. ಎಲ್ಲ ಒಂಬತ್ತು ದಿನಗಳಲ್ಲಿ ಆಚರಿಸಲು ಸಾಧ್ಯವಾಗದಿದ್ದರೆ ಕೊನೆಯ ನಾಲ್ಕು ದಿನಗಳು, 3 ದಿನಗಳು, 2 ದಿನಗಳು ಅಥವಾ ಒಂದು ದಿನವಾದರೂ ಅವಶ್ಯವಾಗಿ ಆಚರಿಸಲೇ ಬೇಕಾದ ಹಬ್ಬವಿದು. ಕೇವಲ ಮಹಾಷ್ಟಮೀ ಅಥವಾ ಮಹಾನವಮಿಯನ್ನಾದರೂ ಆಚರಿಸಬೇಕೇ ಹೊರತು ಮಹೋತ್ಸವ. ಖಂಡಿತವಾಗಿಯೂ ಹಬ್ಬದ ಲೋಪವನ್ನು ಮಾಡಬಾರದು ಎಂದು ಹಿರಿಯರು ಅನುಶಾಸನ ಮಾಡಿರುವ ಮಹಾಪರ್ವ ನವರಾತ್ರಿ.

ನವರಾತ್ರಿಗೆ ಯಾಕೆ ಈ ಹೆಸರು?
ನವರಾತ್ರಿ (Navaratri 2022), ದುರ್ಗೋತ್ಸವ ಎಂಬ ಎರಡು ಪ್ರಸಿದ್ಧವಾದ ಹೆಸರುಗಳಿಂದ ಈ ಹಬ್ಬವು ಕರೆಯಲ್ಪಡುತ್ತದೆ. ಹತ್ತನೆಯ ದಿನವಾದ ವಿಜಯದಶಮಿಯನ್ನು ಸೇರಿಸಿಕೊಂಡು ಇದನ್ನು “ದಶಾಹʼʼ ಅಥವಾ “ದಸರಾʼʼ ಎಂಬ ನಾಮಧೇಯ ದಿಂದಲೂ ಕರೆಯುತ್ತಾರೆ. 9 ರಾತ್ರಿಗಳಲ್ಲಿ ಅಥವಾ ಅಹೋರಾತ್ರಗಳಲ್ಲಿ ಸಂಪನ್ನ ವಾಗುವುದರಿಂದ ನವರಾತ್ರಿ ಎಂಬ ಹೆಸರು ಸಹ ಇದಕ್ಕೆ ಹೊಂದಿಕೆಯಾಗುತ್ತದೆ. ಆಶ್ವಯುಜಮಾಸದ ಶುಕ್ಲಪಕ್ಷದ ಪ್ರಥಮೆಯಿಂದ ಪ್ರಾರಂಭಿಸಿ ಒಂಬತ್ತು ದಿನಗಳು ಆಚರಿಸುವ ಪರ್ವವನ್ನು ವಸಂತ ನವರಾತ್ರಿ ಎಂದೂ, ಶರತ್ಕಾಲದ ಪ್ರಥಮೆಯಿಂದ ಪ್ರಾರಂಭಿಸಿ 9 ದಿನಗಳ ಕಾಲ ಆಚರಿಸುವ ಪರ್ವವನ್ನು ಶರನ್ನವರಾತ್ರಿ ಎಂದೂ ಕರೆಯುವುದು ಶಾಸ್ತ್ರೀಯವಾದದ್ದೇ ಆಗಿದೆ. ಆದರೆ ಶರತ್ಕಾಲದಲ್ಲಿ ಆಚರಿಸಲ್ಪಡುವ ನವರಾತ್ರಕ್ಕೆ ವಿಶೇಷ ಪ್ರಾಮುಖ್ಯ ಇರುವುದರಿಂದ ಅದನ್ನು ಮಾತ್ರವೇ ನವರಾತ್ರಿ ಮಹೋತ್ಸವ ಎಂದು ಕರೆಯುವ ವಾಡಿಕೆ ಬಂದಿದೆ.

“ಜೀವನದಲ್ಲಿ ನವತ್ವವನ್ನು ಉಂಟು ಮಾಡುವ ನವರಾತ್ರಿ ಇದು. ಶುದ್ಧ ಪ್ರಕೃತಿಮಾತೆಯನ್ನು ಮೊದಲ ಮೂರು ದಿನಗಳಲ್ಲಿ ಲಕ್ಷ್ಮಿಯೆಂದೂ, ಅನಂತರದ ಮೂರುದಿನಗಳಲ್ಲಿ ಸರಸ್ವತಿಯೆಂದೂ, ಕೊನೆಯ ಮೂರುದಿನಗಳಲ್ಲಿ ಗೌರೀ ಅಥವಾ ದುರ್ಗಿಯೆಂದೂ ಆರಾಧಿಸಿ ನಿಮ್ಮ ಪ್ರಕೃತಿಯನ್ನು ಶುದ್ಧಮಾಡಿಕೊಳ್ಳಿ. ಹೊರಗಡೆ ಪ್ರಕೃತಿಯಲ್ಲಿ ಮೋಡಗಳಿಲ್ಲದ ಶುದ್ಧವಾದ ಆಕಾಶ, ಒಳಗೂ ಶುದ್ಧವಾದ ಜ್ಞಾನಾಕಾಶ. ಹೊರಗೆ ಸರೋವರದಲ್ಲಿ ಅರಳಿರುವ ಕಮಲಗಳು, ಒಳಗೆ ಮಾನಸಸರೋವರದಲ್ಲಿ ಅರಳಿರುವ ಹೃದಯಾದಿ ಕಮಲಗಳು. ಅಲ್ಲಿ ಪರಮಾತ್ಮನ ಪರಾಪ್ರಕೃತಿಯಾಗಿರುವ ದೇವಿಯನ್ನು ಆರಾಧಿಸಿ ಶುದ್ಧ ಸತ್ವರಾಗಿರಿ. ಹೊರಗಡೆ ಧನಧಾನ್ಯ ಸಮೃದ್ಧಿ, ಒಳಗೆ ಆತ್ಮಧನ ಸಮೃದ್ಧಿ. ಹೊರಗೆ ವೀರ ಕ್ಷತ್ರಿಯರಿಂದ ಧರ್ಮ ವಿಜಯಕ್ಕಾಗಿ ಯಾತ್ರೆ, ಒಳಗೆ ಆತ್ಮ ವಿಜಯಕ್ಕಾಗಿ ಯಾತ್ರೆ – ಎಲ್ಲವೂ ಕೂಡಿಬರುವ ಮಹಾಪರ್ವವಿದು” ಎಂದು ಈ ಪರ್ವದ ವಿಶೇಷತೆಯನ್ನು ಸಾರಿಷ್ಠವಾದ ಸಂದೇಶದಲ್ಲಿ ಶ್ರೀರಂಗ ಮಹಾಗುರುಗಳು ಅಪ್ಪಣೆ ಕೊಡಿಸಿದ್ದರು ಎಂದು ಪೂಜ್ಯ ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು ದಾಖಲಿಸಿದ್ದಾರೆ.

ಇದು ಎಲ್ಲ ದೇವತೆಗಳ ಧ್ಯಾನ – ಉಪಾಸನೆಗಳಿಗೆ ಶ್ರೇಷ್ಠವಾಗಿರುವ ಕಾಲವಾದರೂ ವಿಶೇಷವಾಗಿ ದೇವಿಯ ಪ್ರಸನ್ನತೆಯನ್ನು ಉಂಟುಮಾಡಲು ಸಹಾಯಕವಾಗಿರುವ ಕಾಲವಾಗಿದೆ. ವಿವಾಹ ಉಪನಯನ ಮುಂತಾದ ಶುಭಕರ್ಮಗಳಿಗೆ ತಿಥಿ ವಾರ ನಕ್ಷತ್ರ ಯೋಗ ಕರಣ ಗ್ರಹಮೈತ್ರ ಮುಂತಾದ ಎಲ್ಲಾ ಅನುಕೂಲತೆಗಳೂ ಇಲ್ಲದಿರುವಾಗಲೂ ಅದನ್ನು ಗಮನಿಸದೆ ಶರನ್ನವರಾತ್ರಿ ಸಮಯದಲ್ಲಿ ಆ ಶುಭ ಕರ್ಮಗಳನ್ನು ನಡೆಸುವ ವಾಡಿಕೆಯಿದೆ. ವಿಶೇಷವಾಗಿ ವಿಜಯದಶಮಿಗೆ ಆ ಮಹಾಮಹಿಮೆ ಇದೆಯೆಂದು ಹೇಳುತ್ತಾರೆ.

ಭವತಾರಿಣೀ ದುರ್ಗೇ
ಈ ನವರಾತ್ರಿ ಉತ್ಸವಕ್ಕೆ ದುರ್ಗೋತ್ಸವ ಎಂಬ ಮತ್ತೊಂದು ಹೆಸರೂ ಇದೆ. ದುರ್ಗಾ ಎಂದರೆ ಸಂಕಷ್ಟ ಅಥವಾ ಸಮಸ್ಯೆ ಎಂಬ ಅರ್ಥವೂ ಇದೆ. ಇಂತಹ ಎಲ್ಲ ದುರ್ಗಗಳನ್ನೂ ದಾಟಿಸುವ ದುರ್ಗಾದೇವಿಯ ವಿಶೇಷವಾದ ಸಾನ್ನಿಧ್ಯವಿರುವ ಕಾಲವಾದ್ದರಿಂದ ನವರಾತ್ರಿಗೆ ಈ ಅಗ್ಗಳಿಕೆ. ದುರ್ಗಗಳನ್ನು ದಾಟಿಸುವವಳು ಅಥವಾ ದುರ್ಗತಿಯನ್ನು ತಪ್ಪಿಸುವವಳು ಎಂದು ದುರ್ಗಾ ಶಬ್ದಕ್ಕೆ ಅರ್ಥ ನಿಷ್ಪತ್ತಿಯನ್ನು ಹೇಳುತ್ತಾರೆ. (ದುರ್ಗಾಂ ದುರ್ಗತಿ ನಾಶಿನೀಮ್- ಎಂದು). ಜಗನ್ಮಾತೆಯಾದ ಪಾರ್ವತಿಗೆ ಭವತಾರಿಣೀ (ಸಂಸಾರಸಾಗರವನ್ನು ದಾಟಿಸುವವಳು) ಎಂಬ ನಾಮಾಂತರವೂ ಇದೆಯಷ್ಟೇ.

ಶರನ್ನವರಾತ್ರಿ ಮಹೋತ್ಸವದಲ್ಲಿ ಪ್ರಧಾನವಾಗಿ ಆರಾಧಿಸಲ್ಪಡುವ ದೇವತೆ – ಶಕ್ತಿ. ಉತ್ಸವದ ಒಂಬತ್ತು ದಿವಸಗಳಲ್ಲಿ ಮೊದಲ ಮೂರು ದಿವಸಗಳಲ್ಲಿ ಲಕ್ಷ್ಮೀ ರೂಪದಲ್ಲಿಯೂ ಎರಡನೆಯ ಮೂರು ದಿವಸಗಳಲ್ಲಿ ಸರಸ್ವತೀ ರೂಪದಲ್ಲಿಯೂ ಮತ್ತು ಕೊನೆಯ ಮೂರು ದಿವಸಗಳಲ್ಲಿ ದುರ್ಗಾ, ಪಾರ್ವತೀ ರೂಪದಲ್ಲಿಯೂ ಪೂಜಿಸಬೇಕು ಎಂದು ಜ್ಞಾನಿಗಳು ತಿಳಿಸಿರುತ್ತಾರೆ. ಆದರೆ ಎಲ್ಲ ಕಡೆಗಳಲ್ಲಿಯೂ ಕಾರ್ಯ ಕಾರಣವನ್ನು ಭಾವಿಸುವ ನಮ್ಮ ಮನಸ್ಸಿಗೆ ಸಂಶಯವೊಂದು ಕಾಡುತ್ತದೆ. ಏನೆಂದರೆ, ಶಕ್ತಿದೇವತೆಯು ಘೋರವಾದ ಆಕಾರವುಳ್ಳವಳು, ಮದ್ಯ ಮಾಂಸಾದಿಗಳಿಂದ ಆಕೆಯ ಪೂಜೆಯು ನಡೆಯುತ್ತದೆ. ಆದ್ದರಿಂದ ಸಾತ್ವಿಕರು ಆಕೆಯನ್ನು ಆರಾಧಿಸಬಾರದು ಎಂಬುದೇ ಆ ಸಂದೇಹ.

ಸಾತ್ವಿಕರು ಘೋರ ದುರ್ಗೇಆರಾಧಿಸಬಹುದೆ ? ಪೂಜ್ಯ ಶ್ರೀ ಶ್ರೀ ರಂಗಪ್ರಿಯ ಶ್ರೀಪಾದಂಗಳವರು ತೃಪ್ತಿಕರವಾದ ಸಮಾಧಾನವನ್ನು ಕೊಟ್ಟಿರುತ್ತಾರೆ. ಅದು ಹೀಗಿದೆ- “ಕೆಲವು ದೇವತೆಗಳ ವಿಗ್ರಹಗಳು ಹೊರಗಣ್ಣಿಗೆ ಘೋರವಾಗಿ ಕಂಡರೂ ಧ್ಯಾನದಲ್ಲಿ ಮುಳುಗಿ ನೋಡಿದಾಗ ಅವು ರಮಣೀಯವಾಗಿಯೂ, ಆನಂದಪ್ರದ ವಾಗಿಯೂ, ಶಾಂತಪ್ರದವಾಗಿಯೂ ಅನುಭವಕ್ಕೆ ಬರುತ್ತವೆ. ಇದು ಆಧುನಿಕ ಸಾಹಿತಿಗಳು ಹೇಳುವ ‘ರುದ್ರ ಸೌಂದರ್ಯ’ ವಲ್ಲ. ಬದಲಿಗೆ ಯೋಗಿಗಳು, ಪರಮ ನಯನೋತ್ಸವ ಕಾರಣಂ (ಕಣ್ಣುಗಳಿಗೆ ಹಬ್ಬ) ಎಂದು ವರ್ಣಿಸುವ ದಿವ್ಯಮೂರ್ತಿ.

ಇದಲ್ಲದೆ ಪರಾ ದೇವತೆಗಳು ವಾಸ್ತವವಾಗಿ ಅಮೃತಾನಂದವನ್ನು ಮಾತ್ರ ಸೇವಿಸುವವರು. ಭಕ್ತರು ತಮ್ಮ ಪ್ರಕೃತಿಗೆ ಅನುಗುಣವಾಗಿ ಫಲಪುಷ್ಪ ಸಸ್ಯಾಹಾರ ಮಾಂಸಾಹಾರ ಯಾವುದನ್ನೇ ಅರ್ಪಿಸಿದರೂ ಅದು ಅಮೃತ ರೂಪವನ್ನು ಪಡೆದೇ ದೇವತೆಗಳಿಗೆ ಅರ್ಪಿತವಾಗುತ್ತದೆ. ರಾಕ್ಷಸ ತಾಮಸ ಭಕ್ತರು ಮದ್ಯ ಮಾಂಸಾದಿಗಳಿಂದ ದೇವಿಯನ್ನು ಪೂಜಿಸಿದರೆ, ಸಾತ್ವಿಕಭಕ್ತರು ಮಾತ್ರ ಜಪ, ಯಜ್ಞ ಮತ್ತು ನಿರಾಮಿಷವಾದ (ಮಧ್ಯ ಮಾಂಸಗಳಿಂದ ರಹಿತವಾದ) ನೈವೇದ್ಯ ಇತ್ಯಾದಿಗಳಿಂದಲೇ ಆಕೆಯನ್ನು ಆರಾಧಿಸಬೇಕು.

ಜಗನ್ಮಾತೆಯು, ಸಾತ್ವಿಕ- ರಾಜಸಿಕ ಮತ್ತು ತಾಮಸಿಕ ಎಂಬ ಮೂರು ವಿಧಾನಗಳಿಂದ ಪೂಜೆಯನ್ನು ಕೈಗೊಳ್ಳುವವಳಾಗಿದ್ದಾಳೆ. ಅದರಲ್ಲಿ ಸಾತ್ವಿಕ ಭಕ್ತರು ಜಪಯಜ್ಞ, ಸಾತ್ವಿಕವಾದ ನೈವೇದ್ಯಾದಿಗಳಿಂದ ಮಾತ್ರ ಆಕೆಯನ್ನು ಆರಾಧಿಸಬೇಕು ಎಂಬ ಸ್ಕಾಂದ ಭವಿಷ್ಯ ಪುರಾಣದ ಮಾತನ್ನು ಪ್ರಮಾಣವಾಗಿ ನೋಡಬಹುದಾಗಿದೆ. ಹಾಗಾಗಿ ಸಾತ್ವಿಕರು ಶಕ್ತಿದೇವತೆಯನ್ನು ಆರಾಧಿಸ ಬಾರದು ಎಂಬ ಸಲಹೆಯು ನ್ಯಾಯ ಸಂಗತವಾಗುವುದಿಲ್ಲ.”

ನವರಾತ್ರಿ ಆಚರಣೆ ಹೇಗೆ?
ನವರಾತ್ರಿ ಕಾಲದಲ್ಲಿ ಆರಾಧಿಸಲ್ಪಡುವ ದೇವದೇವಿಯರ ಪೂಜಾ ವಿಧಿಗಳು ಅನೇಕವಾಗಿವೆ. ದೇಶದ ನಾನಾ ಪ್ರಾಂತಗಳಲ್ಲಿ ಸಂಪ್ರದಾಯಗಳು ಹಲವಾರು ಇವೆ. ಅವುಗಳನ್ನು ಅತ್ಯಂತ ಸಂಕ್ಷೇಪಿಸಿ ನೋಡುವುದಾದರೆ- ವಿಶೇಷವಾಗಿ ಈ ದಿನಗಳಲ್ಲಿ ರಾಮಾಯಣದ ಪಾರಾಯಣ, ದೇವಿಸ್ತುತಿ ಗ್ರಂಥಗಳ ಪಾರಾಯಣ, ಮೂಲಾ ನಕ್ಷತ್ರದಲ್ಲಿ ಶ್ರೀ ಸರಸ್ವತೀ ದೇವಿಯ ಪೂಜೆ, ಅಷ್ಟಮಿಯಂದು ದುರ್ಗಾ ದೇವಿಯ ಪೂಜೆ, ಮಹಾನವಮಿಯಂದು ವಿದ್ಯಾಧಿದೇವತೆಯಾದ ಶ್ರೀ ಹಯಗ್ರೀವ ದೇವರು ಮತ್ತು ಶ್ರೀ ಸರಸ್ವತೀ ದೇವಿಯ ಪೂಜೆ, ಸಂಗೀತದ ಉಪಕರಣಗಳಾದ ವೀಣಾ ವೇಣು ಮೃದಂಗಗಳ ಪೂಜೆ, ಆಯುಧ- ಗಜ – ಪೂಜೆ, ಕೊನೆಯ ದಿನವಾದ ವಿಜಯದಶಮಿಯಂದು ಈ ಎಲ್ಲ ದೇವರನ್ನೂ ವಿಶೇಷವಾಗಿ ಪೂಜಿಸಿ ಪಾರಾಯಣಕ್ಕೆ ಮಂಗಳವನ್ನು ಮಾಡಿ, ಅಧ್ಯಯನವನ್ನು ಹೊಸದಾಗಿ ಪ್ರಾರಂಭಿಸುವ ರೂಢಿಯಿದೆ.

ವಿಶೇಷವಾಗಿ ಕ್ಷತ್ರಿಯರಿಂದ ಶಮೀ ( ಬನ್ನೀ) ವೃಕ್ಷದಲ್ಲಿ ದೇವಿಯಪೂಜೆ, ವಿಜಯ ಯಾತ್ರೆಗಾಗಿ ಹೊರಡುವುದು ಇತ್ಯಾದಿಗಳನ್ನು ಸಾಮಾನ್ಯವಾಗಿ ಎಲ್ಲ ಪ್ರಾಂತಗಳಲ್ಲಿ, ಮತ್ತು ಎಲ್ಲ ಸಂಪ್ರದಾಯಗಳಲ್ಲಿಯೂ ಕಾಣಬಹುದಾಗಿದೆ. ಇವುಗಳೊಂದಿಗೆ ಅನ್ನದಾನವೇ ಮೊದಲಾದ ಬಗೆಬಗೆಯ ದಾನಗಳು, ಸುವಾಸಿನೀ ಪೂಜೆ ಮತ್ತು ಕುಮಾರೀ ಪೂಜೆ ಇವುಗಳನ್ನು ಕೂಡ ತಮ್ಮ ತಮ್ಮ ಕುಲಾಚಾರದಂತೆ ನಡೆಸುವುದನ್ನು ಕಾಣುತ್ತೇವೆ.

ಇನ್ನು ಮನೆಗಳಲ್ಲಿ ಈ ಹತ್ತು ದಿವಸವೂ ಅಹೋರಾತ್ರ (ಹಗಲು ಮತ್ತು ರಾತ್ರಿಯಲ್ಲಿ) ಅಖಂಡ ದೀಪವನ್ನು ಪ್ರತಿಷ್ಠೆ ಮಾಡಿ ಬೆಳಗಿಸಬೇಕು ಎಂದು ಶಾಸ್ತ್ರವು ವಿಧಿಸುತ್ತದೆ.

ಒಂದೊಮ್ಮೆ ಅಶೌಚ ಬಂದರೆ ಆಚರಣೆಯನ್ನು ಬಿಡುವ ಬದಲು, ಬ್ರಾಹ್ಮಣರ ಮೂಲಕ ಪೂಜೆಯನ್ನು ಮಾಡಿಸಬೇಕು. ದಶಮಿಯಂದು ಪಾರಾಯಣದಿಂದ ವ್ರತವನ್ನು ವಿಸರ್ಜನೆ ಮಾಡಬೇಕು. ಅಂದು ಅಪರಾಜಿತಾ ದೇವಿಯ ಪೂಜೆ, ಗ್ರಾಮ – ನಗರಗಳ ಎಲ್ಲೆಯನ್ನು ದಾಟುವಿಕೆ, ಸೀಮೋಲ್ಲಂಘನ, ಶಮೀ ಪೂಜೆ ಮತ್ತು ವಿಜಯಯಾತ್ರೆ ಅಥವಾ ದೇಶಾಂತರ ಯಾತ್ರೆಗಳಿಗಾಗಿ ಹೊರಟುಬರುವಿಕೆ ಇತ್ಯಾದಿಗಳನ್ನು ಮಾಡುವುದುಂಟು. ಹಿಂದಿನ ದಿವಸ ಪೂಜಿಸಿದ್ದ ಆಯುಧಗಳನ್ನು ದಶಮಿಯ ದಿವಸ ಬಳಸುವ ಸಂಪ್ರದಾಯವು ಜನಜನಿತವಾಗಿದೆ. ದಶಮಿಯಂದು ವಿಶೇಷವಾಗಿ ಸರಸ್ವತಿಯ ಪೂಜೆಯನ್ನು ಮಾಡಿ, ಯಾವುದಾದರೂ ಒಂದು ಹೊಸ ವಿದ್ಯೆಯನ್ನು ಕಲಿಯಲು ಆರಂಭ ಮಾಡುವುದು ಕೂಡ ಪ್ರಸಿದ್ಧವಾಗಿದೆ.

ವಿಜಯದಶಮೀ, ಮಹಾನವಮೀ
ಒಟ್ಟು ಹತ್ತು ದಿವಸಗಳ ಪರ್ಯಂತ ನಡೆಯುವ ಉತ್ಸವ ಮಾಲಿಕೆಯಲ್ಲಿ ಅತ್ಯಂತ ಮುಖ್ಯವಾದವುಗಳು ಕೊನೆಯ ಎರಡು ದಿವಸಗಳು- ಮಹಾನವಮೀ ಮತ್ತು ವಿಜಯದಶಮೀ. ಈ ಎರಡು ಮಹಾಪರ್ವ ದಿವಸಗಳ ಕುರಿತು ಕೆಲವು ಸಮಾರೋಪದ ಮಾತುಗಳೊಂದಿಗೆ ಈ ಲೇಖನಮಾಲೆಯು ಮಂಗಳವನ್ನು ಕಾಣುತ್ತದೆ.

ಪ್ರಾರಂಭ ಮಾಡಿದ ಕಾರ್ಯದ ಸಿದ್ಧಿಯನ್ನು ಉಂಟು ಮಾಡಿಕೊಡುವ ‘ವಿಜಯ’ ಎಂಬ ಹೆಸರಿನ ಮುಹೂರ್ತವೊಂದು ವಿಜಯದಶಮಿಯ ಸಾಯಂ ಸಂಧ್ಯಾಕಾಲದಲ್ಲಿ ಕೂಡಿಬರುತ್ತದೆ. ವಿಜಯದಶಮಿಗೆ ಆ ಹೆಸರು ಬರಲು ಇದೂ ಒಂದು ಪ್ರಧಾನವಾದ ಕಾರಣ. ಧರ್ಮಪ್ರಭುವಾದ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯಕ್ಕಾಗಿ ದಂಡಯಾತ್ರೆಯನ್ನು ನಡೆಸಿದ್ದು ವಿಷ್ಣುದೇವತಾಕವಾದ ಶ್ರವಣ ನಕ್ಷತ್ರದಿಂದ ಕೂಡಿದ ವಿಜಯದಶಮಿಯಲ್ಲಿ. ಇದು ಭಗವದ್ಭಕ್ತರಲ್ಲಿ ವಿಜಯದಶಮಿಯ ಕುರಿತು ಪುಳಕವನ್ನು ಉಂಟುಮಾಡುವ ಮತ್ತೊಂದು ವಿಷಯ.

ಮಹತ್ತತ್ತ್ವ : ಇನ್ನು ಮಹತ್ ಎಂಬುದೊಂದು ತತ್ತ್ವ. ತ್ರಿಗುಣಗಳು ಆಗತಾನೇ ಹುಟ್ಟಿಕೊಂಡ ಸ್ಥಿತಿ ಅದು. ಹಾಗಿದ್ದರೂ ತ್ರಿಗುಣಗಳು ವಿಶೇಷವಾಗಿ ಕೆಲಸಮಾಡದ ಸ್ಥಿತಿಯೂ ಹೌದು. “ಮಹತ್ತತ್ವದವರೆಗೆ ಮುಟ್ಟಿದವನನ್ನೇ ಮಹಾತ್ಮಾ ಎಂದು ಕರೆದಿದ್ದಾರಪ್ಪಾ” ಎಂಬುದು ಸನಾತನಾರ್ಯ ಭಾರತರ ಹೃದಯವೇದ್ಯರಾದ ಶ್ರೀರಂಗ ಮಹಾಗುರುಗಳ ವಾಣಿ. ಅಂತಹ ಮಹತ್ತತ್ತ್ವವನ್ನು ದಾಟಿದವನು ಜ್ಞಾನಿ ಎನಿಸಿಕೊಂಡು ಕೃತಕೃತ್ಯನಾಗುತ್ತಾನೆ. ಅಂತಹ ಸುಕೃತಿ ಚೇತನಗಳಿಗೆ ಪುನಃ ಸಂಸಾರದ ಬಂಧನವಿಲ್ಲ ಎನ್ನುತ್ತವೆ ಯೌಗಿಕ ಸಾಹಿತ್ಯಗಳು.

ಮಹಾನವಮಿಯನ್ನು ಕುರಿತು ಶ್ರೀಗುರುವು, “ಮಹತ್ತತ್ತ್ವವನ್ನು ಸಾಧಿಸಿಕೊಳ್ಳಲು ಕಾಲಚಕ್ರದಲ್ಲಿ ಅನುಕೂಲವು ಕೂಡಿಬರುವ ಪರ್ವದಿವಸವೇ ಮಹಾನವಮೀ” -ಎಂದು ಅಪ್ಪಣೆ ಕೊಡಿಸಿದ್ದನ್ನು ಮಹಾಗುರುವಿನ ಆದ್ಯಶಿಷ್ಯರಲ್ಲಿ ಒಬ್ಬರಾದ ಪೂಜ್ಯ ಕೃಷ್ಣಮಾಚಾರ್ಯರು ಸ್ಮರಿಸಿಕೊಂಡಿದ್ದಾರೆ. ಶ್ರೀರಂಗ ಮಹಾಗುರುವನ್ನೂ, ಮಹತ್ತತ್ತ್ವವನ್ನೂ, ಮಹಾನವಮಿಯನ್ನೂ, ವಿಜಯದಶಮಿಯನ್ನೂ ಮತ್ತೆ ಮತ್ತೆ ಸ್ಮರಿಸುತ್ತಾ ಅವುಗಳಿಗೆ ಅಭಿಮುಖರಾಗೋಣ.

ಲೇಖಕರು: ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
 ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Navratri 2022 | ಮೊದಲನೇ ದಿನ ಯಾವ ದೇವಿಯನ್ನು ಪೂಜಿಸಬೇಕು? ಬಿಳಿಯ ವಸ್ತ್ರಧಾರಣೆ ಏಕೆ?

Exit mobile version