ನವರಾತ್ರಿಯಲ್ಲಿ (Navaratri 2022) ದೇವಿ ಆರಾಧನೆಯ ಭಾಗವಾಗಿ ಪಾರಾಯಣ ಮಾಡಲಾಗುತ್ತದೆ. ಈ ಸಂದರ್ಭದಲ್ಲಿನ ಚತುರ್ವೇದ ಪಾರಾಯಣಕ್ಕೆ ವಿಶೇಷಫಲವಿದೆ ಎಂದು ಶಾಸ್ತ್ರಗಳು ಹೇಳಿವೆ. ಚತುರ್ವೇದ ಪಾರಾಯಣ ಕಷ್ಟವಾದಾಗ ವೇದಸಮಾನವಾದ ಭಾಗವತ ಪಾರಾಯಣವನ್ನಾದರೂ ಮಾಡಬೇಕು ಎಂದು ಹೇಳಲಾಗಿದೆ.
ನವರಾತ್ರಿಯಲ್ಲಿ ಶ್ರೀಸೂಕ್ತ, ರಾತ್ರೀಸೂಕ್ತ, ಸರಸ್ವತೀಸೂಕ್ತ, ದುರ್ಗಾಸ್ತೋತ್ರ, ಚಂಡೀಶತಕ, ದುರ್ಗಾಸಪ್ತಶತೀ ಇವುಗಳ ಪಾರಾಯಣ ವಿಶೇಷವಾಗಿ ಮಾಡಲಾಗುತ್ತದೆ. ಶ್ರೀವೆಂಕಟೇಶ ಕಲ್ಯಾಣದ ಪಾರಾಯಣ ಬಹಳ ವಿಶೇಷ ಮತ್ತು ಎಲ್ಲರೂ ಮಾಡಲೇಬೇಕಾದ ಪಾರಾಯಣ. ಶ್ರೀಲಕ್ಷ್ಮೀಹೃದಯ ಮತ್ತು ಶ್ರೀನಾರಾಯಣ ಹೃದಯದ ಸಂಪುಟೀ ಕರಣ ಪಾರಾಯಣ ಕೂಡ ನಡೆಯುತ್ತದೆ.
ಮೊದಲನೇ ದಿನದಿಂದ ಆರಂಭಿಸಿ ಮುಂದಿನ ದಿನಗಳಲ್ಲಿ ಪಾರಾಯಣದ ಸಂಖ್ಯೆಯನ್ನು ದಿನಗಳ ಸಂಖ್ಯೆಗೆ ಅನುಗುಣವಾಗಿ ವರ್ಧಿಸಬೇಕು. ಮೊದಲನೇ ದಿಂದಂದು ಒಂದು ಬಾರಿಸಂಪುಟೀಕರಣ, ಎರಡನೇ ದಿನದಂದು ಎರಡು ಬಾರಿ ಸಂಪುಟೀಕರಣ ಹೀಗೆ ದಶಮೀಯ ವರೆಗೆ ಹತ್ತು ಬಾರಿ ಸಂಪುಟೀಕರಣಪಾರಾಯಣ ಮಾಡಿ ದೇವರಿಗೆ ಅರ್ಪಿಸಬೇಕು. ಈ ಪಾರಾಯಣದಿಂದ ವಿಶೇಷವಾಗಿ ಸಂಪತ್ತು ಅಭಿವೃದ್ಧಿಯಾಗುತ್ತದೆ ಎಂದು ಪಂಚರಾತ್ರಾಗಮದಲ್ಲಿ ತಿಳಿಸಲಾಗಿದೆ.
ಸ್ತ್ರೀಯರು ವಿಶೇಷವಾಗಿ ಶ್ರೀವೇಂಕಟೇಶಪಾರಿಜಾತ ಮತ್ತು ಶ್ರೀಲಕ್ಷ್ಮೀಶೋಭಾನದ ಪಾರಾಯಣ ಮಾಡುವದರಿಂದ ವಿಶೇಷ ಸೌಭಾಗ್ಯ ಸಂಪತ್ತು ಪ್ರಾಪ್ತಿಯಾಗುವುದು. ಸ್ರ್ತೀಯರು ಶ್ರೀವಾದಿರಾಜರು ರಚಿಸಿದ ಲಕ್ಷ್ಮೀಹೃದಯನ್ನು, ಶ್ರೀವಿಜಯದಾಸ ವಿರಚಿತ ದುರ್ಗಾಸುಳಾದಿಯನ್ನು ವಿಶೇಷವಾಗಿ ಪಠಿಸಬೇಕು. ಶ್ರೀವೇಂಕಟೇಶಸ್ತೋತ್ರವನ್ನು ಆಬಾಲವೃದ್ಧರು ಪಠಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.
ಪಾರಾಯಣ ಮಾಡುವಾಗ ಹೀಗೆ ಮಾಡಿ
ನಿಮ್ಮಲ್ಲಿ ನವರಾತ್ರಿಯ (Navaratri 2022) ಆಚರಣೆಗಳು, ದೇವಿಯ ಆರಾಧನೆ ನಡೆಯುತ್ತಿದ್ದರೆ ನೀವೇ ಪಾರಾಯಣ ಮಾಡಬಹುದು ಅಥವಾ ಪುರೋಹಿತರನ್ನು ಕರೆಸಿ ಪಾರಾಯಣ ಮಾಡಿಸಬಹುದು. ನೀವೇ ಪಾರಾಯಣ ಮಾಡುವುದಾದರೆ ಈ ಕ್ರಮಗಳನ್ನು ಅನುಸರಿಸಿ.
- ಪಾರಾಯಣಕ್ಕೆ ಪೂಜಾ ಕೊಠಡಿಯಲ್ಲಿಯೇ ಕುಳಿತುಕೊಳ್ಳಿ. ಅದು ಸಾಧ್ಯವಾಗದೇ ಇದ್ದಲ್ಲಿ ಮಾತ್ರ ಮನೆಯ ಮಧ್ಯಭಾಗದಲ್ಲಿ ಕುಳಿತು ಪಾರಾಯಣ ಮಾಡಿ.
- ಪಾರಾಯಣ ಸಮಯದಲ್ಲಿ ಮಾತನಾಡಬೇಡಿ, ಕೋಪಿಸಿಕೊಳ್ಳಬೇಡಿ.
- ಪಾರಾಯಣವನ್ನು ಮಧ್ಯಮ ಸ್ವರದಲ್ಲಿ ಮಾಡಿ ಅತೀ ಜೋರಾಗಿ ಅಥವಾ ಪಿಸುಗುಟ್ಟುವಂತೆ ಮಾಡಬೇಡಿ. ಹತ್ತಿರದಲ್ಲಿರುವವರಿಗೆ ಕೇಳಿಸುವಂತೆ ಮಾಡಬೇಕು. ಮಂತ್ರಜಪವು ಮಾನಸಿಕವಾಗಿರಲಿ.
- ಪಾರಾಯಣಕ್ಕೆ ಮೊದಲು ಹಾಗೂ ನಂತರ ತಂದೆ ತಾಯಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಪಾರಾಯಣ ಸಮಯದಲ್ಲಿ ಅವರು ಇಲ್ಲದಿದ್ದರೆ, ಮನಸ್ಸಿನಲ್ಲೆ ಅವರನ್ನು ಧ್ಯಾನಿಸಿ ಅವರ ಆಶೀರ್ವಾದವನ್ನು ಪಡೆದುಕೊಳ್ಳಿ.
- ಪಾರಾಯಣಕ್ಕೆ ಹೀಗೆಯೇ ಕುಳಿತುಕೊಳ್ಳಬೇಕೆಂದೇನೂ ಇಲ್ಲ. ಆದರೆ ನಿಮಗೆ ಸರಿಹೊಂದುವ ಯಾವುದಾದರೂ ಆಸನದಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಿ. ಪಾರಾಯಣವು ಮುಗಿಯುವವರೆಗೂ ಏಳಬೇಡಿ.
- ಪಾರಾಯಣ ಪುಸ್ತಕವನ್ನು ವ್ಯಾಸಪೀಠದ ಮೇಲಿಡಿ. ಅದು ಲಭ್ಯವಿಲ್ಲದ್ದಲ್ಲಿ ಯಾವುದಾದರು ಮರದ ಹಲಗೆಯ ಮೇಲಿಟ್ಟೇ ಪೂಜೆ ಮಾಡಿ.
- ಪಾರಾಯಣ ಸಮಯದಲ್ಲಿ ಶ್ವೇತ ವಸ್ತ್ರವನ್ನು ಧರಿಸಿದ್ದರೆ ಒಳ್ಳೆಯದು.
ಪಾರಾಯಣದ ಫಲ ದೊರೆಯಬೇಕೆಂದರೆ ಅತ್ಯಂತ ನೇಮ ನಿಷ್ಠೆಯಿಂದ ಮಾಡಬೇಕು. ಮನೆಯಲ್ಲಿ ದೈವಿಕ ವಾತಾವರಣವಿರಬೇಕು. ಹೀಗಾಗಿ ಪಾರಾಯಣ ಮಾಡುವಾಗ ಈ ಕೆಳಗಿನ ಕೆಲಸಗಳನ್ನು ಮಾಡಬೇಡಿ.
- ಪಾರಾಯಣ ಮುಗಿಯುವವರೆಗೂ ಏನನ್ನೂ ತಿನ್ನಬೇಡಿ, ಸೇವಿಸಬೇಡಿ. ನೀರನ್ನೂ ಕುಡಿಯದಿದ್ದರೆ ಒಳ್ಳೆಯದು. ಕುಟುಂಬದ ಸದಸ್ಯರೂ ಆದಷ್ಟು ಈ ರೀತಿ ಮಾಡಿದರೆ ಒಳ್ಳೆಯದು.
- ಪಾರಾಯಣ ಸಮಯದಲ್ಲಿ ಒಂದೇ ರೀತಿಯಲ್ಲಿ ಕುಳಿತುಕೊಳ್ಳಿ. ಕೈ ಕಾಲು ಮುಟ್ಟಿಕೊಳ್ಳುವುದು, ಆಕಳಿಸುವುದು, ತಲೆ ಮುಟ್ಟಿಕೊಳ್ಳುವುದು ಇತ್ಯಾದಿ ಮಾಡಬಾರದು.
- ಪಾರಾಯಣ ಮಾಡುವ ಮೊದಲು ಉಪವಾಸ ಇದ್ದರೆ ಒಳ್ಳೆಯದು. ಅದು ಸಾಧ್ಯವಾಗದೇ ಇದ್ದಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವನೆ ಮಾಡಿ.
- ಮನೆಯಲ್ಲಿ ಪಾರಾಯಣ ನಡೆಯುವಾಗ ಮನೆಯ ಒಳಗೆ ಮತ್ತು ಹೊರಗೆ ಗಲಾಟೆ, ಜಗಳಗಳು ನಡೆಯದಂತೆ ನೋಡಿಕೊಳ್ಳಿ. ಮನೆಯ ಸದಸ್ಯರೆಲ್ಲರೂ ಕುಳಿತ ಪಾರಾಯಣ ಮಾಡಬಹುದು.
ಪೂರಕ ಮಾಹಿತಿ: ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಇದನ್ನೂ ಓದಿ| Navaratri 2022 | ನವರಾತ್ರಿಯಲ್ಲಿ ಕನ್ಯಾ ಪೂಜೆ ಹೇಗೆ ಮಾಡಬೇಕು? ಏನು ಫಲ?