Site icon Vistara News

Navaratri 2022 | ಸರಸ್ವತಿ ಪೂಜೆ ಎಂದು? ಪೂಜೆ ಹೇಗೆ ಮಾಡಬೇಕು?

Navaratri 2022

ವೀಣಾಪಾಣಿ, ವಿದ್ಯಾದೇವಿ ಶಾರದೆಯನ್ನು ನವರಾತ್ರಿಯಲ್ಲಿ (Navaratri 2022) ವಿಶೇಷವಾಗಿ ಆರಾಧಿಸುತ್ತೇವೆ. ನಮ್ಮೆಲ್ಲರ ಹೃದಯಾಂತರಾಳವನ್ನು ಪರಿಶುದ್ಧಗೊಳಿಸಿ, ನೀರಿನಂತೆ ಪ್ರವಹಿಸಿದಳಾಗಿರುವ ಕಾರಣದಿಂದ ಶಾರದೆಯನ್ನು ಇಲ್ಲಿ ಸರಸ್ವತಿ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸರಸ್ವತಿಯನ್ನು ದಸರಾದಲ್ಲಿ ವಿಶೇಷವಾಗಿ ಪೂಜಿಸಿದರೆ ಉತ್ತರ ಭಾರತದಲ್ಲಿ ಮಾಘ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಐದನೇ ದಿನ ವಸಂತ ಪಂಚಮಿಯಂದು ಪೂಜಿಸಲಾಗುತ್ತದೆ.

ವಿದ್ಯಾಭಿಮಾನಿ ದೇವತೆಯಾದ ಸರಸ್ವತಿಯನ್ನು “ಮೂಲೇನ ಆವಾಹೋದೇವಿ ಶ್ರವಣೇನ ವಿಸರ್ಜಿತಾʼʼ ಎಂದರೆ ಮೂಲಾ ನಕ್ಷತ್ರದಲ್ಲಿ ಪ್ರತಿಷ್ಠಾಪಿಸಿ, ಶ್ರವಣ ನಕ್ಷತ್ರದಲ್ಲಿ ವಿಸರ್ಜಿಸಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಮೂಲ ನಕ್ಷತ್ರವು ಆಶ್ವಯುಜ ಮಾಸದ ಶುದ್ಧ ಸಪ್ತಮಿಯಂದು (ಅಕ್ಟೋಬರ್‌ 2ರ ಭಾನುವಾರ) ಬರುತ್ತದೆ. ಅಂದು ನಾವು ಸರಸ್ವತಿಯನ್ನು ಪೂಜಿಸಬೇಕು.

ಸಂಗೀತ ಮತ್ತು ಸಾಹಿತ್ಯವನ್ನು ಸರಸ್ವತಿಯ ಎರಡು ಕಣ್ಣುಗಳು ಎಂದು ಕರೆಯಲಾಗುತ್ತದೆ. ವಿದ್ಯೆ, ಬುದ್ಧಿಯನ್ನು ಕೊಡುವ ದೇವಿಯೇ ಸರಸ್ವತಿ.
ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ|
ವಿದ್ಯಾರಂಭಂ ಕರಿಷ್ಟ್ಯಾಮಿ ಸಿದ್ಧಿರ್ಬವತು ಮೇ ಸದಾ||

ಎಂದು ಪ್ರಾರ್ಥಿಸಿ ವಿದ್ಯಾರಂಭ ಮಾಡಲಾಗುತ್ತದೆ. ಸರಸ್ವತಿ ಎಂದರೆ ಜ್ಞಾನ, ಸರಸ್ವತಿ ಎಂದರೆ ಭಾಷೆ. ಶಬ್ದಗಳೇ ಅವಳ ಅಂಗಾಂಗಗಳೆನಿಸಿವೆ. ಶರತ್‌ಕಾಲದ ಬೆಳದಿಂಗಳಿನಂತೆ ಶಾರದೆ ಶುಭ್ರವಾಗಿದ್ದಾಳೆ. ಶ್ವೇತ ವರ್ಣ ಪರಿಶುದ್ಧತೆಯ, ಜ್ಞಾನದ ಸಂಕೇತ. ಈಕೆಯ ವಾಹನ ಹಂಸ. ನೀವು “ಹಂಸ ಕ್ಷೀರ ನ್ಯಾಯʼʼದ ಬಗ್ಗೆ ಕೇಳಿರಬಹುದು. ಸರಿ ತಪ್ಪು ವಿಮರ್ಶೆ ಮಾಡುವ ಪ್ರಜ್ಞೆಯನ್ನು ಇದು ಸಂಕೇತಿಸುತ್ತದೆ. ಹೀಗಾಗಿಯೇ ಶುಭ್ರವಾದ ಹಂಸವನ್ನು ಸರಸ್ವತಿ ತನ್ನ ವಾಹನವಾಗಿ ಸ್ವೀಕರಿಸಿದ್ದಾಳೆ. ಸರಸ್ವತಿ ಕಮಲದ ಮೇಲೆ ಆಸೀನಳಾಗಿದ್ದಾಳೆ. ಈ ಮೂಲಕ ಪರಿಶುದ್ಧತೆಯನ್ನು ಸಾರುತ್ತಿದ್ದಾಳೆ.

ನವರಾತ್ರಿಯ ಒಂಬತ್ತು ದಿನಗಳೂ ಶಕ್ತಿ ಪೂಜೆ ನಡೆಯುತ್ತದೆ. ಸಾತ್ವಿಕ, ರಾಜಸ, ತಾಮಸ ಮೂರು ರೂಪಗಳಿಂದ ಶಕ್ತಿ ದೇವಿಯರನ್ನು ಈ ಸಂದರ್ಭದಲ್ಲಿ ಆರಾಜಿಸಲಾಗುತ್ತದೆ. ಇದರಲ್ಲಿ ಸಾತ್ವಿಕ ಸತ್ಯದ ಪ್ರತೀಕವಾಗಿರುವ ಶಾರದಾ ಪೂಜೆಯೂ ನೆರವೇರುತ್ತದೆ.

ಪೂಜೆ ಮಾಡುವುದು ಹೇಗೆ?

ಆಶ್ವಯುಜ ಮಾಸದ ಶುದ್ಧ ಸಪ್ತಮಿಯಂದು ಸರಸ್ವತಿಯ ಪೂಜೆಯನ್ನು ಆರಂಭಿಸಬೇಕು. ವಿಜಯ ದಶಮಿಯಂದು ವಿಸರ್ಜನೆ ಮಾಡಬೇಕು. ನಿಮ್ಮ ಮನೆಯ ಪೂಜಾ ಮಂದಿರದಲ್ಲಿಯೇ ಸರಸ್ವತಿಯನ್ನು ಪ್ರತಿಷ್ಠಾಪಿಸಿ ಪೂಜಿಸಬಹುದು. ಅಥವಾ ವಿಶಾಲವಾದ ಜಾಗವಿರುವ ಕಡೆಯೂ ಮಂಟಪವನ್ನು ನಿರ್ಮಿಸಿ, ವೀಣೆಯನ್ನು ತೊಡೆಯ ಮೇಲೆ ಇಟ್ಟುಕೊಂಡಿರುವ ಸರಸ್ವತಿಯ ಫೋಟೊವನ್ನೋ, ಅಥವಾ ಮೂರ್ತಿಯನ್ನೋ ಪ್ರತಿಷ್ಠಾಪಿಸಿ ಪೂಜಿಸಬಹುದು.

ಶುಭ್ರವಾದ ಶ್ವೇತವರ್ಣದ ವಸ್ತ್ರವನ್ನುಟ್ಟ, ನಾಲ್ಕು ಕೈಗಳಲ್ಲಿ ವೀಣೆಯನ್ನು, ಪುಸ್ತಕವನ್ನು, ಸ್ಫಟಿಕಮಾಲೆಯನ್ನು ಹಿಡಿದಿರುವ ಸರಸ್ವತಿಯ ಚಿತ್ರವು ಪ್ರಸಿದ್ಧವಾಗಿದೆ. ಶಾರದೆಯು ಬುದ್ಧಿ ಶಕ್ತಿಯನ್ನು ನೀಡುವ ದೇವತೆ ಎಂಬುದನ್ನು ಈ ಚಿತ್ರ ಎತ್ತಿ ತೋರಿಸುತ್ತದೆ. ಆಕೆಯ ಕೈಯಲ್ಲಿರುವ ಸ್ಫಟಿಕ ಮಣಿ ಮಾಲೆ ಜ್ಞಾನದ ಸಂಕೇತವಾಗಿದೆ. ಈ ಸ್ಫಟಿಕ ಮಣಿ ಮಾಲೆಯಲ್ಲಿ ಐವತ್ತು ಮಣಿಗಳಿರುತ್ತವೆ. ಐವತ್ತು ಮಣಿಗಳು ಸಂಸ್ಕೃತ ವರ್ಣಮಾಲೆಯ ಐವತ್ತು ಅಕ್ಷರಗಳನ್ನು ಸೂಚಿಸುತ್ತವೆ. ಅಂದರೆ ಇಡೀ ಸಂಸ್ಕೃತ ಮಾಲಿಕೆಯೇ ಆಕೆಯ ಕೈಯಲ್ಲಿದೆ ಎಂದರ್ಥ. ಈ ಕಾರಣದಿಂದಲೇ ಸರಸ್ವತಿಯನ್ನು “ವಾಣೀ ವೀಣಾ ಪುಸ್ತಕ ಪಾಣೀ ಗೀರ್ವಾಣಿ ಪರಬ್ರಹ್ಮನ ರಾಣಿʼʼ ಎಂದು ವರ್ಣಿಸಲಾಗಿದೆ.

ಶಾರದೆಯನ್ನು ಕೂರಿಸಿದ ಅಂದರೆ ಫೋಟೊ ಅಥವಾ ಮೂರ್ತಿಯನ್ನು ಕೂರಿಸಿದ ಮಂಟಪದಲ್ಲಿ ಪೀಠವೊಂದನ್ನು ಇಟ್ಟು, ಮನೆಯಲ್ಲಿ ವಿದ್ಯಾರ್ಜನೆ ಮಾಡುವ ಮಕ್ಕಳಿದ್ದರೆ ಅವರ ಪುಸ್ತಕಗಳನ್ನು, ಮನೆಯ ಲೆಕ್ಕಾಚಾರದ ಪುಸ್ತಕ, ಭಗವದ್ಗೀತಾ ಪುಸ್ತಕ, ವೇದಪುಸ್ತಕಗಳನ್ನಲ್ಲದೆ ಪ್ರಾಚೀನ ತಾಡವಾಲೆಗಳಿದ್ದಲ್ಲಿ ಅವನ್ನೂ ಶುದ್ಧಿಗೊಳಿಸಿ ಪೀಠದಲ್ಲಿಡಬೇಕು. ಮನೆಯಲ್ಲಿ ವೀಣೆ ಇದ್ದರೆ ಅದನ್ನೂ ಮಂಟಪದ ಪಕ್ಕದಲ್ಲಿರಿಸಬಹುದು. ಸರಸ್ವತಿಯ ಫೋಟೊವನ್ನು ಹಾಗೂ ಮಂಟಪವನ್ನು ಹೂವುಗಳಿಂದ ಆಲಂಕರಿಸಬೇಕು.

ನಂತರ ವಿಘ್ನ ವಿನಾಶಕನಾದ ಗಣೇಶನನ್ನು ಪೂಜೆ ಮಾಡಿ, ಶಾರದೆಯನ್ನು ಆವಾಹಿಸಿ ಷೋಡಶೋಪಚಾರ ಪೂಜೆ ಮಾಡಬೇಕು.

ಶಾರದೆಯನ್ನು ಆಹ್ವಾನಿಸುವಾಗ ಈ ಮಂತ್ರ ಹೇಳಿ:
ಶಾರದಾ ಶಾರದಾಂಭೋಜವದನಾ ವದನಾಂಬುಜೇ|
ಸರ್ವದಾ ಸರ್ವದಾಸ್ಮಾಕಂ ಸನ್ನಿದ್ಧಿಂ ಸನ್ನಿದ್ಧಿಂ ಕ್ರಿಯಾತ್|
ನಮಃ ಶ್ರೀ ಭುವನಮಾತಃ ಸಕಲವಾಂಙ್ಮಯರೂಪೇ ಅತ್ರಾಗಚ್ಛಗಚ್ಛ ಆವಾಹಯಾಮಿ

ಸರಸ್ವತಿ ದೇವಿಯು ನಮ್ಮ ಅಜ್ಞಾನವನ್ನು ಕಳೆದು ಪವಿತ್ರರನ್ನಾಗಿ ಮಾಡಿ ಸುಜ್ಞಾನದ ಪ್ರಚೋದನೆಯನ್ನು ಮಾಡುತ್ತಾ ಮತಿಪ್ರೇರಕಳಾಗಿರುವಳು. ಅವಳನ್ನು ಈ ಸಂದರ್ಭದಲ್ಲಿ ಭಕ್ತಿಯಿಂದ ಆರಾಧಿಸಬೇಕು. ಪೂಜೆಯ ನಂತರ ಶಾರದಾ ಸ್ತ್ರೋತ್ರ, ದ್ವಾದಶ ಸರಸ್ವತಿ ನಾಮಾವಳಿ, ಸರಸ್ವತಿ ದೇವಿಯ ಚಾಲೀಸವನ್ನು ಮತ್ತು ಸರಸ್ವತಿ ದೇವಿಯ ಶ್ಲೋಕವನ್ನು ಪಠಿಸಬಹುದು.

ಈ ಹಿಂದೆ ಹೇಳಿದಂತೆ ಸರಸ್ವತಿಯನ್ನು ವಿಜಯ ದಶಮಿಯಂದು ವಿಸರ್ಜಿಸಬೇಕು. ಅಲ್ಲಿಯವರೆಗೂ ಪ್ರತಿನಿತ್ಯ ಆಕೆಯ ಪೂಜೆ ನೆರವೇರಬೇಕು. ವಿಸರ್ಜನೆ ಮಾಡುವಾಗ ಈ ಕೆಳಗಿನ ಮಂತ್ರವನ್ನು ಹೇಳಿ;

ಗಚ್ಛ ಗಚ್ಛ ಸುರಶ್ರೇಷ್ಠೇ ಸ್ವಸ್ಥಾನಂ ಪ್ರಮದೋತ್ತಮೇ |
ಯತ್ರ ಬ್ರಹ್ಮಾ ಚ ವಾಯುಶ್ಚ ತತ್ರ ಗಚ್ಛ ಸರಸ್ವತಿ |

ಶಾರದಾಪ್ರತಿಷ್ಠೆಯಾದಂದಿನಿಂದ ವಿಸರ್ಜನೆಯ ತನಕ ಅನಧ್ಯಯನ, ವೇದ-ವೇದಾಂತಗಳ ಪಾಠ ಮಾಡುವಂತಿಲ್ಲ. ವಿಜಯದಶಮಿಯಂದು ಶಾರಾದಾವಿಸರ್ಜನೆಯಾದ ಮೇಲೆ ಶಾಂತಿಪಾಠದೊಂದಿಗೆ ಅಧ್ಯಯನವನ್ನು ಆರಂಭಿಸಬಹುದು. ಈ ದಿನ ನಾಲ್ಕಕ್ಷರವನ್ನಾದರೂ ಬರೆಯುವ ಪದ್ಧತಿಯಿದೆ. ಮಕ್ಕಳ ಪುಸ್ತಕವನ್ನು ಪೂಜೆಗಿಟ್ಟಿದ್ದರೆ, ಆ ಪುಸ್ತಕಗಳನ್ನು ತೆಗೆದು ಓದಲು, ಬರೆಯಲು ಹೇಳಬಹುದು.

ಸರ್ವವಂದ್ಯಳು, ಸರ್ವಮಾನ್ಯಳೂ ಆಗಿರುವ ಸರಸ್ವತಿಯನ್ನು ಸರಸ್ವತಿಯ ಪೂಜೆಯಂದು ನಾವೆಲ್ಲರೂ ಈ ಕೆಳಗಿನ ಮಂತ್ರದಿಂದ ಪ್ರಾರ್ಥಿಸೋಣ.
ಓಂ ವಾಗ್ದೇವಿಯೈಚ ವಿದ್ಮಹೇ, ವಿರಿಂಜಿ ಪತ್ನಿಯೈಚ ಧೀಮಹೀ
ತನ್ನೋ ವಾಣಿ ಪ್ರಚೋದಯಾತ್

ಇದನ್ನೂ ಓದಿ | Navaratri Fashion | ನವರಾತ್ರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ದುರ್ಗಾ ದೇವಿ ವಿನ್ಯಾಸ

Exit mobile version