Site icon Vistara News

Navaratri 2022 | ಎರಡನೇ ದಿನ ಆರಾಧಿಸಲ್ಪಡುವ ದೇವಿ ಯಾರು? ಯಾವ ವರ್ಣದ ವಸ್ತ್ರ ಶ್ರೇಷ್ಠ?

Navaratri 2022

ಶಕ್ತಿದೇವತೆಯ ಆರಾಧನೆಯ ನವರಾತ್ರಿ ಹಬ್ಬದ (Navaratri 2022) ರಾಜ್ಯಾದ್ಯಂತ ಆಚರಿಸಲ್ಪಡುತ್ತಿದೆ. ಮುಖ್ಯವಾಗಿ ಐತಿಹಾಸಿಕ ಮೈಸೂರು ದಸರಾಕ್ಕೂ ಚಾಲನೆ ದೊರೆತಿದೆ. ರಾಜ್ಯದ ಪ್ರಮುಖ ದೇವಿ ದೇವಾಲಯಗಳಲ್ಲಿ ದೇವಿ ಆರಾಧನೆಯು ನಡೆಯುತ್ತಿದೆ. ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಶುರುವಾಗಿದೆ. ನವರಾತ್ರಿಯ ಎರಡನೇ ದಿನದ ಆಚರಣೆಗಳಿಗೂ ಸಿದ್ಧತೆ ನಡೆದಿದೆ.

ನವದುರ್ಗೆಯರಲ್ಲಿ ಎರಡನೆಯ ದಿನದ ಸ್ವರೂಪ ಬ್ರಹ್ಮಚಾರಿಣಿ. ಬ್ರಹ್ಮ ಎಂದರೆ ತಪಸ್ಸು. ಬ್ರಹ್ಮಚಾರಿಣಿ ಎಂದರೆ ತಪಸ್ಸನ್ನು ಆಚರಿಸುವವಳು ಎಂದರ್ಥ. ಇವಳ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲ ಇರುತ್ತದೆ. ದೇವಿ ಪಾರ್ವತಿಯು ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಬಹಳ ಕಠಿಣವಾದ ತಪಸ್ಸನ್ನು ಮಾಡಿದಳು. ಇಂತಹ ದುಷ್ಕರ ತಪಸ್ಸಿನ ಕಾರಣ ಇವಳನ್ನು ತಪಶ್ಚಾರಿಣೀ ಅರ್ಥಾತ್‌ ಬ್ರಹ್ಮಚಾರಿಣಿ ಎಂದು ಕರೆಯಲಾಯಿತು.

ಶಕ್ತಿಮಾತೆಯ ಈ ಸ್ವರೂಪದ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಇವುಗಳ ವೃದ್ಧಿ ಆಗುತ್ತದೆ. ಜೀವನದ ಕಠಿಣ ಸಂದರ್ಭದಲ್ಲಿಯೂ ಮನಸ್ಸು ಕರ್ತವ್ಯ ಪಥದಿಂದ ವಿಚಲಿತವಾಗುವುದಿಲ್ಲ.

ನವಶಕ್ತಿ ಅಲಂಕಾರ: ಹಂಸವಾಹಿನಿ

ಜಗನ್ಮಾತೆಯನ್ನು ಬ್ರಾಹ್ಮೀ ಸ್ವರೂಪದಲ್ಲಿ ನೋಡಲಾಗುತ್ತದೆ. ಶಾರದಾಂಬೆ ಬ್ರಹ್ಮ ದೇವನ ಪಟ್ಟದರಸಿ, ಹಂಸವಾಹಿನಿ, ಕಮಂಡಲ ಧಾರಣಿ. ಹಂಸವಾಹಿನಿಯ ವಿಶೇಷ ಲಕ್ಷಣಗಳೆಂದರೆ ಕೈಯಲ್ಲಿ ಅಕ್ಷಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆ. ಯೋಗಶಾಸ್ತ್ರದ ಪ್ರಕಾರ ಇವೆಲ್ಲವೂ ಜ್ಞಾನದ ಸಂಕೇತವೇ. ರಜೋ ಗುಣದ ಸ್ವಭಾವವನ್ನು ಹೊಂದಿದ್ದಾಳೆ. ಸಪ್ತಮಾತೃಕೆಯರಲ್ಲಿ ಬ್ರಾಹ್ಮೀಯೂ ಒಬ್ಬಳೆಂದು ಗುರುತಿಸಲ್ಪಟ್ಟಿದ್ದಾಳೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಬ್ರಾಹ್ಮೀ ಮಂದಿರದವಿದೆ. ಕ್ಷತ್ರಿಯರು, ರಜಪೂತರು ಈಕೆಯನ್ನು ಕುಲದೇವಿಯೆಂದು ಆರಾಧಿಸುತ್ತಾರೆ.

ಗ್ರಹ: ಕುಜ, ವರ್ಣ: ಕೆಂಪು, ನೈವೇದ್ಯ: ಮೊಸರನ್ನ

ಎರಡನೆಯ ದಿನ (ದ್ವಿತೀಯ) ಕೆಂಪು ಬಣ್ಣದ ವಸ್ತ್ರಧಾರಣೆ  

ಕೆಂಪು ಬಣ್ಣವು ಕಣ್ಣು ಮತ್ತು ಮನಸ್ಸನ್ನು ಬಲವಾಗಿ ಆಕರ್ಷಿಸುವ ಬಣ್ಣ. ಇದು ಧೈರ್ಯದ ಮತ್ತು ಬಲದ ಪ್ರತೀಕ ಭೂಮಿಯ ಅಂಧಕಾರವನ್ನು ಕಳೆದು ಪ್ರಕಾಶದೆಡೆಗೊಯ್ಯುವ  ಸೂರ್ಯೋದಯದ ಬಣ್ಣವೂ ಕೆಂಪು. ಅಂತೆಯೇ ನಾವು ನಮ್ಮವರ ಜೀವನದಲ್ಲಿ ಸದಾ ಭರವಸೆಯ ಬಣ್ಣವನ್ನು ತುಂಬೋಣ ಎಂಬ ಸಂದೇಶ.

ನವರತ್ನಗಳಲ್ಲಿ ಒಂದಾದ ಮಾಣಿಕ್ಯವು ಹೊಳೆಯುವ ಕೆಂಪು ಬಣ್ಣದಿಂದ ಕೂಡಿದೆ. ಈ ಕೆಂಪು ಮಾಣಿಕ್ಯವು ಧರಿಸಿ ದವರಿಗೆ ಅದೃಷ್ಟವನ್ನು ತರುವಂತೆ ನಾವು ನಮ್ಮವರ ಜೀವನದಲ್ಲಿ ಒಳ್ಳೆಯದನ್ನೇ ಮಾಡೋಣ ಎಂಬುದರ ಸಂಕೇತ. ಕೆಂಪು ಬಣ್ಣದ ರಕ್ತ ಹೇಗೆ ಮನುಷ್ಯನ ಜೀವನಧಾರೆಯಾಗಿದೆಯೋ ಹಾಗೆಯೇ ನಮ್ಮಿಂದ ಎಲ್ಲರಿಗೂ ಸಕಾರಾತ್ಮಕವಾದ ಪ್ರಭಾವ ಬೀರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿ ಎರಡನೇ ದಿನ ಕೆಂಪು ವಸ್ತ್ರಗಳನ್ನು ಧರಿಸಬೇಕು.

ಯಾವ ಮಂತ್ರದಿಂದ ಪ್ರಾರ್ಥಿಸಬೇಕು?

ನವರಾತ್ರಿಯ ಎರಡನೇ ದಿನ ದೇವಿ ಬ್ರಹ್ಮಚಾರಿಣಿಯನ್ನು ಆರಾಧಿಸಬೇಕು. ಬ್ರಹ್ಮಚಾರಿಣಿ ದೇವಿಯು ಪ್ರೀತಿ ಹಾಗೂ ಶಾಂತಿಯ ಸಂಕೇತ. ಅಲ್ಲದೆ ಶಾಂತಿ, ಸಂತೋಷ, ಸಂಕಲ್ಪ ಮತ್ತು ಭಕ್ತಿಯ ರೂಪವೂ ಇವಳೇ ಆಗಿದ್ದಾಳೆ. ಹೀಗಾಗಿ ನೀವು ಭಕ್ತಿಯಿಂದ ಪೂಜೆ ಮಾಡಿದರೆ ಆಕೆ ಒಲಿಯುತ್ತಾಳೆ. ಮೊಸರನ್ನವನ್ನು ದೇವಿಗೆ ನೈವೇದ್ಯ ಮಾಡಬೇಕು. ನಮ್ಮ ಲಕ್ಷ್ಯವನ್ನು ಹೊಂದಲು ಅನುಸರಿಸಬೇಕಾದ ಮಾರ್ಗವನ್ನು ಬ್ರಹ್ಮಚಾರಿಣಿಯು ಬೋಧಿಸುತ್ತಾಳೆ. ಆದ್ದರಿಂದ ಈ ಕೆಳಗಿನ ಮಂತ್ರದಿಂದ ಪ್ರಾರ್ಥಿಸಿ.

ದಧಾನಾ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ
||

(ವರ್ಣದ ಕುರಿತ ಮಾಹಿತಿ: ಮೇಧಾ ಪ್ರಹ್ಲಾದಾಚಾರ್ಯ ಜೋಶಿ)

ಇದನ್ನೂ ಓದಿ | Navaratri 2022 | ನವರಾತ್ರಿಯಲ್ಲಿ ಕನ್ಯಾ ಪೂಜೆ ಹೇಗೆ ಮಾಡಬೇಕು? ಏನು ಫಲ?

Exit mobile version