Site icon Vistara News

Navaratri 2022 | ಭೂತ, ಪ್ರೇತ ಇತ್ಯಾದಿ ಭಯ ದೂರವಾಗಲು ನವರಾತ್ರಿಯ 7ನೇ ದಿನ ಈ ದೇವಿಯನ್ನು ಪೂಜಿಸಿ

Navratri 2022

ಶಕ್ತಿದೇವತೆಯ ಆರಾಧನೆಯ ನವರಾತ್ರಿ ಹಬ್ಬದ (Navaratri 2022) ಏಳನೇ ದಿನದ ಆಚರಣೆ ಭಾನುವಾರ ನಡೆಯಲಿದೆ. ನವರಾತ್ರಿಯಲ್ಲಿ ಒಂಬತ್ತು ರೂಪದಲ್ಲಿ ಆರಾಧಿಸಲ್ಪಡುವ ದುರ್ಗೆ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಪ್ರೇರಕ ಹಾಗೂ ಕಾರಕಶಕ್ತಿಯಾಗಿದ್ದಾಳೆ. ಸದ್ಗುಣ ಸಂಪನ್ನೆ ದುರ್ಗೆ ಮನದೊಳಗಿನ ಅಜ್ಞಾನವೆಂಬ ಅಸುರನನ್ನು ಸಂಹರಿಸಿ, ಸುಜ್ಞಾನವನ್ನು ಕರುಣಿಸುವ ಮಾತೆ. ಹಾಗೆಂದೇ “ದುರ್ಗಾ ದುರ್ಗತಿ ನಾಶಿನಿʼʼ ಎಂದೇ ಆಕೆ ಹೆಸರಾಗಿದ್ದಾಳೆ. ದೇವನೊಬ್ಬ ನಾಮ ಹಲವು ಎನ್ನುವಂತೆ ದುರ್ಗೆಯನ್ನು ಯಾವ ನಾಮದಲ್ಲಿ ಕರೆದರೂ ಆಕೆಯ ಸ್ವರೂಪವೊಂದೇ.

ನವರಾತ್ರಿಯ ಏಳನೇ ದಿನ ದುರ್ಗೆಯನ್ನು ಕಾಲರಾತ್ರೀ ಸ್ವರೂಪದಿಂದ (ಸಪ್ತಮಂ ಕಾಲರಾತ್ರಿಶ್ಚ) ಆರಾಧಿಸಲಾಗುತ್ತದೆ. ಈ ದೇವಿಯ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಪೂರ್ಣವಾಗಿ ಕಪ್ಪಾಗಿದೆ. ರಕ್ತಬೀಜಾಸುರನನ್ನು ಕೊಲ್ಲುವ ಸಲುವಾಗೇ ಮಹಾಕಾಳಿಯ ರೂಪದಲ್ಲಿ ಅವತರಿಸುತ್ತಾಳೆ ದುರ್ಗೆ. ರಕ್ತಬೀಜಾಸುರನ ರಕ್ತ ಕೆಳಗೆ ಬೀಳದಂತೆ ಅದನ್ನು ಕುಡಿಯುತ್ತಿದ್ದ ತಾಯಿ ಮದದಿಂದ ನರ್ತಿಸುತ್ತಿರುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರವಷ್ಟೇ ಆಕೆ ಸಹಜ ಸ್ಥಿತಿಗೆ ಬಂದಳಂತೆ.

ದೇವಿ ಕಾಲರಾತ್ರೀಯ ಸ್ವರೂಪ ಎಷ್ಟು ಭಯಂಕರ ಎಂದರೆ ದೇವಿ ಉಸಿರಾಡುವಾಗಲೆಲ್ಲಾ ಅಗ್ನಿಯ ಜ್ವಾಲೆಗಳು ಹೊರಹೊಮ್ಮುತ್ತವೆ. ಕೆದರಿದ ಕೂದಲಿನ ಈಕೆಯ ಬಲಗಡೆಯ ಕೈಗಳಲ್ಲಿ ವರಮುದ್ರೆ ಹಾಗೂ ಅಭಯಮುದ್ರೆ ಇದ್ದರೆ ಎಡಗೈಗಳಲ್ಲಿ ಕಬ್ಬಿಣದ ಮುಳ್ಳು ಹಾಗೂ ಖಡ್ಗವಿದೆ. ಭಯಂಕರ ರೂಪಧಾರಿಣಿಯಾಗಿದ್ದರೂ ಶುಭ ಫಲಗಳನ್ನೇ ಈ ದೇವಿ ನೀಡುವುದರಿಂದ ‘ಶುಭಂಕರಿ’ ಎಂದೂ ಕರೆಯುತ್ತಾರೆ. ಈಕೆಯ ವಾಹನ ಗಾರ್ದಭ.

ಈಕೆಯನ್ನು ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳ ನಾಶವಾಗಿ
ಪುಣ್ಯಲೋಕ ಪ್ರಾಪ್ತಿಯುಂಟಾಗುವುದು. ಈ ದೇವಿಯನ್ನು ಪೂಜಿಸಿದಾಗ ಭೂತ, ಪ್ರೇತ, ಪಿಶಾಚಿಗಳೆಲ್ಲವೂ ಓಡಿಹೋಗುತ್ತವೆ. ಪ್ರಾಣಿ ಮತ್ತು ಕೀಟಗಳಭಯ, ಚೋರಭಯ, ಶತ್ರುಭಯ, ಜಲಭಯ, ಅಗ್ನಿಭಯ ಮುಂತಾದ ಎಲ್ಲ ಭಯಗಳೂ ನಿವಾರಣೆಯಾಗುತ್ತವೆ.

ಗ್ರಹ : ಶನಿ, ನೈವೇದ್ಯ: ಹರಿದ್ರಾನ್ನ, ಎಲ್ಲ ರೀತಿಯ ಅನ್ನ, ಎರಿಯಪ್ಪ, ವರ್ಣ: ಕೇಸರಿ

ನವಶಕ್ತಿ ಅಲಂಕಾರ: ವೀಣಾ ಶಾರದಾ

ತಾಯಿ ಶಾರದಾಂಬೆ ಕೈಯಲ್ಲಿ ವೀಣೆಯನ್ನು ಹಿಡಿದುಕೊಂಡಿದ್ದಾಳೆ. ಶಾರದೆ ಲೋಕಪಾವನಿ. ಜಗಕ್ಕೆ ವಿದ್ಯೆ ಬುದ್ಧಿ, ಜ್ಞಾನವನ್ನು ನೀಡುವ ಜ್ಞಾನಧಾತ್ರಿ. ವೀಣಾಪಾಣಿಯ ಅಲಂಕಾರವನ್ನು ನೋಡಲು ಎರಡು ಕಣ್ಣು ಸಾಲದು. ಸರಸ್ವತಿಯ ಆರಾಧನೆಯಿಂದ ವಿದ್ಯಾ, ಬುದ್ಧಿ, ಲಭಿಸುತ್ತದೆ. ಸ್ಮರಣ ಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ.

ಏಳನೆಯ ದಿನ (ಸಪ್ತಮಿ) ಕೇಸರಿ ಬಣ್ಣದ ವಸ್ತ್ರಧಾರಣೆ  

ಕೇಸರಿ ಬಣ್ಣವು ಹಿಂದೂ ಧರ್ಮದಲ್ಲಿ ಪರಮ ಪವಿತ್ರವಾದ ಬಣ್ಣವೆಂದು ಪರಿಗಣಿಸಲಾಗಿದೆ. ಈ ಬಣ್ಣವೂ ಪ್ರಕೃತಿಯ ಸಮತೋಲನೆಯನ್ನು ಕಾಪಾಡುವ ಸೂರ್ಯನನ್ನು ಬಿಂಬಿಸುವ ಬಣ್ಣವಾಗಿದೆ. ಸೂರ್ಯನ ಪ್ರಖರತೆಯು ನಮ್ಮ ಊಹೆಗೂ ಮೀರಿದ್ದು. ಆದರೂ ಪ್ರಕೃತಿಯ ಜೀವನಕ್ಕೆ ಬೇಕಾದಷ್ಟೇ ಪ್ರಕಾಶವನ್ನು ಸೂರ್ಯ ನೀಡುವನು. ಅಂತೆಯೇ ನಾವು ಎಷ್ಟೇ ದೊಡ್ಡವರಾಗಿದ್ದರೂ, ಎಷ್ಟೇ ಸಾಮರ್ಥ್ಯ ಹೊಂದಿದ್ದರು ಎಲ್ಲರೊಂದಿಗೆ ಸಾಮಾನ್ಯರಂತೆ ಬಾಳಬೇಕು ಎಂಬುದರ ಸಂಕೇತವೇ ಈ ಸೂರ್ಯನ ಕೇಸರಿ ಬಣ್ಣ.

ಭಾರತೀಯ ಸಂಸ್ಕೃತಿಯಲ್ಲಿ ಕೇಸರಿ ವೈರಾಗ್ಯದ ಸಂಕೇತ. ಧರ್ಮಕ್ಕಾಗಿ ಎಲ್ಲವನ್ನೂ ತ್ಯಜಿಸಿ ಸಮಾಜದ ಉದ್ಧಾರಕ್ಕಾಗಿ ಜೀವನವನ್ನು ಅರ್ಪಿಸುವ ಪವಿತ್ರ ಕಾವಿಯ ಬಣ್ಣವೇ ಕೇಸರಿ. ಈ ಕೇಸರಿ ಬಣ್ಣ ಧೈರ್ಯ ಮತ್ತು ತ್ಯಾಗದ ಪ್ರತೀಕ. ಜೀವನ ಹಾಗೂ ಮೋಕ್ಷದ ಅನ್ವೇಷಣೆಯ ಸೂಚಕವಾಗಿದೆ ಕೇಸರಿ. ಕೇಸರಿ ಬಣ್ಣದಿಂದ ಕೂಡಿದ ಅಗ್ನಿಯ ಜ್ವಾಲೆಯು ಪರಮ ಪವಿತ್ರತೆಯ ಸಂಕೇತವಾಗಿದೆ.

ಕತ್ತಲೆಯನ್ನು ಅಳಿಸಿ ಬೆಳಕನ್ನು ತರುವ ಸೂರ್ಯೋದಯದ ಪ್ರತೀಕ ಈ ಕೇಸರಿ ಬಣ್ಣ. ದೇವರ ತೀರ್ಥದೊಂದಿಗೂ ಮಿಶ್ರಣವಾಗುವುದು “ಕೇಸರ”ದ ಕೇಸರಿ ಬಣ್ಣ. ಹೀಗೆ ನಮ್ಮ ಜೀವನವು ಧೈರ್ಯ ಮತ್ತು ತ್ಯಾಗದಿಂದ ಕೂಡಿರಲಿ ಎಂದು ದೇವಿಗೆ ಪ್ರಾರ್ಥಿಸಿ ಏಳನೇಯ ದಿನ ಕೇಸರಿ ವಸ್ತ್ರದ ಧಾರಣೆಯನ್ನು ಮಾಡಬೇಕು.

ಯಾವ ಮಂತ್ರದಿಂದ ಪ್ರಾರ್ಥಿಸಬೇಕು?

ನಮ್ಮೊಳಗಿರುವ ಭಯವನ್ನು ದೂರಮಾಡಲು ಕಾಲರಾತ್ರೀ ದೇವಿಯನ್ನು ವಿಶೇಷವಾಗಿ ಆರಾಧಿಸಬೇಕು. ದೇವಿಗೆ ಕೆಂಪು ಹೂವುಗಳನ್ನು ಪೂಜಿಸಿ, ಕಡು ಬಣ್ಣದ ಬಟ್ಟೆಯನ್ನು ಅರ್ಪಿಸಿ ಅವಳಿಗೆ ಪ್ರಿಯವಾದ “ಹರಿದ್ರಾನ್ನವನ್ನು” ಅಂದರೆ ಚಿತ್ರಾನ್ನ ಅಥವಾ ಕೇಸರೀ ಯುಕ್ತವಾದ ಅನ್ನವನ್ನು ಮಾಡಿ ಅವಳಿಗೆ ನೈವೇದ್ಯ ಮಾಡಬೇಕು.

ಅಜ್ಞಾನ, ಅಂಧಕಾರಗಳ ನಿವಾರಣೆಯನ್ನು ಕಾಲರಾತ್ರೀ ಸ್ವರೂಪವು ಸೂಚಿಸುತ್ತದೆ. ನಾವು ಭಯದಿಂದ ಮಾಡುವ ಕೆಲಸಗಳು ಶುಭ ಫಲಗಳನ್ನು ನೀಡಬೇಕಾದರೆ ಈ ದೇವಿಯ ಆಶೀರ್ವಾದ ಬಹಳ ಮುಖ್ಯ. ನವರಾತ್ರಿಯ ಏಳನೇ ದಿನವನ್ನು ಮಹಾಸಪ್ತಮಿ ಎಂದೂ ಕರೆಯಲಾಗುತ್ತದೆ. ಈ ದಿನ ಸರಸ್ವತಿ ದೇವಿಯ ಪೂಜೆಯು ಆರಂಭವಾಗುವುದು. ಕಾಲರಾತ್ರೀ ದೇವಿಯ ಜತೆಗೆ ಸರಸ್ವತಿಯ ಪೂಜೆಯನ್ನೂ ಆರಂಭಿಸಬೇಕು. ಕಾಲರಾತ್ರೀ ದೇವಿಯ ಆಶೀರ್ವಾದ ಪಡೆಯಲು ಈ ಕೆಳಗಿನ ಮಂತ್ರದಿಂದ ಪ್ರಾರ್ಥಿಸಿ.

ಎಕವೇಣೀ ಜಪಾಕರ್ಣಪೂರಾ ನಗ್ನಾ ಸ್ವರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣಿ ತೈಲಾಭ್ಯಕ್ತಶರಿರಿಣೀ ||
ವಾಮಪಾದೋಲ್ಲಸಲ್ಲೀಹಲತಾ ಕಂಟಕಭೂಷಣಾ |
ವರ್ಧನ್ಮೂರ್ಧಧ್ವಜಾ ಕೃಷ್ಣ ಕಾಲರಾತ್ರೀ ಭಯಂಕರೀ ||

(ವರ್ಣದ ಕುರಿತ ಮಾಹಿತಿ: ಮೇಧಾ ಪ್ರಹ್ಲಾದಾಚಾರ್ಯ ಜೋಶಿ)

ಇದನ್ನೂ ಓದಿ| Navaratri 2022 | ಸರಸ್ವತಿ ಪೂಜೆ ಎಂದು? ಪೂಜೆ ಹೇಗೆ ಮಾಡಬೇಕು?

Exit mobile version