ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ನವರಾತ್ರಿಯಲ್ಲಿ (Navaratri 2022) ಪ್ರತಿನಿತ್ಯವೂ ಕುಮಾರಿಯರ ಪೂಜೆಯನ್ನು ಮಾಡಲಾಗುತ್ತದೆ. ಕುಮಾರಿಯರು ಎಂದರೆ ಎರಡು ವರ್ಷದಿಂದ ಹತ್ತು ವರುಷದ ವರೆಗಿನ ಬಾಲಕಿಯರು. “ಕನ್ಯೆʼʼ ಎಂದರೆ ರಜಸ್ವಲೆಯರಾಗದಿರುವ ಬಾಲಕಿಯರು. “ದ್ವಿವರ್ಷಕನ್ಯಾಮಾರಭ್ಯ ದಶವರ್ಷಾವಧಿ ಕ್ರಮಾತ್ ಪೂಜಯೇತ್” ಎಂದು. ಕುಮಾರಿ, ತ್ರಿಮೂರ್ತಿನೀ, ಕಲ್ಯಾಣೀ, ರೋಹಿಣೀ, ಕಾಲೀ, ಚಂಡಿಕಾ, ಶಾಂಭವೀ, ದುರ್ಗಾ, ಭದ್ರಾ ಎಂದು ಒಂಬತ್ತು ದುರ್ಗೆಯ ರೂಪಗಳನ್ನು ಕುಮಾರಿಯರಲ್ಲಿ ಆವಾಹಿಸಿ ಪೂಜಿಸಲಾಗುತ್ತದೆ.
ಕುಮಾರಿಯರಿಗೆ ನೂತನವಸ್ತ್ರ, ಅಲಂಕಾರವಸ್ತುಗಳು, ಮತ್ತು ಅನೇಕ ಸಿಹಿ ತಿನಿಸುಗಳನ್ನು ದಾನವಾಗಿ ಕೊಡಬೇಕು. ಇದರಿಂದ ಆಯುಷ್ಯಾಭಿವೃದ್ಧಿಯಾಗುತ್ತದೆ. ಈ ಪೂಜೆದಾನಾದಿಗಳಿಂದ ಅಷ್ಟ ವಸುಗಳು ಮತ್ತು ರುದ್ರಾದಿಗಳನ್ನು ಪೂಜಿಸಿದಂತಾಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಒಂಬತ್ತುದಿನಗಳು ಕುಮಾರಿ ಪೂಜೆ ಮಾಡಲು ಸಾಧ್ಯವಾಗದಿದ್ದರೆ, ನವರಾತ್ರಿಯಲ್ಲಿ ಒಂದು ದಿನವಾದರೂ ಒಬ್ಬ ಕನ್ಯೆಯನ್ನು ಪೂಜಿಸಿ ದಾನವನ್ನು ಮಾಡಿ ಭೋಜನವನ್ನು ಮಾಡಿಸಬೇಕು.
ದುಃಖದಾರಿದ್ರ್ಯನಾಶಾಯ ಶತ್ರೂಣಾಂ ನಾಶಹೇತವೇ |
ಆಯುಷ್ಯಬಲವೃದ್ಧ್ಯರ್ಥಂ ಕುಮಾರೀಂ ಪೂಜಯೇನ್ನರಃ||
ಯಾವ ವಯಸ್ಸಿನ ಪೂಜೆಯಿಂದ ಏನು ಫಲ?
೧. ಎರಡು ವರ್ಷದ ಕುಮಾರಿಪೂಜೆಯಿಂದ ಆಯುಷ್ಯಾಭವೃದ್ಧಿ.
೨. ಮೂರು ವರ್ಷದ ಕುಮಾರಿಪೂಜೆಯಿಂದ ಅಪಮೃತ್ಯುಪರಿಹಾರ.
೩. ನಾಲ್ಕು ವರುಷದ ಕುಮಾರಿಪೂಜೆಯಿಂದ ಆರೋಗ್ಯ, ಪುತ್ರಪ್ರಾಪ್ತಿ, ಧನ-ಧಾನ್ಯಾಭಿವೃದ್ಧಿ.
೪. ಐದು ವರುಷದ ಕುಮಾರಿಪೂಜೆಯಿಂದ ಧನ ಮತ್ತು ಕೀರ್ತಿಯ ಪ್ರಾಪ್ತಿ.
೫. ಆರು ವರ್ಷದ ಕುಮಾರಿಪೂಜೆಯಿಂದ ವಿದ್ಯಾಪ್ರಾಪ್ತಿ ಮತ್ತು ಜಯಲಾಭ.
೬. ಏಳು ವರುಷದ ಕುಮಾರಿಪೂಜೆಯಿಂದ ಯುದ್ಧದಲ್ಲಿ ಜಯಪ್ರಾಪ್ತಿ.
೭. ಎಂಟು ವರುಷದ ಕುಮಾರಿಪೂಜೆಯಿಂದ ಎಲ್ಲ ಮಹಾಪಾಪಗಳ ನಾಶ ಮತ್ತು ಶತೃಭಯನಾಶ.
೮. ಒಂಬತ್ತು ವರುಷದ ಕುಮಾರಿಪೂಜೆಯಿಂದ ಸರ್ವದುಃಖಗಳು ನಾಶವಾಗುತ್ತವೆ.
೧೦. ಹತ್ತು ವರುಷದ ಕುಮಾರಿಪೂಜೆಯಿಂದ ಸರ್ವವಿಧ ಇಹ-ಪರ ಸೌಖ್ಯಪ್ರಾಪ್ತಿ.
ಹೀಗೆ ನವರಾತ್ರಿಯ ಒಂಬತ್ತು ದಿನಗಳು ಅನುಸಂಧಾನಪೂರ್ವಕವಾಗಿ ಕುಮಾರಿ ಪೂಜೆಯನ್ನು ಮಾಡಬೇಕು.
ದೀಪಾರಾಧನೆ ಹಾಗೂ ಘಟ್ಟಸ್ಥಾಪನೆ
ಶ್ರೀ-ಭೂ-ದುರ್ಗಾ ಹೀಗೆ ಮೂರು ರೂಪಗಳಿಂದ ಲಕ್ಷ್ಮೀದೇವಿಯ ಪೂಜೆಯನ್ನು ಮಾಡುವ ಸಂಪ್ರದಾಯವು ನವರಾತ್ರಿಯಲ್ಲುಂಟು. ದೀಪವು ಜ್ಞಾನದ ಪ್ರತೀಕ. ಶ್ರೀರೂಪದ ಲಕ್ಷ್ಮೀದೇವಿಯು ಜ್ಞಾನಕ್ಕೆ ಅಭಿಮಾನಿನೀ. ಆದ್ದರಿಂದ ಎರಡು ದೀಪಗಳನ್ನು ಪ್ರಜ್ವಲಿಸಬೇಕು. ಒಂದು ಘೃತದೀಪ. ಇನ್ನೊಂದು ತೈಲದೀಪ (ಎಳ್ಳೆಣ್ಣೆದೀಪ.). ಇವುಗಳನ್ನು ನಂದಾದೀಪ ಅಥವಾ ಅಖಂಡದೀಪ ಎಂದು ಕರೆಯುತ್ತಾರೆ.
ದೀಪದ ಸ್ತಂಭಗಳಿಗೆ ಕೆಮ್ಮಣ್ಣು, ಸುಣ್ಣವನ್ನು ಲೇಪಿಸಬೇಕು. ದೇವರ ಬಲಭಾಗದಲ್ಲಿ ದೀಪಸ್ತಂಭಗಳನ್ನು ಸ್ಥಾಪಿಸಬೇಕು. ಮಂತ್ರಗಳಿಂದ ದೀಪಗಳಲ್ಲಿ ದೇವತೆಗಳನ್ನು ಆವಾಹಿಸಿ ಹೂವಿನಿಂದ ಅಲಂಕರಿಸಿ ಗೆಜ್ಜೆವಸ್ತ್ರ, ಅರಿಷಿನ ಕುಂಕುಮಗಳಿಂದ ಪೂಜಿಸಬೇಕು. ದೀಪಸ್ತಂಭದ ಅಗ್ರದಲ್ಲಿ ಸಪ್ತವಿಂಶತಿ (ಇಪ್ಪತ್ತೇಳು) ಕೃತ್ತಿಕಾದಿ ನಕ್ಷತ್ರದೇವತೆಗಳ, ದೀಪಪ್ರಜ್ವಲಿಸುವ ನಾಲೆಯಲ್ಲಿ ವಾಸುಕಿದೇವತೆ, ದೀಪಸ್ತಂಭ ಪಾದದಲ್ಲಿ ಚಂದ್ರಾರ್ಕಾದಿ ದೇವತೆಗಳ ಸನ್ನಿಧಾನವಿರುತ್ತದೆ ಎಂದು ಚಿಂತಿಸಿ ಪೂಜಿಸಬೇಕು. ನಂತರದಲ್ಲಿ ದೀಪಪ್ರಜ್ವಾಲನೆಯನ್ನು ಮಾಡಬೇಕು. ಪ್ರಾತಃ ಮಧ್ಯಾಹ್ನ ಸಾಯಂಕಾಲ ಹೀಗೆ ಮೂರು ಸಮಯದಲ್ಲಿಯೂ ದೀಪಗಳಿಗೆ ಎಣ್ಣೆ ತುಪ್ಪಗಳನ್ನು ಹಾಕುತ್ತಿರಬೇಕು. ದೀಪವನ್ನು ಮಡಿಯಿಂದಲೇ ಮುಟ್ಟಬೇಕು.
ದೀಪಗಳನ್ನು ಮುಟ್ಟುವವರು ಬಹಳ ಅನುಷ್ಠಾನವನ್ನು, ನಿಯಮಗಳನ್ನು ಪಾಲಿಸಬೇಕು. ಒಂಬತ್ತು ದಿನಗಳು ಬ್ರಹ್ಮಚರ್ಯದಿಂದ ಇರಬೇಕು. ಹೊರಗಡೆಗೆ ಎಲ್ಲಿಯೂ ಯಾವುದೇ ಆಹಾರವನ್ನು ಸ್ವೀಕರಿಸಬಾರದು. ಹಾಸಿಗೆ ಅಥವಾ ಮಂಚವನ್ನು ತ್ಯಜಿಸಿ ಚಾಪೆಯ ಮೇಲೆ ಮಲಗಬೇಕು. ಈ ಒಂಬತ್ತು ದಿನಗಳಲ್ಲಿ ಪಾದರಕ್ಷೆಗಳನ್ನು ಧರಿಸಬಾರದು. ಶಕ್ತಿ ಇದ್ದವರು ಅವರ ಅನೂಲಕ್ಕೆ ತಕ್ಕಂತೆ ಮತ್ತು ಆರೋಗ್ಯಕ್ಕೆ ತಕ್ಕಂತೆ ನಿಯಮಗಳನ್ನು ಪಾಲಿಸಬೇಕು.
ಆಶ್ವಯುಜ ಮಾಸದ ಪ್ರತಿಪತ್ ತಿಥಿಯಿಂದ ನವಮೀವರೆಗು ಮಾಡುವ ಪೂಜೆಯನ್ನು ”ನವರಾತ್ರೋತ್ಸವ” ಎಂದು ಕರೆಯುತ್ತಾರೆ. ತೃತೀಯಾದಿಂದ ನವಮೀವರೆಗಿನ ಆಚರಣೆಗೆ ”ಸಪ್ತರಾತ್ರೋತ್ಸವ” ಎನ್ನುತ್ತಾರೆ. ಪಂಚಮೀಯಿಂದ ನವಮೀವರೆಗಿನ ಆಚರಿಸುವ ಉತ್ಸವವನ್ನು ”ಪಂಚರಾತ್ರೋತ್ಸವ”ವೆಂದು ಕರೆಯುತ್ತಾರೆ. ಹಾಗೆಯೇ ಸಪ್ತಮೀ ಅಷ್ಟಮೀ ನವಮೀ ಈ ಮೂರದಿನಗಳ ಕಾಲ ಮಾಡುವ ಉತ್ಸವವನ್ನು ”ತ್ರಿರಾತ್ರೋತ್ಸವ”ವೆಂದು ಕರೆಯುತ್ತಾರೆ.
ಲೇಖಕರು ಹವ್ಯಾಸಿ ಬರಹಗಾರರು
ಇದನ್ನೂ ಓದಿ | Navaratri 2022 | ನವತ್ವವನ್ನು ಉಂಟು ಮಾಡುವ ನವರಾತ್ರಿ ಹಬ್ಬ