Site icon Vistara News

Navaratri 2022 | ತಾಯಿ ಶಾರದೆ ಲೋಕ ಪೂಜಿತೆ

Navaratri 2022

ರಮ್ಯ ಗುಹಾ ದ್ವಾರಕಾನಾಥ್ | ಡಾ. ಮೇಖಲ ದ್ವಾರಕನಾಥ್
ನಮ್ಮ ಭಾರತ ದೇಶವು ಪುಣ್ಯ ಭೂಮಿ. ಋಷಿ ಪರಂಪರೆಯ ಅತ್ರಿ ಮಹಾಮುನಿಗಳಿಂದ ಹಿಡಿದು ಎಲ್ಲಾ ಋಷಿಮುನಿಗಳು ರಾಷ್ಟ್ರದ ಉಳಿವಿಗಾಗಿ, ಧರ್ಮ, ಭಕ್ತಿಯನ್ನು, ಎಲ್ಲಕ್ಕಿಂತ ಮಿಗಿಲಾಗಿ ಜ್ಞಾನಕಾಂಡ, ಭಕ್ತಿಕಾಂಡ, ಮುಕ್ತಿಕಾಂಡದ ಜಾಗೃತಿಯ ಮೂಲಕ ಮಾನವ ಕುಲವನ್ನು ಉದ್ದರಿಸಿದ್ದಾರೆ.

ಇವರಲ್ಲಿಯೂ ನಾವು ನವರಾತ್ರಿಯ (Navaratri 2022) ಈ ಹೊತ್ತಿನಲ್ಲಿ ನೆನೆಯಬೇಕಾದವರೆಂದರೆ ಶ್ರೀ ಶಂಕರ ಭಗವತ್ಪಾದರು. ಶ್ರೀಚಕ್ರದ ಮೂಲಕ ಮಹಾಲಕ್ಷ್ಮೀ, ಮಹಾಸರಸ್ವತೀ, ಮಹಾಕಾಳಿ ಐಕ್ಯರೂಪವನ್ನು ಸ್ಥಾಪಿಸಿ, ಸ್ತ್ರೀಯ ಶಕ್ತಿಯನ್ನು ತೋರಿಸಿ ಕೊಟ್ಟವರು ಇವರು. ಶೃಂಗೇರಿಯಲ್ಲಿ ಶಾರದೆಯೇ ಶಂಕರರ ಕರೆಗೆ ಬಂದು ನೆಲೆಸಿದ್ದಾಳೆ. ಮನುಷ್ಯರು ಯಾವುದೇ ಜ್ಞಾನ ಸಂಪಾದನೆ ಮಾಡಬೇಕಾದರೂ ತಮ್ಮಲ್ಲಿರುವ ದುಷ್ಟಗುಣಗಳನ್ನು ತ್ಯಜಿಸಬೇಕು, ಇದಕ್ಕಾಗಿ ಮಹಾಕಾಳಿಯನ್ನು, ಮಹಾಲಕ್ಷ್ಮೀಯನ್ನು ಪೂಜಿಸಬೇಕು. ಮಹಾಜ್ಞಾನ ನೀಡುವ ಸರಸ್ವತಿಯನ್ನು ಜ್ಞಾನ ಪಡೆಯಲು ಅರ್ಚಿಸಬೇಕು.

‘ದಿಯೋ ಯೋನ ಪ್ರಚೋದಯಾತ್’ ಎಂದರೆ ಬುದ್ಧಿಯೇ ಪ್ರಚೋದನೆ ನೀಡುವಂಥದ್ದು. ಭಗವತಿಯ ಮೂರು ಅಂಶಗಳಲ್ಲಿ ಶಾರದೆ ಒಬ್ಬಳಾಗಿದ್ದು, ಬ್ರಹ್ಮನ ಸಂಗಾತಿಯಾಗಿ ಸೃಷ್ಟಿಕಾರ್ಯದಲ್ಲಿ ಸಹಾಯಕಳಾಗಿದ್ದರಿಂದ ಇವಳಿಗೆ ಬ್ರಾಹ್ಮೀ ಎನ್ನುವರು. ಶರನ್ನವರಾತ್ರಿಯಲ್ಲಿ ದುರ್ಗೆಯನ್ನು ಸರಸ್ವತಿ ರೂಪದಲ್ಲಿ ಪೂಜಿಸಿ ಎಂದು ಶಾಸ್ತ್ರಕಾರರು ಮಾನವಕುಲಕ್ಕೆ ಸಾರಿದ್ದಾರೆ. ಏನು ಮಾಡಬೇಕು, ಮಾಡಬಾರದು ಎಂದು ತಿಳಿಸುವ ಮೂಲರೂಪವೇ ದುರ್ಗೆಯಲ್ಲಿ ಐಕ್ಯರೂಪವಾಗಿರುವ ಸರಸ್ವತಿ ಎಂದು ಋಷಿಗಳು ತಿಳಿಸಿದ್ದಾರೆ. ಮಾನವನು ದುರ್ಗೆಯ ಆರಾಧನೆಯಿಂದ ರಾಕ್ಷಸತ್ವವನ್ನು, ದುರಿತಗಳನ್ನು- ಪಾಪಗಳನ್ನು ಕಳೆದುಕೊಳ್ಳುತ್ತಾನೆ ಹಾಗೂ ಸರಸ್ವತಿಯನ್ನು ಪೂಜಿಸುವ ಮೂಲಕ ಜ್ಞಾನ ಸಂಪಾದನೆ ಮಾಡುತ್ತಾನೆ. ಸರಸ್ವತಿಯ ಆರಾಧನೆಯ ಮೂಲ ಉದ್ದೇಶವೇ ಇದಾಗಿರುತ್ತದೆ.

ಮೋಕ್ಷ ಸಂಪಾದಿಸುವ ವ್ರತ
ಸಕಲ ಸೌಕರ್ಯಗಳೂ ಇದ್ದು, ದೇವಿಯನ್ನು ಪೂಜಿಸು ಮನಸ್ಸಿದ್ದರೆ ನವರಾತ್ರಿಯ ಮೊದಲ ದಿನದಂದು ಅಂದರೆ ಪಾಡ್ಯದಂದು ಕಲಶ ಸ್ಥಾಪಿಸಿ, ದೇವಿಯನ್ನು ಆವಾಹಿಸಿ, ಪೂಜಿಸಿ ಸಕಲ ಸೌಭಾಗ್ಯ, ಜ್ಞಾನ ಮೋಕ್ಷವನ್ನು ಸಂಪಾದಿಸುವ ವ್ರತವನ್ನು ಮಾಡುವುದು ಉಚಿತ. ಶಾಸ್ತ್ರದಲ್ಲಿ ತಿಳಿಸಿರುವಂತೆ ಮನುಷ್ಯರು ಜಾತಿ-ಮತ-ಭೇದವನ್ನು ಮರೆತು ದುರ್ಗೆ ಮತ್ತು ಸರಸ್ವತಿಯನ್ನು ಏಕಮುಖದಲ್ಲಿ ಆರಾಧಿಸಬೇಕು.

ಗಣಪತಿಯು ನೈವೇದ್ಯ ಪ್ರಿಯನಾದರೆ ಶಿವನು ಅಭಿಷೇಕಪ್ರಿಯನಾಗಿರುತ್ತಾನೆ. ವಿಷ್ಣು ಅಲಂಕಾರ ಪ್ರಿಯನಾದರೆ, ದೇವಿಯು ನಾಮಪ್ರಿಯೆ. ನಾನಾ ನಾಮಗಳಿಂದ ಅವಳನ್ನು ಕೊಂಡಾಡಿ ಧ್ಯಾನಿಸಿದರೆ ನಮ್ಮ ಹೃದಯ ಸಿಂಹಾಸನದಲ್ಲಿ ಆಕೆ ರಾರಾಜಿಸುವುದರಲ್ಲಿ ಸಂದೇಹವಿಲ್ಲ.

ರತ್ನೈಃ ಕಲ್ಪಿತಮಾನಸಂ ಹಿಮಜಲೈಃ | ಸ್ನಾನಂಚ ದಿವ್ಯಾಂಬರಂ ॥
ನಾನಾ ರತ್ನವಿಭೂಷಣಂ ಮೃಗಮದಾ | ಮೋದಾಂಕಿತಂ ಚಂದನಂ॥
ಜಾಜೀ ಚಂಪಕ ಮಲ್ಲಿಕಾಸುರಬಿಲಂ| ಪುಷ್ಪಂಚ ಧೂಪಂ ತಥಾ॥
ದೀಪಂ ದೇವಿ ದಯಾನಿದೇ॥

ಕೇವಲ ಪ್ರಾರ್ಥನಾ ಶ್ಲೋಕವನ್ನು ಹೇಳಿದರೆ ಸಾಕು ಮನಶುದ್ಧಿಯಾಗಿ, ಮನಸಂಕಲ್ಪ ಈಡೇರುವುದು ಖಂಡಿತ. ಒಂಬತ್ತು ದಿನವೂ ಪೂಜೆ ಮಾಡಲಾಗದವರು ಪಂಚಮಿಯಿಂದ ನವಮಿಯವರಗೆ ಆಗಲೀ, ಸಪ್ತಮಿಯಿಂದ- ನವಮಿಯರೆಗೆ ಪೂಜೆ ಮಾಡಿದರೂ ಯಥಾವತ್ಫ ಲವು ಸಿಗುವುದರಲ್ಲಿ ಸಂದೇಹವಿಲ್ಲ. ಈ ವ್ರತವನ್ನು ಮಾಡಿದರೆ ಮನುಷ್ಯನು ಅಂತ್ಯದಲ್ಲಿ ದುರ್ಗಾಲೋಕ ಸೇರುತ್ತಾರೆಂದು ಸೂತಪುರಾಣಿಕರು ಶೌನಕಾದಿ ಋಷಿಗಳಿಗೆ ಹೇಳಿರುತ್ತಾರೆ.

ವ್ರತದ ಹಿನ್ನೆಲೆ ಕತೆ
ಸುಕೇತ ಎಂಬ ರಾಜನಿಗೆ ಲಾವಣ್ಯದಿಂದ ಕೂಡಿದ ಸುಭೇದಿ ಭಾರ್ಯೆ (ಪತ್ನಿ)ಯಾಗಿದ್ದಳು. ಅವನ ರಾಜ್ಯದಲ್ಲಿ ದುರ್ಭಿಕ್ಷ, ಅಧರ್ಮ, ಅಸತ್ಯ, ಪ್ರಜಾದ್ರೋಹ, ಪ್ರಜೆಗಳ ತೇಜೋವಧೆ, ವೈರ- ದ್ವೇಷ ಯಾವುದೂ ಇರಲಿಲ್ಲ. ಹೀಗಿದ್ದಾಗಲೂ ಜ್ಞಾತಿಗಳ ಪಿತೂರಿಯಿಂದ ಯುದ್ಧದಲ್ಲಿ ರಾಜ ಸುಕೇತನು ಅಧಿಕಾರ ಐಶ್ವರ್ಯ ಕಳೆದುಕೊಂಡನು. ಜೀವ ಭಯದಿಂದ ಪತ್ನಿಯೊಡನೆ ವನವನ್ನು ಪ್ರವೇಶಿಸಿದನು.

ಯುದ್ಧದಲ್ಲಿ ಬಳಲಿ ರೋಗಗ್ರಸ್ತನಾದ ಪತಿಯನ್ನು ಕಂಡು ಸುಭೇದಿಯು ಆತನನ್ನು ಭುಜದ ಮೇಲೆ ಹೊತ್ತು
ಅರಣ್ಯದಲ್ಲಿ ಅಂಗೀರಸ ಮುನಿಯನ್ನು ಭೇಟಿ ಮಾಡುತ್ತಾಳೆ. ತಮ್ಮ ಶೋಕ ಶಮನ ಮಾಡಲು ಮತ್ತು ರಾಜ್ಯವನ್ನು ಮರಳಿ ಪಡೆಯಲು ದಾರಿ ತೋರಿಸುವಂಥೆ ಅಂಗೀರಸ ಮುನಿಗಳಿಗೆ ಬೇಡಿಕೊಳ್ಳುತ್ತಾಳೆ. ಮುನಿಯು ಆಕೆಯ ದುಃಖವನ್ನು ನೀಗಿಸಿ, ಸಕಲ ಸಂಪತ್ತನ್ನು ಮರಳಿ ಕೊಡುವೆನೆಂದು ಭರವಸೆ ನೀಡುತ್ತಾರೆ.

ಅಲ್ಲಿಂದ ಸುಭೇದಿಯನ್ನು ಪಂಚವಟಿ ಕ್ಷೇತ್ರಕ್ಕೆ ಕರೆದುಕೊಂಡು ಬರುತ್ತಾರೆ. ಅಲ್ಲಿ ದೇವಿಯನ್ನು ಪೂಜಿಸಿ ಎಲ್ಲವನ್ನೂ ಪಡೆದುಕೋ ಎಂದು ಸುಭೇದಿಗೆ ಸಾಂತ್ವಾನ ಹೇಳುತ್ತಾರೆ. ಅವರ ಮಾರ್ಗದರ್ಶನದಂತೆಯೇ ರಾಜಪತ್ನಿ ಸುಭೇದಿಯು ಪತಿಯನ್ನು ಭುಜದ ಮೇಲೆ ಹೊತ್ತು ಗೊಂಡಾರಣ್ಯದಲ್ಲಿ ನಡೆದು ಪಂಚವಟಿ ಕ್ಷೇತ್ರದಲ್ಲಿ ಸ್ನಾನಮಾಡಿ ಪತಿಯೊಡನೆ ಮುನಿಪುಂಗವರೊಡನೆ ದುರ್ಗಾ ಎಂಬ ಹೆಸರುಳ್ಳ ಸರಸ್ವತಿಯನ್ನು ಪೂಜಿಸುತ್ತಾಳೆ.

ಮಗನಿಂದ ಮರಳಿ ರಾಜ್ಯ
ಸುಭೇದಿಯು ಪೂಜೆ ಆರಂಭಿಸಿದಂದು ಅಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯ. ಅಂದಿನಿಂದ ಆರಂಭವಾಗಿ ನವಮಿ ಪರ್ಯಾಂತ ಉಪವಾಸವಿದ್ದು, ಹತ್ತನೇ ದಿನ ಪರಮಾನ್ನವನ್ನು ಮಾಡಿ ದೇವರ ಮುಂದೆ ನೈವೇದ್ಯ ಮಾಡುತ್ತಾಳೆ. ಬಳಿಕ ಅಂಗೀರಸ ಮಹರ್ಷಿ ದಂಪತಿಯನ್ನು ಪೂಜಿಸಿ, ಲಭ್ಯವಿದ್ದ ಧಾನ್ಯಗಳನ್ನು ದಕ್ಷಿಣೆಯಿತ್ತು, ಆ ಮುನಿಗಳ ಆಶ್ರಮದಲ್ಲಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಸುಂದರವಾದ ಮಗುವನ್ನು ಪಡೆದು ಆತನಿಗೆ ಸೂರ್ಯಪ್ರತಾಪನೆಂದು ನಾಮಕರಣ ಮಾಡುತ್ತಾಳೆ.

ಸರ್ವಮಾನ್ಯ ದೇವಿ ಸರಸ್ವತಿ
ಸರಸ್ವತಿ ವಾಗ್ದೇವತೆ, ವಿದ್ಯಾಧಿದೇವತೆ, ಜ್ಞಾನದೇವತೆ. “ಶಾರದಾಯೈ ನಮಸ್ತುಭ್ಯಂ ವರದೇಕಾಮರೂಪಿಣೇ| ವಿದ್ಯಾರಂಭೇ ಕರಿಷ್ಟಾಮಿ ಸಿದ್ಧರ್ಬವತು ಮೇ ಸದಾ॥ʼʼ ವಿದ್ಯಾರಂಭ ಮಾಡುವವರು ಶಾರದೆಯನ್ನು ಪ್ರಾರ್ಥಿಸಿ ಪ್ರಾರಂಭಿಸುತ್ತಾರೆ. ನಮ್ಮ ದೇಶದಲ್ಲಿ ಬೌದ್ಧ ಹಾಗೂ ಜೈನರೂ ಕೂಡಾ ಶಾರದೆಯನ್ನು ಪೂಜಿಸಿದ್ದು, ಸೋತ್ರಗಳನ್ನು ರಚಿಸಿದ್ದಾರೆ. ವೀಣಾಪಾಣಿ, ವಿದ್ಯಾದೇವಿ, ನೃತ್ಯ ಸರಸ್ವತಿ ಮುಂತಾದ ಅನೇಕ ಬಗೆಯ ವಿಗ್ರಹಗಳನ್ನು ಕಾಣಬಹುದಾಗಿದೆ. ಶಾರದೆ ಸರ್ವವಂದ್ಯಳು, ಸರ್ವಮಾನ್ಯಳೂ ಆಗಿದ್ದಾಳೆ.

ಪಾಂಡಿತ್ಯದಿಂದಲೂ, ಅಂಗೀರಸ ಮುನಿಗಳ ತಪೋಬಲದಿಂದಲೂ ಬೆಳೆದ ಪುತ್ರನು ಶತ್ರುಗಳ ಮೇಲೆ ಯುದ್ಧ ಘೋಷಿಸಿ ಹೆತ್ತವರ ಜೊತೆಗೆ ಸ್ವರಾಜ್ಯಕ್ಕೆ ಮರಳಿ ಬ್ರಹ್ಮಲೋಕವನ್ನು ಪಡೆಯುತ್ತಾನೆ. ರಾಜಪತ್ನಿಯು ಪ್ರತಿ ಸಂವತ್ಸರದಲ್ಲೂ ದುರ್ಗಾವ್ರತವನ್ನು ಮಾಡಿ ಅಖಂಡ ಸೌಭಾಗ್ಯವತಿಯಾಗಿ, ತನ್ನ ಪತಿ ಸಹಿತವಾಗಿ ದುರ್ಗಾಲೋಕ ಸೇರುತ್ತಾಳೆ. ನವರಾತ್ರಿಯಲ್ಲಿ ವ್ರತ ಮಾಡುವವರು ಈ ಕತೆಯನ್ನು ಕೇಳಬೇಕು.

ಧರ್ಮ ಸಮ್ಮತವಾಗಿ ಶ್ರದ್ಧೆಯಿಂದ ಭಾರತದ ಉದ್ದಗಲಕ್ಕೂ ಈ ವ್ರತ ಮಾಡಿ ದುರ್ಗೆಯನ್ನು ಪೂಜಿಸಬೇಕು. ಆಗ ದೇಶ ದಲ್ಲಿ ಶಾಂತಿ-ನೆಮ್ಮದಿ ನಿರಂತರವಾಗಿರುತ್ತದೆ.

ಇದನ್ನೂ ಓದಿ | Navaratri 2022 | ಭೂತ, ಪ್ರೇತ ಇತ್ಯಾದಿ ಭಯ ದೂರವಾಗಲು ನವರಾತ್ರಿಯ 7ನೇ ದಿನ ಈ ದೇವಿಯನ್ನು ಪೂಜಿಸಿ

Exit mobile version