Site icon Vistara News

Navaratri 2022 | 6ನೇ ದಿನ ದೇವಿಯ ಯಾವ ಸ್ವರೂಪವನ್ನು ಪೂಜಿಸಬೇಕು? ಯಾವ ವರ್ಣದ ವಸ್ತ್ರ ಶ್ರೇಷ್ಠ?

Navaratri 2022

ಶಕ್ತಿದೇವತೆಯ ಆರಾಧನೆಯ ನವರಾತ್ರಿ ಹಬ್ಬದ (Navaratri 2022) ಆರನೇ ದಿನದ ಆಚರಣೆ ಶನಿವಾರ ನಡೆಯಲಿದೆ. ಚಂಡ, ಮುಂಡ, ಶುಂಭ, ನಿಶುಂಭ, ದೂಮ್ರಲೋಚನ, ರಕ್ತಬೀಜಾಸುರ, ಮಧುಕೈಟಭ ಎಂಬ ಅಸುರರನ್ನು ಸಂಹರಿಸಿದ ದೇವಿಯನ್ನು ಆರಾಧಿಸುವ ಸಂದರ್ಭ ನವರಾತ್ರಿ. ಈ ಒಂಬತ್ತು ದಿನಗಳ ಕಾಲ ಕೇವಲ ಪುರಾಣಗಳಿಗೆ, ಪಾರಾಯಣಗಳಿಗೆ ಮೀಸಲಿಲಾಗಿಡದೆ ನಿತ್ಯ ಜೀವನದಲ್ಲಿ ಆಧ್ಯಾತ್ಮಿಕದ ಪ್ರಗತಿಯನ್ನು ಹೊಂದಲು ಪಣತೊಟ್ಟರೆ ನವರಾತ್ರಿಯ ಆಚರಣೆಯು ಅರ್ಥಪೂರ್ಣ.

ಅಸುರೀ ಶಕ್ತಿಯನ್ನು ಸಂಹರಿಸಿದ ದೇವಿಯನ್ನು ಆರಾಧಿಸುತ್ತಲೇ ನಾವು ನಮ್ಮಲ್ಲಿರುವ ಅಸುರೀ ಭಾವಗಳನ್ನು ಹೋಗಲಾಡಿಸಿಕೊಳ್ಳಬೇಕು. ನಮ್ಮಲ್ಲಿ ಸುಪ್ತವಾಗಿರುವ ದೈವೀ ಶಕ್ತಿಯನ್ನು ಉದ್ದೀಪನಗೊಳಿಸಿಕೊಳ್ಳಬೇಕು. ಹೀಗಾಗಿ ನವರಾತ್ರಿಯ ಪ್ರತಿಯೊಂದು ದಿನವೂ ಬಹಳ ಮುಖ್ಯ.

ನವರಾತ್ರಿಯ ಆರನೇ ದಿನ ದುರ್ಗೆಯನ್ನು ಕಾತ್ಯಾಯನೀ ಸ್ವರೂಪದಿಂದ (ಷಷ್ಠಂ ಕಾತ್ಯಾಯಿನೀತಿ ಚ) ಆರಾಧಿಸಲಾಗುತ್ತದೆ. ಕಾತ್ಯಾಯನೀ ರೂಪವು ತ್ರಿಮೂರ್ತಿಗಳ ಶಕ್ತಿಯೊಡನೆ ಮಿಳಿತವಾಗಿ ಹೊರಹೊಮ್ಮಿದ ಪಾರ್ವತಿಯ ಸರ್ವಶಕ್ತ ರೂಪ. ಮಹರ್ಷಿ ಕಾತ್ಯಾಯನರು ಭಗವತಿ ಪರಾಂಬಿಕೆಯ ಉಪಾಸನೆ ಮಾಡುತ್ತಾ ಅನೇಕ ವರ್ಷಗಳವರೆಗೆ ಕಠಿಣ ತಪಸ್ಸನ್ನಾಚರಿಸಿದರು. ಇದೇ ಸಂದರ್ಭದಲ್ಲಿ ಮೈಸೂರಿನ ತ್ರಿಮುಕುಟ ಕ್ಷೇತ್ರದಲ್ಲಿ ನೆಲೆಸಿದ್ದ ಮಹಿಷಾಸುರನ ಉಪಟಳ ಜಾಸ್ತಿಯಾದಾಗ ತ್ರಿಮೂರ್ತಿಗಳು ಸೇರಿ ತಮ್ಮ ತೇಜದ ಅಂಶವನ್ನಿತ್ತು ದೇವಿಯನ್ನು ಸೃಷ್ಟಿಸಿದರು ಹಾಗೂ ಅವಳ ಮೊಟ್ಟಮೊದಲ ಪೂಜೆಯನ್ನು ನೆರೆವೇರಿಸುವಂತೆ ಮಹರ್ಷಿ ಕಾತ್ಯಾಯನರಿಗೆ ಸೂಚಿಸಿದರು. ಹೀಗಾಗಿಯೇ ಈ ದೇವಿಗೆ “ಕಾತ್ಯಾಯನೀʼʼ ಎಂಬ ಹೆಸರು ಬಂದಿದೆ. ಸಿಂಹವಾಹಿನಿಯಾಗಿ ಬಂಗಾರವರ್ಣವನ್ನು ಹೊಂದಿದ ಈಕೆಗೆ ‘ಚಾಮುಂಡೇಶ್ವರಿ’, “ಮಹಿಷಾಸುರ ಮರ್ಧಿನಿʼʼ ಎಂಬ ಹೆಸರೂ ಇದೆ.

ಚಾಮುಂಡೇಶ್ವರಿ ದೇವಿಗೆ ನಾಲ್ಕು ಕೈಗಳಿದ್ದು, ಬಲಗಡೆಯ ಕೈಗಳಲ್ಲಿ ಅಭಯ ಮತ್ತು ವರಮುದ್ರೆಯಿದ್ದರೆ ಎಡಗಡೆಯ ಕೈಗಳಲ್ಲಿ ಖಡ್ಗ ಮತ್ತು ಕಮಲ ಹಿಡಿದಿದ್ದಾಳೆ. ಮಹಿಷಾಸುರನ ಸಂಹರಿಸಿದ ಈಕೆಯನ್ನು ಆರಾಧಿಸುವುದರಿಂದ ರೋಗ, ಶೋಕ, ಭಯ, ಸಂತಾಪ ದೂರವಾಗುವವು ಹಾಗೂ ಪೂರ್ವಜನ್ಮದ ಪಾಪನಾಶವಾಗುವುದು.

ಗ್ರಹ: ಗುರು, ನೈವೇದ್ಯ: ಹುಗ್ಗಿ ವರ್ಣ: ಬೂದು

ನವಶಕ್ತಿ ಅಲಂಕಾರ: ಇಂದ್ರಾಣಿ

ಇಂದ್ರಾಣಿ ಎಂದರೆ ಇಂದ್ರನ ಅರಸಿ. ವಜ್ರಾಯುಧವನ್ನು ಕೈಯಲ್ಲಿ ಹಿಡಿದುಕೊಂಡಿರುವ ದೇವಿ ಐರಾವತದ ಮೇಲೆ ಆಸೀನಳಾಗಿದ್ದಾಳೆ. ಆಕೆ ಸಾವಿರ ಕಣ್ಣುಗಳನ್ನು ಹೊಂದಿರುತ್ತಾಳೆ. ಋಗ್ವೇದದ ಪ್ರಕಾರ ಇಂದ್ರಾಣಿ ಅದೃಷ್ಟದ ದೇವತೆ. ಶಚಿ ಮತ್ತು ಐಂದ್ರಿ ಎಂದೂ ಕರೆಯುತ್ತಾರೆ.

ಆರನೆಯ ದಿನ (ಷಷ್ಠಿ) ಬೂದು ಬಣ್ಣದ ವಸ್ತ್ರಧಾರಣೆ

ಶಬ್ದವೇ ಸೂಚಿಸುವಂತೆ ಬೂದು ಅಥವಾ ಬೂದಿ ಎನ್ನುವುದು ಎಲ್ಲವೂ ನಾಶವಾಗಿ ಕೊನೆಗೆ ಉಳಿದ ಒಂದು ದ್ರವ್ಯ. ಅಥವಾ ಇದುವೇ ಸತ್ಯ ಎಂದು ತೋರಿಸುವುದರ ಸಂಕೇತ. ಪ್ರಕೃತಿಯಲ್ಲಿ ಏನೇ ನಾಶವಾದರೂ ಆ ನಾಶದಿಂದಲೂ ಪುನಃ ಹುಟ್ಟಿ ಬರುವುದು ಈ ಬೂದಿ. ಹೀಗೆ ಜೀವನದಲ್ಲಿ ನಾವು ಎಷ್ಟೇ ಸೋತರು ಕಷ್ಟದಲ್ಲಿ ಬೆಂದರೂ ಬೂದಿಯಂತೆ ಮತ್ತೆ ಹೊಸ ಚೈತನ್ಯದಿಂದ ಹುಟ್ಟಿ ಮೇಲೆ ಬರಬೇಕು ಎಂಬುದರ ಸಂಕೇತ.

ಹೋಮಗಳಿಂದ ಬಂದ ಭಸ್ಮವನ್ನು ರಕ್ಷೆ ಎಂದು ಧಾರಣೆ ಮಾಡುತ್ತಾರೆ. ಎಲ್ಲ ಆಪತ್ತುಗಳಿಂದ ಈ ಹೋಮದ ಬೂದಿ ರಕ್ಷಿಸುತ್ತದೆ. ಹಿರಿಯರಿಗೆ ಪ್ರಾಚೀನ ಬುದ್ಧಿವಂತರಿಗೆ ಆಂಗ್ಲದಲ್ಲಿ ಓಲ್ಡ್ ಗ್ರೇ ಹೆಡ್ಸ್ (Old Gray Heads) ಎಂದು ಕರೆಯುತ್ತಾರೆ. ಈ ಬಣ್ಣವು ಅನುಭವಿಗಳ ಅನುಭವದ ಪ್ರತೀಕವಾಗಿದೆ. ಈ ಬೂದು ಬಣ್ಣ ಕಪ್ಪು ಮತ್ತು ಬಿಳಿಯ ಬಣ್ಣದ ಮಧ್ಯದ ಬಣ್ಣ.

ಇದು ತಟಸ್ಥ ಮತ್ತು ನಿಷ್ಪಕ್ಷಪಾತದ ಮನಸ್ಸನ್ನು ಬಿಂಬಿಸುತ್ತದೆ. ಎರಡು ಬಣ್ಣಗಳ ಮಧ್ಯದಲ್ಲಿ ಸಂಧಾನದಂತಿರುವ ಈ ಬೂದು ಬಣ್ಣದಂತೆ ನಾವು ಇರಬೇಕು ಎಂಬುದರ ಸಂಕೇತ. ನಾವು ಕೂಡ ಸದಾ ಸತ್ಯಪರರಾಗಿ ನಿಷ್ಪಕ್ಷಪಾತಿಗಳಾಗಿ ಜೀವನವನ್ನು ನಡೆಸುವಂತೆ ದೇವಿಯನ್ನು ಪ್ರಾರ್ಥಿಸಿ, ಆರನೇಯನೇಯ ದಿನ ಬೂದು ಬಣ್ಣದ ವಸ್ತ್ರಧಾರಣೆಯನ್ನು ಮಾಡಬೇಕು.

ಯಾವ ಮಂತ್ರದಿಂದ ಪ್ರಾರ್ಥಿಸಬೇಕು?

ಕಾತ್ಯಾಯನೀಯು ಗುರುಗ್ರಹದ ಅಧಿದೇವತೆಯಾಗಿದ್ದು, ಈ ದೇವಿಯನ್ನು ಪೂಜಿಸುವಾಗ ಸಾಧಕನ ಮನಸ್ಸು ಆಜ್ಞಾ ಚಕ್ರದಲ್ಲಿ ನೆಲೆಯಾಗಿರುತ್ತದೆ. ಅವಿವಾಹಿತೆಯರು ಈ ದೇವಿಯನ್ನು ಪೂಜಿಸಿದರೆ ಉತ್ತಮನಾದ ಪತಿಯು ದೊರಕುತ್ತಾನೆ. ದ್ವಾಪರದಲ್ಲಿ ಗೋಪಿಕೆಯರು ಈಕೆಯನ್ನು ಪೂಜಿಸಿ, ಕೃಷ್ಣನನ್ನು ಪಡೆದಿದ್ದರು ಎಂದು ಪುರಾಣ ಕಥೆಗಳು ಹೇಳುತ್ತಿವೆ.

ಕಾತ್ಯಾಯನೀ ದೇವಿಯನ್ನು ಕೆಂಪು, ಹಳದಿ, ಬಿಳಿಯ ಹಾಗೂ ಗುಲಾಬಿ ಹೂವಿನಿಂದ ಪೂಜಿಸಬಹುದು. ತಾಯಿಗೆ ಹುಗ್ಗಿ ಅರ್ಪಿಸಿದರೆ ಒಳ್ಳೆಯದಾಗುತ್ತದೆ. ದೇವಿಯ ಆಶೀರ್ವಾದ ಪಡೆಯಲು ಈ ಕೆಳಗಿನ ಮಂತ್ರದಿಂದ ಪ್ರಾರ್ಥಿಸಿ.

ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ |
ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ ||

(ವರ್ಣದ ಕುರಿತ ಮಾಹಿತಿ: ಮೇಧಾ ಪ್ರಹ್ಲಾದಾಚಾರ್ಯ ಜೋಶಿ)

ಇದನ್ನೂ ಓದಿ | Navaratri 2022 | ಸರಸ್ವತಿ ಪೂಜೆ ಎಂದು? ಪೂಜೆ ಹೇಗೆ ಮಾಡಬೇಕು?

Exit mobile version