Site icon Vistara News

Navaratri 2022 | ಮೂರನೇ ದಿನ ಯಾವ ದೇವಿಯನ್ನು ಆರಾಧಿಸಬೇಕು? ನೀಲಿ ವರ್ಣದ ವಸ್ತ್ರಧಾರಣೆ ಏಕೆ?

Navaratri 2022

ಶಕ್ತಿದೇವತೆಯ ಆರಾಧನೆಯ ನವರಾತ್ರಿ ಹಬ್ಬದ (Navaratri 2022) ಸಂಭ್ರಮ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ದೇವಿಯ ಅಲಂಕಾರ ಕಣ್ಮನ ಸೆಳೆಯುತ್ತಿವೆ. ಧಾರ್ಮಿಕ ಆಚರಣೆಗಳ ಜತೆಗೆ ಸಾಂಸ್ಕೃತಿಕ ಕಾರ್ಯಮಗಳೂ ರಾಜ್ಯಾದ್ಯಂತ ನಡೆಯುತ್ತಿವೆ. ಮನೆ ಮನೆಗಳಲ್ಲಿಯೂ ದೇವಿಯ ಪೂಜೆ- ಪುನಸ್ಕಾರ- ಪಾರಾಯಣ- ಆರಾಧನೆಗಳನ್ನು ನಡೆಸಲಾಗುತ್ತಿದೆ. ನವರಾತ್ರಿಯ ಎರಡು ದಿನಗಳ ಆಚರಣೆ ಮುಗಿದಿದ್ದು, ಮೂರನೆ ದಿನದ ಆಚರಣೆಗಳಿಗೆ ಸಿದ್ಧತೆ ನಡೆದಿದೆ.

ನವದುರ್ಗೆಯರಲ್ಲಿ ಮೂರನೆಯ ದಿನದ ಸ್ವರೂಪ ಚಂದ್ರಘಂಟಾ ಅಥವಾ ಚಂದ್ರಿಕಾದೇವಿ. ಮಹಾಗೌರಿ ವಿವಾಹ ಸಂದರ್ಭದಲ್ಲಿ ಮಹಾದೇವ ಚಂದ್ರೇಶ್ವರನಾದರೆ, ಪಾರ್ವತಿ ಚಂದ್ರಘಂಟಾ ರೂಪ ಧರಿಸುತ್ತಾಳೆ. ಚಂದ್ರೇಶ್ವರನ ದೇವಿ ಚಂದ್ರ ಘಂಟಾ, ವಿರಾಗಿ ಶಿವನನ್ನು ಗೃಹಸ್ಥನನ್ನಾಗಿ ಮಾಡುತ್ತಾಳೆ. ಅವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನೆ. ಇದರಿಂದ ಈಕೆಯೇ ಚಂದ್ರಘಂಟಾದೇವಿ ಯಾಗುತ್ತಾಳೆ. ಈಕೆಯ ಶರೀರದ ಬಣ್ಣವು ಚಿನ್ನದಂತೆ ಹೊಳೆಯುತ್ತಿದೆ.

ದುರ್ಗಾಮಾತೆಯ ವೈವಾಹಿಕ ಅವತಾರವೆಂದು ಈ ರೂಪವನ್ನು ಕರೆಯಲಾಗುತ್ತದೆ. ಕಠಿಣ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುವ ದೇವಿಯು ಶಿವ ಮತ್ತು ಕೈಲಾಸದ ಗಣಗಳೊಂದಿಗೆ ಅರಮನೆ ಪ್ರವೇಶಿಸುತ್ತಾಳೆ. ಅತಿಭಯಂಕರವಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಗೆ ಹೆದರಿಕೆಯಾಗುತ್ತದೆ. ಆಗ ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗುತ್ತಾಳೆ. ಇದನ್ನು ನೋಡಿ ಸುಂದರವಾದ ರೂಪತಾಳಿದ ಶಿವ ಪಾರ್ವತಿಯೊಂದಿಗೆ ವಿವಾಹವಾಗುತ್ತಾನೆ ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ.

ಈಕೆಯನ್ನು ಆರಾಧಿ ಸುವವರ ಮನಸ್ಸು ಮಣಿಪೂರ ಚಕ್ರದಲ್ಲಿ ಸ್ಥಿತವಾಗಿ ಸೌಮ್ಯತೆ, ವಿನಮ್ರತೆಗಳ ವಿಕಾಸವುಂಟಾಗಿ ಪರಾಕ್ರಮಿ ಹಾಗೂ ನಿರ್ಭಯರಾಗುವರು.

ನವಶಕ್ತಿ ಅಲಂಕಾರ: ವೃಷಭವಾಹಿನಿ

ವೃಷಭವಾಹಿನಿ ಎಂದರೆ ದೇವಿ ಮಾಹೇಶ್ವರಿಯಾಗಿ ಕಾಣುವ ಬಗೆ. ಮಾಹೇಶ್ವರಿ ಎಂದರೆ ಆದಿಶಕ್ತಿ. ಮಹೇಶ್ವರನ ಪತ್ನಿ. ಈಕೆಯು ವೃಷಭವಾಹನದ ಮೇಲೆ ಆಸೀನಳಾಗಿದ್ದಾಳೆ. ಶಿರದಲ್ಲಿ ಚಂದ್ರನಿದ್ದಾನೆ. ಕರದಲ್ಲಿ ತ್ರಿಶೂಲವನ್ನು ಇಟ್ಟುಕೊಂಡು ತನ್ನ ಭಕ್ತರನ್ನು ಅನುಗ್ರಹಿಸುತ್ತಾಳೆ. ಮಹೇಶ್ವರಿಯು ಅಸುರರನ್ನು ಸಂಹರಿಸಿದ ದೇವಿ. ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮಹೇಶ್ವರಿಯ ಪ್ರಸಿದ್ಧ ದೇಗುಲಗಳಿವೆ.

ಗ್ರಹ : ಶುಕ್ರ, ನೈವೇದ್ಯ : ಬೆಲ್ಲದ ಪೊಂಗಲ್‌, ವರ್ಣ: ನೀಲಿ

ಮೂರನೆಯ ದಿನ (ತೃತೀಯ) ನೀಲಿ ಬಣ್ಣದ ವಸ್ತ್ರಧಾರಣೆ

ನೀಲಿ ಬಣ್ಣವು ಯಾವುದೇ ಮಿಶ್ರಣವಿಲ್ಲದ ಸ್ವತಂತ್ರ ಶುದ್ಧ ಬಣ್ಣ. ಮಿತಿಯಿಲ್ಲದ ಆಳವನ್ನು ಹೊಂದಿದ ಸಮುದ್ರ ನೀಲಿ ಬಣ್ಣದಿಂದ ಕೂಡಿದೆ. ಸಮುದ್ರಕ್ಕಿರುವ ಗಾಂಭೀರ್ಯವು ಸುಖ ದುಃಖ ಎರಡರಲ್ಲೂ ಮಾನಸಿಕ ಸಮತೋಲನೆಯನ್ನು ಕಾಪಾಡಿಕೊಳ್ಳಬೇಕು ಎಂಬುದರ ಸಾಂಕೇತಿಕ ಅರ್ಥ.

ಪಾಪ ರಹಿತವಾದ ಪರಿಶುದ್ಧವಾದ ವಿಶಾಲ ಆಕಾಶ ನೀಲಿ ಬಣ್ಣದಿಂದ ಕೂಡಿದೆ. ಹೀಗೆಯೇ ನಾವು ಪಾಪದಿಂದ ದೂರವಿದ್ದು ಮಾನಸಿಕ ಸಮತೋಲನೆಯನ್ನು ಕಾಪಾಡಿಕೊಳ್ಳುವಂತೆ ದೇವಿಯಲ್ಲಿ ಪ್ರಾರ್ಥಿಸಿ ಮೂರನೆಯ ದಿನದಂದು ನೀಲಿ ವಸ್ತ್ರಧಾರಣೆಯನ್ನು ಮಾಡಬೇಕು.

ಯಾವ ಮಂತ್ರದಿಂದ ಪ್ರಾರ್ಥಿಸಬೇಕು?

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಿಕಾದೇವಿಯನ್ನು ಆರಾಧಿಸಬೇಕು. ಚಂದ್ರಘಂಟೆಯು ಎಲ್ಲರಿಗೂ ಸುಖ-ಸಂತೋಷವನ್ನು ನೀಡುವ ದೇವಿ. ಈ ದೇವಿರೂಪದ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನುಯನ್ನು ಪಡೆದುಕೊಳ್ಳಬಹುದು. ನೀಲಿ ವರ್ಣದ ಉಡುಗೆ ತೊಟ್ಟು ಈಕೆಯನ್ನು ಭಕ್ತಿಯಿಂದ ಪೂಜಿಸಬೇಕು. ಬೆಲ್ಲದ ಪೊಂಗಲ್‌ ಅನ್ನು ಮತ್ತು ಜೇನು ತುಪ್ಪವನ್ನು ನೈವೇದ್ಯವಾಗಿ ಅರ್ಪಿಸಬೇಕು.

ನಂಬಿದ ಭಕ್ತರನ್ನು ದೇವಿಯು ಎಂದೂ ಕೈ ಬಿಡುವುದಿಲ್ಲ. ನಿರ್ಭಯದಿಂದ ಜೀವನ ಸಾಗಿಸಲು ಚಂದ್ರಿಕಾದೇವಿಯ ಆಶೀರ್ವಾದ ಪಡೆಯಲು ಈ ಕೆಳಗಿನ ಮಂತ್ರದಿಂದ ಪ್ರಾರ್ಥಿಸಿ.

ಪಿಂಡಜಪ್ರವರಾರೂಢಾ ಚಂದಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

(ವರ್ಣದ ಕುರಿತ ಮಾಹಿತಿ: ಮೇಧಾ ಪ್ರಹ್ಲಾದಾಚಾರ್ಯ ಜೋಶಿ)

ಇದನ್ನೂ ಓದಿ | Navaratri 2022 | ನವರಾತ್ರಿಯಲ್ಲಿ ಕನ್ಯಾ ಪೂಜೆ ಹೇಗೆ ಮಾಡಬೇಕು? ಏನು ಫಲ?

Exit mobile version