ಅಲಕಾ ಕೆ, ಮೈಸೂರು
ಪೂಜೆ, ಉಪಾಸನೆ, ಆರಾಧನೆಗಳು ಮಾನವನ ಆದಿ ಸಂಸ್ಕೃತಿಯ ಭಾಗ. ಯಾವುದೋ ಕಾಮಿತಾರ್ಥವಾಗಿ, ಫಲಪ್ರಾಪ್ತಿಗಾಗಿ, ಭೀತಿ ನಿವಾರಣೆಗಾಗಿ, ಸಾಧನೆಯ ಮಾರ್ಗವಾಗಿ- ಹೀಗೆ ಹಲವು ಕಾರಣಗಳಿಗಾಗಿ ಉಪಾಸನೆಗಳನ್ನು ಕೈಗೊಳ್ಳುವುದು ಸಾಮಾನ್ಯ. ಅದರಲ್ಲೂ ಉಪಾಸನೆಗೊಳ್ಳುವ ಪೀಠದ ಶಕ್ತಿ ಹೆಚ್ಚು ಎಂದಷ್ಟಕ್ಕೂ ಆರಾಧನೆಯ ಪ್ರಮಾಣ ಮತ್ತು ಆರಾಧಕರ ಸಂಖ್ಯೆಯೂ ಹೆಚ್ಚು. ಹಾಗೆ ನೋಡಿದರೆ, ಶಕ್ತಿ ಪೀಠಗಳೆಂಬ ಉಲ್ಲೇಖಗಳು ಸಾಮಾನ್ಯವಾಗಿ ದೇವಿಯ ಪೀಠಗಳನ್ನೇ ಉದ್ದೇಶಿಸಿದ್ದಾಗಿರುತ್ತದೆ. ಈ ಪೀಠಗಳ ಶಕ್ತಿಯೋ, ಉಪಾಸಕರ ಭಕ್ತಿಯೋ ಅಂತೂ ಭವದ ಮಾಯೆಗಳನ್ನು ದಾಟಲು ಅಗೋಚರ ಸೇತುವೆಗಳು ಇಲ್ಲಿ ಹೆಣೆದುಕೊಳ್ಳುತ್ತವೆ. ಶಕ್ತಿ ಸ್ವರೂಪಿಣಿಯ ಆರಾಧನೆಯ ಈ ದಿನಗಳಲ್ಲಿ (Navaratri 2023), ಮಾಯೆಗಳೆಂಬ ಆಸುರೀ ಪಾಶಗಳನ್ನು ಕಳೆದುಕೊಳ್ಳುವ ಬಗ್ಗೆ, ಅದರ ಸುತ್ತ ಹರಡಿರುವ ಕುತೂಹಲಗಳ ಬಗೆಗೆ ಒಂದಿಷ್ಟು ಜಿಜ್ಞಾಸೆಯಿದು.
ಯಾವುದನ್ನೇ ಆರಾಧಿಸುವಾಗಲೂ ಅದರಲ್ಲೊಂದು ಪ್ರಸ್ತುತತೆಯನ್ನು ಹುಡುಕುವುದು ಸಹಜ. ನವರಾತ್ರಿಯ ನೆವದಲ್ಲಿ ಒಂಬತ್ತು ದೇವಿಯರ ಸ್ವರೂಪಗಳನ್ನು ಆರಾಧಿಸುವಾಗಲೂ ಇದು ಸತ್ಯ. ಈ ವಿಷಯದಲ್ಲಿ ದೇವ- ದೇವಿ ಎಂಬ ಲಿಂಗಭೇದವೆಂದು ಭಾವಿಸದೆ ಸಹಜ ಕುತೂಹಲದಲ್ಲಿ ನೋಡುವುದಾದರೆ- ದೇವಿಯರ ಆರಾಧಕರಲ್ಲಿ ಹೆಚ್ಚು ಭಿನ್ನತೆ ಕಾಣುವುದಿಲ್ಲ. ಇದನ್ನು ಸ್ಪಷ್ಟವಾಗಿ ಹೇಳಬೇಕೆಂದರೆ, ಹರಿ ಪಾರಮ್ಯವನ್ನು ಒಪ್ಪುವವರು ವೈಷ್ಣವರು, ಶಿವನ ಆರಾಧಕರು ಶೈವರು, ಗಣಪತಿಯ ಉಪಾಸಕರು ಗಾಣಪತ್ಯರು ಎಂದೆಲ್ಲಾ ವಿಭಾಗಗಳನ್ನು ಕಾಣಬಹುದು. ತ್ರಿಮೂತ್ರಿಗಳಲ್ಲೂ ಬ್ರಹ್ಮನ ಆರಾಧಕರು ವಿರಳ; ಉಳಿದಿಬ್ಬರು ದೇವರ ಆರಾಧಕರಲ್ಲಿ ಭಿನ್ನತೆ ಬಹಳ. ಆದರೆ ಶಕ್ತಿಯ ಆರಾಧಕರನ್ನೆಲ್ಲಾ ಶಾಕ್ತರು ಎಂದು ಕರೆಯಬಹುದಾದರೆ- ಅವರೆಲ್ಲಾ ಬಹುತೇಕ ಒಂದೇ. ಅಂದರೆ ಲಕ್ಷ್ಮಿ, ಸರಸ್ವತಿ, ಪಾರ್ವತಿ, ದುರ್ಗೆ ಎಂದು ಬೇರೆಯೇ ವ್ರತ-ಹಬ್ಬಗಳನ್ನು ಆಚರಿಸಿದರೂ, ಇವರದ್ದೆಲ್ಲಾ ಪ್ರತ್ಯೇಕ ಪಂಥವಲ್ಲ. ಅವರೆಲ್ಲಾ ದೇವಿಯ ಭಕ್ತರು ಮಾತ್ರ. ಹೀಗೆ ಸಂಪತ್ತು, ವಿದ್ಯೆ, ಶಕ್ತಿ ಎಂಬಿತ್ಯಾದಿ ಹಲವು ಸ್ವರೂಪಗಳಲ್ಲಿ ಆವಿರ್ಭವಿಸುವ ಶಕ್ತಿಯನ್ನು ಭಿನ್ನಗೊಳಿಸದೆ, ಭಕ್ತಿಯ ಮೂಲಕ ಏಕತ್ರಗೊಳಿಸುವ ಸಾಧ್ಯತೆಯು ಅನನ್ಯ ಎನಿಸುವುದು ಈ ಕಾರಣಕ್ಕೆ.
ಹಲವು ಕೃತಿಗಳಲ್ಲಿ ಉಲ್ಲೇಖ
ದೇವಿಗೆ ಸಂಬಂಧಿಸಿದ ಸಂಗತಿಗಳನ್ನು ಮಾರ್ಕಂಡೇಯ ಪುರಾಣ, ಶ್ರೀದೇವಿ ಭಾಗವತ, ಸ್ಕಾಂದ ಪುರಾಣ, ಕಾಲಿಕಾ ಪುರಾಣ, ವರಾಹ ಪುರಾಣ ಮುಂತಾದ ಕೃತಿಗಳಲ್ಲಿ ಕೊಂಚ ವ್ಯತ್ಯಾಸಗಳೊಂದಿಗೆ ನಿರೂಪಿಸಲಾಗಿದೆ. ಚಂಡಿ, ಚಾಮುಂಡಿ, ಕಾಳಿ, ಕಾತ್ಯಾಯನಿ, ಅಂಬಾ, ದುರ್ಗಾ, ಈಶ್ವರಿ ಮುಂತಾದ ಹಲವು ಹೆಸರುಗಳಿಂದ ಆಕೆಯನ್ನು ಕರೆಯಲಾಗಿದೆ. ಆದರೆ ಈ ಎಲ್ಲಾ ಕೃತಿಗಳ ಪ್ರಕಾರ, ದೇವತೆಗಳ ರಕ್ಷಣೆಗಾಗಿ ಆವಿರ್ಭವಿಸುವ ದೇವಿ, ಶಿಷ್ಟರಿಗೆಲ್ಲ ಕಂಟಕನಾಗಿದ್ದ ಮಹಿಷಾಸುರನನ್ನು ಸಂಹರಿಸುತ್ತಾಳೆ. ಇದಕ್ಕಾಗಿ ಎಲ್ಲಾ ದೇವಾಧಿದೇವತೆಗಳ ತೇಜಸ್ಸು ಏಕತ್ರಗೊಂಡು, ಸರ್ವಶಕ್ತಳಾದ ದೇವಿಯ ಸ್ವರೂಪ ಪಡೆಯುತ್ತದೆ. ಮಹಿಷನನ್ನು ಮಾತ್ರವಲ್ಲದೆ, ಚಂಡ-ಮುಂಡರು, ರಕ್ತಬೀಜ, ಶುಂಭ-ನಿಶುಂಭರನ್ನೂ ವಧಿಸುತ್ತಾಳೆ ಈ ದೇವಿ. ನವರಾತ್ರಿ ಆಚರಣೆಯ ಪ್ರಮುಖ ಹಿನ್ನೆಲೆಯೇ ಈ ಸರ್ವಶಕ್ತಿಯ ಆರಾಧನೆ.
ನವದುರ್ಗೆಯರು
ಒಂಬತ್ತು ದಿನ ಉಪಾಸನೆಗೊಳ್ಳುವ ಒಂಬತ್ತು ದೇವಿಯರದ್ದು ಭಿನ್ನ ಪ್ರವೃತ್ತಿ ಮತ್ತು ಅನುಪಮ ಶಕ್ತಿ. ಮೊದಲ ದಿನ ಶೈಲಪುತ್ರಿ ಎನಿಸಿಕೊಳ್ಳುವ ಈಕೆಯ ಹಿಂದೆ ಅಗ್ನಿಯಲ್ಲಿ ದಹಿಸಿ ಹೋಗುವ ದಾಕ್ಷಾಯಿಣಿಯ ಕಥೆಯಿದೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದನ್ನ ಸಹಿಸದ ದಾಕ್ಷಾಯಿಣಿ, ತಂದೆಯ ವಿರುದ್ಧವೇ ಸಿಡಿದೇಳುವ ಕಥೆಯಿದು. ʻದಕ್ಷನ ಮಗಳು ದಾಕ್ಷಾಯಿಣಿʼ ಎನಿಸಿಕೊಳ್ಳುವುದನ್ನೇ ವಿರೋಧಿಸಿ, ಯೋಗಾಗ್ನಿಯಲ್ಲಿ ದಹಿಸಿಕೊಂಡು, ಶೈಲಪುತ್ರಿಯಾಗಿ ಮತ್ತೆ ಹುಟ್ಟಿಬಂದು ಶಿವನನ್ನು ಸೇರಿದಳೆನ್ನುತ್ತವೆ ಪುರಾಣಗಳು. ಎರಡನೇ ದಿನ ಆಕೆ ಬ್ರಹ್ಮಚಾರಿಣಿ. ಪಾರ್ವತಿಯಾಗಿ ಹುಟ್ಟಿದ ಮರುಜನ್ಮದಲ್ಲಿ ಶಿವನನ್ನೇ ಸೇರಬೇಕೆಂಬ ಏಕೋದ್ದೇಶದಿಂದ ಕಠಿಣ ತಪಸ್ಸನ್ನಾಚರಿಸಿ, ಗುರಿ ಸಾಧಿಸಿದ ಛಲದ ಸಂಕೇತವಾಗಿ ಆಕೆ ಅಂದು ಪೂಜಿಸಲ್ಪಡುತ್ತಾಳೆ. ಮೂರನೇ ದಿನ ಚಂದ್ರಘಂಟಾ ಎನಿಸಿಕೊಳ್ಳುವ ಆಕೆ, ಶಿವನಲ್ಲಿದ್ದ ಘೋರ ಸ್ವರೂಪವನ್ನು ಶಮನ ಮಾಡಿ, ಸಾತ್ವಿಕ ಸ್ವರೂಪವನ್ನು ಉದ್ದೀಪಿಸಿದ ಕಾರಣಕ್ಕೆ ಮಹತ್ವ ಪಡೆಯುತ್ತಾಳೆ. ನಾಲ್ಕನೇ ದಿನ ಕೂಷ್ಮಾಂಡವೆನಿಸಿಕೊಳ್ಳುವ ಆಕೆಯಿಂದ, ಉಮೆ, ರಮೆ, ವಾಣಿಯರ ಉದ್ಭವ ಎನ್ನಲಾಗುತ್ತದೆ.
ಶಕ್ತಿ ಸ್ವರೂಪಗಳ ಉಗಮ
ಶಕ್ತಿ ಸ್ವರೂಪಗಳ ಉಗಮ-ಸಂಗಮಗಳು ಹೀಗೆ ಒಂದೇ ಎನಿಸಿಕೊಂಡ ಕಾರಣದಿಂದಲೇ ಶಕ್ತಿಯ ಆರಾಧಕರಲ್ಲಿ ಭಿನ್ನತೆ ಇಲ್ಲದೆ ಇರಬಹುದು. ಐದನೇ ದಿನ ಸ್ಕಂದಮಾತಾ ಎಂಬ ಹೆಸರಿನಿಂದ ಮಾತೃಸ್ವರೂಪಿಣಿಯಾಗಿ ಪೂಜೆಗೊಳ್ಳುತ್ತಾಳೆ. ಆರನೇ ದಿನ ಆಕೆ ಕಾತ್ಯಾಯನಿ. ಋಷಿ ಕಾತ್ಯಾಯನನ ಸಂತಾನದ ರೂಪದಲ್ಲಿ ದೈವೀಶಕ್ತಿಯು ಭೂಮಿಗೆ ಅವತರಿಸುವ ಹಿನ್ನೆಲೆ ಈ ಕಥೆಗಿದೆ. ಆಸುರೀ ಮಾಯೆಗಳ ನಿರ್ಮೂಲನೆಗೆ ದೈವೀಶಕ್ತಿಗೆ ಇರಬಹುದಾದ ಮಾನುಷ ಪ್ರವೃತ್ತಿಯನ್ನು ಇದು ಪ್ರತಿನಿಧಿಸುತ್ತದೆನ್ನಬಹುದು. ಏಳನೇ ದಿನಕ್ಕೆ ಕಾಳರಾತ್ರಿಯ ಅವತಾರಿಣಿ. ಚಂಡ-ಮುಂಡರನ್ನು ವಧಿಸಿ ಈಗಾಗಲೇ ಚಾಮುಂಡಿ ಎನಿಸಿಕೊಂಡಿದ್ದಾಳೆ.
ಘೋರ ಅವತಾರ
ದೇವಿಯ ಅವತಾರಗಳಲ್ಲೇ ಕಾಳರಾತ್ರಿಯನ್ನು ಘೋರ ಎನ್ನಬಹುದು. ಈಕೆ ರಕ್ತಬೀಜನ ಸಂಹಾರಿಣಿ. ಸಪ್ತಮಿಯ ದಿನವೇ ವಿದ್ಯಾಧಿದೇವತೆ ಸರಸ್ವತಿಯ ಪೂಜೆಯೂ ನಡೆಯುತ್ತದೆ. ಕಾಳರಾತ್ರಿಯ ಅವತಾರವನ್ನು ತೊರೆದು ತನ್ನ ಮೊದಲಿನ ಸ್ವರೂಪಕ್ಕೆ ಮರಳುವ ಆಕೆ ಕರೆಸಿಕೊಳ್ಳುವುದು ಮಹಾಗೌರಿ ಎಂದು- ಇದು ಎಂಟನೇ ದಿನದಂದು. ಇದೇ ದಿನ ನಿಶುಂಭನ ಸಂಹಾರವೂ ನಡೆಯುತ್ತದೆ. ಮಹಾನವಮಿಯಂದು ಶುಂಭನ ವಧೆ. ಸಿದ್ಧಿಧಾತ್ರಿಯೆಂದು ಕರೆಸಿಕೊಳ್ಳುವ ಆಕೆ ಸಿದ್ಧಿಪ್ರದಾಯಿನಿ ಎಂದೇ ಪೂಜಿತಳಾಗುತ್ತಾಳೆ. ವಿಜಯದಶಮಿಯಂದು ಮಹಿಷಾಸುರ ಮರ್ದಿನಿಯ ಉಪಾಸನೆ. ಹೀಗೆ ಸ್ವಾಭಿಮಾನ, ಛಲ, ಸಹನೆ, ಸಾತ್ವಿಕತೆ, ಶಕ್ತಿ, ಮಮತೆ, ಕ್ರೋಧ, ವಿದ್ಯೆ, ಸಿದ್ಧಿಯಂಥ ಹಲವು ಗುಣಗಳ ಅಪೂರ್ವ ಎರಕದಂತೆ ಕಾಣುತ್ತಾಳೆ ಚಾಮುಂಡೇಶ್ವರಿ.
ಜನಪದರಲ್ಲಿ ದೇವಿ
ಇವೆಲ್ಲಾ ಶಿಷ್ಟ ಪುರಾಣಗಳ ಮಾತಾಯಿತು. ಜನಪದರಲ್ಲಿ ದೇವರುಗಳ ಲೋಕ ಮನುಷ್ಯರಿಗಿಂತ ತೀರಾ ಭಿನ್ನವೇನಲ್ಲ. ಉಜ್ಜಯಿನಿಯ ಬಿಜ್ಜಳ ರಾಯನಿಗೆ ಏಳು ಹೆಣ್ಣು ಮಕ್ಕಳು. ಅವರಲ್ಲಿ ಹಿರಿಯವಳು ಪಿರಿಯಾಪಟ್ಟಣದ ಉರಿಮಸಣಿ; ಕಿರಿಯವಳು ಚಾಮುಂಡಿ. ಏನೇನೋ ಕಾರಣಗಳಿಗಾಗಿ ಎಲ್ಲರೂ ಜಗಳವಾಡಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ನೆಲೆಗೊಳ್ಳುತ್ತಾರೆ. ಕಿರಿಯವಳು ತನ್ನ ನೆಲೆಗಾಗಿ ಜಾಗ ಹುಡುಕುತ್ತಿದ್ದಾಗ ಮಹಿಷಮಂಡಲ ಆಕೆಗೆ ಗೋಚರಿಸುತ್ತದೆ. ಅಲ್ಲಿನ ದೊರೆ ಮಹಿಷನು ಬ್ರಹ್ಮನ ವರದಿಂದ ಬೀಗುತ್ತಿದ್ದವ. ಅವನನ್ನು ಎದುರಿಸುವುದಕ್ಕೆ, ತನ್ನ ಬೆವರಿನಿಂದ ಉತ್ತನಳ್ಳಿ ಮಾರಮ್ಮನನ್ನು ಸೃಷ್ಟಿಸಿಕೊಂಡು, ಆಕೆಯ ನೆರವಿನಿಂದ ಮಹಿಷಾಸುರನನ್ನು ಚಾಮುಂಡಿ ಸೋಲಿಸುತ್ತಾಳೆ. ಆ ಮಹಿಷಮಂಡಲವೇ ಮುಂದೆ ಮಹಿಷಪುರಿ, ಮಹಿಶೂರಾಗಿ ನಂತರ ಮೈಸೂರಾಗಿದೆ ಎಂಬುದು ಪ್ರತೀತಿ.
ಮಲೆಯ ಮಾದೇಶ್ವರ ಕಾವ್ಯ
ಮಲೆಯ ಮಾದೇಶ್ವರ ಕಾವ್ಯದಲ್ಲಿ, ಶ್ರವಣ ದೊರೆಯ ಸಂಹಾರಕ್ಕಾಗಿ ಭೂಮಿಗೆ ಬಂದ ಶಿವನೊಂದಿಗೆ ಪಾರ್ವತಿಯೂ ಬಂದಿರುತ್ತಾಳೆ. ಆಗ ಕಂಟಕಪ್ರಾಯನಾದ ಮಹಿಷನನ್ನು ಘೋರರೂಪ ತಾಳಿ ಆಕೆ ಮರ್ದಿಸುತ್ತಾಳೆ. ಆಕೆಯ ಕರಾಳರೂಪವನ್ನು ನೋಡಲಾರದ ಶಿವ, ಆಕೆಯನ್ನು ಬಿಟ್ಟು ಮುಂದೆ ಹೋಗುವಾಗ ಪಾರ್ವತಿಯೂ ಆತನೊಂದಿಗೆ ಬರುತ್ತಾಳೆ. ಆದರೆ ತನ್ನದೇ ಅಂಶವಾದ ನಂಜನಗೂಡಿನ ನಂಜುಂಡನನ್ನು ಸೇರಬೇಕೆಂದು ಹೇಳಿ ಶಿವ, ಚಾಮುಂಡಿಯನ್ನು ಕಳಿಸಿಬಿಡುತ್ತಾನೆ. ನಂಜುಂಡ-ಚಾಮುಂಡಿಯರ ವರ್ಣರಂಜಿತ ಪ್ರಸಂಗವನ್ನು ದೇವರಗುಡ್ಡರು, ನೀಲಗಾರರು, ತಂಬೂರಿಯವರೆಲ್ಲಾ ಇಂದಿಗೂ ಹಾಡುತ್ತಾರೆ. ಇನ್ನು ಐತಿಹಾಸಿಕವಾಗಿ ಮೈಸೂರಿನ ಅರಸರ ಪರವಾಗಿ, ಚಾಮುಂಡಿ ಎಂಬ ವೀರವನಿತೆ ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಬಗ್ಗೆ ಕೆಲವು ಲಾವಣಿಗಳು ಹೇಳುತ್ತವೆ. ಪಿರಿಯಾಪಟ್ಟಣದ ಲಾವಣಿ, ಮಾಗಡಿ ಕೆಂಪೇಗೌಡನ ಲಾವಣಿಗಳಲ್ಲಿ, ಚಾಮುಂಡಿಯೆಂಬಾಕೆ ನಂಜುಂಡನೊಡನೆ ಯುದ್ಧದಲ್ಲಿ ಪಾಲ್ಗೊಂಡ ವರ್ಣನೆಗಳು ಬರುತ್ತವೆ.
ಎಷ್ಟೊಂದು ಹೆಸರುಗಳು!
ಪಾರ್ವತಿ, ದುರ್ಗೆ, ಚಾಮುಂಡಿ, ಗೌರಿ, ಲಲಿತೆ ಮುಂತಾಗಿ ಹೆಸರು ಯಾವುದೇ ಇರಲಿ; ಸ್ವಾಭಿಮಾನಿ, ಶಕ್ತಿಸ್ವರೂಪಿಣಿ, ಮಾತೃಹೃದಯಿ, ಸಹನಾಮಯಿ, ಆದಿಮಾಯೆ- ಹೀಗೆ ವಿಶೇಷಣಗಳು ಎಂಥದ್ದೇ ಇರಲಿ; ಅರಿಷಡ್‌ವರ್ಗಗಳನ್ನು ಗೆಲ್ಲುವ ಆತ್ಮ, ದುಷ್ಟ ಶಿಕ್ಷಣ-ಶಿಷ್ಟ ರಕ್ಷಣ, ಕೆಡುಕಿನ ಮೇಲೆ ಒಳಿತಿನ ಜಯ ಇತ್ಯಾದಿ ಕಥಾಕಥಿತ ಉದ್ದೇಶಗಳು ಏನೇ ಇರಲಿ- ಬದುಕಿನ ಒಳಿತು, ಉನ್ನತಿಗಾಗಿ ಹಲವು ದೇವಿಗಳೆಂಬ ಖಂಡ ಶಕ್ತಿಗಳೆಲ್ಲ ಒಂದಾಗಿ, ಒಂದು ಅಖಂಡ ಶಕ್ತಿಯಾಗಿ ರೂಪುಗೊಳ್ಳುವ ಮಹತ್ವದ ಅರಿವು ನಮಗಾಗಲಿ. ಮನದೊಳಗೆ ಅವಿತಿರುವ ಅಸುರನನ್ನು ಮೆಟ್ಟಿ, ನಮ್ಮ ಕೆಡುಕಿನ ಮೇಲೆ ನಾವೇ ಒಳಿತು ಸಿದ್ಧಿಸಿಕೊಳ್ಳುವ ಮೂಲಕ, ವಿಜಯದಶಮಿ ಕೇವಲ ಸಾಂಕೇತಿಕವಾಗಿ ಉಳಿಯದಿರಲಿ. ದಸರೆಯ ಶುಭ ಹಾರೈಕೆಗಳು.
ಇದನ್ನೂ ಓದಿ: Navaratri Colour Trend | ನವರಾತ್ರಿಯ 7ನೇ ದಿನ ಕಿತ್ತಳೆ ವರ್ಣದ ಟ್ರೆಡಿಷನಲ್ ವೇರ್‌ನಲ್ಲಿ ಕಂಗೊಳಿಸಿ