ಮೈಸೂರು: ದೇಶದೆಲ್ಲೆಡೆ ನವರಾತ್ರಿ ಹಬ್ಬದ ಸಡಗರ ಕಂಡುಬರುತ್ತದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ನವರಾತ್ರಿಯ ವೈಭವ ತುಸು ಹೆಚ್ಚು. ದೇಶದ ಉಳಿದೆಲ್ಲಾ ಕಡೆಗಳಲ್ಲಿರುವ ಒಂಬತ್ತು ರಾತ್ರಿಗಳ ಅಂದರೆ, ನವರಾತ್ರಿಯ ಉತ್ಸವಕ್ಕಿಂತ ಕೊಂಚ ಭಿನ್ನವಾಗಿ, ಹತ್ತನೇ ದಿನದ ವಿಜಯದಶಮಿಯನ್ನು ಅದ್ಧೂರಿಯಾಗಿ ಆಚರಿಸುವ ಪರಂಪರೆ ಮೈಸೂರಿನದ್ದು. ಒಂಬತ್ತು ದಿನಗಳ ಆಚರಣೆಯ ತುದಿಗೆ ಜಂಬೂಸವಾರಿಯೊಂದಿಗೆ ದಸರೆಗೆ ರಾಜಗಾಂಭೀರ್ಯದಿಂದ ತೆರೆ ಬೀಳುತ್ತದೆ. ಇದಕ್ಕೂ ಮುನ್ನ ಮೈಸೂರು ದಸರೆಯ ಪರಂಪರೆ ಮತ್ತು ವೈಭವದ ಮೇಲೊಂದು ಪಕ್ಷಿನೋಟ.
ಧಾರ್ಮಿಕ ಉದ್ದೇಶಗಳಿಗಾಗಿ ಹಲವು ಶತಮಾನಗಳ ಪೂರ್ವದಲ್ಲಿ ಆರಂಭಗೊಂಡ ನವರಾತ್ರಿ ಕಲೆ, ಸಾಂಸ್ಕೃತಿಕ ಉತ್ಸವವಾಗಿ ಪರಿವರ್ತನೆಗೊಂಡಿದ್ದು ಈಗ ಇತಿಹಾಸ. ಕೇವಲ ರಾಜಮನೆತನಗಳ ಆಡಂಬರದ ಪ್ರದರ್ಶನವಾಗಿ ಉಳಿಯದೆ, ಮನೆಮನಗಳ ಸಂಸ್ಕೃತಿಯಾಗಿ, ವಿವಿಧ ಕಲೆಗಳ ವೇದಿಕೆಯಾಗಿ, ಕುಸ್ತಿಯೇ ಮತ್ತಿತರ ಬಲಾಬಲಗಳ ಅಖಾಡವಾಗಿ ಈ ಉತ್ಸವ ಪರಿವರ್ತನೆಗೊಂಡಿದ್ದರಿಂದಲೇ ಇಂದಿಗೂ ನಾಡಹಬ್ಬವೆಂಬ ಪಟ್ಟವನ್ನು ಉಳಿಸಿಕೊಂಡಿದೆ. ದಸರೆಯೆಂಬುದು ಒಂದು ಜಿಲ್ಲೆಯಲ್ಲಿ ನಡೆಯುವ ಸ್ಥಳೀಯ ಆಚರಣೆಗೆ ಸೀಮಿತವಾಗದೆ, ದೂರದೂರದ ಆಸಕ್ತರನ್ನು ಸೆಳೆಯುವಷ್ಟು ಬೆಳೆದಿದೆ.
ಮೈಸೂರು ದಸರೆಯ ಇತಿಹಾಸ
ವಿಜಯನಗರದ ಅರಸರ ಕಾಲದಲ್ಲೇ ಈ ಉತ್ಸವ ಆರಂಭವಾದದ್ದನ್ನು ಚರಿತ್ರೆಯ ಪುಟಗಳು ಹೇಳುತ್ತವೆ. ಈಗ ಮೈಸೂರಿನ ಭಾಗಗಳೂ ಅಂದಿನ ವಿಜಯನಗರದ ಆಡಳಿತದಡಿಯಲ್ಲಿ ಇತ್ತು. ಕ್ರಿ.ಶ. 1136ರಲ್ಲಿ ಆರಂಭವಾದ ನವರಾತ್ರಿಯ ಉತ್ಸವ 1565ರ ಹೊತ್ತಿಗೆ ಸಾಂಸ್ಕೃತಿಕವಾಗಿ ಸಾಕಷ್ಟು ಸಂಪದ್ಭರಿತವಾದ ಸ್ಥಿತಿಗೆ ತಲುಪಿತ್ತು. ಹಂಪೆಯಲ್ಲಿ ಎತ್ತರಕ್ಕೆ ನಿಂತಿರುವ ಮಹಾನವಮಿಯ ದಿಬ್ಬವೂ ಇದಕ್ಕೆ ಸಾಕ್ಷಿ ಹೇಳಿತು. ಆದರೆ ಅರಸೊತ್ತಿಗೆಯ ಪತನಾನಂತರ ತಾತ್ಕಾಲಿಕವಾಗಿ ಈ ಸಂಪ್ರದಾಯಕ್ಕೆ ತೆರೆ ಬಿತ್ತು.
ಒಡೆಯರ್ ಕಾಲ
ವಿಜಯನಗರದ ಪತನಾನಂತರ ಮೈಸೂರು ರಾಜ್ಯ ಸ್ವತಂತ್ರವಾಯಿತು. ಆಗ ರಾಜ ಒಡೆಯರ್ ಕಾಲದಲ್ಲಿ ಅಂದರೆ 1610ರಂದು ನವರಾತ್ರಿಯ ಉತ್ಸವಗಳು ಪುನರಾರಂಭಗೊಂಡವು. ರಾಜಕೀಯವಾಗಿ ಅರಸೊತ್ತಿಗೆ ಭಿನ್ನ ರೂಪವನ್ನು ತಾಳಿದ್ದರೂ, ನವರಾತ್ರಿಯ ಸಂಭ್ರಮ, ಸಡಗರಕ್ಕೆ ಬರ ಇರಲಿಲ್ಲ. ನಂತರದ ಶತಮಾನಗಳಲ್ಲಿ ಒಡೆಯರ ಆಳ್ವಿಕೆ ತಪ್ಪಿ, ಮೈಸೂರಿನಲ್ಲಿ ಹೈದರ್-ಟಿಪ್ಪು ಆಡಳಿತ ಇದ್ದಾಗಲೂ ದಸರೆಯ ರಂಗು ಕಡಿಮೆ ಆಗಿರಲಿಲ್ಲ. ಆಳರಸರಿಗೆ ಬೇಕಾದಂತೆ ಕೆಲವು ಬದಲಾವಣೆಗಳು ಉತ್ಸವದಲ್ಲಿ ಬಂದರೂ, ಈ ನೆಲದ ಸಾಂಸ್ಕೃತಿಕ ಸೊಗಡು ಗಾಢವಾಗಿಯೇ ಇತ್ತು. ಟಿಪ್ಪುವಿನ ಮರಣಾನಂತರ, ಒಡೆಯರ್ ಪರಂಪರೆ ಮುಂದುವರಿದ ಮೇಲೆ ದಸರೆಯ ವೈಭೋಗಕ್ಕೆ ಇನ್ನಷ್ಟು ಗರಿಗಳು ಮೂಡಿದವು.
ದರ್ಬಾರ್
ಮುಮ್ಮಡಿ ಕೃಷ್ಟರಾಜ ಒಡೆಯರ್ ಕಾಲದಲ್ಲಿ ದಸರೆಗಾಗಿ ವಿಶೇಷ ದರ್ಬಾರ್ ನಡೆಸುವ ಪದ್ಧತಿ ಚಾಲ್ತಿಗೆ ಬಂತೆಂದು ಹೇಳಲಾಗುತ್ತದೆ. ನಾಲ್ವಡಿ ಕೃಷ್ಟರಾಜ ಒಡೆಯರ್ ಕಾಲದಲ್ಲಿ ಅಲಂಕೃತ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಅರಸರು ಮೆರವಣಿಗೆಯಲ್ಲಿ ಸಾಗುವ ಕ್ರಮಕ್ಕೆ ಮೊದಲಾಯಿತು. ಮೆರವಣಿಗೆಯ ವೈಭವ ನೋಡುವುದಕ್ಕೆ ದೂರದೂರುಗಳಿಂದ ಜನ ಕಾಲ್ನಡಿಗೆಯಲ್ಲಾದರೂ ಬರುತ್ತಿದ್ದ ಬಗ್ಗೆ ಉಲ್ಲೇಖಗಳಿವೆ. ಅಂತೂ ಜನಮಾನಸದಲ್ಲಿ ದಸರೆಯ ಮಹೋತ್ಸವವೆಂದರೆ ವೈಭೋಗದ ಪರಾಕಾಷ್ಠೆ ಎಂಬ ಭಾವ ಮೂಡಿದ್ದು ಸುಳ್ಳಲ್ಲ.
ಮೈಸೂರಿನಲ್ಲಿ ವಿಜಯದಶಮಿಯ ಆಚರಣೆಗೆ ಸಾಕಷ್ಟು ದೊಡ್ಡ ಪೌರಾಣಿಕ ಹಿನ್ನೆಲೆಯೇ ಇದೆ. ಸತ್ಪುರುಷರ ನೆನಪಿಗಾಗಿ, ಅವರ ಹೆಸರಿನ ಊರು, ಕೇರಿ, ಕೋಟೆ-ಕೊತ್ತಲಗಳಿರುವುದು ಸಾಮಾನ್ಯ. ಆದರೆ ಮೈಸೂರಿಗೆ ಈ ಹೆಸರು ಬಂದಿದ್ದು ಮಹಿಷನೆಂಬ ರಕ್ಕಸನ ಊರಾಗಿತ್ತು ಎಂಬ ಕಾರಣಕ್ಕೆ. ಊರಿಗೆಲ್ಲ ಉಪದ್ರಕಾರಿಯಾಗಿದ್ದ ಆ ದುಷ್ಟ ಶಕ್ತಿಯನ್ನು ನಿರ್ಮೂಲಗೊಳಿಸಿ, ಊರು ಕಾಯುವುದಕ್ಕೆಂದು ಬೆಟ್ಟದ ಮೇಲೆ ನೆಲೆಸಿದ ಚಾಮುಂಡಿ ದೇವಿಯ ವಿಜಯೋತ್ಸವದ ಪ್ರತೀಕವಾಗಿ ವಿಜಯದಶಮಿಯ ಪರಂಪರೆ ಮೈಸೂರಿನಲ್ಲಿ ಆರಂಭವಾಗಿದ್ದು. ದೇಶದ ಉಳಿದೆಡೆಗೆ, ಗೋಗ್ರಹಣದಲ್ಲಿ ಕೌರವರ ಮೇಲೆ ಪಾಂಡವರು ಗಳಿಸಿದ ಜಯ ಮತ್ತು ರಾವಣನ ಮೇಲೆ ರಾಮ ಸಾಧಿಸಿದ ವಿಜಯದ ದ್ಯೋತಕವಾಗಿಯೂ ವಿಜಯದಶಮಿ ಆಚರಣೆಯಲ್ಲಿದೆ. ಕಾರಣ ಏನೇ ಇದ್ದರೂ ಉದ್ದೇಶ ಒಂದೇ- ಕೆಡುಕಿನ ಮೇಲೆ ಒಳಿತಿನ ಜಯ.
ಬದಲಾವಣೆಯ ಕಾಲಘಟ್ಟದಲ್ಲಿ…
ಸ್ವಾತಂತ್ರ್ಯಾನಂತರ ದಸರೆಯ ಆಚರಣೆ ಮತ್ತು ಮೆರವಣಿಗೆಯ ಸ್ವರೂಪ ಬದಲಾಯಿತು. ಚಿನ್ನದ ಅಂಬಾರಿಯಲ್ಲಿ ನಾಡಪ್ರಭುವಿನ ಬದಲಿಗೆ ನಾಡದೇವತೆ ಚಾಮುಂಡಿಯ ಮೆರವಣಿಗೆ ಪ್ರಾರಂಭವಾಯಿತು. ಅರಸೊತ್ತಿಗೆ ಖಾಸಗಿ ದರ್ಬಾರ್ ಈಗ ಸಹ ಚಾಲ್ತಿಯಲ್ಲಿದ್ದರೂ, ಅದಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅರಮನೆಯ ಸಂಪ್ರದಾಯ ಪಾಲನೆಗಾಗಿ ಅದೊಂದು ನಡೆಯುವುದು ಬಿಟ್ಟರೆ ಇದೀಗ ಸಂಪೂರ್ಣ ಸರ್ಕಾರಿ ಪ್ರಾಯೋಜಿತ ದಸರಾ. ಸಂಗೀತ, ನೃತ್ಯ, ನಾಟಕ, ಸಿನೆಮಾ, ನಾನಾ ಜಾನಪದ ಪ್ರಕಾರಗಳ ಪ್ರದರ್ಶನ, ರೈತರ ಆಸಕ್ತಿಗೆ, ಯುವಕರ ಮೋಜು-ಮಸ್ತಿಗೆ ಅಗತ್ಯವಾದ ಕಾರ್ಯಕ್ರಮಗಳು, ಹೂವುಗಳ ಅಲಂಕಾರ, ದೀಪಾಲಂಕಾರ, ಆಹಾರ, ವಿಹಾರ, ಖರೀದಿ… ಹೀಗೆ ಎಲ್ಲರಿಗೂ, ಎಲ್ಲದಕ್ಕೂ ಒದಗಿಬರುವಂಥ ಸ್ವರೂಪದಲ್ಲಿ ಇಂದು ದಸರಾ ಆಚರಣೆಗೊಳ್ಳುತ್ತಿದೆ.
ದೀಪಾಲಂಕಾರ
ಅರಮನೆ ಮತ್ತು ಅದರ ಆವರಣವನ್ನು ಲಕ್ಷಾಂತರ ದೀಪಗಳಿಂದ ಅಲಂಕರಿಸುವ ಕ್ರಮ ಇದೆ. ಸಂಜೆ 7 ಗಂಟೆಗೆ ಸರಿಯಾಗಿ ಝಗ್ಗನೆ ಬೆಳಗುವ ದೀಪಗಳನ್ನು ನೋಡಲೆಂದೇ ಸಾವಿರಾರು ಜನ ಆರಮನೆಯ ಆವರಣದಲ್ಲಿ ಜಮಾಯಿಸುತ್ತಿದ್ದರು. ಇವೆಲ್ಲವುಗಳ ಜತೆಗೆ ಇಡೀ ಊರನ್ನೇ ದೀಪಗಳಿಂದ ಅಲಂಕರಿಸುವ ಪರಿಪಾಠ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಹಿಂದೆಲ್ಲ ಹಾದಿ-ಬೀದಿಗಳನ್ನು ತಳಿರು-ತೋರಣ, ರಂಗವಲ್ಲಿಗಳಿಂದ ಅಲಂಕರಿಸುತ್ತಿದ್ದಂತೆ ಈಗ ದೀಪಗಳ ಸರಮಾಲೆಗಳು ರಾತ್ರಿಯನ್ನೂ ಬೆಳಕಾಗಿಸುತ್ತವೆ. ಇಡೀ ಊರಿಗೆ ಹಬ್ಬದ ಮೆರುಗು ನೀಡುತ್ತವೆ.
ವಿಜಯದಶಮಿ
ಹೌದು, ನವರಾತ್ರಿಗಳಿಗೆ ಮೈಸೂರಿನಲ್ಲಿ ದೇವಿಯ ಆರಾಧನೆ, ಉತ್ಸವ ಕೊನೆಯಾಗುವುದಿಲ್ಲ. ದಶಮಿಯಂದು ಮಹಿಷಮರ್ದಿನಿಯ ವಿಜಯಯಾತ್ರೆ ನಡೆಯಲೇಬೇಕು. ನಾಡದೇವತೆ ಚಾಮುಂಡಿಯ ವಿಗ್ರಹವನ್ನು ಚಿನ್ನದ ಅಂಬಾರಿಯಲ್ಲಿರಿಸಿಕೊಂಡು, ಆನೆಗಳ ದಂಡು, ಕಲಾವಿದರ ಉತ್ಸಾಹ ಸೇರಿದ ಸರ್ವಾಂಗ ಸುಂದರ ಮೆರವಣಿಗೆ ಹೊರಡಬೇಕು. ಇವೆಲ್ಲಕ್ಕೂ ಕಲಶವಿಟ್ಟಂತೆ, ಸಂಜೆ ನಡೆಯುವ ಪಂಜಿನ ಕವಾಯಿತಿನೊಂದಿಗೆ ಹತ್ತು ದಿನಗಳ ದಸರೆಗೆ ಮೈಸೂರಿನಲ್ಲಿ ತೆರೆ ಬೀಳುತ್ತದೆ.
ಇದನ್ನೂ ಓದಿ: Navaratri: ದಸರಾ ರಜೆಯಲ್ಲಿ ಇಲ್ಲೆಲ್ಲ ಸುತ್ತಾಡಿ; ಕೆಎಸ್‌ಆರ್‌ಟಿಸಿ ಟೂರ್ ಪ್ಯಾಕೇಜ್ ಘೋಷಣೆ