Site icon Vistara News

Navavidha Bhakti : ಮುಕ್ತಿ ನೀಡುವ ಭಕ್ತಿ

navavidha bhakti morning spiritual thoughts in kannada

navavidha bhakti

ಭಗವಂತನ ದರ್ಶನಕ್ಕೆ ಯಾವ ಭಕ್ತಿ ಮುಖ್ಯ? | Vistara Omkara | Navavidha Bhakti In Kannada

ಡಾ. ಸಿ. ಆರ್. ರಾಮಸ್ವಾಮಿ
ಅತ್ಯಮೂಲ್ಯವಾದ ಮಾನವಜನ್ಮವನ್ನು ಪಡೆದಮೇಲೆ ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕಲ್ಲವೇ? ಅದರ ಸಾರ್ಥಕ್ಯವು ಭಗವಂತನ ಸಾಕ್ಷಾತ್ಕಾರ-ಮೋಕ್ಷಪ್ರಾಪ್ತಿಯಿಂದಲೇ. ಮೋಕ್ಷವೆಂದರೆ ಜನನ-ಮರಣ ಸಂಸರಣದಿಂದ ಮುಕ್ತನಾಗಿ ಭಗವಂತನನ್ನು ಸೇರುವುದು. ಇದನ್ನು ಸಾಧಿಸಲು ಪ್ರಧಾನವಾಗಿ ಮೂರುಮಾರ್ಗಗಳನ್ನು ಜ್ಞಾನಿಗಳು ತಿಳಿಸಿರುತ್ತಾರೆ; ಜ್ಞಾನ-ಕರ್ಮ -ಭಕ್ತಿಮಾರ್ಗಗಳು. ಇವುಗಳಲ್ಲಿ ಜ್ಞಾನ-ಕರ್ಮಮಾರ್ಗಗಳಿಗಿಂತಲೂ ಭಕ್ತಿಮಾರ್ಗವನ್ನು ಕೊಂಡಾಡಲು ವಿಶೇಷವಾದ ಕಾರಣಗಳುಂಟು.

ಭಕ್ತಿಮಾರ್ಗದ ವೈಶಿಷ್ಟ್ಯ

ಭಕ್ತಿಯಲ್ಲಿ ವೈಶಿಷ್ಟ್ಯವೇನೆಂದರೆ ಇದಕ್ಕೆ ವಯಸ್ಸು, ವಿದ್ಯೆ-ರೂಪ-ಪೌರುಷ-ಆಚರಣೆ- ಸಂಪತ್ತು -ಜಾತಿ ಇವು ಯಾವುದೂ ಅಗತ್ಯಯೋಗ್ಯತೆಯೆಂದು ಎಣಿಸಿಕೊಳ್ಳುವುದಿಲ್ಲ. ಅದಕ್ಕೆ ಅನೇಕ ಉದಾಹರಣೆಗಳನ್ನು ಗಮನಿಸಬಹುದು. ಧ್ರುವ ವಯಸ್ಸಿನಲ್ಲಿ ಸಣ್ಣವ. ಆದರೂ ಪರಮಭಕ್ತನಾಗಿದ್ದ. ಪ್ರಹ್ಲಾದನೂ ಹಾಗೆಯೇ. ವಯಸ್ಸು ಅಳತೆಗೋಲಾ ಗುವುದಿಲ್ಲ. ರೂಪಕ್ಕೆ ಕುಬ್ಜೆಯು ಉದಾಹರಣೆ. ಕೃಷ್ಣನು ಮಥುರೆಗೆ ಬಂದಾಗ ದಾರಿಯಲ್ಲಿ ಕುಬ್ಜೆ(ದೇಹ ಸೊಟ್ಟಕ್ಕೆ ಬಗ್ಗಿರುವವಳು)ಯನ್ನು ನೋಡುತ್ತಾನೆ. ರೂಪ ಇಲ್ಲದಿದ್ದರೂಕೂಡ ಎಂತಹ ಭಕ್ತೆಯಾಗಿದ್ದಳು! ಹಾಗೆಯೇ, ಗೋಪಿಕೆಯರಿಗೆ ಯಾವ ಪಾಠವೂ ಆಗಿರಲಿಲ್ಲ, ಗೃಹಿಣಿಯರುಗಳಷ್ಟೇ. ಆದರೆ ಭಕ್ತಿಯಲ್ಲಿ ಅಳವಾಗಿ ಮುಳುಗಿದ್ದವರು.

ನಾರದಭಕ್ತಿಸೂತ್ರದಲ್ಲಿ ಭಕ್ತನಾಗಲು ವಿದ್ಯಾವಂತರಾಗಬೇಕಿಲ್ಲವೆನ್ನುವುದಕ್ಕೆ ಉತ್ತಮಉದಾಹರಣೆಯಾಗಿ ಗೋಪಿಕೆಯರನ್ನೇ ಸ್ಮರಿಸಿಕೊಳ್ಳುತ್ತಾರೆ. ಇನ್ನು ಜಾತಿಯ ವಿಷಯ ತೆಗೆದುಕೊಂಡರೆ ದಾಸೀಪುತ್ರನಾದ ವಿದುರನನ್ನು ಉದಾಹರಣೆಯಾಗಿ ಕೊಡುತ್ತಾರೆ. ಶೂದ್ರನಾಗಿದ್ದರೂ ಕೂಡ ಪರಮಭಕ್ತ. ಮಹಾಭಾರತದಲ್ಲಿ ವಿದುರನ ಸ್ಥಾನವೇ ವಿಶೇಷವಾದದ್ದು. ವಿದುರನನ್ನು ‘ಮಹಾತ್ಮವಿದುರ’ನೆಂದೇ ಕರೆಯುವುದು. ಕೃಷ್ಣನನ್ನು ಪೂರ್ಣವಾಗಿ ಅವತಾರಪುರುಷ ಎಂದು ತಿಳಿದುಕೊಂಡ ಕೆಲವೇ ಮಂದಿಯಲ್ಲಿ ಅವನೂ ಒಬ್ಬ. ಪರಮಭಾಗವತನಾಗಿದ್ದ.

ಪಶು-ಪ್ರಾಣಿಗಳಿಗೂ ಭಕ್ತಿ

ಭಕ್ತಿಮಾರ್ಗವು ಮನುಷ್ಯರಿಗೆ ಮಾತ್ರವೇ ಅಲ್ಲ, ಪ್ರಾಣಿಗಳು ಕೂಡ ಭಕ್ತಿಯ ಮೂಲಕ ಉದ್ಧಾರವಾದ ಕಥೆಗಳುಂಟು. ಉದಾಹರಣೆಗೆ ಗಜೇಂದ್ರ. ಅವನು ಎಂತಹ ಭಕ್ತನಾಗಿದ್ದನೆಂದರೆ `ಆದಿಮೂಲಾ’ ಎಂದು ಕರೆದಕೂಡಲೇ ಸಾಕ್ಷಾತ್ ಮಹಾವಿಷ್ಣುವೇ ವೈಕುಂಠದಿಂದ ಇಳಿದು ಬರಬೇಕೆಂದು ತೀರ್ಮಾನಮಾಡಿ ತಕ್ಷಣವೇ ಗರುಡಾರೂಢನಾಗುತ್ತಾನೆ. ಗರುಡನಿಗೆ “ಬೇಗಹೋಗು” ಎಂದು ಆಜ್ಞೆಮಾಡುತ್ತಾನಂತೆ ಭಗವಂತ! ಪೂಜ್ಯರಂಗಪ್ರಿಯಸ್ವಾಮಿಗಳು ತಮಾಷೆಯಾಗಿ ಹೇಳುತ್ತಿದ್ದರು: ‘ವೇಗದಲ್ಲಿ ಗರುಡನನ್ನು ಮೀರಿಸುವವರು ಯಾರೂ ಇಲ್ಲ, ಅಂತಹವನನ್ನೂ ಇನ್ನೂವೇಗವಾಗಿ ಹೋಗುವಂತೆ ಹೇಳಿದರೆ ಅದೆಷ್ಟು ಅವಮಾನ ಅವನಿಗೆ!” ಭಗವಂತನೇ ಅಷ್ಟು ತ್ವರೆಮಾಡಿಸಬೇಕಾದರೆ ಗಜೇಂದ್ರ ಎಂತಹ ಉನ್ನತಭಕ್ತನಾಗಿರಬೇಕು? ಗಜೇಂದ್ರ ಪ್ರಾಣಿಯಲ್ಲವೇ?

ಗರುಡ-ಪಕ್ಷಿರಾಜ, ಅವನೂ ಪರಮಭಕ್ತ, ಪರಮಭಾಗವತನೇ ಹನುಮಂತನಂತೆ. ಭಗವತ್ಭಕ್ತನಾದ ಜಟಾಯುವೂ ಪಕ್ಷಿಯೇ. ಭಕ್ತಿಯ ವೈಶಿಷ್ಟ್ಯವನ್ನು ಪುರಾಣಗಳು ಇನ್ನೂಅನೇಕ ಉದಾಹರಣೆಗಳ ಮೂಲಕ ವಿವರಿಸುತ್ತವೆ.

ಭಕ್ತಿಯು ಸುಲಭೋಪಾಯ

ಮತ್ತೊಂದು ವೈಶಿಷ್ಟ್ಯವುಂಟು. ಕರ್ಮ-ಜ್ಞಾನಮಾರ್ಗಗಳಿಗೆ ಹೋಲಿಸಿದರೆ ಇದು ಸುಲಭೋಪಾಯ. ಜ್ಞಾನಯೋಗದಲ್ಲಿ ಸಾಮಾನ್ಯರ ಹಿಡಿತಕ್ಕೆ ಸಿಗದ ನಿರ್ಗುಣ-ನಿರಾಕಾರವಸ್ತು ಒಂದನ್ನು ಉಪಾಸನೆಮಾಡುವುದು ಎಷ್ಟು ಕಷ್ಟಕರ. ಆದರೆ ಭಕ್ತಿಮಾರ್ಗದಲ್ಲಿ ಒಂದು ಆಕಾರ-ಅವಲಂಬನವಿರುತ್ತದೆ; ಕೇವಲ ಅವಲಂಬನವಲ್ಲ-ಶಭಾವಲಂಬನವಿರುತ್ತದೆ. ಅವಲಂಬನವೆಂದರೆ ಭಗವಂತನ ರೂಪ. ಚಿತ್ರರೂಪದಲ್ಲೋ-ವಿಗ್ರಹ ರೂಪದಲ್ಲೋ ಪೂಜಿಸಿದಾಗ ಮನಸ್ಸಿಗೆ ಒಂದುರೀತಿಯ ಆಕರ್ಷಣೆಯುಂಟಾಗುತ್ತದೆ. ಆಕಾರವಿದ್ದಲ್ಲಿ ಮನಸ್ಸು ತಾನಾಗಿಯೇ ಲಯವಾಗುವುದಕ್ಕೆ ಅವಕಾಶವಿದೆ. ರಾಮನಮೂರ್ತಿ- ಕೃಷ್ಣನಮೂರ್ತಿ-ಶಿವನಮೂರ್ತಿ -ಕಾರ್ತಿಕೇಯನ ಮೂರ್ತಿ ಎಲ್ಲವೂ ಸುಂದರಮೂರ್ತಿಗಳು. ಅವನ್ನು ನೋಡುತ್ತ-ನೋಡುತ್ತ ಮನಸ್ಸು ತಾನಾಗಿಯೇ ಲಯವಾಗುತ್ತದೆ. ಆದ್ದರಿಂದ ಭಕ್ತಿಮಾರ್ಗವು ಅತ್ಯಂತ ಸುಲಭವಾದದ್ದು.

ಇಂತಹ ಭಕ್ತಿಯ ಬಗೆಗಿನ ಕೆಲವಂಶಗಳನ್ನು ನೋಡೋಣ;

ಭಕ್ತಿ ಎಂದರೇನು?

ಭಕ್ತಿ ಎಂದರೆ ಪ್ರೇಮಸ್ವರೂಪವಾದದ್ದು. ಲೋಕದಲ್ಲಿ ಒಬ್ಬ ವ್ಯಕ್ತಿಯಬಗ್ಗೆ ಉತ್ಕಟವಾದ ಪ್ರೀತಿಯುಂಟಾದಾಗ ಅದನ್ನು ಪ್ರೇಮ ಎನ್ನುತ್ತೇವೆ. ಅದು ಪರಸ್ಪರವಾಗಿ ಇರುವಂತಹುದ್ದು. ಮುಂದೆ ಕಾಮವಾಗುತ್ತದೆ. ಆ ಪ್ರೀತಿ-ಪ್ರೇಮ ಭಾವವನ್ನು ಭಗವಂತನಲ್ಲಿಟ್ಟರೆ ಅದಕ್ಕೆ ಭಕ್ತಿಯೆಂದು ಹೆಸರು. ನಾರದಭಕ್ತಿಸೂತ್ರದಲ್ಲಿ ಭಕ್ತಿಯನ್ನು ಪರಮಪ್ರೇಮಸ್ವರೂಪ ಎಂಬುದಾಗಿ ಹೇಳಿದ್ದಾರೆ. ಭಗವತ್ಭಾವದಲ್ಲೇ ಸಂಪೂರ್ಣವಾಗಿ ಮುಳುಗಿರುವುದು.

ಲೌಕಿಕವಾದ ಪ್ರೀತಿ-ಪ್ರೇಮಗಳು ಪರಸ್ಪರವಿರುವ ಹಾಗೆಯೇ, ಭಗವಂತನಲ್ಲಿ ಪ್ರೀತಿಯಿಡುವವರಲ್ಲಿ ಭಗವಂತನೂಕೂಡ ಪ್ರೀತಿಯನ್ನು ತೋರಿಸುತ್ತಾನೆ. ಭಗವದ್ಗೀತೆಯಲ್ಲಿ ಭಕ್ತನಿಗಿರಬೇಕಾದ ಗುಣಗಳನ್ನು ಒಂದೊಂದಾಗಿ ಹೇಳಿ ಇಂತಹವನು ನನಗೆ ಅತ್ಯಂತ ಪ್ರಿಯನಾದವನು, ಪ್ರೀತಿಗೆಪಾತ್ರನಾದವನು “ಮದ್ಭಕ್ತಃ ಸ ಮೇ ಪ್ರಿಯ:” ಎಂಬುದನ್ನೇ ಪಲ್ಲವಿಯಾಗಿ ಶ್ರೀಕೃಷ್ಣನು ಹೇಳುತ್ತಾನೆ. ಇದು ಭಕ್ತ-ಭಗವಂತರ ಪರಸ್ಪರಪ್ರೀತಿಯೇ.

ಭಕ್ತಿಯ ಲಕ್ಷಣವನ್ನು ಉದಾಹರಣೆಗಳ ಮೂಲಕ ಹೀಗೆ ವರ್ಣಿಸುತ್ತಾರೆ ಶ್ರೀ ಶಂಕರಭಗವತ್ಪಾದರು:

ಅಂಕೋಲಂ ನಿಜಬೀಜಸಂತತಿರಯಸ್ಕಾಂತೋಪಲಂ ಸೂಚಿಕಾ
ಸಾಧ್ವೀ ನೈಜವಿಭುಂ ಲತಾಕ್ಷಿತಿರುಹಂ ಸಿಂಧುಃ ಸರಿದ್ವಲ್ಲಭಮ್….

ಅಂಕೋಲ ಬೀಜವು ಅದೇ ಮರವನ್ನು, ಸೂಜಿಯು ಅಯಸ್ಕಾಂತವನ್ನೂ, ಪತಿವ್ರತಾಸ್ತ್ರೀ ತನ್ನವಲ್ಲಭನನ್ನೂ, ಬಳ್ಳಿಯು ಮರವನ್ನೂ, ನದಿಯು ಸಾಗರವನ್ನು ಆಶ್ರಯಿಸುವಂತೆಯೇ ಮನಸ್ಸು ಪಶುಪತಿಯ ಪಾದಾರವಿಂದಗಳಲ್ಲಿ ನೆಲೆನಿಲ್ಲುವುದೇ ಭಕ್ತಿಯೆಂದು ಆಚಾರ್ಯರು ತಿಳಿಸುತ್ತಾರೆ. ಇದರ ಸ್ವಾರಸ್ಯವೆಂದರೆ ಉತ್ತರೋತ್ತರ ಅಂಟು (ಪ್ರೀತಿ) ವೃದ್ಧಿಯಾಗುತ್ತಾ ಕೊನೆಯಲ್ಲಿ ನದಿಯು ಸಾಗರದಲ್ಲಿ ವಿಲೀನವಾಗುವುದನ್ನು ಎತ್ತಿ ತೋರಿಸಿರುವರು.

ಭಕ್ತಿ ಎಂಬ ಪದವೇ ಸೇರ್ವೆಯನ್ನೂ ವಿಭಕ್ತಿಯೆಂಬುದು ಬೇರ್ಪಡುವಿಕೆಯನ್ನೂ ತಿಳಿಸುತ್ತದೆ ಎಂದೂ ಭಕ್ತಿಯು ಜೀವ-ದೇವರ ಸೇರ್ವೆಯನ್ನು ಸೂಚಿಸುತ್ತದೆ ಎಂಬುದಾಗಿಯೂ ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ವಿವರಿಸುತ್ತಿದ್ದರು.

ಭಕ್ತಿಗೆ/ಆಕರ್ಷಣೆಗೆ ದ್ವಾರಗಳು

ಒಬ್ಬ ವ್ಯಕ್ತಿಯಲ್ಲಿ ಅನೇಕ ಕಾರಣಗಳಿಂದ ಅನೇಕ ವಿಷಯಗಳ ಮೂಲಕ ಪ್ರೀತಿಯು ಉಂಟಾಗಬಹುದು. ವ್ಯಕ್ತಿಯ ರೂಪವೇ ಒಂದು ರೀತಿಯ ಆಕರ್ಷಣೆ ಉಂಟುಮಾಡಬಹುದು. ಆಗ ತಾನಾಗಿಯೇ ಮನಸ್ಸು ಲಯವಾಗಲು ಪ್ರಾರಂಭವಾಗುತ್ತದೆ. ವ್ಯಕ್ತಿಗಳಲ್ಲಿ ಲೌಕಿಕವಾದ ಈ ಭಾವವು ನಮ್ಮ ಪ್ರಕೃತಿಯನ್ನು-ಇಂದ್ರಿಯಗಳನ್ನು ಕೆರಳಿಸುತ್ತದೆ. ಆದರೆ ಭಗವಂತನಲ್ಲಿನ ಪ್ರೀತಿ-ಆಕರ್ಷಣೆಗಳು ಇಂದ್ರಿಯಗಳನ್ನು ಕೆರಳಿಸುವುದಿಲ್ಲ; ಲಯವನ್ನು-ಏಕಾಗ್ರತೆಯನ್ನು ಮೂಡಿಸುತ್ತದೆ.

ಭಗವಂತನ ರೂಪವನ್ನೇ ಧ್ಯಾನಿಸಿ ಆಕರ್ಷಿತರಾಗುವುದು ಒಂದು ವಿಧಾನವಾದರೆ, ಅವನ ಅನೇಕ ಗುಣಗಳಲ್ಲಿ ಯಾವುದಾದರೂ ಒಂದಾಗಲಿ, ಅನೇಕವಾಗಲಿ ನಮಗೆ ಇಷ್ಟವಾಗಬಹುದು. ರಾಮನ ವೀರ್ಯ-ಶೌರ್ಯ-ಪರಾಕ್ರಮ ಯಾವುದಾದರೊಂದು ಪ್ರೀತಿಯನ್ನುಂಟುಮಾಡಬಹುದು. ಅವನ ನಗುಮುಖ, ಪ್ರೀತಿಯಿಂದ ಮಾತನಾಡುತ್ತಿದ್ದ ಸನ್ನಿವೇಶದ ವಿವರಗಳು ನಮ್ಮ ಮನಸ್ಸನ್ನು ಸೆಳೆಯಬಹುದು.

ಇದರಿಂದ ಭಕ್ತಿ-ಅನುರಕ್ತಿ ಉಂಟಾಗುತ್ತದೆ. ಇದಲ್ಲದೇ ಪುರಾಣಗಳಲ್ಲಿ ಬೇರೆ ಬೇರೆ ದೇವತೆಗಳ ಪರಾಕ್ರಮ, ಮಹಿಮೆ ಮುಂತಾದವುಗಳ ಬಗ್ಗೆ ವಿವರಣೆಗಳನ್ನೋದಿ ಅವರಲ್ಲಿ ಆಕರ್ಷಣೆ ಉಂಟಾಗಬಹುದು. ನಾವು ಮೋಕ್ಷಕಾಮಿಗಳಾಗಿದ್ದರೆ ನಮಗೂ ಮೋಕ್ಷಬೇಕೆನ್ನಿಸುತ್ತದೆ. ಮೋಕ್ಷಾರ್ಥಿಯಾಗಿ ನಾವು ಅವರನ್ನು ಪೂಜೆ ಮಾಡಿದಾಗ ನಮಗೂ ಆ ದೇವತೆಗೂ ಒಂದು ಸಂಬಂಧ-ಪ್ರೀತಿ ಉಂಟಾಗುತ್ತದೆ. ಕೆಲವು ಪ್ರಕೃತಿಗಳಿಗೆ ಕೆಲವು ದೇವತೆಗಳು ತುಂಬಾ ಇಷ್ಟವಾಗುತ್ತಾರೆ. ಆಗ ಆ ದೇವತೆಯನ್ನು ಅವಲಂಬಿಸಿ ಭಕ್ತಿಯಲ್ಲಿ ಮುಂದೆ ಸಾಗಬಹುದು.(ಮುಂದುವರಿಯುವುದು)

ಲೇಖಕರ ಪರಿಚಯ : ಡಾ. ರಾಮಸ್ವಾಮಿಯವರು ಪರಮಾಣು ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನಂತರ ಸುಮಾರು 30 ವರ್ಷಗಳ ಕಾಲ ಭೌತಶಾಸ್ತ್ರದ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಭೌತಶಾಸ್ತ್ರದಂತೆಯೇ, ಅವರಿಗೆ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಶಾಸ್ತ್ರದಲ್ಲಿಯೂ ಆಸಕ್ತಿ. ಮಹಾಯೋಗಿಗಳಾದ ಶ್ರೀ ಶ್ರೀರಂಗಮಹಾಗುರುಗಳ ಮಾರ್ಗದರ್ಶನದಲ್ಲಿ ಆಧ್ಯಾತ್ಮಮಾರ್ಗದಲ್ಲಿ ತೊಡಗಿಕೊಂಡಿದ್ದಾರೆ. ಶ್ರೀ ಶ್ರೀರಂಗಪ್ರಿಯಸ್ವಾಮಿಯವರು ಅವರ ಗುರುಗಳಾದ ಶ್ರೀ ಶ್ರೀ ರಂಗಮಹಾ ಗುರುಗಳೊಂದಿಗೆ ನಡೆಸಿದ ಸಂಭಾಷಣೆಯ ಆಂಗ್ಲ ತರ್ಜಮೆಯ ಲೇಖನಗಳು, ‘ಆರ್ಯಸಂಕೃತಿ’ ಕನ್ನಡ ಮಾಸಿಕದಲ್ಲಿ ಕಳೆದ 12 ವರ್ಷಗಳಿಂದಲೂ ಪ್ರಕಟವಾಗಿವೆ. ಅಷ್ಟಾಂಗ ಯೋಗ ವಿಜ್ಞಾನಮಂದಿರದಿಂದ ಕನ್ನಡದಲ್ಲಿ ಹೊರಹೊಮ್ಮಿದ ‘ಶ್ರೀರಂಗ ವಚನಾಮೃತ’ ಎಂಬ ಪುಸ್ತಕಗಳು ‘Nectarine Nuggets of Shriranga Mahaguru’ ಎಂಬ ಹೆಸರಿನಲ್ಲಿ ಪುಸ್ತಕ ರೂಪವಾಗಿ ಪ್ರಕಾಶಗೊಂಡಿವೆ. ಇವಲ್ಲದೆ, ಅಷ್ಟಾಂಗ ಯೋಗ ವಿಜ್ಞಾನಮಂದಿರ ಪ್ರಕಾಶ ಪಡಿಸಿರುವ ಅನೇಕ ಕನ್ನಡ ಹಾಗೂ ಆಂಗ್ಲ ಪುಸ್ತಕ- ಲೇಖನಗಳ ಸಂಪಾದಕರಾಗಿದ್ದಾರೆ. ಶ್ರೀಮಂದಿರದ ಯೌಟ್ಯೂಬ್ ಚಾನಲ್‌ನಲ್ಲಿ ಹಾಗೂ ವಿಸ್ತಾರ ಓಂ ಕಾರ ಚಾನಲ್ ನಲ್ಲಿ ಇವರ ಪ್ರವಚನವು ಪ್ರಸಾರವಾಗುತ್ತಿದೆ. ಪ್ರಸ್ತುತ ಅಷ್ಟಾಂಗ ಯೋಗ ವಿಜ್ಞಾನಮಂದಿರದ ಬೆಂಗಳೂರು ಶಾಖೆಯ ಕಾರ್ಯದರ್ಶಿಯಾಗಿದ್ದಾರೆ.

ಇದನ್ನೂ ಓದಿ: Prerane : ಪ್ರಾಮಾಣಿಕತೆಯೇ ಅಧ್ಯಾತ್ಮದ ಮೂಲ

Exit mobile version