Site icon Vistara News

Navavidha Bhakti : ಪರಿಪೂರ್ಣ ಸಮರ್ಪಣೆಯಲ್ಲಿ ಭಗವಂತನೇ ರಕ್ಷಕ!

atma nivedanam radhe shyam

#image_title

atma nivedanam meera and shyam

ಡಾ. ಸಿ. ಆರ್. ರಾಮಸ್ವಾಮಿ
ಭಕ್ತಿಯಲ್ಲಿ ಕೊನೆಯ ಘಟ್ಟ ಆತ್ಮನಿವೇದನ. ಅದು ಪರಮಭಕ್ತಿ. ಎಲ್ಲ ಹಂತಗಳನ್ನೂ ದಾಟಿ ತನ್ನ ಸರ್ವಸ್ವವನ್ನೂ-ಮನಸ್ಸು-ಬುದ್ಧಿ-ಹೃದಯ-ಆತ್ಮವನ್ನೇ ಭಗವಂತನಿಗೆ ಸಮರ್ಪಣೆ ಮಾಡಿಕೊಳ್ಳುವಂತಹ ಸ್ಥಿತಿ. ಆ ಸ್ಥಿತಿಯನ್ನು ಸಾಧಿಸಿದ ಕೆಲವು ಭಕ್ತಶ್ರೇಷ್ಠರ ಕಥೆಗಳನ್ನು ಕೇಳಿದಾಗ ಹೀಗೂ ಉಂಟೇ ಎಂದೆನಿಸಿದರೆ ಆಶ್ಚರ್ಯವೇನಿಲ್ಲ. ಇದಕ್ಕೆ ಉದಾಹರಣೆಯಾದವರ ಕೆಲವರ ಪರಿಚಯವನ್ನು ಕಳೆದ ವಾರ ಮಾಡಿಕೊಂಡಿದ್ದೆವು. ಇನ್ನೂ ಕೆಲವರ ಪರಿಚಯ ಇಲ್ಲಿದೆ.

ಆತ್ಮನಿವೇದನಕ್ಕೆ ಪ್ರಸಿದ್ಧ ಉದಾಹರಣೆ ರಾಧೆ

ಆತ್ಮನಿವೇದನಕ್ಕೆ ಮತ್ತೊಂದು ಪ್ರಸಿದ್ಧ ಉದಾಹರಣೆಯೆಂದರೆ ಗೋಪಿಕೆಯರಲ್ಲಿ ಅಗ್ರಗಣ್ಯಳಾದ ರಾಧೆ. ಗರ್ಗಸಂಹಿತೆಯು ಅವಳ ಚರಿತ್ರೆ-ವಿಲಾಸಗಳನ್ನು ವಿಸ್ತಾರವಾಗಿ ಹೇಳುತ್ತದೆ. ಭಗವತ್ಕಾಮವೆಂಬ ಭಕ್ತಿಭಾವದಲ್ಲಿ ತನ್ಮಯಳಾಗಿ ಮುಳುಗಿದವಳು ರಾಧೆ. ತನ್ನನ್ನು ಸಂಪೂರ್ಣವಾಗಿ ಕೃಷ್ಣನಿಗರ್ಪಿಸಿಕೊಂಡು ಅವನ ಬಾಲ್ಯ-ಪೌಗಂಡ-ಕೌಮಾರಾವಸ್ಥೆಗಳಲ್ಲಿ ಜೊತೆಯಾಗಿದ್ದು ರಮಿಸಿದವಳು. ಮುಂದೆ ದೀರ್ಘಕಾಲ ಕೃಷ್ಣನು ರಾಜಕಾರಣದಿಂದಾಗಿ ಅವಳನ್ನು ಭೇಟಿಯಾಗಲಿಲ್ಲ. ರಾಧೆಗೆ ಬಾಹ್ಯವಾಗಿ ಅಗಲಿಕೆಯಿದ್ದರೂ ಮಾನಸಿಕಮಿಲನವಿದ್ದೇ ಇದ್ದಿತೆಂಬುದಕ್ಕೆ ನಿದರ್ಶನಗಳು ದೊರೆಯುತ್ತವೆ.

ಅಷ್ಟಮಹಿಷಿಯರಾದ ರುಕ್ಮಿಣೀ-ಸತ್ಯಭಾಮಾ ಮುಂತಾದವರೂ ಆತ್ಮನಿವೇದನಕ್ಕೆ ಉದಾಹರಣೆಯಾಗುತ್ತಾರೆ. ಕೃಷ್ಣನು ರಾಧೆಯಬಗ್ಗೆ ಹೇಳುತ್ತಿದ್ದುದನ್ನು ಕೇಳಿ ಅವರೆಲ್ಲರೂ ಸಂತೋಷ-ಆಶ್ಚರ್ಯಚಕಿತರಾಗಿ ರಾಧೆಯನ್ನು ನೋಡಲು ಹಂಬಲಿಸುತ್ತಿದ್ದರು. ಜೊತೆಗೆ ‘ನಾವೇನು ಕಡಿಮೆಯೇ?’ ಎನ್ನುವ ಭಾವವೂ ಅವರ ಮನಸ್ಸಿನಲ್ಲಿ ಸುಳಿಯದಿರಲಿಲ್ಲ!

ವರ್ಷಗಳುರುಳಿದಮೇಲೆ ಒಮ್ಮೆ ಕೃಷ್ಣನು ಸೂರ್ಯಗ್ರಹಣಕಾಲದಲ್ಲಿ ಗೋಪಿಕೆಯರನ್ನು ಸಂದರ್ಶಿಸುವ ಸನ್ನಿವೇಶವೊದಗಿತು. ಕೃಷ್ಣನು ಎಲ್ಲರಿಗೂ ರಾಧೆಯ ಪರಿಚಯ ಮಾಡಿಕೊಡುತ್ತಾನೆ. ಮಹಿಷಿಯರು ರಾಧೆಯಮೂಲಕ ಅವಳ ಪೂರ್ವವೃತ್ತಾಂತಗಳನ್ನು ಕೇಳಿದಾಗ ಕೃಷ್ಣ ಹೇಳಿರುವುದೆಲ್ಲವೂ ಅಕ್ಷರಶಃ ಸತ್ಯವೆಂಬುದನ್ನು ಅವರ ಮನಸ್ಸು ಒಪ್ಪಿಕೊಳ್ಳುತ್ತದೆ. ಮಾತುಮುಗಿದು ಬಿಡಾರಕ್ಕೆ ಹಿಂದಿರುಗಿ ಕೃಷ್ಣನು ನಿದ್ದೆಯಿಲ್ಲದಿರುವುದಕ್ಕೆ ಕಾರಣವೇನೆಂದಾಗ ಬೃಂದಾವನದ ರಾಧೆಗೆ ರಾತ್ರಿ ಹಾಲು ಕುಡಿಯದಿದ್ದರೆ ನಿದ್ರೆಬರುವುದಿಲ್ಲ. ರಾಧೆ ಇನ್ನೂ ನಿದ್ರೆಮಾಡಲಿಲ್ಲವಾದ್ದರಿಂದ ತನಗೂ ನಿದ್ರೆಯಿಲ್ಲವೆಂದು ನುಡಿಯುತ್ತಾನೆ. ಇವರೆಲ್ಲರೂ ಹೋಗಿ ಆಕೆಗೆ ಹಾಲು ಕೊಟ್ಟುಬಂದರು.

ನಂತರ ರುಕ್ಮಿಣಿಯು ಕೃಷ್ಣನ ಪಾದಸೇವೆಗೈದಾಗ ಅವನ ಪಾದಗಳಲ್ಲಿ ಬೊಬ್ಬೆಗಳಿರುವುದನ್ನುಕಂಡು ಗಾಬರಿಯಾಗುತ್ತಾಳೆ. ಕೃಷ್ಣ ಹೇಳುತ್ತಾನೆ- “ಹೃದಯದಲ್ಲಿ ಸದಾ ನನ್ನ ಪಾದಗಳನ್ನೇ ಧ್ಯಾನಿಸುತ್ತಲಿರುವ ರಾಧೆ ಬಿಸಿಬಿಸಿಹಾಲನ್ನು ಕುಡಿದಳು. ಅವಳ ಹೃದಯದಲ್ಲಿ ನೆಲೆಸಿರುವ ನನಗೆ ಬಿಸಿತಗುಲಿ ಬೊಬ್ಬೆಗಳೆದ್ದಿವೆ”! ಇದು ನಿಜಘಟನೆಯೋ ಕಾಲ್ಪನಿಕವೋ ತಿಳಿಯದು. ಹೇಗೇ ಇದ್ದರೂ ಹಿಂಬದಿಯ ಭಕ್ತಿರಸ ಅಗಾಧವಾಗಿದೆ. ಸೇವಿಸುವುದೆಲ್ಲವನ್ನೂ ಭಗವದರ್ಪಣೆ ಮಾಡುವುದೊಂದೇ ರಾಧೆಗೆ ತಿಳಿದಿರುವುದು. ಎಂತಹ ಆತ್ಮನಿವೇದನೆ!

ಕೃಷ್ಣನ ಭಕ್ತೆ ಮೀರಾಬಾಯಿ

ಮೀರಾಬಾಯಿ ಬಾಲ್ಯದಿಂದಲೂ ತನ್ನ ಹತ್ತಿರವಿದ್ದ ಕೃಷ್ಣವಿಗ್ರಹವನ್ನು ಸಾಕ್ಷಾತ್ ಕೃಷ್ಣನೆಂದೇ ಭಾವಿಸಿ ಪೂಜಿಸುತ್ತಿದ್ದವಳು. ಮಲಗುವಾಗಲೂ ಅವನ ಜೊತೆಯಲ್ಲಿಯೇ ಮಲಗುವ ಅಭ್ಯಾಸ. ಆಕೆಯು ಚಿತ್ತೂರಿನ ಭೋಜರಾಜನ ರಾಣಿಯಾಗಿದ್ದಳು. ಗೃಹಕೃತ್ಯಗಳನ್ನೂ ಹಿರಿಯರ ಶುಶ್ರೂಷೆಯನ್ನೂ ಮಾಡಿ ರಾತ್ರಿಯಲ್ಲಿ ತನ್ನ ಕೃಷ್ಣನನ್ನು ಪ್ರತ್ಯೇಕ ಸ್ಥಳದಲ್ಲಿರಿಸಿ ಭಜಿಸಿ-ಹಾಡಿ-ನರ್ತಿಸುವುದರಲ್ಲಿಯೇ ದಿನಗಳು ಕಳೆದವು. ಇಂತಹ ವಿಶೇಷ ಭಜನೆಯಲ್ಲಿ ಪಾಲ್ಗೊಳ್ಳಲು ಅನೇಕರು ಬರುತ್ತಿದ್ದರು.

atma nivedanam meera and shyam

ರಾಣಿಯಾದವಳಿಗಿದ್ದ ಲೋಕವಿಲಕ್ಷಣವಾದ ಇಂತಹ ನಡೆಯನ್ನು ಅರಮನೆಯವರು ಸಹಿಸಲಿಲ್ಲ. ಇವಳು ಕೃಷ್ಣಸಹವಾಸವನ್ನು ಬಿಡಲೊಲ್ಲಳು. ಆಕೆಯದು ‘ಅವ್ಯವಹಾರ’ವೆಂಬ ದೂರನ್ನುಕೇಳಿ ಕುಪಿತನಾದ ರಾಜನು ಪ್ರತ್ಯಕ್ಷವಾಗಿ ನೋಡಿಬರಲು ನಿಶ್ಚಯಿಸುತ್ತಾನೆ. ರಾತ್ರಿ ಖಡ್ಗಪಾಣಿಯಾಗಿ ಹೊರಗೆನಿಂತು ಕೃಷ್ಣನ ಜೊತೆಯಲ್ಲಿ ಅವಳ ಸಂಭಾಷಣೆ-ಪ್ರೇಮಸಲ್ಲಾಪಗಳನ್ನು ಕೇಳಿ ಉಕ್ಕೇರಿದ ಕೋಪದಿಂದ ಬಾಗಿಲೊಡೆದು ಒಳನುಗ್ಗಿ ನೋಡಿದಾಗ ಅವಳ ಪಾಡಿಗೆ ಮೈಮರೆತು ಮಾತನಾಡುತ್ತಿದ್ದಾಳೆ, ಹುಡುಕಿದರೂ ಅಲ್ಲಿ ಇನ್ನಾರೂ ಕಾಣಲಿಲ್ಲ! ಮಾತುಕತೆಯೆಲ್ಲವೂ ಕೃಷ್ಣವಿಗ್ರಹದ ಜೊತೆಯಷ್ಟೇಯೆಂಬುದು ತಿಳಿಯುತ್ತದೆ. ಇತರರಿಗೆ ವಿಗ್ರಹವಾದರೆ ಅವಳಿಗದು ಸಾಕ್ಷಾತ್ ಕೃಷ್ಣನೇ. ಅವರೀರ್ವರ ಸಂಭಾಷಣೆಯಲ್ಲಿ ಕೃಷ್ಣನ ಮಾತುಗಳು ಇವಳ ಕಿವಿಗೆ ಮಾತ್ರ!! ಇವಳಿಗೆ ಹುಚ್ಚೆಂದು ತೀರ್ಮಾನಿಸುತ್ತಾನೆ ರಾಜ. ಸಂಪೂರ್ಣ ಆತ್ಮನಿವೇದನ ಮಾಡಿಕೊಂಡ ಮಹಾಯೋಗಿನಿ- ಪರಮಭಾಗವತೆ ಮೀರಾ.

ಆಕೆಯು ಬೃಂದಾವನದದಲ್ಲಿ ಬ್ರಹ್ಮಚಾರಿಯೊಬ್ಬರ ದರ್ಶನಕ್ಕೆ ಅನುಮತಿಯನ್ನು ಕೇಳಿದಾಗ ಅವರು ತಾವು ಸ್ತ್ರೀಯರ ಮುಖ ನೋಡುವುದಿಲ್ಲವೆಂಬ ಸಂದೇಶ ಕಳುಹಿಸುತ್ತಾರೆ. ಅದಕ್ಕೆ ಪ್ರತ್ಯುತ್ತರವಾಗಿ “ಬೃಂದಾವನದಲ್ಲಿ ಎಲ್ಲರೂ ಸ್ತ್ರೀಯರೇ, ಶ್ರೀಕೃಷ್ಣನೊಬ್ಬನೇ ಪುರುಷನಲ್ಲವೇ?” ಎಂದು ಶ್ರೀಕೃಷ್ಣನಲ್ಲಿ ತಾದಾತ್ಮ್ಯವನ್ನು ಹೊಂದಿದ್ದ ಮೀರಾಬಾಯಿಯ ಸಂದೇಶವು ಆ ಭಕ್ತರ ಕಣ್ಣನ್ನು ತೆರೆಯಿಸಿತು.

ಭಗವಂತನೇ ರಕ್ಷಕ!

ಭಕ್ತಶಿರೋಮಣಿಗಳಿಗೆ ಕಷ್ಟ ಒದಗಿದಾಗ ಕೆಲವೊಮ್ಮೆ ಅವರ ಮೊರೆಯಿಲ್ಲದೆಯೇ ಭಗವಂತನು ಅವರುಗಳನ್ನು ಕಾಯುತ್ತಾನೆಂಬುದಕ್ಕೆ ಉದಾಹರಣೆಯಾಗಿ ಕೆಲವು ಘಟನೆಗಳು:

ಮೀರಾಬಾಯಿಯ ಭಜನೆ-ಪೂಜೆಗಳು ಎಲ್ಲೆಲ್ಲೂ ಹರಡಿ ಪ್ರಸಿದ್ಧಿಗೆ ಬರುತ್ತಿರಲು ಹೊರಪ್ರಾಂತ್ಯದವರೂ ಭಕ್ತಿಯಿಂದಲೂ, ಕುತೂಹಲದಿಂದಲೂ ಆಗಮಿಸುತ್ತಿದ್ದರು. ಅವರಲ್ಲಿ ರಜಪೂತರಿಗೆ ಜನ್ಮವಿರೋಧಿಗಳಾದ ಮೊಘಲರೂ ಬಂದದ್ದು ರಾಜನಿಗೆ ಉತ್ಕಟಕೋಪವನ್ನು ಮೂಡಿಸಿತು. “ನನಗೆ ನಿನ್ನ ಮುಖ ತೋರಿಸಬೇಡ, ಎಲ್ಲಾದರೂ ನದಿಯಲ್ಲಿ ಬಿದ್ದು ತೊಲಗು” ಎಂದು ಅನನ್ಯಭಕ್ತೆಯಾದವಳಿಗೆ ರಾಜಾಜ್ಞೆ ಮೂಲಕ ತಿಳಿಸಿ ಅತೀವ ಪಾಪವನ್ನೆಸಗುತ್ತಾನೆ. ನದಿಯಬಳಿ ನಿಂತು ಭಗವಂತನ ಮಡಿಲಿಗೆ ಧುಮುಕಲು ಸಿದ್ಧಳಾದಳು. ತಕ್ಷಣವೇ ಹಿಂದುಗಡೆಯಿಂದ ಯಾರೋ ಕೈಹಿಡಿದಂತಾಗಿ ನೋಡಿದಾಗ ಸಾಕ್ಷಾತ್ ಶ್ರೀಕೃಷ್ಣನೇ ನಿಂತಿದ್ದಾನೆ. “ನಿನಗೂ ನಿನ್ನ ಗಂಡನಿಗೂ ಇರುವ ಸಂಬಂಧಬಿಟ್ಟು ನಿತ್ಯ ಶಾಶ್ವತವಾಗಿ ನನ್ನ ಜೊತೆಯಿರು” ಎಂದು ಹೇಳಿ ಬಾಚಿತಬ್ಬಿಕೊಂಡು ಬೃಂದಾವನಕ್ಕೆ ತೆರಳಲು ಆದೇಶ ನೀಡುತ್ತಾನೆ.

ವಿಧಿ ಇವಳನ್ನು ಪುನಃ ಬೃಂದಾವನದಿಂದ ರಾಜ್ಯಕ್ಕೆ ಹಿಂತಿರುಗಿಸುತ್ತದೆ. ಪತಿ ಗತಿಸಿದನಂತರ ಅವನ ಅಣ್ಣನಿಂದ ತಡೆಯಲಾಗದ ಹಿಂಸೆಯನ್ನು ಅನುಭವಿಸುತ್ತಾಳೆ. ಆದರೆ ಆತ್ಮಸಮರ್ಪಣಾಭಾವ ಕಿಂಚಿತ್ತೂ ಸಡಿಲವಾಗುವುದಿಲ್ಲ. ಒಮ್ಮೆ ಬುಟ್ಟಿಯಲ್ಲಿ ಹಾವಿನಮೇಲೆ ಹಾರವನ್ನಿಟ್ಟು ದುಷ್ಟ ಆಲೋಚನೆಯಿಂದ “ನಿನ್ನ ಕೃಷ್ಣನಿಗೆ ಸಮರ್ಪಿಸು” ಎಂದಾಗ, ಕುಹಕವನ್ನರಿಯದೆ ಹಾರವನ್ನು ಭಗವಂತನಿಗೆ ಸಮರ್ಪಿಸುತ್ತಾ ಪೂಜೆಯಲ್ಲಿ ಮಗ್ನಳಾಗುತ್ತಾಳೆ. ವಿಪತ್ತಿಲ್ಲದೆ ಭಗವಂತ ರಕ್ಷಿಸುತ್ತಾನೆ. ರಾಜನಿಗೆ ಆಶ್ಚರ್ಯವೋ ಆಶ್ಚರ್ಯ! ಹೇಗಾದರೂ ಸಾಯಿಸಬೇಕೆಂಬ ಉದ್ದೇಶ್ಯದಿಂದ ಹಾಲಿಗೆ ವಿಷಸೇರಿಸಿ, “ಇದು ಅಮೃತ, ಪೂಜೆಯನಂತರ ಸ್ವೀಕರಿಸು” ಎನ್ನುತ್ತಾನೆ. ಇವಳು ಕೃಷ್ಣನಿಗೆ ಸಮರ್ಪಿಸುತ್ತಲೇ ಪೂರ್ಣಪಾನಮಾಡಿದಾಗ, ಕೃಷ್ಣ ಇವಳೊಳಗೆ ಕುಳಿತು ಸ್ವೀಕರಿಸುತ್ತಾನೆ. ಪವಾಡದಂತೆಯೇ ನಡೆದುಹೋಗುತ್ತದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇವಳ ಪ್ರಾಣತ್ಯಾಗವನ್ನು ನೋಡುವ ಕುತೂಹಲದಿಂದ ಹೊರಗೆ ಕಾಯುತ್ತಿದ್ದವರಿಗೆ ಆಶಾಭಂಗ ಮತ್ತು ಆಶ್ಚರ್ಯ. ಅವಳು ಎಂದಿನಂತೆ ತನ್ನಪಾಡಿಗೆ ಭಜನೆ-ಪೂಜೆಯಲ್ಲಿ ತಲ್ಲೀನಳಾಗುತ್ತಾಳೆ. ವಿಷ ಏನಾಯಿತೆಂಬ ಪ್ರಶ್ನೆ ಇಲ್ಲಿ. ಮೀರಾ ಹಾಲಿನಪಾತ್ರೆಯನ್ನು ಕೈಯಲ್ಲಿಟ್ಟು ಕಣ್ಣುಮುಚ್ಚಿ ಸ್ವೀಕರಿಸುತ್ತಿರುವಂತೆಯೇ ಕೃಷ್ಣನೋಡುತ್ತಿರುವಂತಹ ಚಿತ್ರಗಳನ್ನು ಕಾಣುತ್ತೇವೆ. ಶ್ರೀರಂಗಮಹಾಗುರುವು ಇದಕ್ಕೆ ನೀಡಿದ ವಿವರಣೆ: ಅವಳಿದ್ದ ಸ್ಥಿತಿಯಲ್ಲಿ ವಿಷದ ಪರಿಣಾಮವು ಅಂಗಾಂಗಗಳಮೇಲೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅಂತಹದೊಂದು ಅತ್ಯಂತ ಉನ್ನತಸ್ಥಿತಿಯದು. ಊಹಿಸಲೂ ಅಸಾಧ್ಯವಾದ ಸನ್ನಿವೇಶಗಳಲ್ಲಿಯೂ ಭಗವಂತ ರಕ್ಷಿಸುತ್ತಾನೆ ಎನ್ನುವುದಕ್ಕೆ ಉದಾಹರಣೆಗಳಿವು.
(ಮುಂದುವರಿಯುವುದು)

– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ
, ಬೆಂಗಳೂರು

ಇದನ್ನೂ ಓದಿ : Navavidha Bhakti : ಶ್ರೀರಾಮ- ಶ್ರೀಕೃಷ್ಣರಿಗೆ ಇವರೆಲ್ಲರೂ ನೆಚ್ಚಿನ ಸಖರು!

Exit mobile version