ಡಾ. ಸಿ. ಆರ್. ರಾಮಸ್ವಾಮಿ
ಭಕ್ತಿಮಾರ್ಗವನ್ನು (Navavidha Bhakti) ಅಪೇಕ್ಷಿಸುವವರಿಗೆ, ಭಕ್ತಿಮಾರ್ಗವನ್ನು ಅವಲಂಬಿಸಲು, ಭಕ್ತಿಯನ್ನು ವೃದ್ಧಿಪಡಿಸಿಕೊಳ್ಳಲು ಶ್ರವಣಭಕ್ತಿ ಒಂದು ಉತ್ತಮ ವಿಧಾನ. ಭಗವಂತನ ಕಥಾಮೃತವನ್ನು ಎಷ್ಟೆಷ್ಟು ಶ್ರವಣ ಮಾಡುತ್ತೇವೆಯೋ ಅಷ್ಟಷ್ಟು ಭಕ್ತಿ ವೃದ್ಧಿಯಾಗುತ್ತದೆ. ಶ್ರವಣದಲ್ಲಿ ಮುಖ್ಯವಾದ ಅಂಶವೆಂದರೆ ಭಗವಂತನ ರಸವನ್ನು ಅನುಭವಿಸಿದ ಮಹಾತ್ಮರ ಮೂಲಕ ಕಥಾಮೃತವನ್ನು ಕೇಳಬೇಕು.
ಶ್ರವಣಭಕ್ತಿ ಎಂದರೆ ಪ್ರಧಾನವಾಗಿ ಭಗವಂತನ ರೂಪವರ್ಣನೆಯನ್ನೂ, ಆತನ ಗುಣಗಳನ್ನೂ ಕಥಾರೂಪದಲ್ಲಿ ಶ್ರವಣ ಮಾಡುವುದು. ಕಥೆಯಷ್ಟೇ ಅಲ್ಲ; ಸ್ತೋತ್ರ, ಗೀತ ಅಥವಾ ದೇವರನಾಮಗಳನ್ನು ಶ್ರವಣಮಾಡುವುದೂ ಕೂಡ ಭಕ್ತಿಗೆ ಪೋಷಕವಾದದ್ದೇ. ಇವುಗಳನ್ನು ಕ್ರಮವರಿತು ಹೇಳಿದಾಗ ಅದರ ಶ್ರವಣ ಮಾತ್ರದಿಂದಲೇ ಭಕ್ತಿರಸವು ಉದ್ಭವಿಸುತ್ತದೆ. ಹೀಗೆ ಜಿನುಗಿದ ರಸವೇ ಮನಸ್ಸನ್ನು ಭಗವಂತನ ಬಳಿ ನಯನ ಮಾಡುತ್ತದೆ.
ರಸ ಉಂಟಾಗುವುದೆನ್ನುವುದನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿ ಕೊಳ್ಳಬಹುದು. ಒಂದು ಮುದ್ದಾದ ಮಗುವಿನ ನಗುವನ್ನು ಆಸ್ವಾದಿಸಬೇಕಾದರೆ ಅದರ ಕೈಯನ್ನು ಹೀಗೆ ಹಿಡಿದುಕೊಳ್ಳಬೇಕು, ಅದನ್ನು ಹೀಗೆ ಬಾಚಿ ತಬ್ಬಿಕೊಳ್ಳಬೇಕು, ಅದರ ಮುಖವನ್ನು ಸವರಬೇಕು ಎಂದು ಕಲಿಸಿದ ಥಿಯರಿಯನ್ನು ಯಾಂತ್ರಿಕವಾಗಿ ಬಳಸಿದರೆ ಮಗುವೇ ದೂರ ಸರಿಯುತ್ತದೆ! ಆದರೆ ಮಗುವಿನ ಅರಳಿದ ಮುಖಮಂಡಲದ ನೋಟವೇ ಸಂತೋಷ (ರಸ)ವನ್ನುಂಟುಮಾಡುತ್ತದೆ. ನಮ್ಮ ಅರಿವಿಲ್ಲದೆಯೇ ನಾವು ಅದರಿಂದ ಎಳೆಯಲ್ಪಡುತ್ತೇವೆ. ಆಗ ಮುಖ ಸವರುವುದು, ಜಿಗುಟುವುದು, ಅಪ್ಪಿಕೊಳ್ಳುವುದು ಮುಂತಾದ ಕ್ರಿಯೆಗಳು ಯಾರೂ ಕಲಿಸದಿದ್ದರೂ ತಾವಾಗಿಯೇ ಏರ್ಪಡುತ್ತವೆ. ಅಲ್ಲಿ ಮಗುವನ್ನು ಮುದ್ದಿಸುವ ಶಾಸ್ತ್ರ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಮಗುವು ತನ್ನ ನಗುವಿನಮೂಲಕವೇ ಎಲ್ಲವನ್ನೂ ತೋರಿಸಿ ಕೊಡುವುದು.
ಅಂತೆಯೇ ಭಗವದ್ರಸದ ಜಿನುಗುವಿಕೆಯೇ ಭಕ್ತಿಯ ಉತ್ಕರ್ಷದ ಲಕ್ಷಣ. ಶ್ರವಣಾದಿ ನವವಿಧಭಕ್ತಿಗಳಲ್ಲಿ ಒಂದೊಂದರಿಂದಲೂ ಆಗಬೇಕಾದದ್ದು ಭಕ್ತಿರಸ ಸ್ರವಿಸುವಿಕೆಯೇ. ಅದು ಕ್ರಮೇಣ ವೃದ್ಧಿಯಾಗುತ್ತಾ ಬರುವುದು ಅತ್ಯಾವಶ್ಯಕ.
ಶ್ರವಣ ಮಾಡಿಸಲು ಅಧಿಕಾರಿ ಯಾರು?
ವಾಸ್ತವವಾಗಿ ಯಾರು ಭಗವಂತನನ್ನು ನೇರವಾಗಿ ಅನುಭವಿಸಿರುವರೋ ಅಂತಹವರ ಮುಖಾರವಿಂದದಿಂದ ಶ್ರವಣಮಾಡಬೇಕು. ಆದರೆ ಶ್ರೀರಾಮನ ವಿಷಯವನ್ನು ತಿಳಿಯಬೇಕಾದ ಪಕ್ಷದಲ್ಲಿ ವಾಲ್ಮೀಕಿ ಮಹರ್ಷಿಗಳಿಂದ ನೇರವಾಗಿ ತೆಗೆದುಕೊಳ್ಳುವುದು ಈಗ ಸಾಧ್ಯವಿಲ್ಲ. ಅವರು ಅಂತಃಚಕ್ಷುಸ್ಸಿನಿಂದ ನೋಡಿದ್ದನ್ನು ಯಥಾವತ್ತಾಗಿ ಕಾವ್ಯರೂಪದಲ್ಲಿ ಬರೆದಿಟ್ಟು ಮಹದುಪಕಾರ ಮಾಡಿರುತ್ತಾರೆ. ನಾವೀಗ ನೇರವಾಗಿ ನೋಡಲಾಗದಿದ್ದರೂ ರಾಮಾಯಣದ ಉಪದೇಶವನ್ನು ಪಡೆದವರ ಮೂಲಕ ತಿಳಿಯುವ ಅವಕಾಶವಿದೆ. ಈಗ ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಸಾಹಿತ್ಯಗಳು ಮಾತ್ರ ಉಳಿದಿವೆ. ಆ ಸಾಹಿತ್ಯಗಳನ್ನು ಕವಿಹೃದಯದೊಡನೆ ಅರ್ಥಮಾಡಿಕೊಂಡು ರಸದೊಂದಿಗೆ ಅದನ್ನು ವಿವರಿಸುವವರು ಬೇಕು. ರಾಮಾಯಣದ ಸನ್ನಿವೇಶಕ್ಕೆ, ಅದರ ಸಮೀಪಕ್ಕೆ ನಮ್ಮ ಮನಸ್ಸನ್ನು ಒಯ್ಯುವುದೇ ಉಪದೇಶ ಎಂದೆನಿಸಿಕೊಳ್ಳುತ್ತದೆ ಎಂಬ ಶ್ರೀರಂಗಮಹಾಗುರುವಿನ ವ್ಯಾಖ್ಯಾನ ಇಲ್ಲಿ ಗಮನಾರ್ಹವಾದುದು.
ಅನುಭವಿಸಿದವರ ಕಥನದ ಪರಿಣಾಮವೇ ವಿಶೇಷ. ಜಾಮೂನನ್ನು ಆಸ್ವಾದಿಸಿದವನು ವರ್ಣನೆ ಮಾಡುವುದಕ್ಕೂ ಪದಾರ್ಥವನ್ನೇ ನೋಡದೆ, ಆಸ್ವಾದಿಸದೇ ಇರುವವನು ವರ್ಣನೆ ಮಾಡುವುದಕ್ಕೂ ಎಷ್ಟು ವ್ಯತ್ಯಾಸ ಇರುತ್ತದೆ!? ಆಸ್ವಾದಿಸಿದವನ ಮಾತಿನಲ್ಲಿ ಆ ರಸ ಜಿನಗುತ್ತದೆ.
ಶುಕಬ್ರಹ್ಮರ್ಷಿ ಭಗವಂತನನ್ನು ಒಳಗಣ್ಣಿನಿಂದ ನೋಡಿ, ಆತನ ಕಥಾಮೃತವನ್ನು ಅನುಭವಿಸಿದವರು. ಅಂತಹವರು ಅದನ್ನು ಹಾಗೆಯೇ ಹೇಳಿದಾಗ ಅದರಲ್ಲಿ ಭಗವದ್ರಸ ಉಕ್ಕಿಬರುತ್ತದೆ. ಮುಂದೆ ಸೂತಪುರಾಣಿಕರು ನೇರವಾಗಿ ನೋಡಿರದಿದ್ದರೂ ಸಕ್ರಮವಾಗಿ ಉಪದೇಶ ಪಡೆದು ಅನುಭವಿಸಿದವರು. ಹಾಗೆ ಅನುಭವಿಸಿ ರಸಭರಿತವಾಗಿ ಕಥನಮಾಡುವವರ ಮೂಲಕ ಶ್ರವಣಮಾಡುವುದು ಒಂದು ವಿಧಾನ. ಆಗ ಆ ರಸ ಕೇಳುವವರ ಒಳಹೊಕ್ಕುತ್ತದೆ.
ನಿತ್ಯಜೀವನದಲ್ಲೂ ಇದರ ಅರಿವು ನಮಗುಂಟಾಗುತ್ತದೆ. ಅತ್ಯಂತ ದುಃಖದಲ್ಲಿರುವವನು ಮಾತನಾಡಿದರೆ ನಮಗೂ ದುಃಖವು ಸಂಕ್ರಮಣವಾಗುತ್ತದೆ. ತುಂಬ ಸಂತೋಷದಿಂದ ಮಾತನಾಡುತ್ತಿದ್ದರೆ ನಮಗೂ ಸಂತೋಷವಾಗುತ್ತದೆ. ಹಾಗೆಯೇ ಭಗವದ್ಭಾವವನ್ನು, ಭಗವಂತನ ರಸವನ್ನು, ಆತ್ಮರಸವನ್ನು ಅನುಭವಿಸಿ ಹಾಗೆಯೇ ಅದನ್ನು ಕಥನ ಮಾಡಿದಾಗ ಶ್ರವಣಮಾಡಿದವರಲ್ಲೂ ಆ ರಸ ಜಿನುಗುತ್ತದೆ. ಹೇಳಿದವರಿಗೆ ಯಾವ ಮಟ್ಟದಲ್ಲಿ ರಸಜಿನುಗುತ್ತದೋ ಆ ಮಟ್ಟಕ್ಕೆ ಕೇಳಿದವರಿಗೆ ಬರದಿರಬಹುದು, ಆದರೆ ಒಂದು ಗುಟುಕು ಕೊಟ್ಟೇಕೊಡುತ್ತದೆ.
ಶಾಲಾ-ಕಾಲೇಜುಗಳಲ್ಲಿ ವಿಷಯವರಿತು ಆಸ್ವಾದಿಸಿ ಪಾಠಹೇಳಿದಾಗ ವಿದ್ಯಾರ್ಥಿಗಳಿಗೆ ಎಷ್ಟು ಸುಲಭವಾಗಿಯೂ, ಸ್ಪಷ್ಟವಾಗಿಯೂ ಅರ್ಥವಾಗುವುದೋ ಆ ಮಟ್ಟದಲ್ಲಿ ವಿಷಯದ ಅರಿವಿಲ್ಲದೇ ಕೇವಲ ಪುಸ್ತಕದ ಸಹಾಯದಿಂದ ಪಾಠಮಾಡಿದಾಗ ಅರ್ಥವೂ ಆಗುವುದಿಲ್ಲ, ಆಸ್ವಾದನೆಗೆ ವಿಷಯವೂ ಇರುವುದಿಲ್ಲ. ವಿರುದ್ಧವಾಗಿ ನಿದ್ರೆಯನ್ನೇ ಉಂಟುಮಾಡುವುದು ಎಲ್ಲರಿಗೂ ಸುಪರಿಚಿತವೇ!
ಶ್ರವಣಭಕ್ತಿಗೆ ಉದಾಹರಣೆ
ಶ್ರವಣಭಕ್ತಿಗೆ ಉತ್ತಮ ಉದಾಹರಣೆಯೆಂದರೆ ಪರೀಕ್ಷಿತ ಮಹಾರಾಜ. ಆತನ ಕಥೆ ಪ್ರಸಿದ್ಧವಾದದ್ದು. ಒಮ್ಮೆ ಕಾಡಿನಲ್ಲಿ ಬಹಳ ಹೊತ್ತು ಬೇಟೆಯಾಡಿದಮೇಲೆ, ಬಿಸಿಲು-ಬಾಯಾರಿಕೆಗಳಿಂದ ಬಳಲಿದ್ದ. ಆಗ ಒಂದು ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ತಪಸ್ಸಿನಲ್ಲಿ ನಿರತರಾಗಿದ್ದ ಋಷಿಯಲ್ಲಿ ನೀರು ಬೇಕೆಂದು ಪ್ರಾರ್ಥಿಸುತ್ತಾನೆ. ಋಷಿಯು ಧ್ಯಾನದಲ್ಲಿ ಮುಳುಗಿದ್ದ ಕಾರಣದಿಂದ ಎಚ್ಚರವಿಲ್ಲದೇ ಎಷ್ಟು ಕರೆದರೂ ನೀರು ಕೊಡುವುದಿಲ್ಲ. ತಡೆಯಲಾರದ ಹಸಿವು ಬಾಯಾರಿಕೆಗಳಿಂದ ಕುಪಿತನಾಗಿ ರಾಜನು ಸಮೀಪದಲ್ಲಿದ್ದ ಒಂದು ಮೃತಹಾವನ್ನು ಅವರ ಕುತ್ತಿಗೆಗೆ ಹಾಕಿ ಹೊರಡುತ್ತಾನೆ. ನಂತರ ಆ ಋಷಿಯ ಪುತ್ರನು ನೋಡಿ ಕೋಪಗೊಂಡು “ಧ್ಯಾನದಲ್ಲಿರುವ ನನ್ನ ತಂದೆಗೆ ಯಾರು ಇಂತಹ ಅಪಚಾರವೆಸಗಿದರೋ ಅವರು ಏಳು ದಿನಗಳಲ್ಲಿ ಸರ್ಪಕಚ್ಚಿ ಮರಣ ಹೊಂದಲಿ” ಎಂದು ಶಪಿಸುತ್ತಾನೆ.
ಕೊನೆಗೆ ಪರೀಕ್ಷಿತನು ಶುಕಬ್ರಹ್ಮರ್ಷಿಯನ್ನು ಆಶ್ರಯಿಸಿ “ನನಗೆ ಮೋಕ್ಷಮಾರ್ಗವನ್ನು ಉಪದೇಶ ಮಾಡಿ” ಎಂದು ಕೇಳಿದಾಗ ಅವರು ಭಾಗವತವನ್ನು ಹೇಳುತ್ತಾರೆ. “ಏಳು ದಿನಗಳು ಅನನ್ಯ ಭಕ್ತಿಯಿಂದ ಅದನ್ನೇ ಕೇಳಿದಾಗ ಮುಕ್ತಿ ದೊರಕುತ್ತದೆ” ಎಂದು ಆಶ್ವಾಸನೆ ನೀಡುತ್ತಾರೆ. ಅವರು ಭಾಗವತವನ್ನು ಹೇಳುತ್ತಲಿದ್ದಾಗ ಅವನು ಭಗವದ್ಭಾವದಲ್ಲಿ ಪೂರ್ಣವಾಗಿ ಮಗ್ನನಾಗಿ ಕಥೆಯನ್ನು ಆಸ್ವಾದಿಸುತ್ತಾನೆ. ಅದಾದನಂತರ ತಕ್ಷಕನಿಂದ ಅವನು ಮರಣಹೊಂದುವುದು ಅವನ ಶರೀರಕ್ಕೆ ಕೊನೆಯೇ ಹೊರತು, ಅವನ ಆತ್ಮವು ಮುಕ್ತಿಯನ್ನು ಪಡೆಯಿತೆನ್ನುತ್ತಾರೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಪರೀಕ್ಷಿತ್ರಾಜನ ಶ್ರವಣಭಕ್ತಿಯ ಸಫಲತೆಗೆ ಮುಖ್ಯಕಾರಣವೆಂದರೆ ಹೇಳಿದವರು ಪರಮಾತ್ಮನಲ್ಲಿ ಪೂರ್ಣ ತಾದಾತ್ಮ್ಯವನ್ನು ಹೊಂದಿದ್ದ ಶುಕಬ್ರಹ್ಮರ್ಷಿ. ಅವರು ತನ್ನ ಹದಿನಾರನೆಯ ವಯಸ್ಸಿನಲ್ಲಿಯೇ ಬ್ರಹ್ಮರ್ಷಿಯಾದವರು, ಸಾಕ್ಷಾತ್ ವ್ಯಾಸಮಹರ್ಷಿಯ ಔರಸಪುತ್ರರು; ಪಿತಾಮಹರು ಬ್ರಹ್ಮರ್ಷಿ ಪರಾಶರರು. ಹೀಗೆ ಬ್ರಹ್ಮರ್ಷಿತ್ವವು ಸಹಜವಾಗಿ ಶುಕರಲ್ಲಿ ಬೇರೂರಿದೆ. ಇವರ ಸಾಧನೆಯೂ ಸೇರಿಕೊಂಡಿದೆ, ಸದಾ ಕೃಷ್ಣಭಕ್ತಿಯಲ್ಲಿ ತನ್ಮಯರಾಗಿರುತ್ತಾರೆ. ಪರಮಭಕ್ತರು. ಅಂತಹ ಪರಮಭಾಗವತರಾದ ಶುಕಬ್ರಹ್ಮರ್ಷಿಯ ಕೀರ್ತನೆಯಿಂದಲೇ ಶ್ರವಣಮಾಡಿದ ಪರೀಕ್ಷಿತನಿಗೆ ಅಲ್ಪಕಾಲದಲ್ಲೇ ಪೂರ್ಣಫಲ ದೊರಕುವಂತೆ ಆಯಿತು. ಶ್ರವಣಭಕ್ತಿಯಂತೆಯೇ ಕೀರ್ತನವೂ ಭಕ್ತಿಯನ್ನು ಪಡೆಯುವ ಒಂದು ವಿಧಾನವೇ ಆಗಿದೆ.
(ಮುಂದುವರೆಯುವುದು)
– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ, ಬೆಂಗಳೂರು
ಇದನ್ನೂ ಓದಿ: Navavidha Bhakti : ನವವಿಧಗಳಲ್ಲಿ ಭಗವಂತನನ್ನು ಪ್ರೀತಿಸೋಣ