ಧಾರ್ಮಿಕ
Navavidha Bhakti : ಭಕ್ತಿಯನ್ನು ವರ್ಧಿಸುವ ಕಥಾಶ್ರವಣ
ಭಕ್ತಿಯ ಸ್ವರೂಪವನ್ನು ಒಂಬತ್ತು ರೀತಿಯಲ್ಲಿ ವಿಂಗಡಿಸಲಾಗಿದೆ. ಈ ಸ್ವರೂಪಗಳನ್ನು ಪರಿಚಯಿಸುವ ʻನವವಿಧ ಭಕ್ತಿʼ (Navavidha Bhakti) ಲೇಖನ ಮಾಲೆಯ ಮೂರನೇ ಲೆಖನ ಇಲ್ಲಿದೆ. ಇಂದು ಶ್ರವಣ ಭಕ್ತಿಯ ಕುರಿತು ವಿವರಿಸಲಾಗಿದೆ.
ಡಾ. ಸಿ. ಆರ್. ರಾಮಸ್ವಾಮಿ
ಭಕ್ತಿಮಾರ್ಗವನ್ನು (Navavidha Bhakti) ಅಪೇಕ್ಷಿಸುವವರಿಗೆ, ಭಕ್ತಿಮಾರ್ಗವನ್ನು ಅವಲಂಬಿಸಲು, ಭಕ್ತಿಯನ್ನು ವೃದ್ಧಿಪಡಿಸಿಕೊಳ್ಳಲು ಶ್ರವಣಭಕ್ತಿ ಒಂದು ಉತ್ತಮ ವಿಧಾನ. ಭಗವಂತನ ಕಥಾಮೃತವನ್ನು ಎಷ್ಟೆಷ್ಟು ಶ್ರವಣ ಮಾಡುತ್ತೇವೆಯೋ ಅಷ್ಟಷ್ಟು ಭಕ್ತಿ ವೃದ್ಧಿಯಾಗುತ್ತದೆ. ಶ್ರವಣದಲ್ಲಿ ಮುಖ್ಯವಾದ ಅಂಶವೆಂದರೆ ಭಗವಂತನ ರಸವನ್ನು ಅನುಭವಿಸಿದ ಮಹಾತ್ಮರ ಮೂಲಕ ಕಥಾಮೃತವನ್ನು ಕೇಳಬೇಕು.
ಶ್ರವಣಭಕ್ತಿ ಎಂದರೆ ಪ್ರಧಾನವಾಗಿ ಭಗವಂತನ ರೂಪವರ್ಣನೆಯನ್ನೂ, ಆತನ ಗುಣಗಳನ್ನೂ ಕಥಾರೂಪದಲ್ಲಿ ಶ್ರವಣ ಮಾಡುವುದು. ಕಥೆಯಷ್ಟೇ ಅಲ್ಲ; ಸ್ತೋತ್ರ, ಗೀತ ಅಥವಾ ದೇವರನಾಮಗಳನ್ನು ಶ್ರವಣಮಾಡುವುದೂ ಕೂಡ ಭಕ್ತಿಗೆ ಪೋಷಕವಾದದ್ದೇ. ಇವುಗಳನ್ನು ಕ್ರಮವರಿತು ಹೇಳಿದಾಗ ಅದರ ಶ್ರವಣ ಮಾತ್ರದಿಂದಲೇ ಭಕ್ತಿರಸವು ಉದ್ಭವಿಸುತ್ತದೆ. ಹೀಗೆ ಜಿನುಗಿದ ರಸವೇ ಮನಸ್ಸನ್ನು ಭಗವಂತನ ಬಳಿ ನಯನ ಮಾಡುತ್ತದೆ.
ರಸ ಉಂಟಾಗುವುದೆನ್ನುವುದನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿ ಕೊಳ್ಳಬಹುದು. ಒಂದು ಮುದ್ದಾದ ಮಗುವಿನ ನಗುವನ್ನು ಆಸ್ವಾದಿಸಬೇಕಾದರೆ ಅದರ ಕೈಯನ್ನು ಹೀಗೆ ಹಿಡಿದುಕೊಳ್ಳಬೇಕು, ಅದನ್ನು ಹೀಗೆ ಬಾಚಿ ತಬ್ಬಿಕೊಳ್ಳಬೇಕು, ಅದರ ಮುಖವನ್ನು ಸವರಬೇಕು ಎಂದು ಕಲಿಸಿದ ಥಿಯರಿಯನ್ನು ಯಾಂತ್ರಿಕವಾಗಿ ಬಳಸಿದರೆ ಮಗುವೇ ದೂರ ಸರಿಯುತ್ತದೆ! ಆದರೆ ಮಗುವಿನ ಅರಳಿದ ಮುಖಮಂಡಲದ ನೋಟವೇ ಸಂತೋಷ (ರಸ)ವನ್ನುಂಟುಮಾಡುತ್ತದೆ. ನಮ್ಮ ಅರಿವಿಲ್ಲದೆಯೇ ನಾವು ಅದರಿಂದ ಎಳೆಯಲ್ಪಡುತ್ತೇವೆ. ಆಗ ಮುಖ ಸವರುವುದು, ಜಿಗುಟುವುದು, ಅಪ್ಪಿಕೊಳ್ಳುವುದು ಮುಂತಾದ ಕ್ರಿಯೆಗಳು ಯಾರೂ ಕಲಿಸದಿದ್ದರೂ ತಾವಾಗಿಯೇ ಏರ್ಪಡುತ್ತವೆ. ಅಲ್ಲಿ ಮಗುವನ್ನು ಮುದ್ದಿಸುವ ಶಾಸ್ತ್ರ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಮಗುವು ತನ್ನ ನಗುವಿನಮೂಲಕವೇ ಎಲ್ಲವನ್ನೂ ತೋರಿಸಿ ಕೊಡುವುದು.
ಅಂತೆಯೇ ಭಗವದ್ರಸದ ಜಿನುಗುವಿಕೆಯೇ ಭಕ್ತಿಯ ಉತ್ಕರ್ಷದ ಲಕ್ಷಣ. ಶ್ರವಣಾದಿ ನವವಿಧಭಕ್ತಿಗಳಲ್ಲಿ ಒಂದೊಂದರಿಂದಲೂ ಆಗಬೇಕಾದದ್ದು ಭಕ್ತಿರಸ ಸ್ರವಿಸುವಿಕೆಯೇ. ಅದು ಕ್ರಮೇಣ ವೃದ್ಧಿಯಾಗುತ್ತಾ ಬರುವುದು ಅತ್ಯಾವಶ್ಯಕ.
ಶ್ರವಣ ಮಾಡಿಸಲು ಅಧಿಕಾರಿ ಯಾರು?
ವಾಸ್ತವವಾಗಿ ಯಾರು ಭಗವಂತನನ್ನು ನೇರವಾಗಿ ಅನುಭವಿಸಿರುವರೋ ಅಂತಹವರ ಮುಖಾರವಿಂದದಿಂದ ಶ್ರವಣಮಾಡಬೇಕು. ಆದರೆ ಶ್ರೀರಾಮನ ವಿಷಯವನ್ನು ತಿಳಿಯಬೇಕಾದ ಪಕ್ಷದಲ್ಲಿ ವಾಲ್ಮೀಕಿ ಮಹರ್ಷಿಗಳಿಂದ ನೇರವಾಗಿ ತೆಗೆದುಕೊಳ್ಳುವುದು ಈಗ ಸಾಧ್ಯವಿಲ್ಲ. ಅವರು ಅಂತಃಚಕ್ಷುಸ್ಸಿನಿಂದ ನೋಡಿದ್ದನ್ನು ಯಥಾವತ್ತಾಗಿ ಕಾವ್ಯರೂಪದಲ್ಲಿ ಬರೆದಿಟ್ಟು ಮಹದುಪಕಾರ ಮಾಡಿರುತ್ತಾರೆ. ನಾವೀಗ ನೇರವಾಗಿ ನೋಡಲಾಗದಿದ್ದರೂ ರಾಮಾಯಣದ ಉಪದೇಶವನ್ನು ಪಡೆದವರ ಮೂಲಕ ತಿಳಿಯುವ ಅವಕಾಶವಿದೆ. ಈಗ ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಸಾಹಿತ್ಯಗಳು ಮಾತ್ರ ಉಳಿದಿವೆ. ಆ ಸಾಹಿತ್ಯಗಳನ್ನು ಕವಿಹೃದಯದೊಡನೆ ಅರ್ಥಮಾಡಿಕೊಂಡು ರಸದೊಂದಿಗೆ ಅದನ್ನು ವಿವರಿಸುವವರು ಬೇಕು. ರಾಮಾಯಣದ ಸನ್ನಿವೇಶಕ್ಕೆ, ಅದರ ಸಮೀಪಕ್ಕೆ ನಮ್ಮ ಮನಸ್ಸನ್ನು ಒಯ್ಯುವುದೇ ಉಪದೇಶ ಎಂದೆನಿಸಿಕೊಳ್ಳುತ್ತದೆ ಎಂಬ ಶ್ರೀರಂಗಮಹಾಗುರುವಿನ ವ್ಯಾಖ್ಯಾನ ಇಲ್ಲಿ ಗಮನಾರ್ಹವಾದುದು.
ಅನುಭವಿಸಿದವರ ಕಥನದ ಪರಿಣಾಮವೇ ವಿಶೇಷ. ಜಾಮೂನನ್ನು ಆಸ್ವಾದಿಸಿದವನು ವರ್ಣನೆ ಮಾಡುವುದಕ್ಕೂ ಪದಾರ್ಥವನ್ನೇ ನೋಡದೆ, ಆಸ್ವಾದಿಸದೇ ಇರುವವನು ವರ್ಣನೆ ಮಾಡುವುದಕ್ಕೂ ಎಷ್ಟು ವ್ಯತ್ಯಾಸ ಇರುತ್ತದೆ!? ಆಸ್ವಾದಿಸಿದವನ ಮಾತಿನಲ್ಲಿ ಆ ರಸ ಜಿನಗುತ್ತದೆ.
ಶುಕಬ್ರಹ್ಮರ್ಷಿ ಭಗವಂತನನ್ನು ಒಳಗಣ್ಣಿನಿಂದ ನೋಡಿ, ಆತನ ಕಥಾಮೃತವನ್ನು ಅನುಭವಿಸಿದವರು. ಅಂತಹವರು ಅದನ್ನು ಹಾಗೆಯೇ ಹೇಳಿದಾಗ ಅದರಲ್ಲಿ ಭಗವದ್ರಸ ಉಕ್ಕಿಬರುತ್ತದೆ. ಮುಂದೆ ಸೂತಪುರಾಣಿಕರು ನೇರವಾಗಿ ನೋಡಿರದಿದ್ದರೂ ಸಕ್ರಮವಾಗಿ ಉಪದೇಶ ಪಡೆದು ಅನುಭವಿಸಿದವರು. ಹಾಗೆ ಅನುಭವಿಸಿ ರಸಭರಿತವಾಗಿ ಕಥನಮಾಡುವವರ ಮೂಲಕ ಶ್ರವಣಮಾಡುವುದು ಒಂದು ವಿಧಾನ. ಆಗ ಆ ರಸ ಕೇಳುವವರ ಒಳಹೊಕ್ಕುತ್ತದೆ.
ನಿತ್ಯಜೀವನದಲ್ಲೂ ಇದರ ಅರಿವು ನಮಗುಂಟಾಗುತ್ತದೆ. ಅತ್ಯಂತ ದುಃಖದಲ್ಲಿರುವವನು ಮಾತನಾಡಿದರೆ ನಮಗೂ ದುಃಖವು ಸಂಕ್ರಮಣವಾಗುತ್ತದೆ. ತುಂಬ ಸಂತೋಷದಿಂದ ಮಾತನಾಡುತ್ತಿದ್ದರೆ ನಮಗೂ ಸಂತೋಷವಾಗುತ್ತದೆ. ಹಾಗೆಯೇ ಭಗವದ್ಭಾವವನ್ನು, ಭಗವಂತನ ರಸವನ್ನು, ಆತ್ಮರಸವನ್ನು ಅನುಭವಿಸಿ ಹಾಗೆಯೇ ಅದನ್ನು ಕಥನ ಮಾಡಿದಾಗ ಶ್ರವಣಮಾಡಿದವರಲ್ಲೂ ಆ ರಸ ಜಿನುಗುತ್ತದೆ. ಹೇಳಿದವರಿಗೆ ಯಾವ ಮಟ್ಟದಲ್ಲಿ ರಸಜಿನುಗುತ್ತದೋ ಆ ಮಟ್ಟಕ್ಕೆ ಕೇಳಿದವರಿಗೆ ಬರದಿರಬಹುದು, ಆದರೆ ಒಂದು ಗುಟುಕು ಕೊಟ್ಟೇಕೊಡುತ್ತದೆ.
ಶಾಲಾ-ಕಾಲೇಜುಗಳಲ್ಲಿ ವಿಷಯವರಿತು ಆಸ್ವಾದಿಸಿ ಪಾಠಹೇಳಿದಾಗ ವಿದ್ಯಾರ್ಥಿಗಳಿಗೆ ಎಷ್ಟು ಸುಲಭವಾಗಿಯೂ, ಸ್ಪಷ್ಟವಾಗಿಯೂ ಅರ್ಥವಾಗುವುದೋ ಆ ಮಟ್ಟದಲ್ಲಿ ವಿಷಯದ ಅರಿವಿಲ್ಲದೇ ಕೇವಲ ಪುಸ್ತಕದ ಸಹಾಯದಿಂದ ಪಾಠಮಾಡಿದಾಗ ಅರ್ಥವೂ ಆಗುವುದಿಲ್ಲ, ಆಸ್ವಾದನೆಗೆ ವಿಷಯವೂ ಇರುವುದಿಲ್ಲ. ವಿರುದ್ಧವಾಗಿ ನಿದ್ರೆಯನ್ನೇ ಉಂಟುಮಾಡುವುದು ಎಲ್ಲರಿಗೂ ಸುಪರಿಚಿತವೇ!
ಶ್ರವಣಭಕ್ತಿಗೆ ಉದಾಹರಣೆ
ಶ್ರವಣಭಕ್ತಿಗೆ ಉತ್ತಮ ಉದಾಹರಣೆಯೆಂದರೆ ಪರೀಕ್ಷಿತ ಮಹಾರಾಜ. ಆತನ ಕಥೆ ಪ್ರಸಿದ್ಧವಾದದ್ದು. ಒಮ್ಮೆ ಕಾಡಿನಲ್ಲಿ ಬಹಳ ಹೊತ್ತು ಬೇಟೆಯಾಡಿದಮೇಲೆ, ಬಿಸಿಲು-ಬಾಯಾರಿಕೆಗಳಿಂದ ಬಳಲಿದ್ದ. ಆಗ ಒಂದು ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ತಪಸ್ಸಿನಲ್ಲಿ ನಿರತರಾಗಿದ್ದ ಋಷಿಯಲ್ಲಿ ನೀರು ಬೇಕೆಂದು ಪ್ರಾರ್ಥಿಸುತ್ತಾನೆ. ಋಷಿಯು ಧ್ಯಾನದಲ್ಲಿ ಮುಳುಗಿದ್ದ ಕಾರಣದಿಂದ ಎಚ್ಚರವಿಲ್ಲದೇ ಎಷ್ಟು ಕರೆದರೂ ನೀರು ಕೊಡುವುದಿಲ್ಲ. ತಡೆಯಲಾರದ ಹಸಿವು ಬಾಯಾರಿಕೆಗಳಿಂದ ಕುಪಿತನಾಗಿ ರಾಜನು ಸಮೀಪದಲ್ಲಿದ್ದ ಒಂದು ಮೃತಹಾವನ್ನು ಅವರ ಕುತ್ತಿಗೆಗೆ ಹಾಕಿ ಹೊರಡುತ್ತಾನೆ. ನಂತರ ಆ ಋಷಿಯ ಪುತ್ರನು ನೋಡಿ ಕೋಪಗೊಂಡು “ಧ್ಯಾನದಲ್ಲಿರುವ ನನ್ನ ತಂದೆಗೆ ಯಾರು ಇಂತಹ ಅಪಚಾರವೆಸಗಿದರೋ ಅವರು ಏಳು ದಿನಗಳಲ್ಲಿ ಸರ್ಪಕಚ್ಚಿ ಮರಣ ಹೊಂದಲಿ” ಎಂದು ಶಪಿಸುತ್ತಾನೆ.
ಕೊನೆಗೆ ಪರೀಕ್ಷಿತನು ಶುಕಬ್ರಹ್ಮರ್ಷಿಯನ್ನು ಆಶ್ರಯಿಸಿ “ನನಗೆ ಮೋಕ್ಷಮಾರ್ಗವನ್ನು ಉಪದೇಶ ಮಾಡಿ” ಎಂದು ಕೇಳಿದಾಗ ಅವರು ಭಾಗವತವನ್ನು ಹೇಳುತ್ತಾರೆ. “ಏಳು ದಿನಗಳು ಅನನ್ಯ ಭಕ್ತಿಯಿಂದ ಅದನ್ನೇ ಕೇಳಿದಾಗ ಮುಕ್ತಿ ದೊರಕುತ್ತದೆ” ಎಂದು ಆಶ್ವಾಸನೆ ನೀಡುತ್ತಾರೆ. ಅವರು ಭಾಗವತವನ್ನು ಹೇಳುತ್ತಲಿದ್ದಾಗ ಅವನು ಭಗವದ್ಭಾವದಲ್ಲಿ ಪೂರ್ಣವಾಗಿ ಮಗ್ನನಾಗಿ ಕಥೆಯನ್ನು ಆಸ್ವಾದಿಸುತ್ತಾನೆ. ಅದಾದನಂತರ ತಕ್ಷಕನಿಂದ ಅವನು ಮರಣಹೊಂದುವುದು ಅವನ ಶರೀರಕ್ಕೆ ಕೊನೆಯೇ ಹೊರತು, ಅವನ ಆತ್ಮವು ಮುಕ್ತಿಯನ್ನು ಪಡೆಯಿತೆನ್ನುತ್ತಾರೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಪರೀಕ್ಷಿತ್ರಾಜನ ಶ್ರವಣಭಕ್ತಿಯ ಸಫಲತೆಗೆ ಮುಖ್ಯಕಾರಣವೆಂದರೆ ಹೇಳಿದವರು ಪರಮಾತ್ಮನಲ್ಲಿ ಪೂರ್ಣ ತಾದಾತ್ಮ್ಯವನ್ನು ಹೊಂದಿದ್ದ ಶುಕಬ್ರಹ್ಮರ್ಷಿ. ಅವರು ತನ್ನ ಹದಿನಾರನೆಯ ವಯಸ್ಸಿನಲ್ಲಿಯೇ ಬ್ರಹ್ಮರ್ಷಿಯಾದವರು, ಸಾಕ್ಷಾತ್ ವ್ಯಾಸಮಹರ್ಷಿಯ ಔರಸಪುತ್ರರು; ಪಿತಾಮಹರು ಬ್ರಹ್ಮರ್ಷಿ ಪರಾಶರರು. ಹೀಗೆ ಬ್ರಹ್ಮರ್ಷಿತ್ವವು ಸಹಜವಾಗಿ ಶುಕರಲ್ಲಿ ಬೇರೂರಿದೆ. ಇವರ ಸಾಧನೆಯೂ ಸೇರಿಕೊಂಡಿದೆ, ಸದಾ ಕೃಷ್ಣಭಕ್ತಿಯಲ್ಲಿ ತನ್ಮಯರಾಗಿರುತ್ತಾರೆ. ಪರಮಭಕ್ತರು. ಅಂತಹ ಪರಮಭಾಗವತರಾದ ಶುಕಬ್ರಹ್ಮರ್ಷಿಯ ಕೀರ್ತನೆಯಿಂದಲೇ ಶ್ರವಣಮಾಡಿದ ಪರೀಕ್ಷಿತನಿಗೆ ಅಲ್ಪಕಾಲದಲ್ಲೇ ಪೂರ್ಣಫಲ ದೊರಕುವಂತೆ ಆಯಿತು. ಶ್ರವಣಭಕ್ತಿಯಂತೆಯೇ ಕೀರ್ತನವೂ ಭಕ್ತಿಯನ್ನು ಪಡೆಯುವ ಒಂದು ವಿಧಾನವೇ ಆಗಿದೆ.
(ಮುಂದುವರೆಯುವುದು)
– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ, ಬೆಂಗಳೂರು
ಇದನ್ನೂ ಓದಿ: Navavidha Bhakti : ನವವಿಧಗಳಲ್ಲಿ ಭಗವಂತನನ್ನು ಪ್ರೀತಿಸೋಣ
ಧಾರ್ಮಿಕ
Ram Navami 2023: ಶ್ರೀರಾಮನ ಪರಿಪೂರ್ಣತೆ ನಮ್ಮಲ್ಲಿ ತುಂಬಿಕೊಳ್ಳೋದು ಹೇಗೆ?
Ram Navami 2023: ಭಗವಾನ್ ಶ್ರೀರಾಮ ಎಂದರೆ ನಂಬಿಕೆ, ವಿಶ್ವಾಸ, ಭರವಸೆ ಹಾಗೂ ಪರಿಪೂರ್ಣತೆ. ಅಂತಹ ಪರಿಪೂರ್ಣತೆಯನ್ನು ಸಾಧಿಸಲು ಏನೆಲ್ಲ ಮಾಡಬೇಕು? ಇಲ್ಲಿದೆ ಮಾಹಿತಿ.
ಉತ್ತರ ಕನ್ನಡ
Banavasi News: ಏ.1 ರಂದು ಬನವಾಸಿಯ ಮಹಾಸ್ಯಂದನ ರಥೋತ್ಸವ; ಭರದಿಂದ ಸಾಗಿದೆ ರಥ ಕಟ್ಟುವ ಕಾರ್ಯ
Banavasi News: ಶ್ರೀ ಮಧುಕೇಶ್ವರ ದೇವಸ್ಥಾನದ ಜಾತ್ರೆ ಸಮೀಪಿಸಿದ್ದು, ಮಹಾರಥ ಕಟ್ಟುವ ಕಾರ್ಯವು ಆರಂಭವಾಗಿದೆ. ಗೌಡ್ರ ಕುಟುಂಬವು 100 ವರ್ಷಗಳಿಂದ ಈ ಕಾಯಕವನ್ನು ಮಾಡಿಕೊಂಡು ಬಂದಿದ್ದು, ಸಿದ್ಧತೆಯಲ್ಲಿ ತೊಡಗಿಕೊಂಡಿದೆ.
ಸುಧೀರ್ ನಾಯರ್, ಬನವಾಸಿ
ಐತಿಹಾಸಿಕ ಬನವಾಸಿಯ ಮಹಾಸ್ಯಂದನ ರಥೋತ್ಸವ (Mahasyandana Rathotsava) ಏ.1 ಹಾಗೂ ಏ.2 ರಂದು ಸಡಗರದಿಂದ ಜರುಗಲಿದೆ. ಈ ಹಿನ್ನೆಲೆಯಲ್ಲಿ ತೇರು ಕಟ್ಟುವ ಕಾರ್ಯ ಆರಂಭವಾಗಿದೆ.
ಏ.1 ರಂದು ಸಂಜೆ ಗಜ ಯಂತ್ರೋತ್ಸವ (ಹೂವಿನ ತೇರು) ನಡೆಯಲಿದೆ. ಏ.2ರಂದು ಮುಂಜಾನೆ ಶ್ರೀ ಉಮಾ ಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ನೀಡಲಾಗುತ್ತದೆ. ರಾತ್ರಿ 12 ಗಂಟೆ ರಥೋತ್ಸವ ನಡೆಯಲಿದೆ. 416 ವರ್ಷಗಳ ಇತಿಹಾಸ ಹೊಂದಿರುವ ಈ ಮಹಾ ರಥೋತ್ಸವಕ್ಕೆ ರಾಜ್ಯದ ಭಕ್ತರು ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಆಗಮಿಸಿ ಸಂಭ್ರಮಿಸುತ್ತಾರೆ.
ಇದನ್ನೂ ಓದಿ: Jal Jeera Benefits: ಬೇಸಿಗೆಯಲ್ಲಿ ಕುಡಿದು ನೋಡಿ ಜಲ್‌ಜೀರಾ ನೀರು
ಇಂತಹ ಜಾತ್ರೆಯ ಸಮಯ ರಥೋತ್ಸವಕ್ಕೆ ಕಳೆ ನೀಡುವುದು ಸಿಂಗಾರಗೊಂಡ ತೇರು. ವಿವಿಧ ಬಣ್ಣದ ಪತಾಕೆಗಳಿಂದ ಕಂಗೊಳಿಸುವ ತೇರು ಕಟ್ಟುವುದು ಮತ್ತು ಬಿಚ್ಚುವುದು ಒಂದು ಕಲೆ. ತೇರು ಸಿಂಗಾರ ನೋಡಲೆಂದೇ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಭಕ್ತಿ-ಭಾವಗಳ ಐತಿಹಾಸಿಕ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಎಳೆಯುವ ಮಹಾರಥ ಕಟ್ಟುವುದು ಗಮನ ಸೆಳೆಯುತ್ತದೆ. ಇಲ್ಲಿಯ ರಥ ಕಟ್ಟುವ ಗೌಡರ ಕುಟುಂಬ ವಿಶಿಷ್ಟವಾಗಿ ಕಂಡು ಬರುತ್ತದೆ.
ಸಾಂಘಿಕವಾಗಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ಒಂದಿನಿತೂ ಚ್ಯುತಿ ಬಾರದಂತೆ ಈ ಕುಟುಂಬವೂ ಮಧುಕೇಶ್ವರ ದೇವರ ರಥ ಕಟ್ಟುವ ಕಾರ್ಯ ನಡೆಸುತ್ತಾ ಬಂದಿದೆ. ಹದಿನೈದು ದಿನಗಳ ಕಾಲ ತಮ್ಮ ನಿತ್ಯ ಕಾಯಕಕ್ಕೆ ರಜೆ ಹಾಕಿ ರಥ ಕಟ್ಟುವ ಕಾಯಕವೂ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದೆ.
ದೊಡ್ಡ ವ್ಯಾಸದ ಸುತ್ತಳತೆಯ ಈ ಮಹಾಸ್ಯಂದನ ರಥವನ್ನು ಹೋಳಿ ಹುಣ್ಣಿಮೆ ಆಚರಿಸಿ ರಂಗ ಪಂಚಮಿಯ ದಿವಸ ಗೂಟ ಪೂಜೆ ನೆರವೇರಿಸಿ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಅಂದಿನಿಂದ ಈ ಕುಟುಂಬದ ನಾಲ್ಕೈದು ಮಂದಿ ರಥ ನಿರ್ಮಾಣ ಕೆಲಸಕ್ಕೆ ಹಾಜರಾಗುತ್ತಾರೆ. ಮರದಿಂದ ನಿರ್ಮಿತವಾದ ಮಹಾರಥ ತಳ ಭಾಗದಿಂದ ಚಕ್ರ ಸಹಿತ ಸುಭದ್ರವಾಗಿದ್ದು, 25 ಅಡಿ ಎತ್ತರ ಹೊಂದಿದೆ. ಪ್ರತಿ ವರ್ಷ ರಥೋತ್ಸವದ ಸಮಯದಲ್ಲಿ ಮೇಲ್ಭಾಗ ರೀಪುಗಳ ಸಹಿತ ಕತ್ತದ ಹುರಿಯಿಂದ ರಥವನ್ನು ಎತ್ತರಿಸುತ್ತಾ ಹೋಗುತ್ತಾರೆ. 7 ನೆಲೆಗಳನ್ನು ನಿರ್ಮಾಣ ಮಾಡಿ 10 ಅಡಿ ಎತ್ತರದ ಗೋಪುರ, 6 ಅಡಿ ಎತ್ತರದ ಕಳಶ ಇಟ್ಟು ಸುಮಾರು 75 ಅಡಿಗಳಷ್ಟು ಎತ್ತರದ ಮಹಾರಥವನ್ನು ಕಟ್ಟಲಾಗುತ್ತದೆ. ಈ ಮನೆತನದ ಮಹಿಳೆಯರು ಸಹ ರಥದಲ್ಲಿ ಅಳವಡಿಸುವ ಪತಾಕೆ ಸಜ್ಜುಗೊಳಿಸಿ ತಮ್ಮ ಸೇವೆಯನ್ನು ನೀಡುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ: Google: ಗೂಗಲ್ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
ಪಾರಂಪರಿಕವಾಗಿ ರಥ ಕಟ್ಟುವ ಕಾರ್ಯಕ್ಕೆ ಗೌರವ ಸಂಭಾವನೆ, ತೆಂಗಿನ ಕಾಯಿ, ಅಕ್ಕಿ, ಬೆಲ್ಲ ನೀಡಲಾಗುತ್ತದೆ. ರಥೋತ್ಸವದ ಸಂದರ್ಭದಲ್ಲಿ ರಥವನ್ನು ಎಳೆಯುವಾಗ ಮಟ್ಟು ಹಾಕುವ ಜವಾಬ್ದಾರಿಯನ್ನು ಇವರೇ ನಿರ್ವಹಿಸುತ್ತಾರೆ. ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪಾರಂಪರಿಕ ವೈಶಿಷ್ಟ್ಯಗಳ ಸಂಪ್ರದಾಯ ಮುಂದುವರಿಯುತ್ತದೆ ಎಂಬುದಕ್ಕೆ ಇವೆಲ್ಲ ಸಾಕ್ಷಿಯಾಗಿದೆ.
“ನಮ್ಮ ಹಿರಿಯರು ಆರಂಭಿಸಿದ ಈ ರಥ ಕಟ್ಟುವ ಕಾಯಕವನ್ನು ನಾವು ಅವರಿಂದ ಕಲಿತು, ರಥ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ನಾನು ನಮ್ಮ ಮನೆತನದ ಸದಸ್ಯರ ಸಹಕಾರದಿಂದ ಸುಮಾರು 50 ವರ್ಷಗಳಿಂದ ರಥ ಕಟ್ಟುವ ಕೆಲಸ ಮಾಡುತ್ತಾ ಬಂದಿದ್ದೇನೆ. ರಥ ಕಟ್ಟುವ ಕಾರ್ಯ ನಮ್ಮ ಪಾಲಿನ ಭಾಗ್ಯವಾಗಿದೆ” ಎನ್ನುತ್ತಾರೆ ರಥ ಕಟ್ಟುವ ಗೌಡ್ರು ಮನೆತನದ ಹಿರಿಯ ಸಹೋದರ ಮಧುಕೇಶ್ವರ.
ಇದನ್ನೂ ಓದಿ: IPL 2023: ಪಂತ್ ಬದಲು ಡೆಲ್ಲಿ ಪಾಳಯ ಸೇರಿದ 20 ವರ್ಷದ ಬಂಗಾಳ ಕ್ರಿಕೆಟಿಗ; ಯಾರಿದು?
“ನಾನು ನಮ್ಮ ಸಹೋದರ ಸುಮಾರು 50 ವರ್ಷಗಳಿಂದ ರಥ ಕಟ್ಟುವ ಕಾರ್ಯ ಮಾಡುತ್ತಾ ಬಂದಿದ್ದೇವೆ. ಮುಂದೆ ನಮ್ಮ ಮಕ್ಕಳಿಗೂ ಈ ಕಲೆಯನ್ನು ಕಲಿಸಿ ಮುಂದಿನ ಪೀಳಿಗೆಗೂ ಪರಿಚಯಿಸುತ್ತೇವೆ” ಎಂದು ರಥ ಕಟ್ಟುವ ಗೌಡ್ರ ಮನೆತನದ ಕಿರಿಯ ಸಹೋದರ ನರಸಿಂಹ.
ಉತ್ತರ ಕನ್ನಡ
Karwar News: ದೇವಾಲಯಗಳ ಅಭಿವೃದ್ಧಿಗೆ 12 ಕೋಟಿ ರೂ. ಅನುದಾನ ತಂದ ಶಾಸಕಿ ರೂಪಾಲಿ ನಾಯ್ಕ
Karwar News: ಈ ಹಿಂದೆ ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ 7 ಕೋಟಿ ರೂ. ಬಿಡುಗಡೆಯಾಗಿತ್ತು. ಇದೀಗ 5 ಕೋಟಿ ರೂ. ಬಿಡುಗಡೆಯಾಗಿದೆ. ವಿಶೇಷ ಪ್ರಯತ್ನದ ಮೂಲಕ ಬಿಡುಗಡೆಗೊಳಿಸಿರುವುದಾಗಿ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದ್ದಾರೆ.
ಕಾರವಾರ: ಶಾಸಕಿ ರೂಪಾಲಿ ಎಸ್. ನಾಯ್ಕ ಅವರ ವಿಶೇಷ ಪ್ರಯತ್ನದಿಂದ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ 27 ದೇವಾಲಯಗಳ ಅಭಿವೃದ್ಧಿಗೆ (development of temples) 5 ಕೋಟಿ ರೂ. ಬಿಡುಗಡೆಗೊಳಿಸಿ ಸರ್ಕಾರ ಆದೇಶಿಸಿದೆ.
ಈ ಹಿಂದೆ ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ 7 ಕೋಟಿ ರೂ. ಬಿಡುಗಡೆಯಾಗಿತ್ತು. ಇದೀಗ 5 ಕೋಟಿ ರೂ. ಬಿಡುಗಡೆಯಾಗಿದೆ. ಇದರಿಂದ ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ 12 ಕೋಟಿ ರೂ. ಬಿಡುಗಡೆಯಾದಂತಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ದೇವಾಲಯಗಳ ಅಭಿವೃದ್ಧಿಗೆ ಇಷ್ಟೊಂದು ಅನುದಾನವನ್ನು ಶಾಸಕರು ತಂದಿರುವುದು ಗಮನಾರ್ಹವಾಗಿದೆ.
ದೇವಾಲಯಗಳ ವಿವರ
ಅಂಕೋಲಾ ಕಣಕಣೇಶ್ವರ ದೇವಸ್ಥಾನ- 35 ಲಕ್ಷ ರೂ., ತೋಡೂರು ಗೋವಿಂದ ದೇವಸ್ಥಾನ- 25 ಲಕ್ಷ ರೂ, ಕಾರವಾರ ಅಳ್ವೇವಾಡದ ನರಸಿಂಹ ದೇವಸ್ಥಾನ- 25 ಲಕ್ಷ ರೂ., ಶೆಟಗೇರಿ ಹಡವ ದೇವಸ್ಥಾನ- 15 ಲಕ್ಷ ರೂ, ಅಮದಳ್ಳಿ ಮಹಾಸತಿ ದೇವಸ್ಥಾನ- 50 ಲಕ್ಷ ರೂ., ಚೆಂಡಿಯಾ ಅಂಬಾಭವಾನಿ ದೇವಸ್ಥಾನ- 21 ಲಕ್ಷ ರೂ. ಅಂಕೋಲಾ ಶೆಟಗೇರಿ ಕಾಳಮ್ಮ ದೇವಸ್ಥಾನ – 25 ಲಕ್ಷ ರೂ., ಶಿರವಾಡ ದೇವತಿ ದೇವಸ್ಥಾನ- 25 ಲಕ್ಷ ರೂ., ಬೊಬ್ರುವಾಡ ತೆಂಕಣಕೇರಿ ವೆಂಕಟರಮಣ ದೇವಸ್ಥಾನ- 10 ಲಕ್ಷ ರೂ., ಬೊಬ್ರುವಾಡ ಬೊಬ್ರು ದೇವಸ್ಥಾನ- 6 ಲಕ್ಷ ರೂ, ಹಾರವಾಡ ದುರ್ಗಾದೇವಿ ದೇವಸ್ಥಾನದ ಅಭಿವೃದ್ಧಿಗೆ 50 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: Priyanka Chopra: ಫೇರ್‌ನೆಸ್ ಆ್ಯಡ್‌ಗಳಲ್ಲಿ ನಟಿಸುವುದು ಹಾನಿಕರ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದೇಕೆ?
ಹಿಲ್ಲೂರಬೈಲ್ ನಂದಿಕೇಶ್ವರ ದೇವಸ್ಥಾನ- 10 ಲಕ್ಷ ರೂ, ಬೆಳಸೆ ದುರ್ಗಾದೇವಿ ದೇವಸ್ಥಾನ- 30 ಲಕ್ಷ ರೂ, ಸಗಡಗೇರಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ- 15 ಲಕ್ಷ ರೂ., ಶಿರ್ವೆ ಶ್ರೀ ನಾರಾಯಣ ದೇವಸ್ಥಾನ- 25 ಲಕ್ಷ ರೂ., ಬರಗಲ್ ಶ್ರೀ ಮಹಾದೇವ ದೇವಸ್ಥಾನ- 10 ಲಕ್ಷ ರೂ., ಉಳಗಾ ಶ್ರೀ ನಾರಾಯಣ ಮಹಾದೇವ ದೇವಸ್ಥಾನ- 5 ಲಕ್ಷ ರೂ., ಅಸ್ನೋಟಿ ಶ್ರೀ ಕಾಮಾಕ್ಷೀ ರಾಜೇಶ್ವರ ಗಣಪತಿ ದೇವಸ್ಥಾನ- 5 ಲಕ್ಷ ರೂ., ಮಲ್ಲಾಪುರ ಶ್ರೀ ಮಹಾದೇವ ದೇವಸ್ಥಾನ- 10 ಲಕ್ಷ ರೂ., ಬಾಳ್ನಿ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನ ಅಭಿವೃದ್ಧಿಗಾಗಿ 10 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ.
ಅಂಕೋಲಾ ಪುರಸಭೆ ವ್ಯಾಪ್ತಿಯ ವಿಠ್ಠಲ ಸದಾಶಿವ ದೇವಾಲಯ ಅಭಿವೃದ್ಧಿಗೆ 10 ಲಕ್ಷ ರೂ, ಕೇಣಿ ದತ್ತಾತ್ರೇಯ ದೇವಾಲಯ ಅಭಿವೃದ್ಧಿಗೆ 15 ಲಕ್ಷ ರೂ, ಕಾರವಾರ ನಗರಸಭೆ ವ್ಯಾಪ್ತಿಯ ರಾಘವೇಂದ್ರ ಮಠ ಅಭಿವೃದ್ಧಿಗೆ 10 ಲಕ್ಷ ರೂ, ಮಂಜಗುಣಿ ಗ್ರಾಮದ ಶ್ರೀ ವಿನಾಯಕ ದೇವಸ್ಥಾನ ತಾರಿಜಟಕ ದೇವಸ್ಥಾನ ಅಭಿವೃದ್ಧಿಗೆ 15 ಲಕ್ಷ ರೂ, ದೇವಳಮಕ್ಕಿ ಶ್ರೀ ನಾರಾಯಣ ಮಹಾದೇವ ದೇವಾಲಯ ಅಭಿವೃದ್ಧಿಗೆ 10 ಲಕ್ಷ ರೂ, ಅಂಕೋಲಾ ಪುರಸಭೆ ವ್ಯಾಪ್ತಿಯ ಕಾನಮ್ಮ ದೇವಾಲಯ ಅಭಿವೃದ್ಧಿಗೆ 28 ಲಕ್ಷ ರೂ. ಹಾಗೂ ಚಿತ್ತಾಕುಲ ದೇವಭಾಗ್ ನರಸಿಂಹ ದೇವಸ್ಥಾನ ಅಭಿವೃದ್ಧಿಗೆ (ಅಂಬಿಗ ಸಮಾಜ) 5 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶಿಸಿದೆ. ಈಗಾಗಲೇ ಬಿಡುಗಡೆಯಾದ ಅನುದಾನದ ಬಹುತೇಕ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದ್ದಾರೆ.
“ಬಹುತೇಕ ಎಲ್ಲರೂ ದೇವರ ಸನ್ನಿಧಿಗೆ ಬರುತ್ತಾರೆ. ದೇವಾಲಯಗಳ ಕಟ್ಟಡಗಳು ಸುಸ್ಥಿತಿಯಲ್ಲಿರಬೇಕು. ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ ಹಣ ಸಾಲದು ಎಂದಾಗ ವಿಶೇಷ ಪ್ರಯತ್ನದಿಂದ ಅನುದಾನ ನೀಡಲಾಗಿದೆ. ದೇವಾಲಯಗಳಿಗೆ ಹಣ ನೀಡಿರುವುದು ನನಗೂ ಸಮಾಧಾನ ತಂದಿದೆ” ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದ್ದಾರೆ.
ಧಾರ್ಮಿಕ
Viral News: ಅವಳು ಅಲ್ಲ ಅವನು! ಕೇರಳದ ಈ ವಿಶಿಷ್ಟ ಜಾತ್ರೆಯಲ್ಲಿ ಸ್ತ್ರೀಯಾಗಿ ಮೊದಲ ಬಹುಮಾನ ಗೆದ್ದನೀತ!
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆಯುವ ʼಕೊಟ್ಟಕುಳಂಗರ ಚಾಮಾಯವಿಲಿಕ್ಕುʼ ಉತ್ಸವದಲ್ಲಿ ಇಂಥದೊಂದು ಸಂಪ್ರದಾಯವಿದೆ. ಇಲ್ಲಿ ಸ್ತ್ರೀಯರಂತೆ ಮೇಕಪ್ ಮಾಡಿ, ಸೀರೆ ಧರಿಸಿ, ಆಭರಣ ತೊಟ್ಟ ಪುರುಷರು ಕೈಯಲ್ಲಿ ಹಣತೆಗಳನ್ನು ಹಿಡಿದು ಮೆರವಣಿಗೆ ಹೋಗುತ್ತಾರೆ.
ಕೊಚ್ಚಿ: ಮೇಲಿರುವ ಚಿತ್ರದಲ್ಲಿ ಇರುವ ವ್ಯಕ್ತಿ ʼಅವಳುʼ ಅಲ್ಲ, ʼಅವನುʼ ಎಂದರೆ ನಿಮಗೆ ಅಚ್ಚರಿಯಾಗಬಹುದು. ಹೌದು, ಈತ ಪುರುಷ. ಮಹಿಳೆಯಂತೆ ರೂಪಾಂತರ ಮಾಡಿಕೊಳ್ಳುವ ಉತ್ಸವದಲ್ಲಿ ಈಕೆಗೆ, ಕ್ಷಮಿಸಿ, ಈತನಿಗೆ ಮೊದಲ ಬಹುಮಾನ ದೊರೆತಿದೆ. ಈ ಫೋಟೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ; ನೆಟಿಜನ್‌ಗಳು ಇದನ್ನು ನೋಡಿ ತಬ್ಬಿಬ್ಬಾಗಿದ್ದಾರೆ.
ಇದ್ಯಾವ ಉತ್ಸವ ಎಂದು ಕೇಳುತ್ತೀರಾ? ಈ ವಿಶಿಷ್ಟ ಉತ್ಸವ ನಡೆಯುವುದು ಕೇರಳದಲ್ಲಿ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆಯುವ ʼಕೊಟ್ಟಕುಳಂಗರ ಚಾಮಾಯವಿಲಿಕ್ಕುʼ ಉತ್ಸವದಲ್ಲಿ ಇಂಥದೊಂದು ಸಂಪ್ರದಾಯವಿದೆ. ಮಾರ್ಚ್ ಉತ್ತರಾರ್ಧದಲ್ಲಿ, ಮಲಯಾಳದ ಮೀನ ಮಾಸದ 10-11ನೇ ದಿನದಲ್ಲಿ ಇದು ನಡೆಯುತ್ತದೆ. ಇಲ್ಲಿನ ದೇವಿ ದೇವಸ್ಥಾನದಲ್ಲಿ ಈ ಉತ್ಸವ ನಡೆಯುತ್ತದೆ.
ಈ ಉತ್ಸವದಲ್ಲಿ ಈ ವರ್ಷ ನಡೆದ ಮಹಿಳಾ ಮೇಕಪ್ ಸ್ಪರ್ಧೆಯಲ್ಲಿ ಸ್ತ್ರೀಯಂತೆ ವೇಷ ಧರಿಸಿ ಮೊದಲ ಬಹುಮಾನ ಗೆದ್ದವನೀತ. ಈತನ ಫೋಟೋ ಹಾಗೂ ಉತ್ಸವದ ಬಗ್ಗೆ ಅನಂತ್ ರೂಪಂಗುಡಿ ಎಂಬ ರೈಲ್ವೇಸ್ ಅಧಿಕಾರಿ ಟ್ವೀಟ್ ಮಾಡಿದ್ದಾರೆ. ಅದೀಗ ವೈರಲ್ ಆಗಿದ್ದಾರೆ.
ಜಾತ್ರೆಯ ಇನ್ನಷ್ಟು ದೃಶ್ಯಗಳು ಇಲ್ಲಿವೆ:
ಇದೊಂದು ಬೆಳಕಿನ ಉತ್ಸವ. ಇಲ್ಲಿ ಸ್ತ್ರೀಯರಂತೆ ಮೇಕಪ್ ಮಾಡಿ, ಸೀರೆ ಧರಿಸಿ, ಆಭರಣ ತೊಟ್ಟ ಪುರುಷರು ಕೈಯಲ್ಲಿ ಹಣತೆಗಳನ್ನು ಹಿಡಿದು ಮೆರವಣಿಗೆ ಹೋಗುತ್ತಾರೆ. ಈ ಹಣತೆಗಳನ್ನು ʼಚಾಮಾಯವಿಳಕ್ಕುʼ ಎನ್ನುತ್ತಾರೆ. ಇಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದ ಬಹಳ ಮಂದಿಯೂ ಭಾಗವಹಿಸುತ್ತಾರೆ. ಈ ಉತ್ಸವದಲ್ಲಿ ಈ ಸಮುದಾಯ ತನ್ನ ಗುರುತನ್ನು ಕಂಡುಕೊಂಡಿದೆ.
-
ಕರ್ನಾಟಕ13 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ17 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ12 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ8 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?