Site icon Vistara News

Navavidha Bhakti : ಭಕ್ತಿ- ಮುಕ್ತಿಗಳನ್ನೀವ ಭಗವಂತನ ಸ್ಮರಣೆ

navavidha bhakti about smarana bhakti you should know in kannada

smrana bhakthi

ಡಾ. ಸಿ. ಆರ್. ರಾಮಸ್ವಾಮಿ
ಸ್ಮರಣೆಯೆಂದರೆ ನೆನಪಿಸಿಕೊಳ್ಳುವುದು. ಏಕಾಂತ ಸ್ಥಳದಲ್ಲಿ ಕುಳಿತು, ಕೇಳಿದ ಭಗವದ್ವಿಷಯಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದೇ ಸ್ಮರಣಭಕ್ತಿ. ಇದೂ ಸಹ ನಮ್ಮನ್ನು ಸಾಧ್ಯಭಕ್ತಿಯ (ಭಕ್ತಿಯಪರಾಕಾಷ್ಠೆಯ) (Navavidha Bhakti) ಮಾರ್ಗದಲ್ಲಿ ನಯನ ಮಾಡುವುದೇ ಆಗಿದೆ. ಸ್ಮರಣೆಯೆಂಬ ಪದಕ್ಕೆ ಯೋಗಶಾಸ್ತ್ರವು ನೀಡುವ ವಿವರಣೆ–ಅನುಭೂತ ವಿಷಯಾsಸಂಪ್ರಮೋಷ: ಸ್ಮೃತಿಃ; ಅನುಭವಿಸಿದ ವಿಷಯವನ್ನು ಮತ್ತೆ ನೆನೆಪಿಸಿಕೊಳ್ಳುವುದು. ಆದರೆ ಅನುಭವವೇ ಇಲ್ಲದಿದ್ದರೆ ಸ್ಮರಣೆಗೆ ವಿಷಯವೇ ಇರುವುದಿಲ್ಲವೆಂದಾಗುವುದು!

ಭಗವಂತನ ಸ್ಮರಣೆ ಸಾಧ್ಯವೇ?

ನಾವು ಭಗವಂತನನ್ನು ಕಂಡೇ ಇಲ್ಲದಿರುವಾಗ ಸ್ಮರಣೆ ಮಾಡುವುದಾದರೂ ಹೇಗೆ? ಎಂಬ ಪ್ರಶ್ನೆ ಸಹಜ. ಆದರೆ ಎಲ್ಲ ಜೀವಿಗಳೂ ಪ್ರಾರಂಭದಲ್ಲಿ ಭಗವಂತನ ಮಡಿಲಲ್ಲೇ ಇದ್ದು ಅಲ್ಲಿಂದ ಪ್ರಕೃತಿಗೆ ಇಳಿದಿವೆ ಎಂಬುದು ಜ್ಞಾನಿಗಳ ಮತ. ಆದರೆ ಆ ಹಳೆಯ ನೆನಪು ನಮ್ಮಲ್ಲಿ ಉಳಿದಿಲ್ಲವಷ್ಟೇ. ಭಗವಂತನು ಎಲ್ಲ ಮಾನವರಿಗೂ ಗರ್ಭವಾಸದ ಎಂಟನೆಯ ತಿಂಗಳಲ್ಲಿ ತನ್ನ ಜ್ಯೋತಿಸ್ವರೂಪವನ್ನು ತೋರಿಸುತ್ತಾನೆ ಎಂಬುದನ್ನು ಗರ್ಭೋಪನಿಷತ್ತು ಸ್ಪಷ್ಟವಾಗಿ ಹೇಳುತ್ತದೆ. ಇಷ್ಟಿದ್ದರೂ ತಾಯಿಯ ಗರ್ಭದಿಂದ ಹೊರಬಂದಕೂಡಲೇ ಮಗುವು ‘ಶಠ’ವೆಂಬ ಮಾಯೆಯಿಂದ ಆವರಿಸಲ್ಪಟ್ಟಕಾರಣ ಅದಕ್ಕೆ ಹಿಂದಿನ ಜ್ಯೋತಿರ್ದರ್ಶನದ ಮಧುರ ಅನುಭವವು ಮರೆಯಾಗುತ್ತದೆ. ಆದ್ದರಿಂದಲೇ, ಹುಟ್ಟಿದ ಕೂಡಲೇ ಅದು ರೋದಿಸುತ್ತದೆ.

ನಮ್ಮಾಳ್ವಾರ್ ಎಂಬ ಭಕ್ತರು ಹುಟ್ಟಿದಾಗ ಅಳಲೇ ಇಲ್ಲವಂತೆ! ನಂತರ ವರ್ಷಗಳು ಕಳೆದಮೇಲೂ ಮಾತನಾಡಲಿಲ್ಲವಂತೆ. ಮುಂದೆ ಜ್ಞಾನಿಯೊಬ್ಬರು ಇವರನ್ನು ಗುರುತಿಸಿ ಮಾತಾಡಿಸಿದಾಗ ಮಾತನಾಡಲು ಪ್ರಾರಂಭಿಸಿದರಂತೆ. ಅಂದರೆ ಆ ಮಗುವು ಗರ್ಭದಿಂದ ಹೊರಬಂದಮೇಲೂ ಸಂಸ್ಕಾರಬಲದಿಂದ, ‘ಶಠ’ವೆಂಬ ಮಾಯೆಗೆ ವಶವಾಗದಿದ್ದರಿಂದ ಗರ್ಭದಲ್ಲಿ ಕಂಡ ಮಧುರಅನುಭವವೇ ನಂತರವೂ ಮುಂದುವರಿದು ಅದರಲ್ಲೇ ತಲ್ಲೀನವಾಗಿದ್ದಿತು. ಆದ್ದರಿಂದಲೇ ಹುಟ್ಟಿದಕೂಡಲೇ ರೋದಿಸಲಿಲ್ಲ. ಶಠವನ್ನು ದೂರಮಾಡಿದ್ದರಿಂದ ಇವರಿಗೆ “ಶಠಕೋಪ”ನೆಂಬ ಬಿರುದು ಬಂದಿತೆಂಬುದು ಐತಿಹ್ಯ.

ನಾವು ಮಾಯೆಯ ಪ್ರಭಾವದಿಂದ ಒಳಾನುಭವವನ್ನು ಮರೆತಿದ್ದೇವೆ. ಅದನ್ನು ಸ್ಮರಿಸುವ ಕ್ರಮವೆಂದರೆ ಭಾಗವತರಿಂದ ಆತನ ರೂಪ-ಗುಣ-ಮಹಿಮೆಗಳನ್ನು ಕೇಳಿ, ಹಾಗೆ ಶ್ರವಣ ಮಾಡಿದ್ದನ್ನು ಮತ್ತೆಮತ್ತೆ ಮನನ ಮಾಡುವುದರ ಮೂಲಕ ಭಗವಂತನ ಸ್ಮರಣೆಯನ್ನು ಮಾಡುವುದು. ಸ್ಮರಣಭಕ್ತಿಯಲ್ಲಿ ಭಕ್ತರ ಒಡನಾಟವೇ-ಸಹಧರ್ಮಿಗಳ ಸಹವಾಸವೇ ಭಕ್ತಿಗೆ ಪುಷ್ಟಿಯನ್ನು ನೀಡುತ್ತದೆ.

ಸ್ಮರಣೆಗೆ ನಾನಾ ಕಾರಣಗಳು

ಸ್ಮರಣೆಯ ಕುರಿತ ಈ ಲೇಖನವನ್ನು ಇಲ್ಲಿ ನೋಡಿ!

ಸ್ಮರಣೆ ಎನ್ನುವುದು ಜೀವನದಲ್ಲಿ ನಾನಾ ಸಂದರ್ಭಗಳಲ್ಲಿ ಬರಬಹುದು. ಉದಾಹರಣೆಗೆ ‘ಸಂಕಟ ಬಂದಾಗ ವೆಂಕಟರಮಣ’ ಎಂಬಂತೆ, ಸಂಕಟಗಳು ಒದಗಿಬಂದಾಗ, ಅವುಗಳಿಂದ ಪಾರಾಗುವ ಬಗೆ ತಿಳಿಯದಿದ್ದಾಗ, ಮನಸ್ಸು ತಾನಾಗಿಯೇ ಭಗವಂತನನ್ನು ನೆನೆಯುವುದುಂಟು. ಅಂತೆಯೇ ಭಗವಂತನಲ್ಲಿ ಉತ್ಕಟವಾದ ವಿರಹ-ಭಯ-ದ್ವೇಷಗಳು ಮನಸ್ಸಿನಲ್ಲಿ ಎಡೆಮಾಡಿಕೊಂಡಾಗಲೂ ಆತನ ಸ್ಮರಣೆ ಸಹಜವಾಗಿಯೇ ಮೂಡಿಬರುತ್ತದೆ. ಹೀಗೆ ನಾನಾ ಸನ್ನಿವೇಶಗಳ ಮೂಲಕ ಸ್ಮರಣೆಯನ್ನು ತಂದುಕೊಂಡವರ ಉದಾಹರಣೆಗಳನ್ನು ಪುರಾಣೇತಿಹಾಸಗಳಲ್ಲಿ ಕಾಣಬಹುದಾಗಿದೆ.

1. ಪ್ರಹ್ಲಾದ: ಸ್ಮರಣಭಕ್ತಿಗೆ ಉತ್ತಮ ಉದಾಹರಣೆಯೆಂದರೆ ಪ್ರಹ್ಲಾದ. ಸಂಕಟಬಂದಾಗಷ್ಟೇ ಅಲ್ಲದೆ ಸದಾಕಾಲವೂ, ನಿರಂತರವಾಗಿ ಶ್ರೀಹರಿಯ ಸ್ಮರಣೆಯನ್ನು ಮಾಡಿದಂತಹ ಭಾಗವತೋತ್ತಮನು. ಪರಮಭಾಗವತರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿರುವ ಮಹಾನುಭಾವ. ತಂದೆ ಹಿರಣ್ಯಕಶಿಪುವಿನಿಂದ ಊಹಿಸಲಸಾಧ್ಯವಾದ ಸಂಕಷ್ಟಗಳು ಒಂದರಮೇಲೊಂದರಂತೆ ಒದಗಿಬಂದರೂ ಹರಿಸ್ಮರಣೆಯನ್ನು ಬಿಡದವನು. ಸಾಮಾನ್ಯವಾಗಿ ಭಾಗವತರೆಲ್ಲರೂ ಭಗವಂತನ ಸ್ಮರಣೆಯಿಂದ ಭಾಗವತರಾದರೆ “ಪ್ರಹ್ಲಾದೋ ಜನ್ಮವೈಷ್ಣವಃ” ಎಂಬಂತೆ, ಪ್ರಹ್ಲಾದನು ಹುಟ್ಟಿನಿಂದಲೇ ಭಾಗವತನಾದವನು. ತಾಯಿಯ ಗರ್ಭದಲ್ಲಿದ್ದಾಗ ನಾರದಮಹರ್ಷಿಗಳಿಂದ ಕೇಳಿದ ನಾರಾಯಣನ ಮಹಿಮೆಯನ್ನು ಹುಟ್ಟಿದ ನಂತರವೂ ಮರೆಯದೇ ಅಂತೆಯೇ ಉಳಿಸಿಕೊಂಡ ಮಹಾವೈಷ್ಣವ. ಸದಾಕಾಲವೂ ಸ್ಮರಣೆಯಿಂದ ಭಗವಂತನ ತಾದಾತ್ಮ್ಯವನ್ನು ಹೊಂದಿ ಸಂತುಷ್ಟನಾಗಿದ್ದವನು.

2. ಚೈತನ್ಯಮಹಾಪ್ರಭುಗಳು: ಶ್ರೀರಂಗಕ್ಷೇತ್ರಕ್ಕೆ ದಯಮಾಡಿಸಿದಾಗ ಒಂದಕ್ಷರವನ್ನೂ ಓದಲಾಗದ ಅವಿದ್ಯಾವಂತಬ್ರಾಹ್ಮಣನೊಬ್ಬನು ಕೈಯಲ್ಲಿ ಭಗವದ್ಗೀತೆಯ ಪುಸ್ತಕವನ್ನು ಹಿಡಿದು, ಕುಳಿತು ಕಣ್ಣೀರುಸುರಿಸುತ್ತಿದ್ದ. ನೆರೆದಿದ್ದ ಜನರು ಆತನನ್ನು ವ್ಯಂಗ್ಯಮಾಡಿ ನಗುತ್ತಿದ್ದರು. ಚೈತನ್ಯರು ಆತನನ್ನು ಓದಲರಿಯದ ಮೇಲೆ ಪುಸ್ತಕವೇಕೆ? ಅಳುತ್ತಿರುವುದೇಕೆಂದು ಕೇಳಿದಾಗ ಆತ ಹೇಳಿದ; “ಗುರುವಿನಾಜ್ಞೆಯಂತೆ ಗೀತೆಯನ್ನೋದಲು ಸಾಧ್ಯವಾಗುತ್ತಿಲ್ಲವಾದರೂ ಪುಸ್ತಕ ಹಿಡಿದಿದ್ದೇನೆ. ಆದರೆ ಪುಸ್ತಕವನ್ನು ಹಿಡಿದ ಕೂಡಲೇ ಗುರುವು ತಿಳಿಸಿದ ಕಥೆಯ ಸ್ಮರಣೆಯಿಂದ ಪಾರ್ಥಸಾರಥಿಯ ಚಿತ್ರವು ಕಣ್ಣಮುಂದೆ ಬಂದು ಆನಂದಭಾಷ್ಪವು ಸುರಿಯುತ್ತಿದೆ” ಎಂದ. ಚೈತನ್ಯರು “ಗೀತಾಸಾರವನ್ನು ಪಂಡಿತರಿಗಿಂತಲೂ ಚೆನ್ನಾಗಿ ತಿಳಿದಿರುವೆ”ಯೆಂದು ಆತನನ್ನು ಬಾಚಿ ತಬ್ಬಿಕೊಂಡರು. ಇದು ನಿಷ್ಠೆ-ಪ್ರಾಮಾಣಿಕತೆಗಳಿಂದ ಮಾಡುವ ಸ್ಮರಣೆಯ ಫಲವೇ ಆಗಿದೆ.

ವಿರಹದಲ್ಲಿ ಸ್ಮರಣೆ-ಭಕ್ತಿ

ಮೀರಾಬಾಯಿ: ಸಕಲಸುಖ-ಭೋಗಗಳೊಂದಿಗೆ ಅರಮನೆಯಲ್ಲಿ ವಾಸಮಾಡುವ ಯೋಗ ಈಕೆಗಿತ್ತು. ಹಿರಿಯರ ಶುಶ್ರೂಷೆಗಳನ್ನೂ ಮಾಡುತ್ತಲೇ ತನ್ನ ಪ್ರಿಯತಮನಾದ ಕೃಷ್ಣನ ಸ್ಮರಣೆಯನ್ನು ಭಜನೆಗಳ ಮೂಲಕ ಅನುಸ್ಯೂತವಾಗಿ ಮಾಡಿ ಅವನಲ್ಲೇ ತಲ್ಲೀನಳಾಗುತ್ತಿದ್ದಳು. ಆತನ ಸ್ಮರಣೆಗೆ ಭಂಗ ಬಂದಾಗ ಎಲ್ಲ ಸುಖಗಳನ್ನೂ ತ್ಯಜಿಸಿ ಬೃಂದಾವನದೆಡೆಗೆ ಹೊರಟುಬಿಟ್ಟಳು! ಆಕೆಗೆ ಜೀವನದಲ್ಲಿ ಭಗವಂತ ಮತ್ತು ಅವನ ಸ್ಮರಣೆಯಷ್ಟೇ ಬೇಕಾದ ವಸ್ತುಗಳಾಗಿದ್ದವು.

ಗೋದಾದೇವೀ: ಬಾಲ್ಯದಿಂದಲೇ ಕೃಷ್ಣನಲ್ಲಿ ಅತ್ಯಂತ ಪ್ರೀತಿ-ಭಕ್ತಿಗಳನ್ನು ಬೆಳೆಸಿಕೊಂಡು, ತನ್ನ ಜೀವನದುದ್ದಕ್ಕೂ ಅದನ್ನು ಉಳಿಸಿ-ಬೆಳೆಸಿಕೊಂಡವಳು. ಆತನನ್ನೇ ಪತಿಯನ್ನಾಗಿ ಹೊಂದಬೇಕೆಂಬ ದೃಢನಿರ್ಧಾರದೊಂದಿಗೆ ಆತನ ಸ್ಮರಣೆಯನ್ನು ನಿರಂತರವಾಗಿ ಮಾಡುತ್ತಾ ಕೊನೆಗೆ ಅವನಲ್ಲೇ ಐಕ್ಯಳಾದಳು.

ಸದಾಕಾಲದಲ್ಲೂ ತನ್ನನ್ನೇ ಸ್ಮರಿಸಿದವರಿಗೆ ತಾನು ಪ್ರಾಪ್ತನಾಗುತ್ತೇನೆಂಬುದಾಗಿ ಭಗವಂತನು ಗೀತೆಯಲ್ಲಿ ಅಪ್ಪಣೆಕೊಡಿಸಿರುವುದೂ ಸ್ಮರಣೀಯ.

ಭಯದಿಂದ ಸ್ಮರಣೆ

ಕಂಸ: ತಂಗಿಯಾದ ದೇವಕಿಯ ಎಂಟನೆಯ ಮಗುವು ತನಗೆ ಮೃತ್ಯುವಾಗುವುದೆಂಬ ಅಶರೀರವಾಣಿಯನ್ನು ಕೇಳಿದಾಗಲಿಂದಲೂ ಮೃತ್ಯುಭಯವು ಆತನನ್ನು ಪೀಡಿಸತೊಡಗಿತು. ಕೃಷ್ಣಜನನವಾದಾಗಿನಿಂದಲೂ ಭಯದಿಂದ ಸದಾ ಕೃಷ್ಣಸ್ಮರಣೆಯೇ ಅವನಿಗೆ. ಕೃಷ್ಣನನ್ನು ಹೇಗೆ ಸಂಹರಿಸುವುದೆಂಬ ಚಿಂತನೆಯಲ್ಲೇ ಅನವರತವೂ ತೊಡಗಿದ್ದನು. ಭಯದಿಂದ ಮಾಡಿದ ಕೃಷ್ಣಸ್ಮರಣೆಯಿಂದಲೇ ಮುಕ್ತಿಯನ್ನು ಪಡೆದವನು ಕಂಸ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ದ್ವೇಷದಿಂದ ಸ್ಮರಣೆ

ಶಿಶುಪಾಲ: ಶಿಶುಪಾಲನು ಸದಾಕಾಲವೂ ಕೃಷ್ಣನಮೇಲೆ ದ್ವೇಷವನ್ನೇ ಕಾರುತ್ತಿದ್ದವನು. ಧರ್ಮರಾಜನ ರಾಜಸೂಯಯಾಗದಲ್ಲಿ ಆತನ ದ್ವೇಷವು ಪೂರ್ಣರೂಪದಿಂದ ಹೊರಹೊಮ್ಮಿ ಕೃಷ್ಣನನ್ನು ಆಡಬಾರದ ಮಾತುಗಳಿಂದ ನಿಂದಿಸಿದವನು. ಆತನ ನೂರು ತಪ್ಪುಗಳನ್ನು ಮಾತ್ರವೇ ತಾನು ಸಹಿಸಿಕೊಳ್ಳುತ್ತೇನೆಂದು ಕೃಷ್ಣನು ಎಚ್ಚರಿಸಿದ್ದನ್ನೂ ಲಕ್ಷಿಸದೇ ಬೈಗುಳಗಳ ಸುರಿಮಳೆಗೈದವ ಶಿಶುಪಾಲ. ಕೃಷ್ಣನು ಎಲ್ಲವನ್ನೂ ಸಹಿಸಿಕೊಂಡ ನಂತರ ಚಕ್ರಾಯುಧದಿಂದ ಆತನನ್ನು ಸಂಹರಿಸಿ ಮುಕ್ತಿಯನ್ನು ದಯಪಾಲಿಸಿದ. ಹೀಗೆ ದ್ವೇಷದಿಂದಲೇ ನಿರಂತರ ಕೃಷ್ಣಸ್ಮರಣೆ ಮಾಡಿ ಮುಕ್ತಿಗಳಿಸಿದವನು ಶಿಶುಪಾಲ.

“ಸ್ಪರ್ಧೆಯಿಂದ ಕೃಷ್ಣನಂತೆ ಆಗುತ್ತೇನೆಂದು ಕೃಷ್ಣನ ಹೃದಯವನ್ನು-ಶೀಲವನ್ನು-ಯೋಗವನ್ನು ತನ್ಮಯತೆಯಿಂದ ಅನುಕರಣೆ ಮಾಡಿದವರಿಗೆ ಮೋಕ್ಷಸಿಗುತ್ತದೆ” ಎಂಬ ಶ್ರೀರಂಗಮಹಾಗುರುವಿನ ವಾಣಿಯು ಇಲ್ಲಿ ಸ್ಮರಣೀಯ. ಪೌಂಡ್ರಕವಾಸುದೇವ ಈ ಗುಂಪಿಗೆ ಸೇರಿದವನು.
(ಮುಂದುವರಿಯುವುದು)

– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ
, ಬೆಂಗಳೂರು

ಇದನ್ನೂ ಓದಿ: Navavidha Bhakti : ಭಕ್ತಿಯ ಪರಾಕಾಷ್ಠೆಗೆ ಕೀರ್ತನವೆಂಬ ಸಾಧನ

Exit mobile version