Site icon Vistara News

Navavidha Bhakti : ಭಕ್ತಿಗೊಂದು ಸಾಧನ – ಅರ್ಚನೆ

navavidha bhakti about Archanam bhakti you should know in kannada

#image_title

ಡಾ. ಸಿ. ಆರ್. ರಾಮಸ್ವಾಮಿ
ಭಗವಂತನನ್ನು ಪೂಜೆ ಮಾಡುವುದು, ಆರಾಧನೆ ಮಾಡುವುದು ಭಕ್ತಿಯ ಒಂದು ಪ್ರಕಾರವೇ. ಅರ್ಚನೆಯೆನ್ನುವುದು ಪೂಜೆಯ ಒಂದು ಅಂಗ. ಪೂಜೆಯಲ್ಲಿ ಭಗವಂತನ ಸ್ತೋತ್ರಗಳನ್ನು, ನಾಮಾವಳಿಯನ್ನು ಹೇಳುತ್ತಾ ಭಗವಂತನ ಮೂರ್ತಿಗೆ ಪರಿಮಳಭರಿತವಾದ ಪುಷ್ಪಗಳನ್ನು ಸಮರ್ಪಿಸುವುದೇ ಅರ್ಚನೆ.

ಅರ್ಚನೆಗೆ ಕೆಲವು ಪುಷ್ಪಗಳು ವಿಶೇಷವೆಂಬುದಾಗಿ ಸೂಚಿಸಿರುವುದುಂಟು. ಅದರಲ್ಲಿ ಮೊಟ್ಟಮೊದಲ ಸ್ಥಾನ ತಾವರೆಯ ಹೂವಿಗಿದೆ. ಭಗವಂತನ ಎಲ್ಲಾ ರೂಪಗಳನ್ನೂ ಅರ್ಚಿಸುವುದಕ್ಕೆ ಯೋಗ್ಯವಾದ ಪುಷ್ಪಶ್ರೇಷ್ಠವಿದು. ದೇವತೆಗಳ ಅಂಗಾಂಗಗಳಿಗೆ ಕಮಲದ ಹೋಲಿಕೆಯನ್ನು ಕೊಡುವುದುಂಟು. ಪಾದಪದ್ಮ, ಕರಕಮಲ, ಮುಖಾರವಿಂದ, ನಯನಾಂಬುಜ ಮುಂತಾಗಿ ಅನೇಕ ರೀತಿಯಲ್ಲಿ ದೇವತೆಗಳ ಸ್ವರೂಪ ವರ್ಣನೆಯುಂಟು. ಅವರ ಆಸನವೂ ಕಮಲವೇ. ಅವರ ಕೈಯಲ್ಲಿಯೂ ಕಮಲವೇ.

ಮಹಾಲಕ್ಷ್ಮೀಯನ್ನು ಪದ್ಮಪ್ರಿಯೆ, ಪದ್ಮಹಸ್ತೆ, ಪದ್ಮದಳಾಯತಾಕ್ಷಿ ಎಂಬುದಾಗಿ ಸ್ತೋತ್ರಮಾಡುತ್ತೇವೆ. ಹಯಗ್ರೀವದೇವರು ಕುಳಿತಿರುವುದು ಬಿಳಿಯ ತಾವರೆಯ ಮೇಲೆ. ಯೋಗಮಾರ್ಗದಲ್ಲಿ ಆರೋಹಣ ಮಾಡುವಾಗ ಮೂಲಾಧಾರದಿಂದ ಸಹಸ್ರಾರದವರೆಗೂ ಇರುವ ಪದ್ಮಗಳನ್ನು ಸೂಚಿಸುವುದಾಗಿದೆ ಈ ಹೊರಗಿನ ಪದ್ಮಗಳು.

ಕಮಲದ ಮತ್ತೊಂದು ವೈಶಿಷ್ಟ್ಯವೆಂದರೆ ಇದು ನೀರಿನಲ್ಲೇ ವಾಸಮಾಡುತ್ತಿದ್ದರೂ ತಾವರೆಯ ಎಲೆಗೆ ನೀರು ಅಂಟುವುದಿಲ್ಲ – ಜ್ಞಾನಿಗೆ ಪುಣ್ಯ-ಪಾಪಗಳು ಹೇಗೆ ಅಂಟುವುದಿಲ್ಲವೋ ಹಾಗೆ (“ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ”). ಈ ಎಲ್ಲ ಕಾರಣಗಳಿಂದಲೂ ಕಮಲವು ಅರ್ಚನೆಗೆ ಸರ್ವಶ್ರೇಷ್ಠವಾದುದು.

ಇದಲ್ಲದೇ, ಮಲ್ಲಿಗೆ, ಸುಗಂಧರಾಜ, ಜಾಜಿ, ಸೇವಂತಿಗೆ, ಪಾರಿಜಾತ ಮುಂತಾದ ಪರಿಮಳ ಪುಷ್ಪಗಳೂ ಸಹ ಪೂಜೆಗೆ ಶ್ರೇಷ್ಠವೆಂಬುದಾಗಿ ಪರಿಗಣಿಸಲ್ಪಟ್ಟಿವೆ. ಸೌಗಂಧ್ಯ-ಸೌಕುಮಾರ್ಯಗಳಿಂದ ಕೂಡಿದ ಪುಷ್ಪಗಳನ್ನೇ ಶ್ಲಾಘಿಸಿರುವರು. ಹಾಗೆಯೇ, ನಿರ್ಗಂಧ-ದುರ್ಗಂಧ-ಕಂಟಕ(ಮುಳ್ಳುಗಿಡದ) ಪುಷ್ಪಗಳನ್ನು ಅರ್ಚನೆಯಲ್ಲಿ ನಿಷೇಧಿಸಿರುವರು. ಅದರಲ್ಲೂ ಈಗಿನ ಕಾಲದ ಕಾಗದಪುಷ್ಪವನ್ನು ಹೊರಗಡೆಯ ಅಲಂಕಾರಕ್ಕೆ ಮಾತ್ರ ಬಳಸಬಹುದು, ಅರ್ಚನೆಗೆ ಅಲ್ಲ. ಭೌತಿಕಕ್ಷೇತ್ರದಲ್ಲಿ ಅನೇಕ ಕಡೆ ಅನಿವಾರ್ಯವಾಗಿಬಿಟ್ಟಿರುವುದು ಪ್ಲಾಸ್ಟಿಕ್ ಪದಾರ್ಥಗಳು. ಆದರೆ ಪೂಜೆಗೆ ಬೇಕಾಗಿರುವ ಧರ್ಮವನ್ನು ಅದರ ಸ್ಪರ್ಶವೇ ಕುಂಠಿತ ಮಾಡುವುದರಿಂದ ಅವುಗಳನ್ನು ಪೂಜೆಯಲ್ಲಿ ಬಳಸಲೇ ಕೂಡದು ಎಂಬುದು ಹಿರಿಯರ ಅಭಿಪ್ರಾಯವಾಗಿದೆ.

navavidha bhakti about Archanam bhakti you should know in kannada

ಪುಷ್ಪ ಮತ್ತು ದೇವತೆಗಳು

ಯಾವ ದೇವರಿಗೆ ಯಾವ ಪುಷ್ಪ ಪ್ರಿಯ, ಯಾವುದು ನಿಷಿದ್ಧ ಎನ್ನುವ ಪಟ್ಟಿಯೇ ಇದೆ. ಈ ನಿರ್ಣಯದಲ್ಲಿ ಹೂವಿನ ವರ್ಣವು ಮುಖ್ಯ ಪಾತ್ರ ವಹಿಸುತ್ತದೆ. ಉದಾಹರಣೆಗೆ ನಾರಾಯಣನಿಗೆ ಬಿಳಿ ಅಥವಾ ಹಳದಿ ಬಣ್ಣದ ಪುಷ್ಪಗಳು ಪ್ರಿಯವೆಂದೂ, ಶಿವನಿಗೆ ಕೆಂಪು ಬಣ್ಣದ ಕುಸುಮಗಳು ಪ್ರಿಯವೆಂದೂ ಸೂಚಿಸಿದ್ದಾರೆ. ಸುದರ್ಶನಮೂರ್ತಿಯನ್ನು ಹೊರತುಪಡಿಸಿ ಉಳಿದ ವಿಷ್ಣುವಿಗೆ ಸಂಬಂಧಿಸಿದ ದೇವತೆಗಳ ಪೂಜೆಗೆ ಕೆಂಪುಬಣ್ಣದ ಹೂವುಗಳನ್ನು ಸಾಮಾನ್ಯವಾಗಿ ಬಳಸುವುದಿಲ್ಲ. ಸುದರ್ಶನನನ್ನೇ ಪೂಜೆ ಮಾಡುವಾಗ ಅದು ಶ್ರೇಷ್ಠ. ಇಲ್ಲಿ ದೇವತೆಗಳಿಗೆ ಪ್ರಿಯ ಎಂದರೆ ಏನು ಎಂಬ ಪ್ರಶ್ನೆ ಏಳುತ್ತದೆ: ಯಾವ ಬಣ್ಣವು ಯಾವ ದೇವತಾಭಾವಕ್ಕೆ ಸಹಾಯವಾಗುವುದೋ ಆ ಬಣ್ಣವನ್ನು ಆ ದೇವತೆಗಳಿಗೆ ಪ್ರಿಯ ಎಂಬುದಾಗಿ ತಿಳಿಸಿರುವರು.

ಇದಲ್ಲದೇ, ಪುಷ್ಪಗಳನ್ನು ಬೆಳೆಸುವ ಸ್ಥಳ, ವಿಧಾನ, ಅವುಗಳನ್ನು ಸಂಗ್ರಹ ಮಾಡುವ ಕ್ರಮವೂ ಪೂಜೆಗೆ ಸಹಾಯಕವಾಗಿರಬೇಕು. ಮಲಗಳಿಂದ ಕೂಡಿದ ಜಾಗಗಳು ಅಶುಚಿಯ ಸ್ಥಳಗಳು. ಅಲ್ಲಿ ಬೆಳೆಯುವ ಕುಸುಮಗಳು ಪೂಜೆಗೆ ಯೋಗ್ಯವಲ್ಲ. ತನ್ನ ಮನೆಯಲ್ಲಿಯೇ ನೀರಿನ ಧಾರೆಯ ಜೊತೆಯಲ್ಲಿ ಮನೋಧಾರೆಯನ್ನೂ ಸೇರಿಸಿ ಬೆಳೆಸಿದ ಪುಷ್ಪಗಳು ಸರ್ವಶ್ರೇಷ್ಠ. (ಆದರೆ ಇತರರ ಮನೆಯ ಹೂಗಳನ್ನು ಅವರ ಅನುಮತಿ ಪಡೆಯದೇ ಕಿತ್ತು ಪೂಜೆಗೆ ಉಪಯೋಗಿಸುವುದು ಸರ್ವಥಾ ನಿಷಿದ್ಧ)!

ಪತ್ರಗಳ ಅರ್ಪಣೆ

ಅರ್ಚನೆಗೆ ಉಪಯೋಗಿಸಬಹುದಾದ ಕೆಲವು ಪತ್ರ(ಎಲೆ)ಗಳೂ ಉಂಟು. ತುಳಸಿಯನ್ನು ವಿಷ್ಣು ಮೂರ್ತಿಗಳಿಗೂ, ಬಿಲ್ವಪತ್ರೆಯನ್ನು ಶಿವನ ಪೂಜೆಗೂ, ಗರಿಕೆಯನ್ನು ಹಯಗ್ರೀವ ಮತ್ತು ಗಣೇಶನ ಪೂಜೆಯಲ್ಲೂ ಬಳಸುವುದನ್ನು ಕಾಣುತ್ತೇವೆ. ತುಳಸಿಯ ದರ್ಶನ-ಸ್ಪರ್ಶನ-ಆಘ್ರಾಣಗಳೇ ಬ್ರಾಹ್ಮೀಸ್ಥಿತಿಗೆ ಕರೆದೊಯ್ಯುವ ಗುಣವನ್ನು ಹೊಂದಿರುವುದನ್ನು ಜ್ಞಾನಿಗಳು ಗುರುತಿಸಿರುವರು. ತುಳಸಿಯ ಅಭಾವದಲ್ಲಿ ಒಣಗಿರುವ ತುಳಸೀದಳವನ್ನೋ ಅಥವಾ ತುಳಸಿಯ ಕಾಷ್ಠವನ್ನಾದರೂ ಬಳಸಬಹುದೆಂಬ ವಿಧಿಯು ಇಲ್ಲಿ ಸ್ಮರಣೀಯ.

navavidha bhakti about Archanam bhakti you should know in kannada

ಬಿಲ್ವಪತ್ರವು ಸ್ಪರ್ಶದಿಂದ ವಿಶೇಷವಾದ ಪರಿಣಾಮವನ್ನು ಉಂಟುಮಾಡುವಂತಹುದು. ಮೂರು ದಳದಿಂದ ಕೂಡಿರುವ ಬಿಲ್ವ(ಏಕಬಿಲ್ವಂ)ವನ್ನೇ ಶಿವನಿಗೆ ಅರ್ಪಿಸಬೇಕೆನ್ನುವ ನಿಯಮವನ್ನು ಗಮನಿಸಬಹುದು. ಈ ಮೂರರ ಸಮುದಾಯವು ತ್ರಿಮೂರ್ತ್ಯಾತ್ಮಕವಾದುದು ಎಂಬ ಶ್ರೀರಂಗ ಮಹಾಗುರುವಿನ ವಾಣಿಯು ಇಲ್ಲಿ ಸ್ಮರಣೀಯ. ಈ ಓಷಧಿಗಳೆಲ್ಲವೂ ಅನೇಕ ರೋಗನಿವಾರಣ ಶಕ್ತಿಯನ್ನು ಹೊಂದಿರುವುವು ಎಂಬುದನ್ನು ಆಯುರ್ವೇದ ಶಾಸ್ತ್ರವು ಘೋಷಿಸುತ್ತದೆ.

ಅರಿಶಿನ-ಕುಂಕುಮ-ಅಕ್ಷತೆ

ಅರ್ಚನೆಗೆ ಪುಷ್ಪ-ಪತ್ರಗಳಲ್ಲದೆ, ಅರಿಶಿನ ಕುಂಕುಮಗಳನ್ನೂ ಬಳಸುವ ರೂಢಿಯಿದೆ. ಇವು ಮಂಗಳದ್ರವ್ಯಗಳು; ಅರ್ಚನೆಗೆ ಬಳಸಲು ಶ್ರೇಷ್ಠವಾದವುಗಳೇ ಆಗಿವೆ. ಆದರೆ ಯಾವ ದೇವತೆಯ ಪೂಜೆಗೆ ಉಪಯೋಗಿ ಸಬಹುದೆನ್ನುವುದೂ ಉಂಟು. ದೇವೀ ಪೂಜೆಯಲ್ಲಿ ಇದನ್ನು ಬಳಸಬಹುದು.

navavidha bhakti about Archanam bhakti you should know in kannada

ಅಕ್ಷತೆಯನ್ನೂ ಅರ್ಚನೆಗೆ ಬಳಸುವುದುಂಟು. ಅಕ್ಷತೆಯನ್ನು ಮಾಡಲು ಪೂರ್ಣವಾದ ಅಕ್ಕಿಕಾಳುಗಳನ್ನೇ ಉಪಯೋಗಿಸಬೇಕು. ಅಕ್ಷತೆಯ ವೈಶಿಷ್ಟ್ಯವೆಂದರೆ, ಅದರಲ್ಲಿ ಬಳಸುವ ಅಕ್ಕಿಯು ಸಕಲದೇವತೆಗಳೂ ವಾಸಮಾಡುವ ಒಂದು ಧಾನ್ಯ. ಅದರ ಜೊತೆಯಲ್ಲಿ ಸೇರಿಸುವ ಮಂಗಳದ್ರವ್ಯವಾದ ಅರಿಶಿನ ಹಾಗೂ ತುಪ್ಪಗಳೂ ಸಹ ವಿಶೇಷ ಪರಿಣಾಮವನ್ನು ಉಂಟುಮಾಡುವ ದ್ರವ್ಯಗಳೇ ಆಗಿವೆ. ಆದ್ದರಿಂದಲೇ ಅಕ್ಷತೆಯನ್ನು ಎಲ್ಲ ಮಂಗಳ ಕಾರ್ಯಗಳಲ್ಲಿಯೂ ಉಪಯೋಗಿಸುತ್ತಾರೆ. ವಿಷ್ಣುವಿನ ಪೂಜೆಯಲ್ಲಿ ಹಳದಿ ಅಕ್ಷತೆಯನ್ನೂ ಶಿವನ ಪೂಜೆಯಲ್ಲಿ ಕೆಂಪು ಅಕ್ಷತೆಯನ್ನೂ ಉಪಯೋಗಿಸುವುದು ವೈಜ್ಞಾನಿಕವಾಗಿದೆ.

ಶ್ಲೋಕ / ಮಂತ್ರ

ಪುಷ್ಪವನ್ನು ಶುದ್ಧಿಮಾಡಿಯೇ ಅರ್ಚನೆಗೆ ತರಬೇಕು. (ಪುಷ್ಪಗಳಿಗೂ ಮದ್ದುಗಳನ್ನು ಹೊಡೆಯುವ ಇಂದಿನ ಪರಿಸ್ಥಿತಿಯಲ್ಲಿ ಇನ್ನೂ ವಿಶೇಷವಾಗಿಯೇ ತೊಳೆಯಬೇಕಾಗುವುದು!) ಪೂಜೆಮಾಡುವವರೂ, ಅದನ್ನು ಶುದ್ಧವಾದ ಮನಸ್ಸಿನಿಂದ ವೀಕ್ಷಿಸಿ ಪ್ರಣವದಿಂದ ಪ್ರೋಕ್ಷಿಸಿ ಪೂಜೆಗೆ ತೆಗೆದುಕೊಳ್ಳಬೇಕು.

ಪುಷ್ಪಗಳನ್ನು, ಶ್ಲೋಕ, ಮಂತ್ರ ಇತ್ಯಾದಿಗಳನ್ನು ಪಠಿಸುತ್ತ ಆಯಾ ದೇವರ ಪಾದಕ್ಕೆ ಸಮರ್ಪಣೆ ಮಾಡುವುದು ರೂಢಿಯಲ್ಲಿದೆ. ಪೂಜೆ ಮಾಡುವಾಗ ಮನಸ್ಸು ಸೋತ್ರ ಅಥವಾ ಮಂತ್ರದಲ್ಲಿ ಲಗ್ನವಾಗಿರಬೇಕು. ಅದು ಭಕ್ತಿಗೆ ಪೋಷಕವಾಗುತ್ತದೆ. ಶತನಾಮಾವಳಿ ಅಥವಾ ಸಹಸ್ರನಾಮಾವಳಿಗಳಲ್ಲಿ ಸಾಮಾನ್ಯವಾಗಿ ಭಗವಂತನ ಗುಣಗಳು, ಅವನ ರೂಪ, ಶೌರ್ಯ, ಪರಾಕ್ರಮ ಮುಂತಾದವು ಇರುವುದರಿಂದ ಅವುಗಳನ್ನು ಪಠಿಸುವಾಗ ಮನಸ್ಸು ಅವುಗಳ ಅರ್ಥವನ್ನು ಭಾವಿಸಿ ಆಸ್ವಾದಿಸಿದರೆ ಅದು ಭಕ್ತಿಯ ವೃದ್ಧಿಗೆ ಪೋಷಕವಾಗುವುದು.

ಹಾಗಲ್ಲದೆ, ಯಾಂತ್ರಿಕ ಅರ್ಚನೆಯಾದರೆ ಹೂವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾವಣೆ (transfer) ಮಾಡುವ ಕೆಲಸ ಆಗುತ್ತದೆಯೇ ವಿನಾ ಇನ್ಯಾವ ಪ್ರಯೋಜನವೂ ಇರುವುದಿಲ್ಲ.
(ಮುಂದುವರಿಯುವುದು)

– ಲೇಖಕರು ಕಾರ್ಯದರ್ಶಿ,
ಅಷ್ಟಾಂಗಯೋಗ ವಿಜ್ಞಾನಮಂದಿರಂ
, ಬೆಂಗಳೂರು

ಇದನ್ನೂ ಓದಿ: Navavidha Bhakti : ಪಾದಸೇವೆಯಿಂದಲೂ ಭಕ್ತಿಯ ವೃದ್ಧಿ

Exit mobile version