Site icon Vistara News

Navratri 2022 | ಮೊದಲನೇ ದಿನ ಯಾವ ದೇವಿಯನ್ನು ಪೂಜಿಸಬೇಕು? ಬಿಳಿಯ ವಸ್ತ್ರಧಾರಣೆ ಏಕೆ?

Navratri 2022

ಶಕ್ತಿದೇವತೆಯ ಆರಾಧನೆಯ ನವರಾತ್ರಿ ಹಬ್ಬ (Navratri 2022) ಬಂದಿದೆ. ರಾಜ್ಯದಾದ್ಯಂತ ನವದುರ್ಗೆಯರ ಸಹಿತ ಶಾರದೆಯ ಆರಾಧನೆ ನಡೆಯಲಿದ್ದು, ದೇವಿ ದೇವಾಲಯಗಳಲ್ಲಿ ಹಾಗೂ ಮನೆ ಮನೆಗಳಲ್ಲಿ ಹಬ್ಬದ ಆಚರಣೆಗೆ ಸಿದ್ಧತೆ ನಡೆದಿದೆ.

ನವರಾತ್ರಿಯ ಮೊದಲನೇ ದಿನ ಶಕ್ತಿ ಸ್ವರೂಪಿಣಿ ದುರ್ಗಾದೇವಿಯ ಶೈಲಪುತ್ರಿಯ ರೂಪವನ್ನು ಪೂಜಿಸಲಾಗುತ್ತದೆ. ಶೈಲರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಸುಶೋಭಿತವಾಗಿದೆ. ಶೈಲಪುತ್ರಿಯನ್ನು ಸತಿದೇವಿಯ ಪುನರ್‌ಜನ್ಮವೆಂದು ಪೂಜಿಸಲಾಗುತ್ತದೆ. ಪತಿ ಈಶ್ವರನನ್ನು ಅವಮಾನ ಮಾಡಿದ್ದಕ್ಕಾಗಿ ಆಕೆ ತನ್ನ ತಂದೆ ದಕ್ಷನು ಯಜ್ಞ ಮಾಡುತ್ತಿದ್ದ ಸಂದರ್ಭದಲ್ಲಿ ಅಗ್ನಿಕುಂಡಕ್ಕೆ ಹಾರಿ ಪ್ರಾಣ ಬಿಡುತ್ತಾಳೆ. ಶಿವನನ್ನು ಮರಳಿ ಪಡೆಯಲು ಆಕೆ ಪುನರ್‌ ಜನ್ಮ ಪಡೆದು ಮತ್ತೆ ಶಿವನನ್ನು ಮದುವೆಯಾಗುತ್ತಾಳೆ. ಹೇಮಾವತಿ ಎಂದೂ ಈ ದೇವಿಯನ್ನು ಕರೆಯಲಾಗುತ್ತದೆ.

ನವಶಕ್ತಿ ಅಲಂಕಾರ: ಜಗತ್‌ ಪ್ರಸೂತಿಕಾ

ಮೊಗದ ಮೇಲೆ ಮಂದಹಾಸ. ತೊಡೆಯ ಮೇಲೊಂದು ಹಸುಗೂಸು. ಜಗತ್‌ ಪ್ರಸೂತಿಕಾ ಅಲಂಕಾರ ಭಾವದಲ್ಲಿ ತಾಯಿ ಶೋಭಿಸುತ್ತಾಳೆ. ಈ ರೀತಿ ಅಲಂಕರಿಸಿಕೊಂಡ ಜಗನ್ಮಾತೆ ಸಾರುವ ಸಂದೇಶ ಏನೆಂದರೆ; “ಜಗದ ಸೃಷ್ಟಿ, ಸ್ಥಿತಿ ಲಯಕರ್ತಳೂ ನಾನಾಗಿದ್ದೇನೆ. ಬ್ರಹ್ಮಾಂಡವೆಂಬ ಸೃಷ್ಟಿಯಲ್ಲಿ ನೀವೂ ಮಗುವಿನಂತಿದ್ದೀರಾ. ಮಗು ತಾಯಿಯ ಮುಖವನ್ನು ನೋಡುವಂತೆ ನೀವು ನನ್ನನ್ನು ಆಶ್ರಯಿಸಿ. ನಾನು ನಿಮ್ಮನ್ನು ರಕ್ಷಿಸುತ್ತೇನೆʼʼ ಎಂದಾಗಿದೆ. ಈ ಅಲಂಕಾರ ನೋಡಲು ರಮಣೀಯ. ನವರಾತ್ರಿಯ ಶುಭಾರಂಭಕ್ಕಿದು ಮುನ್ನುಡಿ.

ಬಣ್ಣ : ಶ್ವೇತ, ನೈವೇದ್ಯ : ಮುದ್ಗಾನ್ನ, ಗ್ರಹ : ಚಂದ್ರ .

ಮೊದಲನೇ ದಿನ (ಪ್ರತಿಪತ್) ಬಿಳಿಯ ವಸ್ತ್ರಧಾರಣೆ ಏಕೆ?

ಬಿಳಿಯ ಬಣ್ಣವು ಎಂದಿಗೂ ಶಾಂತಿಯ ಮತ್ತು ಸ್ಥಿರತೆಯ ಪ್ರತೀಕವಾಗಿದೆ. ಹುಣ್ಣಿಮೆಯೇ ಬರಲಿ ಅಮಾವಾಸ್ಯೆಯೇ ಬರಲಿ ಶ್ವೇತವರ್ಣದ ಚಂದ್ರನಂತೆ ಕಷ್ಟದಲ್ಲಿ ಕುಗ್ಗಬಾರದು ಸುಖದಲ್ಲಿ ಹಿಗ್ಗಬಾರದು ಎಂಬ ಸಂದೇಶ ಇದರದ್ದು.

ಶಾಸ್ತ್ರಗಳಲ್ಲಿ ಕೀರ್ತಿಯನ್ನು ಬಿಳಿಯ ಬಣ್ಣಕ್ಕೆ ಹೋಲಿಸಿದ್ದಾರೆ. ಮನುಷ್ಯನ ಕೀರ್ತಿ ಎಂದಿಗೂ ಶುಭ್ರವಾಗಿರಬೇಕು. ನಮ್ಮ ಜೀವನದ ಗುರಿ ಬಿಳಿಯ ಹಿಮದಿಂದ ಕೂಡಿದ ಹಿಮಾಲಯದಂತೆ ದೃಢವಾಗಿರಬೇಕು. ಶುಭ್ರವಾದ ಬಿಳಿಯ ನೀರಿನಿಂದ ಕೂಡಿ ಬೋರ್ಗರೆಯುವ ಗಂಗೆಯಂತೆ ಇರಬೇಕು. ಜೀವನದಲ್ಲಿ ಎಷ್ಟೇ ಅಡೆತಡೆಗಳು ಎದುರಾದರೂ ಹೆದರದೆ ಗಂಗೆಯ ರಭಸದಂತೆ ಮುನ್ನುಗ್ಗಬೇಕು. ಸಾವಿರಾರು ವರ್ಷಗಳಾದರೂ ಬೆಳ್ಳಗಿನ ಅಸ್ಥಿಗಳಿಗೆ ಗಟ್ಟಿತನ ಹಾಗೆಯೇ ಇರುತ್ತದೆ. ನಾವು ಗಳಿಸಿದ ಕೀರ್ತಿ ಆ ಅಸ್ಥಿಗಳಂತೆ ಶಾಶ್ವತವಾಗಿರಬೇಕು.

ಬೆಳ್ಳಗಿನ ಸಕ್ಕರೆ ಯಾವ ಪದಾರ್ಥದೊಡನೆ ಸೇರಿಕೊಳ್ಳುತ್ತದೆಯೋ ಅದರೊಂದಿಗೆ ತನ್ನ ಸಿಹಿಯನ್ನು ಹಂಚಿಕೊಳ್ಳುತ್ತದೆ. ಹೀಗೆ ಅನೇಕ ಬಿಳಿಯ ಪದಾರ್ಥಗಳ ಸಾಂಕೇತಿಕ ಅರ್ಥಗಳನ್ನು ತಿಳಿದು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ, ದೇವಿಯಲ್ಲಿ ಪ್ರಾರ್ಥಿಸಿ ಮೊದಲ ದಿನ ಶುದ್ಧವಾದ ಬಿಳಿಯ ವಸ್ತ್ರಗಳನ್ನು ಧರಿಸಬೇಕು.

ಯಾವ ಮಂತ್ರದಿಂದ ಪ್ರಾರ್ಥಿಸಬೇಕು?

ನವರಾತ್ರಿಯ ಮೊದಲ ದಿನ ದೇವಿ ಶೈಲಪುತ್ರಿಯನ್ನು ಬಿಳಿ ವಸ್ತ್ರತೊಟ್ಟು, ಬಿಳಿ ಹೂವುಗಳಿಂದ ಆರಾಧಿಸಬೇಕು. ಮುದ್ಗಾನ್ನವನ್ನು ದೇವಿಗೆ ನೈವೇದ್ಯ ಮಾಡಬೇಕು. ಯಶಸ್ಸು ಕರುಣಿಸುವ ದೇವಿಯ ಅವತಾರ ಶೈಲಪುತ್ರಿಯಾಗಿರುವುದರಿಂದ ಈ ಕೆಳಗಿನ ಮಂತ್ರದಿಂದ ಪ್ರಾರ್ಥಿಸಿ.

ವಂದೇ ವಾಂಚಿತಲಾಭಾಯ ಚಂದ್ರಾರ್ಧ ಕೃತಶೈಖರಾಮ್ |
ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ ||

(ವರ್ಣದ ಕುರಿತ ಮಾಹಿತಿ: ಮೇಧಾ ಪ್ರಹ್ಲಾದಾಚಾರ್ಯ ಜೋಶಿ )

ಇದನ್ನೂ ಓದಿ | Navratri 2022 | ನವರಾತ್ರಿ ನವವರ್ಣ: ವಿಸ್ತಾರ ಡಿಜಿಟಲ್ ಸಂಭ್ರಮ

Exit mobile version