ಹಿಂದೂ ಧರ್ಮದಲ್ಲಿ ಏಕಾದಶಿಗೆ (Papamochani Ekadasi 2023) ವಿಶೇಷ ಮಹತ್ವವಿದೆ. ಒಂದು ಮಾಸದಲ್ಲಿ ಎರಡು ಏಕಾದಶಿ ಬರುತ್ತದೆ. ಕೃಷ್ಣಪಕ್ಷದಲ್ಲಿ ಮತ್ತು ಶುಕ್ಲಪಕ್ಷದಲ್ಲಿ ಒಂದೊಂದು ಏಕಾದಶಿ ಬರುತ್ತದೆ. ಏಕಾದಶಿ ಎಂದರೆ ಹನ್ನೊಂದನೇ ತಿಥಿ ಎಂದರ್ಥ. ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು ಮತ್ತು ಮನಸ್ಸು ಸೇರಿ ಹನ್ನೊಂದಾಗುತ್ತದೆ. ಇವುಗಳನ್ನು ಬಳಸಿಕೊಂಡು ಶ್ರದ್ಧೆಯಿಂದ ಭಗವಂತನ ಚಿಂತನೆಯನ್ನು ಮಾಡುವುದಾಗಿದೆ. ಏಕಾದಶಿಯಂದು ಶ್ರೀ ಮಹಾವಿಷ್ಣುವಿನ ಆರಾಧನೆ ಮಾಡಲಾಗುತ್ತದೆ.
ಏಕಾದಶಿ ವ್ರತವನ್ನು ಕೈಗೊಂಡು ಶ್ರೀ ಮಹಾವಿಷ್ಣುವಿನ ಆರಾಧನೆ ಮಾಡುವುದರಿಂದ ಸಕಲ ಪಾಪಗಳು ನಾಶವಾಗಿ, ಮುಕ್ತಿ ದೊರಕುತ್ತದೆ. ಜೊತೆಗೆ ಸಂಪತ್ತು, ಆರೋಗ್ಯ ಮತ್ತು ಮೋಕ್ಷ ಪಡೆಯಲು ಇದು ದಾರಿಯಾಗುತ್ತದೆ. ಇದೇ ಮಾರ್ಚ್ 18ರಂದು ಪಾಪಮೋಚನಿ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ.
ಪಾಪವಿಮೋಚಿನೀ ಏಕಾದಶಿಯ ಮುಹೂರ್ತ
ವೈದಿಕ ಪಂಚಾಂಗದ ಅನುಸಾರ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯು ಮಾರ್ಚ್ 1 7 ರಾತ್ರಿ 2ಗಂಟೆ 7ನಿಮಿಷಕ್ಕೆ ಆರಂಭವಾಗುತ್ತದೆ. ಮರುದಿನ ಅಂದರೆ 18 ಮಾರ್ಚ್ ಬೆಳಗ್ಗೆ 11 ಗಂಟೆ 12 ನಿಮಿಷದವರೆಗೂ ಇರುತ್ತದೆ. ಉದಯ ತಿಥಿಯ ಅನುಸಾರವಾಗಿ ಏಕಾದಶಿ ವ್ರತಾಚರಣೆಯನ್ನು ಮಾರ್ಚ್ 18ರಂದು ಮಾಡಲಾಗುತ್ತದೆ. ವ್ರತದ ಪಾರಾಯಣವನ್ನು ಮಾರ್ಚ್ 19ರ ಬೆಳಗ್ಗೆ 6 ಗಂಟೆ 28 ನಿಮಿಷದಿಂದ 8 ಗಂಟೆ 09ನಿಮಿಷದ ವರೆಗೆ ಮಾಡಬಹುದಾಗಿದೆ.
ಏಕಾದಶಿ ವ್ರತಕ್ಕೆ ಮಾರ್ಚ್ 18ರ ಬೆಳಗ್ಗೆ 8 ಗಂಟೆ 58 ನಿಮಿಷದಿಂದ 9 ಗಂಟೆ 28 ನಿಮಿಷದ ವರೆಗೂ ಶುಭ ಮುಹೂರ್ತ ಇರುತ್ತದೆ. ಈ ಸಮಯದಲ್ಲಿ ಶ್ರೀ ಮಹಾವಿಷ್ಣುವಿನ ಆರಾಧನೆ ಮಾಡಲು ಪ್ರಶಸ್ತವಾದ ಸಮಯವಾಗಿದೆ.
ಪಾಪವಿಮೋಚಿನೀ ಏಕಾದಶಿ ಮಹತ್ವ
ಶಾಸ್ತ್ರಗಳ ಪ್ರಕಾರ ಏಕಾದಶಿ ಆಚರಣೆಯಿಂದ ಪಾಪಗಳು ನಾಶವಾಗಿ, ಉತ್ತಮ ಜೀವನ ಲಭ್ಯವಾಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಪಾಪವಿಮೋಚಿನೀ ಏಕಾದಶಿ ಆಚರಣೆಯಿಂದ ಏಳು ಜನ್ಮಗಳ ಪಾಪ ನಾಶವಾಗುತ್ತದೆ. ಅಷ್ಟೇ ಅಲ್ಲದೇ ಸಾಂಸರಿಕ ಸುಖ ಲಭಿಸುತ್ತದೆ. ಈ ದಿನ ವಿಷ್ಣುವಿನ ಆರಾಧನೆಯಿಂದ ಸಂಪತ್ತು, ಆರೋಗ್ಯ ಮತ್ತು ಆಯುಷ್ಯ ಪ್ರಾಪ್ತವಾಗುತ್ತದೆ.
ಏಕಾದಶಿ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯ ಮನಸ್ಸಿನಿಂದ ದ್ವೇಷ ಭಾವನೆಗಳು ನಾಶವಾಗುತ್ತವೆ ಮತ್ತು ಚಂಚಲ ಸ್ವಭಾವ ಕೊನೆಗೊಳ್ಳುತ್ತದೆ. ಹಾಗಾಗಿ ಭಕ್ತಿ ಮತ್ತು ಶ್ರದ್ಧೆಯಿಂದ ಏಕಾದಶಿಯನ್ನು ಆಚರಣೆ ಮಾಡಿದವರಿಗೆ ಜೀವನದಲ್ಲಿ ಸಕಲ ಸುಖಗಳು ಪ್ರಾಪ್ತವಾಗುತ್ತವೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಏಕಾದಶಿಯಂದು ಏನು ಮಾಡಬೇಕು?
ಪ್ರಾತಃ ಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿದ ನಂತರ ಮಡಿ ಬಟ್ಟೆಯನ್ನು ಧರಿಸಿಕೊಳ್ಳಬೇಕು. ಅದಾದ ಬಳಿಕ ಸೂರ್ಯನಿಗೆ ನಮಿಸಿ ಅರ್ಘ್ಯವನ್ನು ಅರ್ಪಿಸಬೇಕು. ಅದಾದ ಬಳಿಕ ಬಾಳೆ ಮರಕ್ಕೆ ಜಲವನ್ನು ಅರ್ಪಿಸಬೇಕು. ಇದರಿಂದ ಸೂರ್ಯದೇವನ ಕೃಪೆ ಪ್ರಾಪ್ತವಾಗುತ್ತದೆ.
ಶ್ರೀ ಮಹಾವಿಷ್ಣುವಿನ ಚಿತ್ರ ಅಥವಾ ಮೂರ್ತಿಯನ್ನು ಒಂದು ಕಡೆ ಸ್ಥಾಪನೆ ಮಾಡಬೇಕು. ಭಕ್ತಿ ಮತ್ತು ಶ್ರದ್ಧೆಯಿಂದ ಮಹಾವಿಷ್ಣುವಿನ ಧ್ಯಾನ ಮಾಡುತ್ತಾ ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಇದರಿಂದ ಮಹಾ ವಿಷ್ಣುವಿನ ಕೃಪೆ ಪ್ರಾಪ್ತವಾಗುವುದಲ್ಲದೇ, ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. ವಿಷ್ಣುವನ್ನು ಪೂಜಿಸುವ ಸಮಯದಲ್ಲಿ ಶ್ರೀಮದ್ಭಗವದ್ಗೀತೆಯ ಹನ್ನೊಂದನೇ ಅಧ್ಯಾಯವನ್ನು ಪಠಿಸಬೇಕು. ಇದರಿಂದ ಮನಸ್ಸಿನ ಶುದ್ಧಿಕರಣವಾಗುತ್ತದೆ.
ವಿಷ್ಣುವನ್ನು ಸ್ಮರಣೆ ಮಾಡಲು ‘ಓಂ ನಮೋ ಭಗವತೇ ವಾಸುದೇವಾಯ ನಮಃ’ ಮಂತ್ರವನ್ನು 108 ಬಾರಿ ಜಪಿಸಬೇಕು. ಏಕಾದಶಿ ದಿನದಂದು ಮರೆತು ಕೂಡಾ ತುಳಸಿ ಎಲೆಯನ್ನು ಕೀಳಬಾರದು.
ಇದನ್ನೂ ಓದಿ: Jaya Ekadashi 2023 : ಜಯ ಏಕಾದಶಿಯಂದು ವಿಷ್ಣು ಸಹಸ್ರನಾಮ ಪಠಿಸಿದರೆ ಇಷ್ಟಾರ್ಥ ಸಿದ್ಧಿ!