ಧಾರ್ಮಿಕ
Papamochani Ekadasi 2023 : ಪಾಪವಿಮೋಚಿನೀ ಏಕಾದಶಿ ದಿನ ವ್ರತಾಚರಣೆ ಹೇಗೆ?
ಏಕಾದಶಿ ಆಚರಣೆಗೆ ವಿಶೇಷವಾದ ಪ್ರಾಶಸ್ತ್ಯವಿದೆ. ಏಕಾದಶಿ ವ್ರತವನ್ನು ಆಚರಣೆ ಮಾಡುವುದರಿಂದ ಪಾಪಗಳು ನಾಶವಾಗಿ, ಜೀವನದಲ್ಲಿ ಸುಖ ಮತ್ತು ನೆಮ್ಮದಿ ಪ್ರಾಪ್ತವಾಗುತ್ತದೆ. ಅದರಲ್ಲೂ ಪಾಪವಿಮೋಚಿನೀ ಏಕಾದಶಿ (Papamochani Ekadasi 2023) ವ್ರತವನ್ನು ಆಚರಿಸುವುದರಿಂದ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. ಈ ಏಕಾದಶಿಯ ಪರಿಚಯ ಇಲ್ಲಿದೆ.
ಹಿಂದೂ ಧರ್ಮದಲ್ಲಿ ಏಕಾದಶಿಗೆ (Papamochani Ekadasi 2023) ವಿಶೇಷ ಮಹತ್ವವಿದೆ. ಒಂದು ಮಾಸದಲ್ಲಿ ಎರಡು ಏಕಾದಶಿ ಬರುತ್ತದೆ. ಕೃಷ್ಣಪಕ್ಷದಲ್ಲಿ ಮತ್ತು ಶುಕ್ಲಪಕ್ಷದಲ್ಲಿ ಒಂದೊಂದು ಏಕಾದಶಿ ಬರುತ್ತದೆ. ಏಕಾದಶಿ ಎಂದರೆ ಹನ್ನೊಂದನೇ ತಿಥಿ ಎಂದರ್ಥ. ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು ಮತ್ತು ಮನಸ್ಸು ಸೇರಿ ಹನ್ನೊಂದಾಗುತ್ತದೆ. ಇವುಗಳನ್ನು ಬಳಸಿಕೊಂಡು ಶ್ರದ್ಧೆಯಿಂದ ಭಗವಂತನ ಚಿಂತನೆಯನ್ನು ಮಾಡುವುದಾಗಿದೆ. ಏಕಾದಶಿಯಂದು ಶ್ರೀ ಮಹಾವಿಷ್ಣುವಿನ ಆರಾಧನೆ ಮಾಡಲಾಗುತ್ತದೆ.
ಏಕಾದಶಿ ವ್ರತವನ್ನು ಕೈಗೊಂಡು ಶ್ರೀ ಮಹಾವಿಷ್ಣುವಿನ ಆರಾಧನೆ ಮಾಡುವುದರಿಂದ ಸಕಲ ಪಾಪಗಳು ನಾಶವಾಗಿ, ಮುಕ್ತಿ ದೊರಕುತ್ತದೆ. ಜೊತೆಗೆ ಸಂಪತ್ತು, ಆರೋಗ್ಯ ಮತ್ತು ಮೋಕ್ಷ ಪಡೆಯಲು ಇದು ದಾರಿಯಾಗುತ್ತದೆ. ಇದೇ ಮಾರ್ಚ್ 18ರಂದು ಪಾಪಮೋಚನಿ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ.
ಪಾಪವಿಮೋಚಿನೀ ಏಕಾದಶಿಯ ಮುಹೂರ್ತ
ವೈದಿಕ ಪಂಚಾಂಗದ ಅನುಸಾರ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯು ಮಾರ್ಚ್ 1 7 ರಾತ್ರಿ 2ಗಂಟೆ 7ನಿಮಿಷಕ್ಕೆ ಆರಂಭವಾಗುತ್ತದೆ. ಮರುದಿನ ಅಂದರೆ 18 ಮಾರ್ಚ್ ಬೆಳಗ್ಗೆ 11 ಗಂಟೆ 12 ನಿಮಿಷದವರೆಗೂ ಇರುತ್ತದೆ. ಉದಯ ತಿಥಿಯ ಅನುಸಾರವಾಗಿ ಏಕಾದಶಿ ವ್ರತಾಚರಣೆಯನ್ನು ಮಾರ್ಚ್ 18ರಂದು ಮಾಡಲಾಗುತ್ತದೆ. ವ್ರತದ ಪಾರಾಯಣವನ್ನು ಮಾರ್ಚ್ 19ರ ಬೆಳಗ್ಗೆ 6 ಗಂಟೆ 28 ನಿಮಿಷದಿಂದ 8 ಗಂಟೆ 09ನಿಮಿಷದ ವರೆಗೆ ಮಾಡಬಹುದಾಗಿದೆ.
ಏಕಾದಶಿ ವ್ರತಕ್ಕೆ ಮಾರ್ಚ್ 18ರ ಬೆಳಗ್ಗೆ 8 ಗಂಟೆ 58 ನಿಮಿಷದಿಂದ 9 ಗಂಟೆ 28 ನಿಮಿಷದ ವರೆಗೂ ಶುಭ ಮುಹೂರ್ತ ಇರುತ್ತದೆ. ಈ ಸಮಯದಲ್ಲಿ ಶ್ರೀ ಮಹಾವಿಷ್ಣುವಿನ ಆರಾಧನೆ ಮಾಡಲು ಪ್ರಶಸ್ತವಾದ ಸಮಯವಾಗಿದೆ.
ಪಾಪವಿಮೋಚಿನೀ ಏಕಾದಶಿ ಮಹತ್ವ
ಶಾಸ್ತ್ರಗಳ ಪ್ರಕಾರ ಏಕಾದಶಿ ಆಚರಣೆಯಿಂದ ಪಾಪಗಳು ನಾಶವಾಗಿ, ಉತ್ತಮ ಜೀವನ ಲಭ್ಯವಾಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಪಾಪವಿಮೋಚಿನೀ ಏಕಾದಶಿ ಆಚರಣೆಯಿಂದ ಏಳು ಜನ್ಮಗಳ ಪಾಪ ನಾಶವಾಗುತ್ತದೆ. ಅಷ್ಟೇ ಅಲ್ಲದೇ ಸಾಂಸರಿಕ ಸುಖ ಲಭಿಸುತ್ತದೆ. ಈ ದಿನ ವಿಷ್ಣುವಿನ ಆರಾಧನೆಯಿಂದ ಸಂಪತ್ತು, ಆರೋಗ್ಯ ಮತ್ತು ಆಯುಷ್ಯ ಪ್ರಾಪ್ತವಾಗುತ್ತದೆ.
ಏಕಾದಶಿ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯ ಮನಸ್ಸಿನಿಂದ ದ್ವೇಷ ಭಾವನೆಗಳು ನಾಶವಾಗುತ್ತವೆ ಮತ್ತು ಚಂಚಲ ಸ್ವಭಾವ ಕೊನೆಗೊಳ್ಳುತ್ತದೆ. ಹಾಗಾಗಿ ಭಕ್ತಿ ಮತ್ತು ಶ್ರದ್ಧೆಯಿಂದ ಏಕಾದಶಿಯನ್ನು ಆಚರಣೆ ಮಾಡಿದವರಿಗೆ ಜೀವನದಲ್ಲಿ ಸಕಲ ಸುಖಗಳು ಪ್ರಾಪ್ತವಾಗುತ್ತವೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಏಕಾದಶಿಯಂದು ಏನು ಮಾಡಬೇಕು?
ಪ್ರಾತಃ ಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿದ ನಂತರ ಮಡಿ ಬಟ್ಟೆಯನ್ನು ಧರಿಸಿಕೊಳ್ಳಬೇಕು. ಅದಾದ ಬಳಿಕ ಸೂರ್ಯನಿಗೆ ನಮಿಸಿ ಅರ್ಘ್ಯವನ್ನು ಅರ್ಪಿಸಬೇಕು. ಅದಾದ ಬಳಿಕ ಬಾಳೆ ಮರಕ್ಕೆ ಜಲವನ್ನು ಅರ್ಪಿಸಬೇಕು. ಇದರಿಂದ ಸೂರ್ಯದೇವನ ಕೃಪೆ ಪ್ರಾಪ್ತವಾಗುತ್ತದೆ.
ಶ್ರೀ ಮಹಾವಿಷ್ಣುವಿನ ಚಿತ್ರ ಅಥವಾ ಮೂರ್ತಿಯನ್ನು ಒಂದು ಕಡೆ ಸ್ಥಾಪನೆ ಮಾಡಬೇಕು. ಭಕ್ತಿ ಮತ್ತು ಶ್ರದ್ಧೆಯಿಂದ ಮಹಾವಿಷ್ಣುವಿನ ಧ್ಯಾನ ಮಾಡುತ್ತಾ ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಇದರಿಂದ ಮಹಾ ವಿಷ್ಣುವಿನ ಕೃಪೆ ಪ್ರಾಪ್ತವಾಗುವುದಲ್ಲದೇ, ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. ವಿಷ್ಣುವನ್ನು ಪೂಜಿಸುವ ಸಮಯದಲ್ಲಿ ಶ್ರೀಮದ್ಭಗವದ್ಗೀತೆಯ ಹನ್ನೊಂದನೇ ಅಧ್ಯಾಯವನ್ನು ಪಠಿಸಬೇಕು. ಇದರಿಂದ ಮನಸ್ಸಿನ ಶುದ್ಧಿಕರಣವಾಗುತ್ತದೆ.
ವಿಷ್ಣುವನ್ನು ಸ್ಮರಣೆ ಮಾಡಲು ‘ಓಂ ನಮೋ ಭಗವತೇ ವಾಸುದೇವಾಯ ನಮಃ’ ಮಂತ್ರವನ್ನು 108 ಬಾರಿ ಜಪಿಸಬೇಕು. ಏಕಾದಶಿ ದಿನದಂದು ಮರೆತು ಕೂಡಾ ತುಳಸಿ ಎಲೆಯನ್ನು ಕೀಳಬಾರದು.
ಇದನ್ನೂ ಓದಿ: Jaya Ekadashi 2023 : ಜಯ ಏಕಾದಶಿಯಂದು ವಿಷ್ಣು ಸಹಸ್ರನಾಮ ಪಠಿಸಿದರೆ ಇಷ್ಟಾರ್ಥ ಸಿದ್ಧಿ!
ಧಾರ್ಮಿಕ
Prerane : ಪಲಾಯನ ಪರಿಹಾರವಲ್ಲ!
ಕೆಲವರು ಮೋಹದ ಅಂಧಕಾರವನ್ನು ಭೇದಿಸಲು ಪ್ರಯತ್ನಮಾಡುವುದಿಲ್ಲ. ಮೋಹಕ್ಕೆ ವಿರುದ್ಧವಾಗಿ ಅಮೋಹ ಸಾಧಿಸಲು ತೊಡಗುತ್ತಾರೆ. ಇದರಿಂದ ಯಾವ ಪ್ರಯೋಜನವೂ ಇಲ್ಲ ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಪಲಾಯನ ವಾದದ ಕುರಿತ ಅವರ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿ.
ಶ್ರೀ ಕೈವಲ್ಯಾನಂದ ಸರಸ್ವತೀ
ಇತ್ತೀಚಿನ ದಿನಗಳಲ್ಲಿ ಹಲವಾರು ಧಾರ್ಮಿಕ ಸಂಘ- ಸಸ್ಥೆಗಳು ತಲೆಎತ್ತಿವೆ. ಅವುಗಳ ನಾಯಕರು, ಸ್ವಯಂಘೋಷಿತ ಧಾರ್ಮಿಕ ಮುಖಂಡರು, ಆಧ್ಯಾತ್ಮಿಕ ದಾರಿಯಲ್ಲಿ ಮೋಹ ಉಂಟು ಮಾಡುವ ವಸ್ತುಗಳಿಂದ ದೂರಹೋಗುವುದೇ ಪರಿಹಾರವೆಂದು ಹೇಳುತ್ತಾರೆ. ಮೋಹದ ವ್ಯಕ್ತಿಯಿಂದ ಪಲಾಯನ ಮಾಡುವುದೇ ಪರಿಹಾರವೆಂದು ಹೇಳುತ್ತಾರೆ. ನೀವು ಮನೆಯನ್ನು ಬಿಡಿ, ನಮ್ಮ ಸಂಸ್ಥೆಯಲ್ಲಿ ಬಂದಿರಿ- ಎನ್ನುತ್ತಾರೆ. ಇವರುಗಳಿಗೆ ಯಾವ ರೀತಿಯ ಪ್ರಮಾಣ ಗ್ರಂಥವಿಲ್ಲ. ಹೋಗಲಿ, ಹೇಳುವುದಾದರೂ ಯುಕ್ತಿ ಯುಕ್ತವೇ? ಎಂದರೆ ಅದೂ ಅಲ್ಲ. ಅನುಭವ ಸಮ್ಮತವೇ ಎಂದರೆ ಅದೂ ಇಲ್ಲ. ಮುಮುಕ್ಷುಗಳು ಇಂತಹವರಿಂದ ದೂರವಿರಬೇಕು. ಓಡಿಹೋಗುವುದರಿಂದ, ಇಲ್ಲಿ ಸಂಸಾರವೂ ಇಲ್ಲದೆ, ಉಭಯ ಭ್ರಷ್ಟರಾಗುವುದೊಂದೇ ದಾರಿ. ತಸ್ಮಾತ್ ಜಾಗ್ರತ, ಜಾಗ್ರತ.
ಕೆಲವರು ಮೋಹದ ಅಂಧಕಾರವನ್ನು ಭೇದಿಸಲು ಪ್ರಯತ್ನಮಾಡುವುದಿಲ್ಲ. ಮೋಹಕ್ಕೆ ವಿರುದ್ಧವಾಗಿ ಅಮೋಹ ಸಾಧಿಸಲು ತೊಡಗುತ್ತಾರೆ. ಮನೆಯಲ್ಲಿ ಮೋಹವಿದೆಯೆಂದು ಮನೆಯನ್ನು ಬಿಟ್ಟುಬಿಡುತ್ತಾರೆ. ಕಾಡಿಗೆ ಹೋಗುತ್ತಾರೆ. ಆದರೆ ಮೋಹವೆಂಬುದು ಮನೆಯಲ್ಲಿತ್ತೊ ಅಥವಾ ಮನೆ ಬಿಟ್ಟು ಹೋದವನಲ್ಲಿ ಇತ್ತೊ? ಒಂದು ವೇಳೆ ಮನೆಯ ಮೇಲೆ ಇದ್ದಿದ್ದೇ ಆದರೆ, ಮನೆ ಬಿಟ್ಟಾಗ ಮೋಹದಿಂದ ಹೊರಹೋದನೆಂದು ಹೇಳಬಹುದು. ಆದರೆ ಮನೆಗೆ ನಿಮ್ಮ ಬಗ್ಗೆ ಯಾವ ಮೋಹವೂ ಇಲ್ಲ. ಮನೆಯ ಬಗ್ಗೆ ನಿಮ್ಮಲ್ಲಿ ಮೋಹವಿದೆ. ಆದ್ದರಿಂದ ನೀವೆಲ್ಲಿ ಹೋದರೂ ಮೋಹ ಅಲ್ಲೂ ಸೇರಿಕೊಳ್ಳುತ್ತದೆ.
ಅದು ನಿಮ್ಮ ಜತೆಯಲ್ಲೇ ಬರುತ್ತದೆ. ಅದು ನಿಮ್ಮ ನೆರಳು. ಮತ್ತೇ ಆಶ್ರಮದಲ್ಲಿ ʻನನ್ನ ಆಶ್ರಮ’ ಎಂಬ ಮೋಹವುಂಟಾಗುತ್ತದೆ. ಮನೆಗೆ ಅಂಟಿಕೊಂಡಂತೆ ಆಶ್ರಮಕ್ಕೆ ಅಂಟಿಕೊಳ್ಳುತ್ತೇವೆ. ಹೆಂಡತಿ ಮಕ್ಕಳನ್ನು ಬಿಟ್ಟುಹೋದಲ್ಲಿ, ಅವರ ಸ್ಥಾನದಲ್ಲಿ ಗುರು-ಶಿಷ್ಯರು ಬರುತ್ತಾರೆ. ಸಂಸಾರದಲ್ಲಿರುವವರಿಗೆ ಅಂಟಿಕೊಂಡಂತೆ ಇವರಿಗೂ ಅಂಟಿಕೊಳ್ಳುತ್ತಾರೆ. ಅರಮನೆಗೆ ಅಂಟಿಕೊಂಡಂತೆ ಈಗ ಒಂದು ಗುಡಿಸಲಿಗೆ ಅಂಟಿಕೊಳ್ಳಬಹುದು.
ಬೆಲೆಬಾಳುವ ವಸ್ತುಗಳನ್ನು ಬಿಟ್ಟು ಹುಲಿ ಚರ್ಮವನ್ನು ಧರಿಸಬಹುದು. ಆದರೆ ರಾಜನ ವಸ್ತ್ರಗಳಂತೆ ಹುಲಿ ಚರ್ಮವೂ ಬಂಧನವೇ. ನಗ್ನವಾಗಿ ತಿರುಗಿದರೂ ನಗ್ನತ್ವಕ್ಕೆ ಮೋಹ ಬರುವುದು. ನನ್ನ ಮನೆ, ನನ್ನ ಆಶ್ರಮ; ನನ್ನ ಮಗ, ನನ್ನ ಶಿಷ್ಯ – ಇವುಗಳಲ್ಲಿ ವ್ಯತ್ಯಾಸವೇನು?ಮೋಹವು ಹೊಸ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತದೆ. ಮೋಹವು ಹೊಸ ಗೃಹಸ್ಥೆಯಾಗಿ, ಗೃಹಸ್ಥನಾಗಿ ಪುನಃ ವಾಸಮಾಡುತ್ತದೆ. ಮನೆ ಎಂಬುದರ ಅರ್ಥ ಕಟ್ಟಡವಲ್ಲ. ಮನೆ ಎಂಬುದರ ಅರ್ಥ ಅದರಲ್ಲಿ ವಾಸಮಾಡುವವರ ಮೋಹ – ಯಾರು ಮನೆಯನ್ನು ಮಾಡಿಕೊಂಡಿರುತ್ತಾರೋ, ಅವರ ಮೋಹದಿಂದ ಮನೆ ಎನಿಸಿಕೊಳ್ಳುತ್ತದೆ. ಅಂತಹ ವ್ಯಕ್ತಿ ಎಲ್ಲಾದರೂ ಮನೆಯನ್ನು ಮಾಡಿಕೊಳ್ಳುತ್ತಾನೆ. ಒಂದು ಮರದ ಕೆಳಗೆ ಕೂತರೂ ಅದು ʻʻನನ್ನ’’ದಾಗುವುದು.
ನನಗಿಂತಲೂ ಭಿನ್ನವಾದ ಇತರ ವಸ್ತುಗಳು ಸರ್ವತ್ರ ಇವೆ. ಈ ಪ್ರಪಂಚದಲ್ಲಿ ಇತರ ವಸ್ತುಗಳನ್ನು ತಪ್ಪಿಸಿಕೊಂಡು ಓಡಿಹೋಗಲು ಸಾಧ್ಯವಿಲ್ಲ. ಏಕೆಂದರೆ ಪ್ರಪಂಚವೇ ಇತರ ವಸ್ತುಗಳು. ಹಾಗೂ ಎಲ್ಲಿ ಹೋದರೂ ಪ್ರಪಂಚ ನಿನ್ನ ಜತೆಯಲ್ಲಿಯೇ ಇರುತ್ತದೆ. ಪ್ರಪಂಚದಿಂದ ಆಚೆಗೆ ನೀನು ಹೋಗಲಾಗದು. ಎಲ್ಲಿ ಹೋದರೂ ʻʻಇತರೆ’’ ಎನ್ನುವುದು ಅಲ್ಲಿ ಇರುವುದು. ಆದ್ದರಿಂದ ʻʻಇತರೆ’’ ಎಂಬುದರಿಂದ ಓಡಿಹೋಗಲಾರದು. ‘ಇತರೆ’ ಎಂಬುದು ಹೊಸರೂಪವನ್ನು ಪಡೆಯಬಹುದು. ಆದರೆ ಅಲ್ಲಿ ತಪ್ಪದೆ ಇರುತ್ತದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ದೃಶ್ಯವನ್ನು ಬದಲಾಯಿಸುವುದರಿಂದ ಮೋಹದಿಂದ ಮುಕ್ತಿಯಾಗದು. ಎಲ್ಲಿ ಹೋದರೂ ʻಇತರೆ’ ಎಂಬುದು ದೃಶ್ಯರೂಪದಲ್ಲಿರುತ್ತದೆ ಎಂಬ ಸತ್ಯವನ್ನು ಬದಲಾಯಿಸಲಾಗದು. ಈ ಸತ್ಯದ ಇನ್ನೊಂದು ಮುಖವೇನೆಂದರೆ ಎಲ್ಲಿ ಹೋದರೂ ʻಅಹಂ’ ಎಂಬುದು ಇದ್ದೇ ಇರುತ್ತದೆ. ನೀನು ʻʻಅಹಂ’’ ರೂಪದಲ್ಲಿ ಇರುವವರೆಗೂ ʻʻಇತರೆ’’ ಎಂಬುದು ಇದ್ದೇ ಇರುತ್ತದೆ. ಕಣ್ಣುಮುಚ್ಚಿಕೊಂಡರು ʻʻಇತರೆ’’ ಎಂಬುದು ಅದೃಶ್ಯವಾಗದು. ʻʻಇತರೆ’’ ಎಂಬುದು ಮುಚ್ಚಿದ ಕಣ್ಣಿನ ಹಿಂಭಾಗದಲ್ಲಿರುವುದು. ನಿನ್ನ ಆಸೆಗಳಲ್ಲಿ, ಆತುರತೆಯ ಆಸೆಗಳಲ್ಲಿ, ನಿನ್ನಿ ಕನಸಿನಲ್ಲಿ – ಹಗಲುಕನಸಿನಲ್ಲಿ – ‘ಇತರೆ’ ಎಂಬುದು ಇರುವುದು. ಅಹಂ ಇರುವವರೆಗೂ, ʻʻಇತರೆ’’ ಎಂಬುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲಿ ಹೋದರೂ ಪ್ರಪಂಚವಿದೆ, ಅಹಂ ಇದೆ. ಇವೆರಡಕ್ಕೂ ಸಂಬಂಧ ತಪ್ಪದೇ ಬರುತ್ತದೆ. ಸಂಬಂಧದಲ್ಲಿ ʻಮೋಹ’ದ ಉಗಮವಾಗುತ್ತದೆ. ಆದ್ದರಿಂದ ಪಲಾಯನ ಪರಿಹಾರವಲ್ಲ.
ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Navavidha Bhakti : ಭಕ್ತಿ- ಮುಕ್ತಿಗಳನ್ನೀವ ಭಗವಂತನ ಸ್ಮರಣೆ
ಕರ್ನಾಟಕ
Dharma Dangal : ಬೇಲೂರು ರಥೋತ್ಸವದ ವೇಳೆ ನಡೆಯುವ ಕುರಾನ್ ಪಠಣ ಅಧಿಕೃತವಲ್ಲ; ದಾಖಲೆಗಳಲ್ಲಿ ಹೇಳಿಲ್ಲ ಎಂದ ಆಗಮ ಪಂಡಿತರು
ಬೇಲೂರು ಚನ್ನಕೇಶವ ದೇವಾಲಯ (Beluru channakeshava temple) ರಥೋತ್ಸವದ ಸಂದರ್ಭದಲ್ಲಿ ಇದುವರೆಗೆ ನಡೆದುಕೊಂಡು ಬರುತ್ತಿರುವ ಕುರಾನ್ ಪಠಣದ ವಿಚಾರದಲ್ಲಿ ಆಗಮ ಪಂಡಿತರ ವರದಿ ಕೇಳಲಾಗಿದೆ. ಅವರ ವರದಿಯಲ್ಲಿ ಏನಿದೆ? ಈ ವರದಿ ನೋಡಿ..
ಹಾಸನ: ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ (Beluru channakeshava temple) ರಥೋತ್ಸವದ ವೇಳೆ ನಡೆದುಕೊಂಡು ಬರುತ್ತಿರುವ ಕುರಾನ್ ಪಠಣ ಅಧಿಕೃತವಲ್ಲ, ಕುರಾನ್ ಪಠಣ ಮಾಡಬೇಕು ಎಂದು ಯಾವ ದಾಖಲೆಗಳಲ್ಲೂ ಹೇಳಲಾಗಿಲ್ಲ- ಹೀಗೆಂದು ದೇಗುಲಕ್ಕೆ ಭೇಟಿ ನೀಡಿದ ಪುರಾತತ್ವ ಇಲಾಖೆಯ ಹಿರಿಯ ಆಗಮ ಪಂಡಿತ ಜಿ.ಎ.ವಿಜಯ್ ಕುಮಾರ್ ಹೇಳಿದ್ದಾರೆ.
ಚನ್ನಕೇಶವ ದೇವಾಲಯದ ಜಾತ್ರೆಯ ಸಂದರ್ಭದಲ್ಲಿ ರಥೋತ್ಸವದ ವೇಳೆ ಕುರಾನ್ ಪಠಣ ನಡೆದು ನಂತರ ರಥ ಮುಂದುವರಿಯುವ ವಾಡಿಕೆ ಇದೆ. ಇದರ ವಿರುದ್ಧ ಕಳೆದ ಕೆಲವು ವರ್ಷಗಳಿಂದ ಹಿಂದು ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಬಾರಿ ಅದು ಸ್ವಲ್ಪ ದೊಡ್ಡ ಮಟ್ಟದ ಪ್ರತಿಭಟನೆಯೇ ನಡೆದಿದೆ. ಈ ಹಿನ್ನೆಲೆಯಲ್ಲಿ ಹಾಸನದ ಜಿಲ್ಲಾಧಿಕಾರಿಯಾಗಿರುವ ಎಂ.ಎಸ್.ಅರ್ಚನಾ ಆಗಮ ಪಂಡಿತರನ್ನು ಕರೆಸಿ ಅವರಿಂದ ವಿವರ ಪಡೆಯಲು ನಿರ್ಧರಿಸಿದ್ದರು.
ಜಿಲ್ಲಾಧಿಕಾರಿ ಅರ್ಚನಾ ಅವರು ಹೇಳಿದ್ದೇನು?
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು, ʻʻಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ನಮ್ಮ ಸ್ವಂತ ವಿವೇಚನೆಯಿಂದ ನಿಲ್ಲಿಸಲು ಸಾಧ್ಯವಿಲ್ಲ. ಇದು ಹೊಸದಾಗಿ ಸೃಷ್ಟಿಯಾದುದಲ್ಲ. 1929ರಿಂದಲೂ ಈ ಪದ್ಧತಿ ಇದೆ. ಅದು ಮ್ಯಾನುಯಲ್‌ನಲ್ಲಿಯೂ ಸೇರಿದೆ. ರಥೋತ್ಸವದ ವೇಳೆ ಮೌಲ್ವಿಗಳು ಬಂದು ಮುಜ್ರೆ ಸೇವೆ ಅಂತ ಮಾಡುತ್ತಾರೆ. ಕಳೆದ ವರ್ಷ ಇದನ್ನು ನಿಲ್ಲಿಸಲು ಒತ್ತಡ ಬಂದಿತ್ತು. ಆ ಬಗ್ಗೆ ಮುಜರಾಯಿ ಇಲಾಖೆಗೆ ಸ್ಪಷ್ಟನೆ ಕೇಳಿದ್ದೆವು. ಹಿಂದಿನ ಪದ್ಧತಿಯನ್ನು ಬದಲಾವಣೆ ಮಾಡುವುದು ಬೇಡ ಎಂದಿದ್ದರು. ಅದರಂತೆ ಕಳೆದ ವರ್ಷ ಪದ್ಧತಿ ಪ್ರಕಾರ ನಡೆದುಕೊಂಡು ಹೋಗಿದೆ ಎಂದು ಅರ್ಚನಾ ತಿಳಿಸಿದರು.
ಈ ವರ್ಷ ಮತ್ತೆ ಪದ್ಧತಿ ಬದಲಾಯಿಸಿ ಎಂದು ಕೇಳಿದ್ದಾರೆ. ದಿಢೀರ್ ಆಗಿ ಇಂತಹ ಪದ್ಧತಿಗಳನ್ನು ಬದಲಾವಣೆ ಮಾಡಲು ಆಗುವುದಿಲ್ಲ. ನಿನ್ನೆ ಪ್ರತಿಭಟನೆ ಮಾಡಿದ್ದಾರೆ, ಆ ವೇಳೆ ಯಾರೋ ಒಬ್ಬ ಯುವಕ ಘೋಷಣೆ ಕೂಗಿದ ಅನ್ನುವ ಕಾರಣಕ್ಕೆ ಘರ್ಷಣೆ ಶುರುವಾಗಿದೆ. ತಕ್ಷಣ ಪೊಲೀಸರು ನಿಯಂತ್ರಿಸಿದ್ದಾರೆ. ಆಮೇಲೆ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಅದನ್ನು ಸದ್ಯ ನಿಯಂತ್ರಣಕ್ಕೆ ತರಲಾಗಿದೆ. ಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ನಮ್ಮ ಸ್ವಂತ ವಿವೇಚನೆಯಿಂದ ನಿಲ್ಲಿಸಲಾಗುವುದಿಲ್ಲ. ಪರಿಸ್ಥಿತಿಯನ್ನು ಮುಜರಾಯಿ ಇಲಾಖೆಗೂ ತಿಳಿಸಿದ್ದು, ಪರಿಶೀಲನೆಗೆ ಆಗಮ ಪಂಡಿತರು ಬರುತ್ತಿದ್ದಾರೆ. ಅವರು ನೋಡಿ ರಿಪೋರ್ಟ್ ಕೊಟ್ಟ ನಂತರ ಆ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು.
ದೇವಾಲಯಕ್ಕೆ ಆಗಮಿಸಿ ಪರಿಶೀಲಿಸಿದ ಆಗಮ ಪಂಡಿತರ ತಂಡ
ಜಿಲ್ಲಾಧಿಕಾರಿಯವರ ಮನವಿಯ ಮೇರೆಗೆ ಪುರಾತತ್ವ ಇಲಾಖೆಯ ಹಿರಿಯ ಆಗಮ ಪಂಡಿತ ಜಿ.ಎ.ವಿಜಯ್ ಕುಮಾರ್ ಅವರ ನೇತೃತ್ವದ ತಂಡ ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ಮಾತನಾಡಿದ ವಿಜಯ ಕುಮಾರ್ ಅವರು, ʻʻರಥೋತ್ಸವ ದಿನ ಯಾರು ಯಾರು ಯಾವ ಕರ್ತವ್ಯ ನಿರ್ವಹಿಸಬೇಕು? ಏನೇನು ವ್ಯತ್ಯಾಸ ಆಗಿದೆ? ಜನರಲ್ಲಿ ಏನು ಗೊಂದಲ ಆಗಿದೆ? ಅವುಗಳ ಪರಿಶೀಲನೆಗೆ ಮೇಲಾದಿಕಾರಿಗಳ ಸೂಚನೆ ಇದೆ. ಹೀಗಾಗಿ ಬಂದಿದ್ದೇವೆʼʼ ಎಂದು ಹೇಳಿದರು.
ʻʻದೇವಾಲಯದಲ್ಲಿ ಯಾರು, ಯಾವ ಸಂದರ್ಭದಲ್ಲಿ ಯಾವ ಕರ್ತವ್ಯವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಮ್ಯಾನ್ಯುಯಲ್ ಇದೆ. ಇದು ಮೈಸೂರು ಮಹಾರಾಜರ ಸಂಸ್ಥಾನದಿಂದ ಬಿಡುಗಡೆ ಆಗಿರುವ ಮ್ಯಾನ್ಯುಯಲ್. ಅದರಂತೆ ಎಲ್ಲ ವಿಧಿ ವಿಧಾನ, ಪೂಜಾ ಕೈಂಕರ್ಯ ಕರ್ತವ್ಯ ನಡೆಯುತ್ತಿದೆ. ಈ ಮಧ್ಯೆ ಸ್ವಲ್ಪ ವ್ಯತ್ಯಾಸ ಉಂಟಾಗಿ ಜನರಲ್ಲಿ ಗೊಂದಲ ಆಗಿದೆ. ಹಾಗಾಗಿ ನಾವು ಬಂದು ಆ ಗ್ರಂಥ ಪರಿಶೀಲನೆ ಮಾಡಿದ್ದೇವೆ. ವ್ಯವಸ್ಥಾಪನಾ ಸಮಿತಿ, ಆಡಳಿತ ಅಧಿಕಾರಿ, ಧಾರ್ಮಿಕ ಪರಿಷತ್ ಸದಸ್ಯರ ಸಮ್ಮುಖದಲ್ಲಿ ಪರಿಶೀಲನೆ ನಡೆದಿದೆ. ಮ್ಯಾನ್ಯುಯಲ್‌ನಲ್ಲಿ ಏನು ಹೇಳಿದೆ? ಯಾರು ಏನೇನು ಮಾಡುತ್ತಿದ್ದಾರೆ? ಏನು ತಪ್ಪು ಆಗಿದೆ ಎನ್ನುವ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಈ ಬಗ್ಗೆ ಇನ್ನೂ ಅನೇಕ ಗ್ರಂಥಗಳನ್ನು ಅದ್ಯಯನ ಮಾಡಿ ಎಲ್ಲವನ್ನೂ ತಿಳಿದು ನಾನು ಹಿರಿಯ ಅಧಿಕಾರಿಗಳಿಗೆ ವರದಿ ಕೊಡಬೇಕಾಗುತ್ತದೆʼʼ ಎಂದು ಹೇಳಿದು ವಿಜಯಕುಮಾರ್.
ಮೂರು ದಿನದಲ್ಲಿ ವರದಿ ಕೊಡುತ್ತೇನೆ
ʻʻಇನ್ನು ಎರಡು ಮೂರು ದಿನದಲ್ಲಿ ನಮ್ಮ ವರದಿಯನ್ನು ನೀಡುತ್ತೇನೆ. ಕೈಪಿಡಿಯಲ್ಲಿ ಏನಿದೆಯೋ ಅದನ್ನು ಮಾಡಬೇಕು, ಆಗಿರುವ ಲೋಪದೋಷ ಸರಿಪಡಿಸಿಕೊಳ್ಳಬೇಕು. ಮ್ಯಾನ್ಯುಯಲ್ ಪ್ರಕಾರ ಎಲ್ಲರಿಗೂ ಹಿಂದು ಧಾರ್ಮಿಕ ದತ್ತಿ ಕಾಯಿದೆ ಸೆಕ್ಷನ್ 58ರ ಪ್ರಕಾರ ದೇವಾಲಯದ ಸಂಪ್ರದಾಯ ನಡೆಸಿಕೊಂಡು ಹೋಗಬೇಕು ಎಂದಿದೆ. ಅದರಂತೆ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆʼʼ ಎಂದು ವಿಜಯಕುಮಾರ್ ಹೇಳಿದರು.
ಕುರಾನ್ ಪಠಣ ಮಾಡಬೇಕು ಎಂದು ಹೇಳಿಲ್ಲ
ಈ ಮಧ್ಯೆ ತಮ್ಮ ಪರಿಶೀಲನೆಯ ಅತ್ಯಂತ ಮಹತ್ವದ ಅಂಶವನ್ನ ವಿಜಯಕುಮಾರ್ ಬಿಚ್ಚಿಟ್ಟರು. ಅವರು ಕಂಡಕೊಂಡ ಪ್ರಕಾರ ರಥದ ಮುಂದೆ ಕುರಾನ್ ಪಠಣ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ.
ʻʻನಾನು ಓದಿದ ಪ್ರಕಾರ ರಥದ ಮುಂದೆಯಾಗಲಿ, ದೇವಾಲಯದ ಮುಂದೆಯಾಗಲಿ ಕುರಾನ್ ಪಠಣ ಮಾಡಬೇಕು ಎಂದು ಹೇಳಿಲ್ಲ. ಮುಸ್ಲಿಮರಿಗೆ ಗೌರವ ಸಲ್ಲಿಸಬೇಕು, ಅವರು ನಮಸ್ಕರಿಸಬೇಕು ಎಂದು ಹೇಳಲಾಗಿದೆ. ಅವರು ಮರ್ಯಾದೆ ಸಲಾಂ ಮಾಡಬೇಕು ಎಂದಿದೆ. ಅವರು ಮರ್ಯಾದೆ ಮಾಡಬೇಕು ಎಂದು ಉಲ್ಲೇಖ ಇದೆ. ಯಾರಿಗೆ ನಮಸ್ಕಾರ ಮಾಡಬೇಕು, ದೇವಸ್ಥಾನಕ್ಕೆ ಮಾಡಬೇಕೋ, ಅಧಿಕಾರಿಗಳಿಗೆ ನಮಸ್ಕಾರ ಮಾಡಬೇಕೋ ಎಂಬುದರ ಉಲ್ಲೇಖವಿಲ್ಲ. ನಮಸ್ಕಾರ ಯಾರಿಗೆ ಮಾಡಬೇಕು ಎಂಬುದನ್ನು ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಈ ಎಲ್ಲ ವಿಚಾರಗಳನ್ನು ಒಳಗೊಂಡ ವರದಿಯನ್ನು ನಾವು ಕೊಡಲಿದ್ದೇವೆʼʼ ಎಂದರು ಹಿರಿಯ ಆಗಮ ಪಂಡಿತ ವಿಜಯ್ ಕುಮಾರ್.
ಏಪ್ರಿಲ್ ನಾಲ್ಕು ಮತ್ತು ಐದರಂದು ಇಲ್ಲಿ ರಥೋತ್ಸವ ನಡೆಯಲಿದ್ದು, ಈ ವೇಳೆ ಹೇಗೆ ಪ್ರಕ್ರಿಯೆ ನಡೆಯಲಿದೆ ಎನ್ನುವುದು ಕುತೂಹಲಕಾರಿಯಾಗಿದೆ. ಜಿಲ್ಲಾಧಿಕಾರಿ ಮತ್ತು ಮುಜರಾಯಿ ಇಲಾಖೆ ದಾಖಲೆಗಳ ಆಧಾರದಲ್ಲಿ ಇದನ್ನು ಅಂತಿಮಗೊಳಿಸಲಿದೆ.
ಇದನ್ನೂ ಓದಿ : Dharma Dangal: ಬೇಲೂರು ದೇವಸ್ಥಾನದಲ್ಲಿ ಕುರಾನ್ ಪಠಣ: ಆಗಮ ಪಂಡಿತರ ಮೊರೆ ಹೋದ ಜಿಲ್ಲಾಡಳಿತ
ಕರ್ನಾಟಕ
Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು
Ram Navami 2023: ರಾಜ್ಯಾದ್ಯಂತ ಶ್ರೀರಾಮ ನವಮಿಯನ್ನು ವಿಶೇಷವಾಗಿ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇತ್ತ ಕಲಬುರಗಿಯಲ್ಲಿ ಮುಸ್ಲಿಮರು ನವಮಿ ಪ್ರಯುಕ್ತ ಮಜ್ಜಿಗೆ, ಪಾನಕವನ್ನು ವಿತರಿಸಿದರು.
ಬೆಂಗಳೂರು: ನಾಡಿನೆಲ್ಲೆಡೆ ಗುರುವಾರ ಶ್ರೀರಾಮ ನವಮಿಯ (Ram Navami 2023) ಸಂಭ್ರಮ ಮನೆ ಮಾಡಿತ್ತು. ಬೆಂಗಳೂರಿನ ರಾಜಾಜಿನಗರದ ರಾಮಮಂದಿರ (Rama Mandir), ಕೋದಂಡ ರಾಮಸ್ವಾಮಿ ದೇವಾಲಯ (kodanda ramaswamy temple), ಗಾಳಿ ಆಂಜನೇಯ (Gaali Anjaneya Temple) ದೇವಾಲಯ ಸೇರಿದಂತೆ ವಿವಿಧ ದೇಗುಲದಲ್ಲಿ ವಿಶೇಷ ಪೂಜೆ ಕೈಂಕರ್ಯ ನೆರವೇರಿತು.
ರಾಜಾಜಿನಗರದ ರಾಮಮಂದಿರದಲ್ಲಿ ರಾಮನವಮಿ ಪ್ರಯುಕ್ತ ಅದ್ಧೂರಿ ರಥೋತ್ಸವದ ಮೂಲಕ ಭಕ್ತರು ರಾಮ ನಾಮಸ್ಮರಣೆ ಮಾಡಿದರು. ಶ್ರೀರಾಮ ಸೇವಾ ಮಂಡಳಿ ಆಯೋಜಿಸಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಶ್ರೀರಾಮನ ರಥ ಎಳೆದರು. ಶ್ರೀರಾಮನ ವಿಗ್ರಹಕ್ಕೆ ವಜ್ರಾಂಗಿ ತೊಡಿಸುವ ಮೂಲಕ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂದಿರದ ಆವರಣದಲ್ಲಿ ಶ್ರೀರಾಮ, ಶ್ರೀಕೃಷ್ಣರನ್ನು ತಾಯಿಯರು ತೊಟ್ಟಿಲಲ್ಲಿ ಮಲಗಿಸಿ ತೂಗುವಂತೆ ನಿರ್ಮಿಸಿದ್ದ ವಿಗ್ರಹ ಭಕ್ತರ ಗಮನ ಸೆಳೆಯಿತು. ರಾಮನ ದರ್ಶನ ಪಡೆದ ಜನರು ರಾಮನ ಗುಣಗಾನ ಮಾಡಿದರು.
ಈ ಬಾರಿ ರಾಮನವಮಿ ಪ್ರಯುಕ್ತ ಶ್ರೀರಾಮಮಂದಿರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮ ಉತ್ಸವ ನಡೆಯಲಿದ್ದು, ಏಪ್ರಿಲ್ 9ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ದೇವಸ್ಥಾನದಲ್ಲಿ 63 ಅಡಿಯ ರಾಮ-ಲಕ್ಷ್ಮಣರ ಪ್ರತಿಮೆ ನಿರ್ಮಾಣ ಮಾಡುವುದಾಗಿ ಶ್ರೀರಾಮಮಂದಿರ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ತಿಳಿಸಿದರು.
ರಾಜಾಜಿನಗರದ ರಾಮಮಂದಿರ ಮಾತ್ರವಲ್ಲದೆ ಗಾಳಿ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಬೆಳಗ್ಗೆನಿಂದಲೇ ನೂರಾರು ಭಕ್ತರು ದೇವಸ್ಥಾನದ ಮುಂದೆ ಸಾಲುಗಟ್ಟಿ ನಿಂತಿದ್ದರು. ಚಿಕ್ಕಪೇಟೆಯ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಪಾನಕ-ಮಜ್ಜಿಗೆ ಹಾಗೂ ಅನ್ನಸಂತರ್ಪಣೆ ಮಾಡುವ ಮೂಲಕ ಶ್ರೀರಾಮನವಮಿಯನ್ನು ಆಚರಣೆ ಮಾಡಲಾಯಿತು.
ಮುಸ್ಲಿಮರಿಂದ ಮಜ್ಜಿಗೆ, ಪಾನಕ ಹಂಚಿಕೆ
ಕಲಬುರಗಿಯಲ್ಲಿ ಅದ್ಧೂರಿಯಾಗಿ ರಾಮ ನವಮಿಯನ್ನು ಆಚರಣೆ ಮಾಡಲಾಯಿತು. ರಾಮತೀರ್ಥ ದೇವಸ್ಥಾನದಿಂದ ಜಗತ್ ವೃತ್ತದವರೆಗೆ 15 ಅಡಿ ಎತ್ತರದ ರಾಮನ ಪ್ರತಿಮೆಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ವೇಳೆ ರಾಮನವಮಿ ಅಂಗವಾಗಿ ಖಾದ್ರಿ ಚೌಕ್ ಬಳಿ ಮುಸ್ಲಿಮರು ಮಜ್ಜಿಗೆ, ಪಾನಕವನ್ನು ವಿತರಣೆ ಮಾಡಿ ಭಾವೈಕ್ಯತೆ ಸಾರಿದರು.
ರಾಮಚಂದ್ರಾಪುರ ಮಠದಲ್ಲಿ ಸಂಭ್ರಮದ ರಾಮೋತ್ಸವ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ ನಡೆಸಲಾಯಿತು. ರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ರಾಘವೇಶ್ವರ ಶ್ರೀಗಳು, ರಾಮನ ಬದುಕು ನಮಗೆಲ್ಲ ಆದರ್ಶ ಹಾಗೂ ಶ್ರೀರಾಮನ ಹೆಸರೇ ನಮಗೆಲ್ಲರಿಗೂ ಸ್ಫೂರ್ತಿ ಎಂದು ಆಶೀರ್ವಚನ ನೀಡಿದರು.
ಇದನ್ನೂ ಓದಿ: Ram Navami 2023: ಹೊಸನಗರ, ಚೆನ್ನಗಿರಿ, ಹೊನ್ನಾಳಿಯಲ್ಲಿ ಸಂಭ್ರಮದ ರಾಮನವಮಿ; ರಾಮನ ಹೆಸರೇ ಸ್ಫೂರ್ತಿ ಎಂದರು ರಾಘವೇಶ್ವರ ಶ್ರೀ
ಇನ್ನು ರಾಮೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀರಾಮ ದೇವರ ಮೂರ್ತಿಯನ್ನು ತೊಟ್ಟಿಲಿನಲ್ಲಿಟ್ಟು ತೂಗಲಾಯಿತು. ಶಾಸಕ ಹರತಾಳು ಹಾಲಪ್ಪ ಸೇರಿದಂತೆ ನೂರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಕರ್ನಾಟಕ
Ram Navami 2023: ಹೊಸನಗರ, ಚೆನ್ನಗಿರಿ, ಹೊನ್ನಾಳಿಯಲ್ಲಿ ಸಂಭ್ರಮದ ರಾಮನವಮಿ; ರಾಮನ ಹೆಸರೇ ಸ್ಫೂರ್ತಿ ಎಂದರು ರಾಘವೇಶ್ವರ ಶ್ರೀ
Ram Navami 2023: ರಾಮ ನವಮಿ ಅಂಗವಾಗಿ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ ನಡೆದರೆ, ಚನ್ನಗಿರಿ, ಹೊನ್ನಾಳಿಯಲ್ಲಿ ಸಂಭ್ರಮದ ರಥೋತ್ಸವ ನಡೆಯಿತು.
ಹೊಸನಗರ: “ರಾಮನ ಬದುಕು ನಮಗೆಲ್ಲ ಆದರ್ಶವಾದುದು, ಪ್ರಭು ರಾಮನ ಜಾತಕ ಅತ್ಯಂತ ದಿವ್ಯವಾದುದು, ವಿಶ್ವ ನಾಯಕ ಶ್ರೀರಾಮನ (Ram Navami 2023) ಹೆಸರೇ ನಮಗೆಲ್ಲರಿಗೂ ಸ್ಫೂರ್ತಿ” ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಹೊಸನಗರ ರಾಮಚಂದ್ರಪುರ ಪ್ರಧಾನ ಮಠದಲ್ಲಿ ನಡೆದ ರಾಮೋತ್ಸವ ಸಂದರ್ಭದಲ್ಲಿ ಆಶೀರ್ವಚನ ನೀಡುತ್ತಾ,
“ರಾಮನ ಜೀವನದಂತೆ ಶುದ್ಧವಾದ ಜೀವನ ನಮ್ಮೆಲ್ಲರದೂ ಆಗಬೇಕು. ರಾವಣ ಉತ್ತಮ ಕುಲದಲ್ಲಿ ಹುಟ್ಟಿದರೂ ತನ್ನ ದುಷ್ಟ ಕೆಲಸಗಳಿಂದ ಕನಿಷ್ಟನಾದ. ನಾವು ಮಾಡುವ ಉತ್ತಮ ಕೆಲಸಗಳಿಂದ ನಮ್ಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ” ಎಂದರು.
“ರಾಮೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀರಾಮ ದೇವರ ಮೂರ್ತಿಯನ್ನು ತೊಟ್ಟಿಲಿನಲ್ಲಿ ಇಟ್ಟು ಜೋಗುಳ ಹಾಡಲಾಯಿತು. ರಥದಲ್ಲಿ ಸ್ವಾಮೀಜಿಗಳು ರಾಮ ದೇವರನ್ನು ಪೂಜಿಸಿದ ನಂತರ ರತೋತ್ಸವ ನಡೆಸಲಾಯಿತು.
ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹಾಗೂ ಸಾಗರ ಆಮ್ ಆದ್ಮಿ ಪಕ್ಷದ ಸ್ಪರ್ಧಿ ದಿವಾಕರ್ ಅವರು ಪಾಲ್ಗೊಂಡು ಸ್ವಾಮೀಜಿಗಳ ಆಶೀರ್ವಾದ ಪಡೆದರು. ಸಾವಿರಾರು ಜನ ಶಿಷ್ಯರು ರಾಮೋತ್ಸವದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: JDS Karnataka: ಜೆಡಿಎಸ್ ವಿಶ್ವಾಸಕ್ಕೆ ಪಡೆಯಲು ಬಿಜೆಪಿ-ಕಾಂಗ್ರೆಸ್ ಕಾಂಪಿಟ್ ಮಾಡ್ತಿದ್ದಾರೆ: ಎಚ್.ಡಿ. ಕುಮಾರಸ್ವಾಮಿ
ಚನ್ನಗಿರಿಯಲ್ಲಿ ವಿಜೃಂಭಣೆಯ ರಾಮನವಮಿ
ಚನ್ನಗಿರಿ (ದಾವಣಗೆರೆ): ರಾಮ ನವಮಿಯ ಅಂಗವಾಗಿ ಪಟ್ಟಣದ ಹೊರವಲಯದಲ್ಲಿರುವ ಮೌದ್ಗಲ್ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಅತ್ಯಂತ ವಿಜೃಂಬಣೆಯಿಂದ ಜಗುಗಿತು. ಭಕ್ತರು ರಥೋತ್ಸವಕ್ಕೆ ಉತ್ತತ್ತಿ ಬಾಳೆಹಣ್ಣು, ಹಾಗೂ ಮೆಣಸಿನಕಾಳುಗಳನ್ನು ಎಸೆಯುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಈ ವೇಳೆ ನೂರಾರು ಎತ್ತಿನ ಗಾಡಿಗಳಲ್ಲಿ ಭಕ್ತರು ಪಾನಕ ವಿತರಿಸಿದರು.
ಇದನ್ನೂ ಓದಿ: Karnataka Rain: ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಬೆಂಗಳೂರು ಸೇರಿ ಇಲ್ಲೆಲ್ಲ ವರ್ಷಧಾರೆ
ಹಿರೇಗೋಣಿಗೆರೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ
ಹೊನ್ನಾಳಿ (ದಾವಣಗೆರೆ): ತಾಲೂಕಿನ ಹಿರೇಗೋಣಿಗೆರೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಅತ್ಯಂತ ನಡೆಯಿತು. ಭಕ್ತರು ರಥೋತ್ಸವಕ್ಕೆ ತೆಂಗಿನ ಕಾಯಿ, ಉತ್ತತ್ತಿ, ಬಾಳೆಹಣ್ಣು ಹಾಗೂ ಮೆಣಸಿನ ಕಾಳುಗಳನ್ನು ಎಸೆಯುವುದರ ಮೂಲಕ ಭಕ್ತಿ ಸಮರ್ಪಿಸಿದರು. ನಂತರ ದಿಂಡು ಉರುಳುದು, ಹರಕೆ, ಕಾರ್ಯಗಳು ಜರುಗಿದವು. ನಂತರ ಗ್ರಾಮದ ರಾಜಬೀದಿಗಳಲ್ಲಿ ಆಂಜನೇಯ ಸ್ವಾಮಿ, ಬೇಟೆ ಮರದಮ್ಮ ದೇವಿ ಹಾಗೂ ಹೊಳೆಹರಳಹಳ್ಳಿಯ ಆಂಜನೇಯನ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ಸಂಜೆ ಮುಳ್ಳೋತ್ಸವ ಹಾಗೂ ಭೂತನ ಸೇವೆ ನಡೆಯಿತು.
ಇದನ್ನೂ ಓದಿ: Kajal Aggarwal: ಹೊಸ ಫೋಟೊಶೂಟ್‌ನಲ್ಲಿ ಮಿಂಚಿದ ಕಾಜಲ್ ಅಗರ್ವಾಲ್
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ8 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್23 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್23 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ19 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ