Site icon Vistara News

Prerane Column : ನೀವು ಆಹಾರವನ್ನು ಅನುಭವಿಸುತ್ತಾ ತಿಂತೀರಾ? ಇಲ್ಲ ಸುಮ್ನೆ ನುಂಗ್ತೀರಾ?

Eating food sadghuru prerane

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ನನ್ನನ್ನು ಅನೇಕ ಯುವಕರು ಕೇಳುವ ಪ್ರಶ್ನೆ: ನನ್ನ ಜೀವನವನ್ನು (Prerane Column) ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ, ಯಾವುದನ್ನು ಅನುಸರಿಸುವುದು? (How to lead our life?)

ನಿಮ್ಮ ಅನುಭವದಲ್ಲಿಲ್ಲದ ಯಾವುದನ್ನಾದರೂ ನಿಜವೆಂದು ಸಂಪೂರ್ಣವಾಗಿ ನಂಬುವುದು ಎಂತಹ ಮೂರ್ಖತನವೋ, ಸುಳ್ಳೆಂದು ಉದಾಸೀನ ಮಾಡುವುದೂ ಅಷ್ಟೇ ಪ್ರಮಾಣದ ಮೂರ್ಖತನವೆನಿಸುತ್ತದೆ. ಕೆಲವರು ತಮ್ಮ ಜೀವನವನ್ನು ಬೇರೆ ಯಾರಾದರೂ ನಡೆಸಿಕೊಟ್ಟರೆ ಚೆನ್ನಾಗಿರುತ್ತದೆಂದು ಸೋಮಾರಿತನವನ್ನು ವ್ಯಕ್ತಪಡಿಸುತ್ತಾರೆ. ಇದನ್ನು ಮಾಡುತ್ತೇನೆ, ಅದನ್ನು ಸಾಧಿಸುತ್ತೇನೆ ಎಂದು ಕೇವಲ ಯೋಜನೆಗಳನ್ನು ಹಾಕಿಕೊಂಡೇ ಕಾಲ ಕಳೆಯುತ್ತಾರೆ. ಅದಕ್ಕಾಗಿ ಬೇರೆ ಯಾರನ್ನಾದರೂ ಯೋಚಿಸಲು ಸಹಾಯ ಬೇಡುತ್ತಾರೆ. ಇವರು ಯೋಚನೆಗಳನ್ನು ಮಾಡುತ್ತಾ ಅವರಿವರ ಮಾರ್ಗದರ್ಶನದಲ್ಲಿಯೇ ಕಾಲಹರಣ ಮಾಡಿಬಿಡುತ್ತಾರೆ.

ಕೆಲವರಿಗೆ ಮತ್ತೆ ಮತ್ತೆ ಕೆಲವು ವಿಷಯಗಳನ್ನು ಆಲಿಸುವುದರಲ್ಲಿ ಸುಖವಿರುತ್ತದೆ. ಅನೇಕ ಕಥಾಪ್ರಸಂಗಗಳಿಗೆ, ಭಾಷಣಗಳಿಗೆ ಹೋಗಿಬರುತ್ತಾರೆ. ಅಲ್ಲಿ ಹೇಳುವುದೆಲ್ಲವನ್ನೂ ಅರ್ಥ ಮಾಡಿಕೊಂಡವರಂತೆ ತಲೆಯಾಡಿಸುತ್ತಾರೆ. ಅಂತಹವರಿಗೆ ಯಾರಾದರೊಬ್ಬರ ಮಾತು ಕೇಳಿಸುತ್ತಿದ್ದರೆ ಸಾಕು. ಅದರ ಮೂಲಕ ತಮ್ಮ ಜೀವನ ಸುಗಮವಾಗುತ್ತದೆಂದು ನಂಬುತ್ತಾರೆ.

ಕುಡಿಯಬೇಡಿ ಎಂದು ಕುಡುಕ ಹೇಳುವಂತಿಲ್ಲವೇ?

ಹಾಗಾಗಿ, ಹಿತವಚನವನ್ನು ಹೇಳುವ ಎಲ್ಲರೂ ವಿರೋಧಿಗಳಲ್ಲ. ನಿಮಗೆ ಹಿತನುಡಿಯನ್ನು ಹೇಳುವವರು ಅದಕ್ಕೆ ಯೋಗ್ಯರಾಗಿದ್ದಾರೆಯೆ ಎಂದು ನೀವು ತೀರ್ಪು ನೀಡುವುದು ತಪ್ಪು. ಒಬ್ಬನಿಗೆ ಕುಡಿತದ ಅಭ್ಯಾಸದಿಂದ ಎಲ್ಲಾ ಬಗೆಯ ರೋಗಗಳು ಬಂದಿದೆ. ಅವನು ಕುಡಿದು ಬೀದಿಯಲ್ಲೆಲ್ಲಾ ಬಿದ್ದು ಹೊರಳಾಡುತ್ತಾನೆ. ಮದ್ಯದಂಗಡಿಯ ಬಾಗಿಲಲ್ಲಿ ನಿಂತಿರುವ ಜನರನ್ನು ನೋಡಿ ಹೇಳುತ್ತಾನೆ: ಕುಡಿಯಬೇಡಿರೋ, ದೇಹಕ್ಕೆ ಕೆಟ್ಟದ್ದು.

ʻಅರೆ, ಇವನೇ ಕುಡುಕ, ಇವನೇನು ನಮಗೆ ಹೇಳುವುದುʼ ಎಂದು ನೀವು ಕುಡಿಯಲು ಪ್ರಾರಂಭಿಸಿದರೆ ತೊಂದರೆ ಯಾರಿಗೆ? ಅವನ ಕೆಟ್ಟ ಅನುಭವದ ಹಿನ್ನೆಲೆಯಲ್ಲಿ ಹಿತವಚನ ಹೇಳಿದರೆ, ಹೇಳುವ ಅರ್ಹತೆ ಅವನಿಗಿಲ್ಲವೆಂದು ಕೇಳಲು ನಿರಾಕರಿಸಿದರೆ, ಯಾರಿಗೆ ನಷ್ಟ? ಅದು ಬುದ್ಧಿವಂತಿಕೆಯೆ? ಸಿಗರೇಟ್ ಸೇದಬೇಡವೆಂದು ನಮ್ಮ ಅಪ್ಪ ಹೇಳುತ್ತಾರೆ. ಆದರೆ ಅವರೇ ಒಬ್ಬ ಚೈನ್ ಸ್ಮೋಕರ್’ ಎಂದು ನನ್ನೊಡನೆ ಅನೇಕ ಯುವಕರು ವ್ಯಥೆಪಟ್ಟುಕೊಂಡಿದ್ದಾರೆ. ನಿಮ್ಮ ತಂದೆ ನಿಮಗಾಗಿ ಏನೇನನ್ನೋ ತಂದುಕೊಟ್ಟಾಗ ಅದೆಲ್ಲವನ್ನೂ ಅವರು ತಮಗೂ ಇಟ್ಟುಕೊಂಡಿದ್ದಾರೆಯೇ ಎಂದು, ಎಂದಾದರೂ ನೀವು ಕಳವಳಗೊಂಡಿದ್ದೀರಾ? ಹಿತವಚನ ಹೇಳುವಾಗ ಮಾತ್ರ ಅದು ಅವರಿಗೆ ಸರಿಯಾದುದೆ, ಅಲ್ಲವೇ ಎಂದು ಏಕೆ ಪ್ರಶ್ನೆ ಏಳುತ್ತದೆ? ಹಿತವಚನ ನೀಡುತ್ತಿರುವುದು ನಿಮಗಾಗಿ, ಅದನ್ನು ಅಂತಹ ದೃಷ್ಟಿಯಿಂದ ನೋಡಬೇಕು.

ಗಂಡನಿಗೆ ಅವನು ಎಲ್ಲವನ್ನೂ ಕೊಟ್ಟ.. ಆದರೆ!

ಒಬ್ಬ ಮಾನಸಿಕ ವೈದ್ಯರ ಬಳಿಗೆ ಬಂದಿದ್ದ ಹೆಂಡತಿ, ನನ್ನ ಮೇಲೆ ಇವರಿಗೆ ಅಕ್ಕರೆಯೇ ಇಲ್ಲ' ಎಂದಳು. ಅದಕ್ಕೆ ಗಂಡ,ಇವಳಿಗೆ ಏನು ಕೊರತೆಯನ್ನುಂಟುಮಾಡಿದ್ದೇನೆ. ಮನೆಯಲ್ಲಿ ಈಜಲು ಕೊಳ, ಜಿಮ್, ಹೋಮ್ ಥಿಯೇಟರ್‌ಗಳನ್ನು ಮಾಡಿಕೊಟ್ಟಿದ್ದೇನೆ. ಮಹಿಳಾ ಸಂಘದಲ್ಲಿ ಸದಸ್ಯೆಯನ್ನಾಗಿ ಮಾಡಿದ್ದೇನೆ. ಅಕ್ಕರೆಯಿಲ್ಲದಿದ್ದರೆ ಇವೆಲ್ಲವನ್ನು ಮಾಡುತ್ತಿದ್ದೆನೇನು?’ ಎಂದನು.

ಇಬ್ಬರ ಬಗೆಗೂ ವಿವರಗಳನ್ನು ಕೇಳಿದ ಮಾನಸಿಕ ವೈದ್ಯರು, `ಇಲ್ಲಿ ಗಮನಿಸಿ’ ಎಂದು ಗಂಡನಿಗೆ ಹೇಳಿದರು. ಹೆಂಡತಿಯ ಮುಖವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಮೆಲ್ಲನೆ ತಡವಿ, ನೀನು ತುಂಬಾ ಸುಂದರವಾಗಿದ್ದೀ ಎಂದರು. ನಂತರ ಪ್ರೀತಿಯಿಂದ ಮೆಲ್ಲನೆ ಮುತ್ತನ್ನಿಟ್ಟರು.

prerane Husband and Column

ಅನಂತರ ಗಂಡನತ್ತ ತಿರುಗಿ, ‘ನಿಮ್ಮ ಮಡದಿಗೆ ಪ್ರತಿವಾರವೂ ಎರಡು ಬಾರಿಯಾದರೂ ಇಂತಹ ಪ್ರೇಮ ಮತ್ತು ಪ್ರೀತಿ ಅಗತ್ಯವಿರುತ್ತದೆ’ ಎಂದರು. ತಕ್ಷಣ ಗಂಡನು ಒಂದು ಡೈರಿಯನ್ನು ಹೊರತೆಗೆದು ನೋಡಿ, ‘ಸೋಮವಾರಗಳಲ್ಲಿ ಮತ್ತು ಗುರುವಾರಗಳಲ್ಲಿ ಇವಳನ್ನು ಕರೆದುಕೊಂಡು ಬರಲು ಸಾಧ್ಯವಾಗುತ್ತದೆ. ನಿಮಗೆ ಅನುಕೂಲವೇ ಡಾಕ್ಟರ್’ ಎಂದನು..!

ಹೂವು ಅರಳಬೇಕು ಎಂದರೆ ಗೊಬ್ಬರ ಕೊಡಬೇಕು!

ನೀವು ಸರಿಯಾಗಿ ಅರ್ಥಮಾಡಿಕೊಂಡ ಮಾತ್ರಕ್ಕೆ ಗಿಡಗಳು ಹೂವು ಬಿಡುವುದಿಲ್ಲ. ಅದರ ಬದಲು, ಹೂಗಿಡಗಳಿಗೆ ಸಾರವತ್ತಾದ ಗೊಬ್ಬರ ನೀಡಿ, ನೀರುಣಿಸಿ ಅವನ್ನು ಸರಿಯಾಗಿ ನೋಡಿಕೊಂಡರೆ ಹೂಗಳು ದೊರೆಯುತ್ತವೆ. ಸುವಾಸನೆ ಹರಡುತ್ತದೆ. ಸುವಾಸನೆ ಹೆಚ್ಚಾಗಿರಬೇಕೆಂದು ಗಿಡಗಳಿಗೆ ಗೊಬ್ಬರವನ್ನಾಗಿ, ಸುವಾಸನೆಯನ್ನು ಹಾಕಿದರೆ ಆಗುತ್ತದೆಯೇ? ದುರ್ವಾಸನೆಯಿಂದ ಕೂಡಿದ ಗೊಬ್ಬರವನ್ನು ತಾನೆ ಹಾಕಬೇಕಾಗಿರುವುದು? ಅಗತ್ಯವಿರುವ ಸರಿಯಾದ ಮೂಲವಸ್ತುಗಳನ್ನು ಬೇರುಗಳಿಗೆ ನೀಡಿದರೆ ಬೀಜದ ಗುಣಕ್ಕನುಗುಣವಾಗಿ ಹೂವುಗಳು ತಾವೇ ತಾವಾಗಿ ಅರಳುತ್ತವೆ. ಇದು ಅಮೋಘವಾದ ಹೂವುಗಳನ್ನು ಪಡೆಯಲು ಇರುವ ಒಂದೇ ದಾರಿ.

ಇತರರನ್ನು ತಿಳಿದುಕೊಳ್ಳಲು ಮುಂದಾಗುವುದನ್ನು ನಿಲ್ಲಿಸಿ. ಅವರ ಪ್ರಗತಿಗೆ ಬೇಕಾಗಿರುವ ಅವಕಾಶಗಳನ್ನು ಕಲ್ಪಿಸಿಕೊಡಿ ಅದಷ್ಟೇ ಸಾಕು. ನಿಮಗಾಗಿ ಹೇಳಿರುವುದನ್ನು, ಯಾರು ಹೇಳಿದ್ದಾರೋ ಅವರಿಗೆ ಅನ್ವಯಿಸಿ ನೋಡುವುದು, ಆ ಗಂಡನು ತನ್ನ ಹೆಂಡತಿಯ ವಿಷಯದಲ್ಲಿ, ಮಾನಸಿಕ ವೈದ್ಯನನ್ನು ಅರ್ಥ ಮಾಡಿಕೊಂಡಂತೆ ಆಗುತ್ತದೆ.

ಯಾವುದೇ ಹಿತವಚನವಾದರೂ ಅದು ನಿಮ್ಮ ಜೀವನಕ್ಕೆ ಅಗತ್ಯವೆ ಇಲ್ಲವೆ ಎಂಬುದನ್ನು ಮಾತ್ರ ನೋಡಿ. ಕೆಲವರನ್ನು ನೋಡಿದ್ದೇನೆ. ಯಾವಾಗ ನೋಡಿದರೂ, ‘ಬಹಳ ವ್ಯಸ್ತವಾಗಿ ಓಡುತ್ತಿದ್ದೇನೆ. ಸಮಯವೇ ಇಲ್ಲ’ ಎನ್ನುತ್ತಾರೆ. ಎಲ್ಲರಿಗೂ ಸಿಗುವುದು 24 ಗಂಟೆಗಳ ಸಮಯ ಮಾತ್ರ. ಅಷ್ಟರಲ್ಲಿ ಏನನ್ನು ಮಾಡಲು ಸಾಧ್ಯ, ಏನನ್ನು ಮಾಡಲಾಗದು ಎಂಬ ವಿಷಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ.

ನಿಮ್ಮ ದೇಹ, ಮನಸ್ಸು, ಶಕ್ತಿ ಇವು ಯಾವ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲು ಸಮರ್ಥವಾಗಿವೆಯೆಂಬುದಕ್ಕೆ ಅನುಗುಣವಾಗಿ ನೀವು ಎಷ್ಟು ಕೆಲಸ ಮಾಡಬಹುದೆಂಬುದನ್ನು ತೀರ್ಮಾನಿಸಬೇಕಾಗುತ್ತದೆ. ಇವು ಸಮರ್ಥವಾಗಿಲ್ಲದಿದ್ದರೆ ಎಷ್ಟೇ ಸಮಯ ದೊರೆತರೂ ಅದು ಸಾಕಾಗದೆ ಹೋಗಬಹುದು.

ಕಾಲ ಕಳೆಯಲೆಂದು ಮಾಡುವ ನಮ್ಮ ಕೆಲ ಕೆಲಸಗಳು ಅರ್ಥವಿಲ್ಲದಂತಾಗುತ್ತವೆ. ನೀವು ಎಷ್ಟು ಗಂಟೆಗಳ ಕಾಲ ಕೆಲಸ ಮಾಡಿದ್ದೀರಿ ಎಂಬುದು ಮುಖ್ಯವಲ್ಲ. ಅದರಲ್ಲಿ ನೀವು ಎಷ್ಟು ಸಮಯ, ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿ ಕೆಲಸ ಮಾಡಿದ್ದೀರಿ ಎಂಬುದು ನಿಮ್ಮ ಗೆಲುವನ್ನು ತೀರ್ಮಾನಿಸುತ್ತದೆ.

ಕುಟುಂಬ, ಸಮಾಜ, ಸ್ನೇಹಿತರು, ಬಂಧು ವರ್ಗದವರು ಮುಂತಾಗಿ ಹಲವರಿಗೆ ಸಮಯವನ್ನು ಮೀಸಲಿಡುವುದನ್ನು ತಪ್ಪಿಸಲಾಗುವುದಿಲ್ಲ. ಪ್ರತಿಯೊಬ್ಬರೂ ಜೀವನ ವಿಧಾನಕ್ಕೆ ಅನುಗುಣವಾಗಿ ಯಾವುದಕ್ಕೆ ಪ್ರಾಧಾನ್ಯ ನೀಡಬೇಕು, ಯಾವುದಕ್ಕೆ ಎರಡನೆಯ ಸ್ಥಾನವನ್ನು ನೀಡಬೇಕು ಎಂದು ತೀರ್ಮಾನಿಸಲು ಸಾಧ್ಯವಿದೆ. ಎಲ್ಲರಿಗೂ ಒಂದೇ ರೀತಿಯ ನಿಯಮ ಪಾಲಿಸಲಾಗುವುದಿಲ್ಲ.

ಶಂಕರನ್‌ ಪಿಳ್ಳೈ ಅವರ ಸ್ನೇಹಿತರ ಪ್ಲ್ಯಾನ್‌!

ಕೈಯಲ್ಲಿರುವ ಕೆಲಸಗಳಲ್ಲಿ ಯಾವುದು ಮುಖ್ಯವೆಂಬ ವಿಚಾರವನ್ನು ನೀವೇ ತೀರ್ಮಾನಿಸಬೇಕು. ದೊಡ್ಡ ಕಂಪನಿಯಲ್ಲಿ ಮುಖ್ಯ ಹುದ್ದೆಯಲ್ಲಿದ್ದ ಶಂಕರನ್ ಪಿಳ್ಳೆಯವರ ಸ್ನೇಹಿತರೊಬ್ಬರು, ನಮ್ಮ ಕಂಪನಿಯಲ್ಲಿರುವ ಪ್ರತಿಯೊಬ್ಬ ಕೆಲಸಗಾರರಿಗೂ, ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಎರಡು ವಾರಗಳ ರಜೆ ಕೊಟ್ಟು ಕಳುಹಿಸುತ್ತೇವೆ ಎಂದರು.

ಪಿಳ್ಳೆಯವರು ಆಶ್ಚರ್ಯದಿಂದ ಕೇಳಿದರು, ನಿಮ್ಮ ಕೆಲಸಗಾರರಲ್ಲಿ ನಿಮಗೆ ಅಷ್ಟೊಂದು ಅನುಕಂಪವೆ?
ಅದಕ್ಕವರು, ಹಾಗೇನೂ ಇಲ್ಲ. ಯಾರ ಗೈರುಹಾಜರಿಯಲ್ಲಿ ನಮ್ಮ ಕಂಪನಿಯು, ಸಮಸ್ಯೆಗಳಿಲ್ಲದೆ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳುವ ಉಪಾಯ ಇದು ಎಂದರು.

ಬೇರೆ ಏನನ್ನು ಕಳೆದುಕೊಂಡರೂ ಮತ್ತೆ ಅದನ್ನು ಪಡೆಯಲು ಏನಾದರೊಂದು ಅವಕಾಶ ದೊರೆಯಬಹುದು. ಆದರೆ ಕಳೆದುಹೋದ ನಿಮಿಷಗಳನ್ನು ಎಂತಹವರಿಗೂ ಮತ್ತೆ ಪಡೆಯಲು ಸಾಧ್ಯವಿಲ್ಲ. ತಿನ್ನುವಾಗ ದವಡೆಯ ತುಂಬ ತುಂಬಿಕೊಂಡರೆ ಬಾಯಿ ಕದಲುವುದಿಲ್ಲ, ಉಸಿರು ಕಟ್ಟುತ್ತದೆ. ವಿರಾಮವಿಲ್ಲದೆ ಜೀವಿಸುವುದು ತಪ್ಪು. ದೇಹ-ಮನಸ್ಸಿಗೆ ಆಗಾಗ್ಗೆ ವಿಶ್ರಾಂತಿ ನೀಡಿದಾಗ ಮಾತ್ರ ಸಂಪೂರ್ಣವಾದ ಸಾಮರ್ಥ್ಯ ಹೊರಬರಲು ಸಾಧ್ಯವಾಗುವುದು.

ಎಂದಾದರೂ ಬೆಳಗಿನ ಜಾವ ಪಕ್ಷಿಗಳು ಕೂಗುವಾಗ, ಬೇರೆ ಪಕ್ಷಿಗಳು ಅದಕ್ಕೆ ಮಾರ್ದನಿ ಕೊಡುವುದನ್ನು ಕೇಳಿ ಉತ್ಸಾಹ ಪಟ್ಟಿದ್ದೀರಾ? ಅದೆಷ್ಟು ದಿನಗಳು ಸ್ನಾನಮಾಡುವಾಗ ದೇಹದ ಪ್ರತಿಯೊಂದು ಭಾಗವೂ ನೀರಿನಲ್ಲಿ ತೊಯ್ದು, ಸೋರಿ ಹೋಗುವುದನ್ನು ರಂಜನೆಯನ್ನಾಗಿ ಮಾಡಿಕೊಂಡಿದ್ದೀರಿ? ಗಾಡಿಯನ್ನು ಓಡಿಸುವಾಗ ಏನೋ ಯೋಚನೆಗಳನ್ನು ಮಾಡದೆ, ಅದರ ಅನುಭವವನ್ನು ನೀವು ಸಂಪೂರ್ಣವಾಗಿ ಸವಿದಿದ್ದೀರಿ?

ಇದನ್ನೂ ಓದಿ : Prerane Column : ದೇವರೆಂದರೆ ಲೈಫ್‌ ಇನ್ಶೂರೆನ್ಸ್‌ ಅಲ್ಲ, ನಿಮ್ಮನ್ನು ಕಾಯೋ ಸೈನಿಕನೂ ಅಲ್ಲ!

ನೀವು ತಿನ್ನುವ ಆಹಾರವನ್ನು ಅನುಭವಿಸುತ್ತಿದ್ದೀರಾ?

ಎಷ್ಟೇ ರುಚಿಕರವಾದ ಆಹಾರವಾಗಿದ್ದರೂ ಮೊದಲನೆಯ ತುತ್ತನ್ನು ಅನುಭವಿಸಿ ತಿನ್ನುತ್ತೀರಿ. ಅನಂತರದ ತುತ್ತುಗಳು ಅಭ್ಯಾಸಬಲದಿಂದ ತಾನೇ ತಾನಾಗಿ ಬಾಯಿಗೆ ಹೋಗುತ್ತದೆ. ಬಾಯಿಗೆ ಹಾಕಿಕೊಂಡ ಆಹಾರ ಹೇಗೆ ಅಗಿಯಲಾಗುತ್ತದೆ ಮತ್ತು ಅದು ಅನ್ನನಾಳದ ಮೂಲಕ ಹೊಟ್ಟೆಯೊಳಗೆ ಹೇಗೆ ಇಳಿಯುತ್ತದೆ ಎಂಬುದನ್ನು ಒಂದು ಬಾರಿಯಾದರೂ ಪೂರ್ತಿಯಾಗಿ ಗಮನಿಸಿದ್ದೀರಾ?

ಆನಂದವನ್ನು ಪಡೆಯುವುದಕ್ಕಾಗಿ ಕೆಲಸಗಳನ್ನು ಮಾಡುತ್ತಿರುವುದು ಎಂಬುದನ್ನು ಮರೆತು ಕೆಲಸಗಳನ್ನು ಮಾಡುತ್ತಿದ್ದರೆ, ಸ್ವಲ್ಪ ಸಮಯದಲ್ಲಿ, ಈ ಕೆಲಸವನ್ನು ಮಾಡುತ್ತಾ ಸಮಯವನ್ನು ವ್ಯರ್ಥ ಮಾಡುತ್ತಿದ್ದೇನೆ ಎಂದು ನಿಮಗೆ ಅನ್ನಿಸತೊಡಗುತ್ತದೆ. ಸುಮ್ಮನೆ ಉಸಿರಾಡಲು ಇಲ್ಲಿ ಹುಟ್ಟಿದ್ದೆ? ಜೀವವನ್ನು ದೇಹದಲ್ಲಿರಿಸಿಕೊಳ್ಳುವುದಕ್ಕೆ ಮಾತ್ರ ಅದರಿಂದ ಉಪಯೋಗವಾಗುತ್ತದೆ.

ಜೀವಸಹಿತವಾಗಿರುವುದು ಬೇರೆ, ಜೀವಸಹಿತ ಬದುಕುವುದು ಬೇರೆ. ಒಂದೇ ಒಂದು ಕ್ಷಣವಾದರೂ ಸಂಪೂರ್ಣವಾಗಿ ಜಾಗೃತಿಯ ಭಾವನೆಯಲ್ಲಿ ಜೀವನ ನಡೆಸಿ ನೋಡಿ. ನಿಮ್ಮ ಜೀವನ ವಿಧಾನವೇ ಬದಲಾಗಿ ಬಿಡುತ್ತದೆ.

ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org

Exit mobile version