ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್
(Sadguru Jaggi Vasudev, Isha Foundation)
ಕೆಲವರಿದ್ದಾರೆ… ನನ್ನ ರಾಶಿ ಸರಿಯಾಗಿಲ್ಲ, (Problem in Zodiac Signs) ಏನೇ ಮಾಡಿದರೂ ನನಗೆ ಸೋಲು ತಪ್ಪುವುದಿಲ್ಲ ಎಂದು ವಿಧಿಯನ್ನು ದೂರುತ್ತಾರೆ. ದೇವರ ಇಚ್ಛೆಗೆ ವಿರುದ್ಧವಾಗಿ, ಸಮಯವನ್ನು ಹಾಳು ಮಾಡುವುದಕ್ಕಿಂತ ಜೀವನವನ್ನು ಅದರ ಪಾಡಿಗೆ ಬಿಟ್ಟು ಬಿಡುವುದು ಬುದ್ಧಿವಂತಿಕೆಯ ಲಕ್ಷಣವಲ್ಲವೆ? ಎಂದು ವೇದಾಂತದ ಮಾತನಾಡುತ್ತಾರೆ.
ನಿಮ್ಮನ್ನು ಅವರ ನಿರ್ಬಂಧದಲ್ಲಿಟ್ಟುಕೊಳ್ಳಲು ಜ್ಯೋತಿಷಿಗಳು, ಸ್ವಾಮೀಜಿಗಳು ಆಸೆಪಡುತ್ತಿರುತ್ತಾರೆ. ಪ್ರೀತಿಯೊಂದಿಗೆ ನಿಮ್ಮನ್ನು ಬಂಧಿಸಲು ತಿಳಿಯದೆ, ನಿಮ್ಮಲ್ಲಿ ಒಂದು ರೀತಿಯ ಭೀತಿಯನ್ನು, ತಪ್ಪು ಕಲ್ಪನೆಯನ್ನು ಉಂಟುಮಾಡುವ ಮೂಲಕ ನಿರ್ಬಂಧಕ್ಕೆ ಒಳಪಡಿಸಲು ಪ್ರಯತ್ನಿಸುತ್ತಾರೆ. ನಿಮ್ಮ ಗೆಲುವು ಮತ್ತು ಸೋಲನ್ನು ನಿರ್ಣಯಿಸುವುದು ನಿಮ್ಮ ಹಣೆಬರಹ ಎಂದು ಮತ್ತೆ ಮತ್ತೆ ಹೇಳುತ್ತಾ ಅದನ್ನು ನೀವು ನಂಬುವಂತೆ ಮಾಡುತ್ತಾರೆ.
ವಿಫಲರಾದ ಕೂಡಲೇ ಜಾತಕದ ಕಡತಗಳನ್ನು, ಸಂಖ್ಯಾ ಜ್ಯೋತಿಷ್ಯವನ್ನು (Numerology) ಸಹಾಯಕ್ಕೆ ಕರೆಯುವುದು ಬುದ್ಧಿವಂತಿಕೆಯೇ? ಬುದ್ಧಿವಂತರು ಮುಂದಿನ ಕ್ಷಣಗಳಲ್ಲಿ ಏನೆಲ್ಲಾ ಮಾಡಬಹುದೆಂಬುದನ್ನು, ಲೆಕ್ಕಾಚಾರ ಹಾಕಿ ಹೇಳುವುದು ಕಷ್ಟವಿರಬಹುದು. ಆದರೆ ಮೂರ್ಖರ ಮುಖವನ್ನು ನೋಡಿದ ಕೂಡಲೆ, ಮುಂದೆ ಅವರೇನು ಮಾಡಬಹುದು, ಎಷ್ಟು ದೂರ ಹೋಗಬಹುದು ಎಂದು ಹೇಳಬಹುದಲ್ಲವೆ? ಸೋಲಿಗೆ ಕಾರಣ ನಿಮ್ಮ ಮೂರ್ಖತನ ಎಂದು ಒಪ್ಪಿಕೊಳ್ಳಲು ಅದೇಕೆ ಹಿಂದುಮುಂದು ನೋಡುತ್ತೀರಿ?
ಇದನ್ನು ಚೆನ್ನಾಗಿ ತಿಳಿದುಕೊಳ್ಳಿ. ನೀವು ಸರಿಯಾಗಿ ಕ್ರಿಯಾಶೀಲರಾಗಿದ್ದರೆ, ನಿಮಗೆ ದೊರಕಬೇಕಾದುದನ್ನು ದೊರೆಯದಂತೆ ದ್ರೋಹ ಮಾಡಿರುವುದು ದೇವರಲ್ಲ. ದೇವರು ಸಿನಿಮಾದಲ್ಲಿ ಕೆಟ್ಟದಾಗಿ ನಡೆದುಕೊಳ್ಳುವ ವಿಲನ್ ಅಲ್ಲ.
ಸುಮ್ಮನೆ ಒಂದು ಪ್ರಯೋಗ ಮಾಡಿ ನೋಡಿ
ಸುಮ್ಮನೆ ಬರಡು ಸಿದ್ಧಾಂತವನ್ನು ಮಾತನಾಡದೆ ಅದನ್ನು ಪ್ರಯೋಗಾತ್ಮಕವಾಗಿ ನೋಡಿ. ನಿಮಗೆ ಊಟ ದೊರೆಯಬೇಕೆಂಬುದು ಮುಂಚಿತವಾಗಿಯೇ ತೀರ್ಮಾನವಾಗಿದೆಯೆಂದು ಭಾವಿಸೋಣ. ನಿಮ್ಮನ್ನು ಗಮನಿಸಿಕೊಳ್ಳಲು ಯಾರೂ ಇಲ್ಲದ ಕಾಡಿನಲ್ಲಿ ಹೋಗಿ ಕುಳಿತುಕೊಳ್ಳಿ. ಪಕ್ಕದಲ್ಲಿ ಒಂದು ಹಣ್ಣು ನೆಲಕ್ಕೆ ಬಿದ್ದರೂ ಅದನ್ನು ಮುಟ್ಟಬೇಡಿ. ದೇವರಿಗೆ ಇಷ್ಟವಾದರೆ ನಿಮ್ಮಲ್ಲಿಗೆ ಬಂದು ಅದನ್ನು ನಿಮ್ಮ ಬಾಯೊಳಗೆ ಹಾಕುತ್ತಾನೆ ಎಂದು ನೀವು ಅದಕ್ಕಾಗಿ ಕಾಯುತ್ತಾ ಕುಳಿತುಕೊಳ್ಳಿ. ಗೆಲ್ಲುವುದು ವಿಧಿಯೇ, ನಿಮ್ಮ ಹಸಿವೆಯೇ ಎಂಬುದು ಸರಿಯಾಗಿ ನಿರ್ಧಾರವಾಗುತ್ತದೆ.
ಕಾರಿನ ಸಂಖ್ಯೆ ಮತ್ತು ಅದೃಷ್ಟ ಸಂಖ್ಯೆ!
ನನ್ನ ಬಳಿ ಒಂದು ಹಳೆಯ ಮಾರುತಿ ಕಾರು ಇತ್ತು. ಒಬ್ಬ ವ್ಯಕ್ತಿ ಅದನ್ನು ಖರೀದಿಸಲು ಇಷ್ಟಪಟ್ಟರು. ನನ್ನ ಬಳಿ ಬಂದು, “ಸ್ವಾಮೀಜಿ, ನಿಮ್ಮ ಕಾರಿನ ನಂಬರು ನನಗೆ ಬಹಳ ಅದೃಷ್ಟದ್ದಾಗಿದೆ. ಅದಕ್ಕೆ ಬೆಲೆ ಎಷ್ಟೇ ಆಗಲಿ ನಾನು ಅದನ್ನು ಕೊಂಡುಕೊಳ್ಳುತ್ತೇನೆ” ಎಂದರು. ನಾನು ನಗುತ್ತಾ, “ಯಾವ ನಂಬರನ್ನು ಹೇಳುತ್ತಿದ್ದೀರಿ? ರಿಜಿಸ್ಟ್ರೇಷನ್ ನಂಬರೇ ಅಥವಾ ಎಂಜಿನ್ ನಂಬರೇ” ಎಂದು ಕೇಳಿದೆ.
ಅವರಿಗೆ ಗೊಂದಲವಾಯಿತು. ಅವರ ಜ್ಯೋತಿಷಿಯನ್ನು ಕೇಳಿ ಬಂದರು. ರಿಜಿಸ್ಟ್ರೇಷನ್ ನಂಬರೇ ಮುಖ್ಯವೆಂದರು. ಇಂಗ್ಲಿಷ್ ಅಕ್ಷರಗಳಿಗೆಲ್ಲಾ ಯಾವುದೋ ಸಂಖ್ಯೆಗಳನ್ನು ಕೊಟ್ಟು ಅದನ್ನು ಕೂಡಿಸಿ ತೋರಿಸಿದರು. ಜ್ಯೋತಿಷಿ ಹೇಳಿದ್ದ ನಿರ್ದಿಷ್ಟ ದಿನಾಂಕದಂದು ಬಂದು 99,999 ರೂಪಾಯಿಗಳನ್ನು ಕೊಟ್ಟರು.
‘ಮಾತನಾಡಿದ ಮೊತ್ತದಲ್ಲಿ ಒಂದು ರೂಪಾಯಿ ಕಡಮೆ ಇದೆಯೆಂದು ತಿಳಿಯಬೇಡಿ, ಇದು ನನಗೆ ಅದೃಷ್ಟದ ಮೊತ್ತ’ ಎಂದರು, ಧರ್ಮಸಂಕಟದಿಂದ. ಕಡಮೆಯಾದ ಒಂದು ರೂಪಾಯಿಗೆ ಬದಲಾಗಿ ಬೆಲೆಬಾಳುವ ಉಡುಗೊರೆಗಳನ್ನು ಕೊಟ್ಟರು.
‘ಮೊದಲು ಓಡಿಸಿ ನೋಡಿ, ಅನೇಕ ಭಾಗಗಳು ಸವೆದು ಹೋಗಿವೆ. ತೃಪ್ತಿಯಾದನಂತರ ಖರೀದಿಸಬಹುದು’ ಎಂದೆ. ಅದೃಷ್ಟದ ನಂಬರು ಮಾತ್ರವೇ ಮುಖ್ಯವೆಂದು, ಓಡಿಸಿ ನೋಡಿ ಪರೀಕ್ಷಿಸಲಿಲ್ಲ. ಒಂದೇ ತಿಂಗಳು ಓಡಿಸಿ ಕಾರನ್ನು ಮಾರಿಬಿಟ್ಟರು. ನಾನು ಕಾರನ್ನು ಓಡಿಸುತ್ತಿದ್ದಾಗ ಮುಂದಿನ ಸೀಟಿನಲ್ಲಿ ಕಿತ್ತುಹೋಗಿದ್ದ, ಸ್ಪ್ರಿಂಗ್‌ಅನ್ನು ಹಿಂದಕ್ಕೆ ಸರಿಸಿದ್ದೆ. ಯಾವುದೋ ಅಮಾನುಷ ಶಕ್ತಿ ಅವರನ್ನು ಹಿಂದುಗಡೆಯಿಂದ ಎಳೆಯಿತು ಎಂದು ಭಯಪಟ್ಟು ಕಾರನ್ನೇ ಮಾರಿಬಿಟ್ಟರು. ಕಾರನ್ನು ತೆಗೆದುಕೊಂಡು ಹೋದಾಗ ದೇವಾಲಯದ ಬಾಗಿಲಲ್ಲಿ ಅವರು ಒಡೆದ ತೆಂಗಿನಕಾಯಿ ಫಲ ನೀಡಲಿಲ್ಲ; ಜಜ್ಜಿದ ನಿಂಬೆಹಣ್ಣುಗಳು ವ್ಯರ್ಥವಾಯಿತು. ಮುಖ್ಯವಾಗಿ ಅವರಿಗೆ ಅದೃಷ್ಟವಾಗಿದ್ದ ಆ ಅದೃಷ್ಟಸಂಖ್ಯೆ ಅವರ ಕೈಬಿಟ್ಟುಹೋಯಿತು.
ನಿಮ್ಮ ತಪ್ಪುಗಳಿಗೆ ಜೀವವಿಲ್ಲದ ಗ್ರಹಗಳನ್ನು ದೂರುವುದು ಹೇಡಿತನ
ಅವರಂತೆಯೇ, ಯಾವುದಕ್ಕಾದರೂ ಸರಿಯೇ ಮೀನಮೇಷ ನೋಡುವವರಿದ್ದಾರೆ. ಗ್ರಹಗಳು, ಪರಿಹಾರ ಮುಂತಾಗಿ ಮಾತನಾಡುತ್ತಾರೆ. ಜೀವಂತವಾಗಿರುವ ನೀವು ಮಾಡುವ ಮೂರ್ಖತನಗಳಿಗೆಲ್ಲಾ, ಜೀವವಿಲ್ಲದ ಗ್ರಹಗಳನ್ನು ದೂರುವುದು ಒಂದು ಹೇಡಿತನವಲ್ಲವೆ? ಆಸೆಪಟ್ಟದ್ದು ನಿಮಗೆ ದೊರೆಯಲಿಲ್ಲವೆಂದ ಮೇಲೆ, ಅದಕ್ಕೆ ಸಂಪೂರ್ಣ ಜವಾಬ್ದಾರರು ನೀವೇ! ಜೀವನ ಹೇಗಿರಬೇಕೆಂಬುದನ್ನು ನೀವೇ ಗಮನವಿಡದೆ ತೀರ್ಮಾನಿಸಿಕೊಂಡಿದ್ದೀರಿ. ಆಸೆ ಪಟ್ಟದ್ದನ್ನು ಅನುಭವಿಸಲು ನಿಮ್ಮನ್ನು ನೀವು ಸರಿಯಾಗಿ ಸಿದ್ಧಪಡಿಸಿಕೊಳ್ಳಲಿಲ್ಲ. ಅದು ನಿಮ್ಮ ತಪ್ಪೇ ತಾನೆ? ಅದು ವಿಧಿಯ ಅಟ್ಟಹಾಸವಲ್ಲ.
ತನ್ನ ಕಂಪ್ಯೂಟರಿನ ಮುಂದೆ ಕುಳಿತು ನಿಮ್ಮ ಜೀವನವನ್ನು ಕುರಿತ ಪ್ರತಿಯೊಂದು ಘಟ್ಟವನ್ನೂ ಮುಂಚಿತವಾಗಿ ಯೋಜಿಸುವುದನ್ನು ಬಿಟ್ಟರೆ ದೇವರಿಗೆ ಬೇರೆ ಕೆಲಸವಿಲ್ಲವೆ? ಇಂತಹ ಕತೆಗಳೆಲ್ಲವನ್ನೂ ನಂಬಿರುವ ನೀವೇನು ಇನ್ನೂ ಚಿಕ್ಕ ಮಗುವೆ?
ಕೇಳಿ ಶಂಕರನ್ ಪಿಳ್ಳೈ ಅವರ ಕ್ವಿಜ್ ಕಥೆ
ಶಂಕರನ್ ಪಿಳ್ಳೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಎದುರಿನಲ್ಲಿ ಒಬ್ಬ ಹಳ್ಳಿಯ ವೃದ್ಧ. ಓದು-ಬರಹದ ಗಂಧವೇ ಇಲ್ಲದವರಂತೆ ಕಾಣುತ್ತಿತ್ತು. ’ಹೊತ್ತು ಕಳೆಯಲು ಒಗಟು ಆಡೋಣವೇ?’ ಎಂದರು ಶಂಕರನ್ ಪಿಳ್ಳೆ. ವೃದ್ಧರು ಏನೂ ಮಾತನಾಡಲಿಲ್ಲ. ಮತ್ತೆ ಪಿಳ್ಳೆಯವರು, ’ನಿಮ್ಮ ಪ್ರಶ್ನೆಗೆ ಉತ್ತರ ಹೇಳಲು ನನ್ನಿಂದ ಸಾಧ್ಯವಿಲ್ಲದಿದ್ದರೆ ನೂರು ರೂಪಾಯಿ ಕೊಡುತ್ತೇನೆ. ನನ್ನ ಪ್ರಶ್ನೆಗೆ ನೀವು ಉತ್ತರ ಕೊಡಲಾಗದಿದ್ದರೆ ನೀವು ಹತ್ತು ರೂಪಾಯಿ ಕೊಟ್ಟರೆ ಸಾಕು..’ ಎಂದರು.
ತಕ್ಷಣವೇ, ’ಮೊದಲನೆಯ ಪ್ರಶ್ನೆ ನಾನು ಕೇಳುತ್ತೇನೆ’ ಎಂದರು ಆ ವೃದ್ಧ.
’ಮೂರು ಮುಖಗಳನ್ನು ಹೊಂದಿದ್ದು ಹನ್ನೆರಡು ಕಾಲುಗಳೊಂದಿಗೆ ಈಜಲು ಹಾಗೂ ಹಾರಲು ತಿಳಿದಿರುವ ಮೃಗ ಯಾವುದು?’: ಎಷ್ಟೇ ಯೋಚನೆ ಮಾಡಿದರೂ ಶಂಕರನ್ ಪಿಳ್ಳೆಯವರಿಗೆ ಈ ಪ್ರಶ್ನೆಗೆ ಉತ್ತರ ಹೇಳಲಾಗಲಿಲ್ಲ.
ನೂರು ರೂಪಾಯಿ ಕೊಟ್ಟು, ’ನಿಮ್ಮ ಪ್ರಶ್ನೆಗೆ ಉತ್ತರ ಏನು?’ ಎಂದರು. ಆ ವೃದ್ಧ ನೂರು ರೂಪಾಯಿಯನ್ನು ತನ್ನ ಪರ್ಸಿನಲ್ಲಿ ಇಟ್ಟುಕೊಂಡು ಹತ್ತು ರೂಪಾಯಿ ವಾಪಸ್ಸು ಕೊಡುತ್ತ, ’ನನಗೂ ಗೊತ್ತಿಲ್ಲ’ ಎಂದರು.
ನಿಮ್ಮ ಸಾವಿನ ದಿನ ನಿರ್ಧಾರ ಮಾಡುವುದು ದೇವರಲ್ಲ, ನೀವೇ!
ದೇವರ ಚಿತ್ತ ಎಂದು ಹೇಳುವವರಲ್ಲಿ ಹಲವು ಮಂದಿ ಹೀಗಿರುತ್ತಾರೆ. ಅವರಿಗೇ ತಿಳಿಯದಿರುವುದನ್ನು ಬೇರೆಯವರಿಗೆ ವಿವರಿಸಿ ಹೇಳಲು ತೊಡಗುತ್ತಾರೆ. ನಿಮ್ಮ ಜೀವನದ ಪ್ರತಿಯೊಂದು ನಿಮಿಷವನ್ನು, ಅಷ್ಟೇಕೆ ನಿಮ್ಮ ಮರಣದ ಸಮಯವನ್ನು ಸಹ ಪೂರ್ತಿಯಾಗಿ ನೂರಕ್ಕೆ ನೂರರಷ್ಟು ತೀರ್ಮಾನಿಸುವವರು ನೀವೇ ಆಗಿದ್ದೀರಿ. ಇದನ್ನು ಅರ್ಥ ಮಾಡಿಕೊಳ್ಳದೆ ಬೇರೆ ಯಾರೋ ಹೇಳುವುದೆಲ್ಲವನ್ನೂ ನಿಮ್ಮ ತಲೆಯಲ್ಲಿ ತುಂಬಿಕೊಂಡು ಯೋಚಿಸುವುದನ್ನು ಮೊದಲು ನಿಲ್ಲಿಸಿ. ನಿಮಗೆ ಸಂಭವಿಸಿರುವುದು ಪ್ರತಿಯೊಂದು ನಿಮ್ಮಿಂದಲೇ ಬರಮಾಡಿಕೊಂಡದ್ದು. ಸಮಸ್ಯೆ ಏನೆಂದರೆ – ಅನೇಕ ಸಂದರ್ಭಗಳಲ್ಲಿ ಸ್ವಲ್ಪವಾದರೂ ಗಮನ ನೀಡದೆ ಅವುಗಳಿಗೆ ನೀವೇ ದಾರಿ ಮಾಡಿಕೊಡುತ್ತೀರಿ ಎಂಬುದನ್ನು ನೀವು ಯೋಚಿಸಿಲ್ಲ.
ಹೆದರಿಕೆಯಿಂದ ನೀವು ಎಸೆಯುವ ಹಲವು ಬೀಜಗಳು, ವಿಷದ ಗಿಡಗಳಾಗಿ ನಿಮ್ಮ ಸುತ್ತಲೂ ಬೆಳೆದು ನಿಂತಿವೆ. ಅವುಗಳನ್ನು ದೇವರು ತಂದು ನಿಮ್ಮ ತೋಟದಲ್ಲಿ ನೆಟ್ಟಿರುವುದಾಗಿ ತಿಳಿದು ಹೆದರುವುದು ಅಥವಾ ಹತಾಶರಾಗುವುದರಲ್ಲಿ ಏನೂ ಅರ್ಥವಿಲ್ಲ.
ಮಳೆ ಬೆಟ್ಟದ ಮೇಲೆ ಸುರಿಯುತ್ತದೆ; ಜಲಪಾತವಾಗಿ ಬೀಳುತ್ತದೆ, ಸಣ್ಣ ನದಿಗಳಾಗಿ ಹರಿಯುತ್ತದೆ, ಆಳವಾಗಿರುವ ಸ್ಥಳಗಳನ್ನು ಹುಡುಕುತ್ತಾ ಹೋಗಿ ಕೊನೆಗೆ ಸಮುದ್ರದಲ್ಲಿ ಸೇರುತ್ತದೆ. ಹುಟ್ಟಿದ ಕೂಡಲೆ ನದಿಯು ಸಮುದ್ರದಲ್ಲಿ ಸೇರಲು ಇಷ್ಟಪಟ್ಟು ಪ್ರಯಾಣ ಮಾಡುತ್ತದೆ, ಎಂದು ಹೇಳುವುದು ಕವಿತೆಗಳಿಗೆ ಮಾತ್ರ ಸಾಧ್ಯವೆ ಹೊರತು ಅದು ನಿಜವಾಗಿ ನದಿಯ ಹಣೆಬರಹವಲ್ಲ. ಮಾರ್ಗಮಧ್ಯದಲ್ಲಿ ಅಣೆಕಟ್ಟೆ ಹಾಕಿ ತಡೆದರೆ, ಸಮುದ್ರದಲ್ಲಿ ಸೇರಲಾಗಲಿಲ್ಲವೆ ಎಂದು ನದಿಯು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವುದಿಲ್ಲ. ನದಿಯ ಸ್ಥಳಕ್ಕಿಂತಲೂ ಸಮುದ್ರದ ಮಟ್ಟ ಸ್ವಲ್ಪ ಎತ್ತರದಲ್ಲಿದ್ದರೆ ಸಮುದ್ರ ನದಿಯನ್ನು ಹುಡುಕಿಕೊಂಡು ಬರುತ್ತದೆಯೆ? ನದಿ ಸಮುದ್ರವನ್ನು ಹುಡುಕುತ್ತಾ ಹೋಗುತ್ತದೆಯೆ?
ಹಣೆಬರಹದ ಕಟ್ಟು ಕಥೆ ನಂಬಬೇಡಿ, ನಿಮ್ಮ ಹಣೆಬರಹ ನಿಮ್ಮ ಕೈಯಲಿದೆ..
ಎಚ್ಚರಿಕೆಯಿಂದ ಗಮನವಿಟ್ಟು ಯಾವುದನ್ನೇ ಆಗಲಿ ನಿಭಾಯಿಸುವ ಗುಣ ನಿಮಗಿದ್ದರೆ ಅನಂತರ ಯಾವುದೇ ವಿಧಿಯಿಂದಲೂ ನಿಮ್ಮನ್ನು ಅಲುಗಾಡಿಸಲಾಗುವುದಿಲ್ಲ. ಆದ್ದರಿಂದ ಹಣೆಬರಹದ ಬಗೆಗೆ ಇರುವ ಕಟ್ಟುಕತೆಗಳನ್ನು ದೂರ ಎಸೆದು ನಿಮ್ಮ ಜೀವನವನ್ನು ನಡೆಸಲು ಮುಂದಾಗಿ. ಜನ್ಮ ಪಡೆದ ಕಾರಣಕ್ಕಾಗಿ ಬೆಳವಣಿಗೆಯ ಮೂಲಕ ಕೆಲವು ಮೂಲಭೂತವಾದ ಗುಣಗಳನ್ನು ನೀವು ಇಷ್ಟಪಟ್ಟು ಅಥವಾ ಇಷ್ಟವಿಲ್ಲದೆ ಸಂಗ್ರಹಿಸಿಕೊಂಡಿದ್ದೀರಿ. ಆ ಗುಣಾತಿಶಯಗಳು ನಿಮ್ಮ ಮಾರ್ಗವನ್ನು ಸ್ವಲ್ಪಮಟ್ಟಿಗೆ ತೀರ್ಮಾನಿಸುತ್ತವೆ. ಅದೇನಿದ್ದರೂ ಸ್ವಲ್ಪ ಪ್ರಮಾಣದಲ್ಲಿ. ಉಳಿದಂತೆ ಗಮನವಿರಿಸಿ ಕಾರ್ಯತತ್ಪರರಾದರೆ ನಿಮ್ಮ ಹಣೆಬರಹವನ್ನು ನಿಮ್ಮ ಇಚ್ಛೆಯಂತೆ ತಿದ್ದಿ ಬರೆದುಕೊಳ್ಳಲು ಸಾಧ್ಯವಾಗುತ್ತದೆ.
ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org