ಶ್ರೀ ಕೈವಲ್ಯಾನಂದ ಸರಸ್ವತೀ
ಜೀಸಸ್ ತನ್ನ ಶಿಷ್ಯರಿಗೆ ಹೇಳುತ್ತಿದ್ದರಂತೆ. ಒಂದು ಸಲವಲ್ಲ ಹಲವಾರು ಭಾರಿ ಹೇಳುತ್ತಿದ್ದರಂತೆ. “ನಿಮಗೆ ಕಣ್ಣುಗಳಿದ್ದರೆ ನೋಡಿ! ಕಿವಿಗಳಿದ್ದರೆ-ಕೇಳಿ!” – ಎಂದು. ಎಲ್ಲರಿಗೂ ಇರುವಂತೆ ಶಿಷ್ಯರಿಗೂ ಕಣ್ಣು ಕಿವಿಗಳಿದ್ದವು. ಅಂದರೆ ಜೀಸಸ್ ಅವರ
ಉದ್ದೇಶ್ಯ, ಅಭಿಪ್ರಾಯ ಮತ್ತೇನೋ ಇರಬೇಕು- ಈ ಕಿವಿಗಳಲ್ಲ, ಈ ಕಣ್ಣುಗಳಲ್ಲ.
ಪ್ರಪಂಚವನ್ನು ನೋಡುವ ಭಿನ್ನ ರೀತಿಯೊಂದಿಗೆ, ಹಾಗೂ ಭಿನ್ನ ರೀತಿಯ
ಕೇಳಿಸಿಕೊಳ್ಳುವಿಕೆ, ಭಿನ್ನ ರೀತಿಯಾದ ಇರುವಿಕೆ (ಬದುಕು) ಒಂದಿದೆ.
ಯಾವಾಗ ಆ ಭಿನ್ನ ರೀತಿಯಿಂದ ನೋಡುವ ಒಂದು ಗುಣ ನಿಮ್ಮಲಿದೆಯೋ ಆಗ ದೇವರ ದರ್ಶನವಾಯಿತು; ಯಾವಾಗ ಆ ಭಿನ್ನ ರೀತಿಯಿಂದ ಕೇಳುವ ಒಂದು ಕಲೆ ಇದೆಯೋ ಆಗ (ಪರಮಾತ್ಮ ಹೇಳುವುದನ್ನೇ) ಪರಮಾತ್ಮನನ್ನು ಶ್ರವಣ ಮಾಡಿದಂತೆ; ಹಾಗೂ ಯಾವಾಗ ಭಿನ್ನ ರೀತಿಯಿಂದ (ಬದುಕನ್ನು ಸಾಗಿಸುವುದಿದೆಯೋ) ಇರುವುದಿದೆಯೋ,
ಆಗ ನೀವೆ ದೇವರಾಗಿರುತ್ತೀರ. ಈಗಿರುವ ರೀತಿಯಲ್ಲಿ ನೀವು ಕಿವುಡರು, ಮೂಕರು, ಕುರುಡರು-ಹೆಚ್ಚುಕಮ್ಮಿ ಸತ್ತಂತೆ. ದೇವರಿಗೆ ಕಿವುಡ, ದೇವರಿಗೆ ಮೂಕ, ದೇವರಿಗೆ ಕುರುಡ, ದೇವರಿಗೆ ಸತ್ತಂತೆ. ನೀವು ಸತ್ತಂತಿರುವುದರಿಂದ ದೇವರು ಸತ್ತಂತೆ.
ನೀವು ಹೇರಳವಾಗಿ, ಪೂರ್ಣರಾಗಿ ಜೀವಿಸುವುದಾದರೆ; ಯಾವಾಗ ನಿಮ್ಮ ಜೀವನ ತುಂಬಿ ಹರಿಯುತ್ತದೋ, ಯಾವಾಗ ಪ್ರವಾಹವಾಗುತ್ತದೋ-ಆಗ ನೀವು ದೇವರನ್ನು ತಿಳಿಯಲು ಸಾಧ್ಯ. ಅತ್ಯಾನಂದದಿಂದ, ಜೀವನ ಶಕ್ತಿಯಿಂದ ತುಂಬಿ ಹರಿಯುವ ಬದುಕಿನ ಕ್ಷಣದಲ್ಲೇ ದೇವರು ಏನೆಂಬುದನ್ನು ತಿಳಿಯುವಿರಿ, ಏಕೆಂದರೆ ದೇವರು ಅತ್ಯಂತ ಸುಖ ಭೋಗದಿಂದ (LUXURIOUS) ತುಂಬಿ ಹರಿಯುವ ಅಸಾಧಾರಣ ವಸ್ತು.
ಈ ಪ್ರಪಂಚದಲ್ಲಿ (ನಮ್ಮ ಜೀವನದಲ್ಲಿ) ದೇವರು ಅನಿವರ‍್ಯತೆಯಲ್ಲ, ಅವಶ್ಯಕತೆಯಲ್ಲ. ದೇವ ಭಾವನೆ ಇಲ್ಲದೆ, ನಮ್ಮ ಜೀವನ ನಡೆಯಬಹುದು-ಆದರೆ ಅದು ಶುದ್ಧ ನಿಷ್ಪ್ರಯೋಜಕ. ಅವನಿಲ್ಲವೆಂದು ನೀವಿರಬಹುದು, ಆದರೆ ಅದು ಕೇವಲ ತರಕಾರಿ ಇದ್ದಂತೆ. ಅವನಿಲ್ಲವೆಂದರೆ ನಿಮ್ಮ ಜೀವನ ಆಹಾರಕ್ಕಾಗಿ ಬೆಳೆದ ಸಸ್ಯದಂತೆ. ಅವನಿಲ್ಲ ಎಂದು ನೀವು ಜೀವಿಸಬಹುದು. ಆದರೆ ಅದು ನಿಜವಾಗಿ ಬದುಕಿರುವಂತೆ ಆಗಲಿಲ್ಲ.
ದೇವರು ಅನಿವರ‍್ಯವಲ್ಲ-ನೀವು ಇರಬಹುದು. ಆದರೆ ನೀವು ಇರುವುದಕ್ಕೆ ಯಾವ ಅರ್ಥವೂ ಇರುವುದಿಲ್ಲ. ಅಂತಹ ಬದುಕಿನಲ್ಲಿ ಯಾವ ಕಾವ್ಯವಾಗಲಿ, ಸಂಗೀತವಾಗಲಿ, ನೃತ್ಯವಾಗಲೀ ಇರುವುದಿಲ್ಲ. ದೇವರಿಲ್ಲದ ಬಾಳು ಒಂದು ಧಾರ್ಮಿಕ ಸತ್ಯವಾಗುವುದಿಲ್ಲ. ಅದು ಒಂದು ಲೆಕ್ಕದಂತೆ, ವ್ಯಾಪಾರದಂತೆ, ಆದರೆ ಅದು ಒಂದು ಪ್ರೇಮಪೂರಿತ ವಿಷಯ, ಪ್ರೇಮ ಪೂರಿತ ಜೀವನವಾಗಲಾರದು. ದೇವರಿಲ್ಲದಿರೆ ಸೌಂದರ್ಯವಾದದ್ದೆಲ್ಲವೂ ಮಾಯವಾಗುವುದು.
ಏಕೆಂದರೆ ಸೌಂದರ್ಯವೆಂಬುದು ತುಂಬಿ ಹರಿಯುವಂತೆ ಬರುತ್ತದೆ-ಅದು ಒಂದು ಸುಖಭೋಗ. ದೇವರಿಲ್ಲದೆ ಒಬ್ಬನು ಜೀವಿಸಬಹುದು. ಆದರೆ ವ್ಯರ್ಥ. ಇಲ್ಲದಿದ್ದರೆ ಒಂದು ರೀತಿ ಚೆನ್ನಾಗಿರುತ್ತಿತ್ತೇನೋ, ಏಕೆಂದರೆ ದೇವರಿಲ್ಲದ ಜೀವನ ಸತತವಾದ ಆಶಾಭಂಗ. ದೇವರಿಲ್ಲದ ಜೀವನದಲ್ಲಿ ಏನೋ ಒಂದು ಕಳೆದುಕೊಂಡಂತೆ ಇರುತ್ತದೆ. ಹೃದಯದಲ್ಲಿ ಒಂದು ರೀತಿಯ ಶೂನ್ಯತೆ. ಜೀವಂತ ಶಕ್ತಿಯಾಗಿರುವುದಕ್ಕಿಂತ ಭಿನ್ನವಾಗಿ ಹುಣ್ಣಿನಂತಿರುತ್ತೀರ. ದೇವರಿಲ್ಲದ ಜೀವನದಲ್ಲಿ ನೋವು ಕಷ್ಟಗಳೇ ಇರುತ್ತವೆ. ಆನಂದೋನ್ಮಾದ ಇರುವುದಿಲ್ಲ.
ಆದರೆ ಒಂದು ಅರ್ಥವನ್ನು-ಆನಂದೋನ್ಮಾದತೆಯನ್ನು ಹೇಗೆ ಪಡೆಯಬಹುದು. ಒಂದು ವಿಭಿನ್ನ ತೆರನಾದ ನೋಟ-ದೃಷ್ಠಿ ಬೇಕು. ಈಗ ನೀವು ಕುರುಡರು. ನೀವು ಭೌತಿಕ ವಿಷಯಗಳನ್ನು ನೋಡಬಹುದು. ಆದರೆ ಅದು ಅನಿವರ‍್ಯತೆ. ನಿಮ್ಮ ಕಣ್ಣುಗಳು ಮೇಲ್ಭಾಗವನ್ನು ಮಾತ್ರ ನೋಡಬಹುದು. ಆದರೆ ಕೇಂದ್ರ-ತಿರುಳು ತಪ್ಪಿಹೋಗುತ್ತದೆ. ಆದಕಾರಣ ಪ್ರಸ್ತುತ ನಾವುಗಳು ಕುರುಡರು. ಯಾವಾಗ ಕೇಂದ್ರವನ್ನು ನೋಡಿಲ್ಲವೋ, ಇನ್ನು ಆತನ ಬಗ್ಗೆ-ದೇವರ ಬಗ್ಗೆ ಹೇಳುವುದೇನಿದೆ. ಆತನನ್ನು ಕುರಿತು ಆಲಿಸಿ ಶ್ರವಣಮಾಡಲಿಲ್ಲವೆಂದ ಮೇಲೆ ತಿಳಿಸಿಕೊಡುವುದಾದರೂ ಏನಿದೆ ಹೇಳಲು ಏನಿದೆ!
ಆದಕಾರಣ ಕುರಡರು ಮಾತ್ರವಲ್ಲ ಮೂರ್ಖರೂ ಅಹುದು. ಜ್ಞಾನಿಯಾದವನು ಮಾತನಾಡುತ್ತಾನೆಂದರೆ ಅವನನ್ನು ಯಾವುದೋ ಒಂದು ಸ್ವಾಧೀನ ಪಡಿಸಿಕೊಂಡಿದೆ. ಅವನಿಗಿಂತಲೂ ಉನ್ನತವಾದದ್ದು ಯಾವುದೋ ಒಂದು ಅವನ ಮುಖಾಂತರ ಮಾತನಾಡುತ್ತಿದೆ. ಭಗವಾನ್ ಬುದ್ಧ ಮಾತನಾಡುತ್ತಿದ್ದಾರೆಂದರೇ, ರಾಜವಂಶದಲ್ಲಿ ಜನ್ಮ ಪಡೆದ ಗೌತಮ ಸಿದ್ಧಾರ್ಥನಲ್ಲ. ನಾವು ನೋಡಬಹುದಾದ ಶರೀರ, ಸ್ಪರ್ಶ ಮಾಡಬಹುದಾದ ಶರೀರ-ಅಲ್ಲ. ನಾವು ಗ್ರಹಿಸಬಹುದಾದ ಮನಸ್ಸು ಅಲ್ಲ. ಇವೆಲ್ಲಕ್ಕೂ ಹೊರಚ್ಚಾಗಿರುವುದು ಯಾವುದೋ ಒಂದು ಪ್ರವೇಶ ಮಾಡಿದೆ.
ದೇಶ ಕಾಲಕ್ಕೆ ಸಂಬಂಧ ಪಡದಿರುವುದಾವುದೋ ಒಂದು, ದೇಶಕಾಲದೊಳಗೆ ಬಂದಿರುವಂತಿದೆ. ಒಂದು ರೀತಿಯ ಚಮತ್ಕಾರ ನಡೆದಂತಿದೆ. ಆತನು ಮಾತನಾಡುತ್ತಿಲ್ಲ. ಆತನು ಒಂದು ವಾಹನದಂತೆ. ಯಾವುದೋ ಮತ್ತೊಂದು ಅವರ ಮೂಲಕ ಹರಡುತ್ತಿದೆ. ಅವರು ಕೇವಲ ಮಾಧ್ಯಮ. ಅವರು ನಮಗೆ ತಿಳಿಯದ ದಡದಿಂದ ಏನನ್ನೋ ಹೊತ್ತು ತರುತ್ತಾರೆ. ಅಂತಹ ಒಂದು ಸ್ಥಿತಿ ನಮ್ಮದಾದಾಗ ನಾವು ಮೂಕರಲ್ಲ. ಅಲ್ಲಿನವರೆಗೂ ನಾವು ಮಾತನಾಡುವುದೆಲ್ಲ ವ್ಯರ್ಥ.
ಜನರು ಬಹಳಷ್ಟು ಪ್ರಯಾಣ ಮಾಡುತ್ತಾರೆ. ಒಂದು ನಗರದಿಂದ ಮತ್ತೊಂದು ನಗರಕ್ಕೆ, ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ. ಇಡೀ ಪೃಥ್ವಿಯನ್ನು ಸುತ್ತಬಹುದು. ಆದರೆ ಆ ಚಲನೆ ಜೀವನವಲ್ಲ. ಜನ ಒಂದು ಕಡೆ ಇದ್ದು ಬೇಸರವಾದಾಗ ಬಾಹ್ಯದಲ್ಲಿ ಚಲಿಸುತ್ತಾರೆ. ಎಲ್ಲವನ್ನು ಬದಲಾಯಿಸುತ್ತಾರೆ. ಆಗಲೇ ಅವರು ಜೀವಂತ ಎಂದುಕೊಳ್ಳುತ್ತಾರೆ. ಜೀವನಕ್ಕಾಗಿ ಕ್ಷಯರೋಗಯುಕ್ತ, ಅಸ್ತಿ ಜ್ವರದ ಅನ್ವೇಷಣೆ. ಜೀವನವೆಂಬುದು ಚಲನೆ-ಇದು ನಿಜ. ಆದರೆ ಬಾಹ್ಯ ಪ್ರಯಾಣವಲ್ಲ, ಬಾಹ್ಯದಲ್ಲಿನ ಬದಲಾವಣೆಯಲ್ಲ. ಜೀವನವು ಚಲನೆ-ಒಂದು ಸ್ಥಿತಿಯಿಂದ-ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಆಳವಾದ ಅಂತರಂಗ ಚಲನೆ. ಒಂದು ಪ್ರಜ್ಞೆಯಿಂದ ಮತ್ತೊಂದು ಪ್ರಜ್ಞೆಗೆ. ಉನ್ನತ ಸಾಮ್ರಾಜ್ಯಕ್ಕೆ-ಅಸ್ತಿತ್ವದ ಉನ್ನತ ಸಾಮ್ರಾಜ್ಯಕ್ಕೆ. ಅಲ್ಲಿಗೆ ಸರಿಯಲಿಲ್ಲವೆಂದರೆ ನೀವುಗಳು ಸತ್ತಂತೆ. ಈಗಿರುವಂತೆ, ಸತ್ತಂತೆ ಇರುತ್ತೀರ.
ಸಹಸ್ರಾರು ಜನ ಕುರುಡರಾಗಿ, ಮೂಗರಾಗಿ ಜೀವಿಸುತ್ತಾರೆಂದರೆ, ಅವರಿಗೆ ಅದು ಏನನ್ನೋ ಕೊಡುತ್ತಿರಬೇಕು. ಮಹತ್ಮಾರ ಉಪದೇಶವು ಕೆಲಸ ಮಾಡುತ್ತಿಲ್ಲವೆಂದರೆ ಆ ಜೀವನದಲ್ಲಿ ಜನರು ಕೂಡಿರುವ ಆಳವಾದ ಬಂಡವಾಳವಾದರೂ ಏನು?
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಎರಡು ರೀತಿಯ ಜೀವನವನ್ನು ಮಾಡಬಹುದು, ಸೂಕ್ಷ್ಮ ಮನಸ್ಸಿನಿಂದ ಅಥವಾ ಸ್ಥೂಲ ಮನಸ್ಸಿನಿಂದ. ಸ್ಥೂಲ ಮನಸ್ಸಿನವರಿಗೆ ಹೆಚ್ಚು ತಾಪತ್ರಯ ಇರುವುದಿಲ್ಲ. ಸೂಕ್ಷ್ಮ ಮನಸ್ಸಿನವರಿಗೆ ತಾಪತ್ರಯ ಜಾಸ್ತಿ. ಸ್ಥೂಲ ಮನಸ್ಸುಳ್ಳವನು ಅರ್ಥಮಾಡಿಕೊಳ್ಳಲಾರನಾದ ಕಾರಣ ಆತನಿಗೆ ನೋವು ಕಮ್ಮಿ. ಏಕೆಂದರೆ ಅದನ್ನು ಗ್ರಹಿಸಲಾರ. ಆದಕಾರಣ ಸ್ಥೂಲ
ಜೀವನವನ್ನೇ ಹೆಚ್ಚು ಜನರು ಆರಿಸಿಕೊಂಡಿರಬೇಕು. ಈ ಸ್ಥೂಲ ಬುದ್ದಿಯವರಿಗೆ ಆತ್ಮಾನಂದವೂ ಕಮ್ಮಿ. ಏಕೆಂದರೆ ಆತ್ಮಾನಂದವನ್ನು ಗ್ರಹಿಸಲಾರರು.
ಆತ್ಮಾನಂದವು ಬೇಕೆನ್ನುವವರು ಸೂಕ್ಷ್ಮ ಚಿಂತನೆಯ ನೋವನ್ನು ಪ್ರಾರಂಭದಲ್ಲಿ ಒಪ್ಪಿಕೊಳ್ಳಬೇಕು. ನಂತರ ಸ್ಥೂಲ, ಸೂಕ್ಷ್ಮ ಎರಡು ಚಿಂತನೆಯನ್ನು ಮೀರಿ ಆತ್ಮಾನಂದವನ್ನು ಪಡೆಯಲಾಗುವುದು. ಆತ್ಮಾನಂದವನ್ನು ಪಡೆದವರು ಒಳಗೆ ಆನಂದವನ್ನು ಅನುಭವಿಸಿದರೂ ಭಾಹ್ಯದಲ್ಲಿ ಇತರರ ಪರಿಸ್ಥಿತಿಗೆ ಸ್ಪಂದಿಸುತ್ತಾರೆ.
ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Navavidha Bhakti : ಪಾದಸೇವೆಯಿಂದಲೂ ಭಕ್ತಿಯ ವೃದ್ಧಿ