ಶ್ರೀ ಕೈವಲ್ಯಾನಂದ ಸರಸ್ವತೀ
ಮನುಷ್ಯ ಹುಟ್ಟಿನಿಂದ ಸಾವಿನ ತನಕಾ ಆನಂದ ಪ್ರಾಪ್ತಿಗಾಗಿ ಶ್ರಮಿಸುತ್ತಾನೆ. ಆದಾಗ್ಯೂ ಆನಂದ ಕಾಣದು. ದುಃಖದಲ್ಲೇ ಜೀವಿಸುತ್ತಾನೆ. ದುಃಖಕ್ಕೆ ಕಾರಣವನ್ನು ಹುಡುಕುತ್ತಾನೆ – ಸಾಕಷ್ಟು ದುಡ್ಡು ಇಲ್ಲದ್ದೇ ಕಾರಣ; ಈ ಹೆಂಡತಿ ಸರಿಯಿಲ್ಲ, ಈ ಮಕ್ಕಳು ಸರಿಯಿಲ್ಲ. ಇನ್ನೂ ಯಶಸ್ವಿ ಪತಿ ಇದ್ದಲ್ಲಿ ಆನಂದ – ಇತ್ಯಾದಿಯಾಗಿ
ಕಾರಣಗಳನ್ನು ಹುಡುಕುತ್ತಾನೆ.
ಪ್ರಪಂಚವನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನದಾಗಿಸಿಕೊಂಡ ಪ್ರಪಂಚವನ್ನು ಅಭಿವೃದ್ಧಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನನ್ನು ಬಿಟ್ಟು ಹೋಗದೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾನೆ. ಏನೆಲ್ಲಾ ಮಾಡಿದರೂ ದುಃಖವು ಅಂತ್ಯವಾಗುವುದಿಲ್ಲ. ಆನಂದ ಪ್ರಾಪ್ತಿ ಎಂಬುದೊಂದು ಬಿಸಿಲು ಕುದುರೆಯಾಗುತ್ತಿದೆ. ಇದು ಎಲ್ಲರ ಅನುಭವವೂ ಆಗಿದೆ.
ಏಕೆ ಹೀಗಾಗುತ್ತಿದೆ? ಎಂದರೆ ʻʻಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರುʼʼ ಎಂಬಂತಿದೆ ಮನುಷ್ಯನ ಪ್ರಯತ್ನ. ದುಃಖಕ್ಕೆ ತಾನೇ ಮೂಲ ಕಾರಣವಾಗಿದ್ದಾನೆ. ಮತ್ತೆಲ್ಲೋ ಪರಿಹಾರಕ್ಕೆ ಪ್ರಯತ್ನ ನಡೆಸುತ್ತಾನೆ. ತನ್ನ ಎಲ್ಲ ದುಃಖಕ್ಕೂ ಅವನ ಮೋಹವೇ ಕಾರಣ.
ಮೋಹವೆಂದರೆ ತನ್ನ ಜೀವನ, ಆನಂದ ಮತ್ತೊಬ್ಬರಿಂದ, ಮತ್ತೊಂದು ವಸ್ತುವಿನಿಂದ, ಇತರರಿಲ್ಲದೆ ತಾನಿರಲಾರ, ಇತರ ವಸ್ತುಗಳಿಲ್ಲದಿರೆ ತಾನಿರಲಾರ. ತನ್ನ ಆನಂದ ಇತರರಿಂದ, ಇತರ ವಸ್ತುಗಳಿಂದ ಎಂದು ಮೋಹಗೊಳ್ಳುತ್ತಿದ್ದಾನೆ.
ʻʻರಾಜನ ಪ್ರಾಣ ಗಿಳಿಯಲ್ಲಿದೆ. ರಾಜ ಏನು ಮಾಡಿದರೂ ಸಾಯುವುದಿಲ್ಲ. ರಾಜನನ್ನು ಸಾಯಿಸಲು ಗಿಳಿಯ ಕುತ್ತಿಗೆ ಹಿಸುಕಬೇಕು’’ ಎಂಬ ಕಥೆಯನ್ನು ಕೇಳಿರಬಹುದು. ಈ ಕಥೆ ಬಹಳ ಅರ್ಥ ಗರ್ಭಿತ. ಮಕ್ಕಳಿಗೆ ಹೇಳುವ ಈ ಕಥೆಯಲ್ಲಿ ವೃದ್ಧರೂ ಅರ್ಥ ಮಾಡಿಕೊಳ್ಳುವುದು ಸಾಕಷ್ಟಿದೆ. ರಾಜನ ಪ್ರಾಣಗಿಳಿಯಲ್ಲಿ ಇರುವಂತೆ, ಮನುಷ್ಯರ ಪ್ರಾಣ ಒಬ್ಬೊಬ್ಬರದು, ಒಂದೊಂದರಲ್ಲಿ ಇದೆ. ಕೆಲವರ ಪ್ರಾಣ ಕಬ್ಬಿಣದ ಪೆಟ್ಟಿಗೆಯಲ್ಲಿ. ನೀವು ಅವರ ಕುತ್ತಿಗೆ ಹಿಸುಕಿದರೂ ಸಾಯರು. ಕಬ್ಬಿಣದ ಪೆಟ್ಟಿಗೆ ಯಾರಾದರೂ ಖಾಲಿ ಮಾಡಿದರೆ ಅವರು ಸತ್ತಂತೆ. ಅವನ ಪ್ರಾಣ ಆ ಪೆಟ್ಟಿಗೆಯಲ್ಲಿದೆ. ಮೋಹದ ಅರ್ಥ ನಿಮ್ಮ ಪ್ರಾಣ, ನಿಮ್ಮಲ್ಲಿಲ್ಲ. ನಿಮ್ಮ ಆನಂದ ನಿಮ್ಮಲಿಲ್ಲ. ನಿಮ್ಮ ಪ್ರಾಣ, ನಿಮ್ಮ ಆನಂದ ಮತ್ತೆಲ್ಲೋ ಇದೆ. ಮಗನ ಮೇಲಿರಬಹುದು. ಹಣದ ಮೇಲಿರಬಹುದು. ಹೆಂಡತಿಯ ಮೇಲಿರಬಹುದು. ಪದವಿ ಪ್ರತಿಷ್ಠೆಗಳಲ್ಲಿರಬಹುದು. ಪ್ರಾಣವನ್ನು ಬಾಹ್ಯದಲ್ಲಿರಿಸಿರುವಿರಿ. ಅದು ಎಲ್ಲಿರಬೇಕೋ ಅಲ್ಲಿಲ್ಲ. ಅದು ನಿಮ್ಮಲ್ಲಿ ಸ್ಪಂದಿಸುತ್ತಿಲ್ಲ. ಮತ್ತೆಲ್ಲೋ ಸ್ಪಂದಿಸುತ್ತಿದೆ. ಹೀಗಾದಾಗ ನೀವು ತೊಂದರೆ ಗೀಡಾಗುತ್ತೀರ. ದುಃಖದಲ್ಲಿ ಜೀವಿಸುತ್ತೀರ.
ಮೋಹವೇ ಸಂಸಾರ
ನೀವು ಎಲ್ಲಿ, ಯಾರಲ್ಲಿ, ಯಾವುದರಲ್ಲಿ ಮೋಹಗೊಳ್ಳುವಿರೋ, ಅದಕ್ಕೆ (ಅವರಿಗೆ) ನೀವು ಗುಲಾಮರು. ರಾಜನ ಪ್ರಾಣ ಗಿಳಿಯಲ್ಲಿ. ಗಿಳಿ ಸತ್ತರೆ, ರಾಜ ಸಾಯುತ್ತಾನೆ. ಆದ ಕಾರಣ ಎಲ್ಲವನ್ನೂ ಬಿಟ್ಟು ಗಿಳಿಯನ್ನು ನೋಡಿಕೊಳ್ಳಬೇಕು. ತನ್ನನ್ನು ನೋಡಿಕೊಳ್ಳದಿದ್ದರೂ ಯಾವ ನಷ್ಟವೂ ಇಲ್ಲ. ಗಿಳಿಯನ್ನೂ ನೋಡಿಕೊಳ್ಳಬೇಕು. ನೀವು ನಿಮ್ಮ ಜೀವನವನ್ನು ಎಲ್ಲಿ ಇಟ್ಟಿರುವಿರೋ, ಅದಕ್ಕಾಗಿಯೇ ಹಗಲೂ ರಾತ್ರಿ ಕೆಲಸ ಮಾಡುವಿರಿ. ನಿಮ್ಮ ಜೀವನವೆಲ್ಲ ನಿಮ್ಮ ಮೋಹದ ವಸ್ತುವಿಗಾಗಿಯೇ.
ಮೋಹದ ಆವರಣವೆಂದರೆ ನಿಮ್ಮ ಆತ್ಮ ನಿಮ್ಮಲ್ಲಿ ಇಲ್ಲ. ಮತ್ತೆಲ್ಲಿಯೋ ಇನ್ನೊಂದು ಕಡೆ, ಇನ್ನೊಂದು ವಸ್ತುವಿನಲ್ಲಿ, ಇನ್ನೊಬ್ಬರಲ್ಲಿ ಅದು ಅವಿತುಕೊಂಡಿದೆ. ಅದು ನಿಮ್ಮಲ್ಲಿಲ್ಲ – ಇದೇ ಪ್ರಾಮುಖ್ಯ. ಇನ್ನೊಂದರ ಮೇಲೆ, ಇನ್ನೊಬ್ಬರ ಮೇಲೆ, ನಿಮ್ಮ ಅಸ್ಥಿತ್ವ ಅವಲಂಭಿತವಾಗಿದೆ. ಈ ಅವಲಂಭನೆಯ ಪರಿಣಾಮ ದುಃಖ, ಕ್ಲೇಶ, ತಪ್ಪಿಸಿಕೊಳ್ಳಲಾಗದು. ಮೋಹದ ವಸ್ತು ಎಲ್ಲಿ ಕೈಜಾರಿ ಹೋಗುವುದೋ, ಮೋಹದ ವ್ಯಕ್ತಿ ಎಲ್ಲಿ ಕೈ ಬಿಟ್ಟು ಹೋಗುವನೋ ಎಂಬ ಆತಂಕ, ಆತನಿಲ್ಲದೆ/ಆಕೆಯಿಲ್ಲದೆ ನಾ ಇರಲಾರೆ ಎಂಬ ವ್ಯಸನ ತುಂಬಿರುವುದು. ಯಾವ ವಸ್ತು ನೀವು ರೋಧಿಸುವುದಕ್ಕೆ ಕಾರಣವೋ ಅದೇ ಮೋಹದ ವಸ್ತು.
ಯಾರು ದೂರವಾದಲ್ಲಿ ನಾನು ಒಂಟಿ ಎಂಬ ಭಾವನೆ ಬರುವುದೋ ಅವರೇ ಮೋಹದ ವ್ಯಕ್ತಿ. ಯಾವ ವಸ್ತು ನಾಶವಾದರೆ ನಿಮ್ಮಲ್ಲಿ ಆ ಭಾವ ಮನೆ ಮಾಡಿಕೊಳ್ಳುವುದೋ ಅದೇ ನಿಮ್ಮ ಮೋಹದ ವಸ್ತು. ಯಾವ ವಸ್ತು ಜಾರಿ ಹೋದಲ್ಲಿ, ನೀವು ಧೈನ್ಯತೆಯನ್ನು ಹೊಂದುವಿರೋ ಅದೇ ಮೋಹದ ವಸ್ತು. ಎಲ್ಲ ದುಃಖಕ್ಕೂ ಈ ಮೋಹವೇ ಕಾರಣ. ಮೋಹಕ್ಕೆ ಎದುರಿನಲ್ಲಿರುವ ವಸ್ತು, ವ್ಯಕ್ತಿ, ಪ್ರಸಂಗ ಕಾರಣವಲ್ಲ. ನೀವೇ ಕಾರಣ. ನಿಮ್ಮ ಮೋಹವೇ ಕಾರಣ. ಮೋಹವೇ ಸಮಸ್ಯೆಯ, ದುಃಖ ಜೀವನದ ಅಡಿಗಲ್ಲು. ಈ ಅಡಿಗಲ್ಲನ್ನೂ ಕಿತ್ತೊಗೆಯುವುದಲ್ಲದೆ ಅನ್ಯ ಮಾರ್ಗವಿಲ್ಲ.
ಈಗ ಒಂದು ಪ್ರಶ್ನೆ ಎದ್ದುಕೊಳ್ಳುತ್ತದೆ. ʻʻಮೋಹದಿಂದ ಮುಕ್ತಿ ಹೇಗೆ?’’ ಈ ಪ್ರಶ್ನೆಗೆ ಸಮಾಧಾನವಾಗಿ ಕೆಲವರು ಹೇಳುವುದೇನೆಂದರೆ? ಯಾರಲ್ಲಿ ಮೋಹವಿದೆಯೋ, ಯಾವ ವಸ್ತುವಿನಲ್ಲಿ ಮೋಹವಿದೆಯೋ – ಅವರಿಂದ ದೂರ ಹೋಗಬೇಕು. ಆಗ ಮೋಹ ಕಳಚಿ ಹೋಗುತ್ತದೆ ಎನ್ನುತ್ತಾರೆ. ಇಲ್ಲಿ ಮೋಹದ ವಿಷಯ ಬದಲಾಯಿಸುತ್ತಿದೆ. ಮೋಹವುಳ್ಳ ವ್ಯಕ್ತಿ ಬದಲಾವಣೆಯಾಗಲಿಲ್ಲ. ಮೋಹವು ಹೋಗಲಿಲ್ಲ. ಮನೆಯನ್ನು ದೂರಮಾಡಿದಲ್ಲಿ, ಆಶ್ರಮ ಇಲ್ಲವೇ ಮಠದ ಮೋಹ ಹತ್ತಿಕೊಳ್ಳುವುದು. ಮನೆಗೆ ಅಂಟುಕೊಂಡಂತೆ ಆಶ್ರಮಕ್ಕೆ ಅಂಟುಕೊಳ್ಳಲಾಗುವುದು.
ಹೆಂಡತಿ, ಮಕ್ಕಳನ್ನು ಬಿಟ್ಟು ಹೋದಲ್ಲಿ ಅವರ ಸ್ಥಾನದಲ್ಲಿ ಗುರು, ಶಿಷ್ಯರು ಬರುವರು. ಕುಟುಂಬದ ಸದಸ್ಯರಿಗೆ ಅಂಟುಕೊಂಡ ರೀತಿಯಲ್ಲಿ, ಇವರಿಗೆ ಅಂಟುಕೊಳ್ಳಲಾಗುವುದು. ರಾಜಗೃಹವನ್ನು ಬಿಟ್ಟು, ಗುಡಿಸಲನ್ನು ಸೇರಬಹುದು. ಆದರೆ, ಈಗ ಗುಡಿಸಲಿನ ಮೇಲೆ ಮೋಹ. ಜಿಂಕೆಯ ಚರ್ಮ ಕಟ್ಟಿಕೊಂಡು ತಿರುಗಬಹುದು ಅಥವಾ ನಗ್ನವಾಗಿ ತಿರುಗಬಹುದು. ಜಿಂಕೆಯ ಚರ್ಮದ ಮೇಲೆ ಮೋಹ, ನಗ್ನತ್ವದ ಮೇಲೆ ಮೋಹ. ಮೋಹದಿಂದ ಮುಕ್ತನಾಗಲು ಪಲಾಯನ ಪರಿಹಾರವಾಗಲಾರದು.
ಮೋಹದಿಂದ ಮುಕ್ತಿ ಹೇಗೆ?
ಮತ್ತಾವುದು ಪರಿಹಾರ? ಯಾರಲ್ಲಿ, ಯಾವುದರಲ್ಲಿ ಮೋಹವಿದೆಯೋ ಅನ್ವೇಷಣೆ ಮಾಡಿ ನೋಡಿಕೊಳ್ಳಿ. ಯಾರು ದೂರವಾದರೆ ಯಾವ ವಸ್ತುವು ಕಳೆದು ಹೋದರೆ ನೀವು ವಿಕಾರ ಕೈಗೊಳ್ಳುವಿರೋ ಪರೀಕ್ಷಿಸಿಕೊಳ್ಳಿ. ಆ ವ್ಯಕ್ತಿ, ಆ ವಸ್ತು ದೂರವಾಗುವುದಕ್ಕೆ ಮುನ್ನ ನೀವು ಜಾಗೃತರಾಗಿ, ನಿಮ್ಮ ಮೋಹವನ್ನು ಕೊಡವಿಕೊಳ್ಳಿ. ಹೇಗೆ ಸಾಧ್ಯ? ಎನ್ನುವಿರಾ? ಪ್ರಪಂಚದಲ್ಲಿ ಯಾವುದೊಂದು ಸ್ಥಿರವಲ್ಲ. ಸ್ನೇಹವಾಗಲಿ, ಪ್ರೇಮವಾಗಲಿ, ಸಂಬಂಧವಾಗಲಿ ಯಾವುದು ಸ್ಥಿರವಲ್ಲ. ಪ್ರತಿಕ್ಷಣ, ಪ್ರಪಂಚದ ಪ್ರತಿವಸ್ತುವೂ ಪರಿವರ್ತನೆಯಾಗುತ್ತಿದೆ. ಪರಿವರ್ತನೆಯೊಂದೆ ಇಲ್ಲಿ ಸ್ಥಿರವಾದದ್ದು. ʻʻಸಂಯೋಗ ವಿಪ್ರಯೋಗಾಂತಃ’’ – ಒಟ್ಟಿಗೆ ಸೇರುವುದು, ಬಿಟ್ಟು ಹೋಗಲಿಕ್ಕಾಗಿಯೇ – ಇದೊಂದು ಬದಲಾಯಿಸಲಾಗದ ಪ್ರಪಂಚದ ನಿಯಮ.
ಬದಲಾಗಬೇಕಾದದ್ದು ನೀವು ಹಾಗೂ ನಿಮ್ಮ ನಿಲುವು. ನದಿ ಪ್ರವಾಹದಂತೆ ಎಲ್ಲವೂ ಪರಿವರ್ತನೆಯ ಪ್ರವಾಹ. ಒಂದು ಕಡೆ ನಿಲ್ಲದು. ಕಟ್ಟೆಕಟ್ಟಿ ನಿಲ್ಲಿಸುವ ನೀವು ಸಾಕಷ್ಟು ಪ್ರಯತ್ನ ಮಾಡಿರುತ್ತೀರಿ, ಶ್ರಮವಹಿಸಿರುತ್ತೀರಿ. ಬೆವರು ಸುರಿಸಿರುತ್ತೀರಿ. ಆದರೆ ಶ್ರಮ, ಆಯಾಸವೇ ಪ್ರಯೋಜನವಾಗಿದೆ. ಪರಿವರ್ತನೆಯೇ ಸಂಸಾರ. ಈ ಸಂಸಾರದಲ್ಲಿ ಸ್ಥಿರವಾದದ್ದನ್ನು ಹುಡುಕುವುದು, ಬಯಸುವುದು ವ್ಯರ್ಥ.
ನೀವು ಆಸೆ ಪಟ್ಟದ್ದು ಕೈ ಜಾರಿ ಹೋಗುವುದು. ʻʻಪರಿವರ್ತನೆಯೇ ಸಂಸಾರ’’ – ಪರಿವರ್ತನೆ ಮಾಡಲಾಗದ ಸ್ವಭಾವ ಈ ಸಂಸಾರದ್ದು, ಪರಿವರ್ತನೆಯಾಗಬೇಕಾದದ್ದು ʻʻನೀವೇ’ ಎಂಬುದನ್ನು ಅರ್ಥಮಾಡಿಕೊಂಡು, ನಿಮ್ಮ ಮೋಹವನ್ನು ಮುರಿದು ಹಾಕಿ. ಮೋಹವನ್ನು ವರೆಸಿ ಹಾಕಿ. ನೀವು ಪರಿವರ್ತನೆಯಾಗುವುದೊಂದೇ ಮೋಹದಿಂದ ಮುಕ್ತರಾಗುವ ಒಂದು ರೀತಿಯ ಉಪಾಯ. ಮನಸ್ಸಿಗೆ ಬಹಳ ನೋವಾಗುತ್ತದೆ. ಆದರೆ ಈ ನೋವು ಸಹಿಸಲೇಬೇಕು. ಇದೇ ತಪಸ್ಸು. ಇದಕ್ಕಾಗಿ ಸಂಸಾರವನ್ನು ಬಿಟ್ಟು, ದೂರದ ಹಿಮಾಲಯಕ್ಕೆ ಹೋಗಬೇಕಾದದ್ದಿಲ್ಲ. ನೀವು ಎಲ್ಲಿರುವಿರೋ ಅಲ್ಲಿಯೇ ಇರಿ. ಆದರೆ ಹಣ, ಹೆಂಡತಿ (ಗಂಡ) ಇತ್ಯಾದಿಗಳ ಮೇಲಿನ ನಿಮ್ಮ ಅವಲಂಬನೆ ಬಿಡಿ. ಮೋಹದ ವಸ್ತುವಿನಿಂದ ಮಾನಸಿಕವಾಗಿ ದೂರವಿದ್ದು ಜೀವಿಸಲು ನಿಮ್ಮ ಅಂತರಂಗದಲ್ಲೇ ಪ್ರಯತ್ನಮಾಡಿ. ಆ ಪ್ರಯತ್ನದಲ್ಲಿಯೇ ಮುಂದುವರಿಯುತ್ತಾ, ಕೊನೆಯಲ್ಲಿ ಯಾವ ವಸ್ತು ಯಾವ ವ್ಯಕ್ತಿಯೂ ಇಲ್ಲದಿದ್ದರೂ ನಿಮ್ಮಲ್ಲಿ ಯಾವ ಅಂಜಿಕೆ, ನಡುಕ ಇಲ್ಲದಿರಲಿ.
ಅಂತಹ ಒಂದು ಸ್ಥಿತಿಯನ್ನು ಪಡೆಯಿರಿ. ಆಗ ನೀವು ಮೋಹವನ್ನು ಜಯಸಿದಂತೆ. ಇದು ಅಸಾಧ್ಯವಲ್ಲ. ಸಾಧ್ಯ. ಒಬ್ಬರಿಗೆ ಸಾಧ್ಯವಾಗಿದ್ದಲ್ಲಿ, ಎಲ್ಲರಿಗೂ ಸಾಧ್ಯ. ಇದು ಸಾಧ್ಯವಾದ ಆ ಶುಭ ಘಳಿಗೆಯಲ್ಲಿಯೇ ಆತ್ಮ ಜ್ಞಾನ – ಸಹಜ ವಿದ್ಯಾ – ಪ್ರಾಪ್ತಿಯಾಗುವುದು.
ಎಲ್ಲಿಗೆ ಹೋದರೂ ʻಇತರೆ’ ಎಂಬುದು ಇದ್ದೇ ಇದೆ. ‘ಇತರೆ’ ಎಂಬುದು ಸರ್ವತ್ರ ಇದೆ. ಈ ಪ್ರಪಂಚದಲ್ಲಿ ನಿನಗಿಂತಲೂ ಭಿನ್ನವಾದದ್ದರಿಂದ ಓಡಿಹೋಗಲು ಸಾಧ್ಯವಿಲ್ಲ. ಏಕೆಂದರೆ ಪ್ರಪಂಚವೇ ಭಿನ್ನವಾದದ್ದು ಮತ್ತು ಎಲ್ಲಿ ಹೋದರೂ ಪ್ರಪಂಚವಿದೆ. ಪ್ರಪಂಚದಿಂದ ಆಚೆಗೆ ಹೋಗಲಾಗದು. ಎಲ್ಲಿ ಹೋದರು ಭಿನ್ನವಾದ ವಸ್ತು ಅಲ್ಲಿ ಇರುವುದು. ಆದ್ದರಿಂದ ಇತರ ವಸ್ತುಗಳಿಂದ, ಬೇರೆಯವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇತರ ವಸ್ತುಗಳಿಂದ, ಇತರ ವ್ಯಕ್ತಿಗಳಿಂದ ಓಡಿ ಹೋಗಲಾಗದು. ಎಲ್ಲಿ ಹೋದರೂ ಪ್ರಪಂಚವಿದೆ. ಇದೇ ಸತ್ಯದ ಇನ್ನೊಂದು ಮುಖವೇನೆಂದರೆ, ಅಹಂಕಾರ ರೂಪದಲ್ಲಿ ನೀವಿರುವವರೆಗೂ, ನಿಮಗಿಂತಲೂ ಬೇರೆಯಾದ ವಸ್ತುಗಳು ವ್ಯಕ್ತಿಗಳು ತಪ್ಪದೇ ಇರುತ್ತಾರೆ. ಕಣ್ಣು ಮುಚ್ಚಿಕೊಂಡರೂ, ಪ್ರಪಂಚದ ದೃಶ್ಯಗಳು ಅದೃಶ್ಯವಾದರೂ ʻʻಇತರೆ’’ ಎಂಬುದು ಅದೃಶ್ಯವಾಗದು. ಮುಚ್ಚಿರುವ ಕಣ್ಣುಗಳ ಹಿಂಭಾಗದಲ್ಲಿ ಇರುವುದು. ನಿಮ್ಮ ಆಸೆಗಳಲ್ಲಿ, ಆತುರತೆಯ ಹಂಬಲದಲ್ಲಿ ನಿಮ್ಮ ಕನಸಿನಲ್ಲಿ, ನಿಮ್ಮ ಹಗಲುಗನಸಿನಲ್ಲಿ ʻಇತರೆ’ ಎಂಬುದು ಇರುತ್ತದೆ. ಅಹಂಕಾರವಿರುವವರೆಗೂ ಬೇರೆಯವರನ್ನು, ಬೇರೆ ವಸ್ತುಗಳನ್ನು ತಪ್ಪಿಸಿಕೊಳ್ಳಲಾಗದು.
ಎಲ್ಲಿ ಹೋದರೂ ಪ್ರಪಂಚವಿದೆ, ಅಹಂಕಾರವಿದೆ ಅಥವಾ ಎಲ್ಲಿ ಹೋದರೂ ಅಹಂಕಾರವಿದೆ. ಅಹಂಕಾರದ ಮುಖಾಂತರ ನಾನು ನೋಡಿದ್ದೇ ಪ್ರಪಂಚ. ಅಹಂಕಾರವಿದೆ, ಪ್ರಪಂಚವಿದೆ. ಇವೆರಡರೂ ಇರುವಲ್ಲಿ ಸಂಬಂಧವಿದೆ. ಸಂಬಂಧವಿದ್ದಲ್ಲಿ ಮೋಹವಿದೆ. ಆದ ಕಾರಣ ಮೋಹದಿಂದ ತಪ್ಪಿಸಿಕೊಳ್ಳಲಾಗದು. ತಪ್ಪಿಸಿಕೊಳ್ಳಲು ಎಲ್ಲಿ ಪ್ರಪಂಚವಿಲ್ಲವೋ, ಎಲ್ಲಿ ಅಹಂಕಾರವಿಲ್ಲವೋ, ಎಲ್ಲಿ ಸಂಬಂಧಕ್ಕೆ ಅವಕಾಶವೇ ಇಲ್ಲವೋ, ಅಲ್ಲಿಗೆ ಹೋಗಿ ಸೇರಿಕೊಳ್ಳಬೇಕು.
ಅಂತಹ ಸ್ಥಳವು ಯಾವುದೆಂದರೆ ನಮ್ಮುಗಳ ಅಸ್ಥಿತ್ವವೇ, ನಮ್ಮ ಅಸ್ಥಿತ್ವದ ಅಂತರ್ ಕೇಂದ್ರವೇ. ಆದಕಾರಣ ನಮ್ಮ ಅಸ್ಥಿತ್ವದ ಕೇಂದ್ರದ ಕಡೆ ಯಾತ್ರೆ ಮಾಡಬೇಕು. ಅತ್ಯಂತ ಆಳದಲ್ಲಿರುವ ನಮ್ಮ ಅಸ್ಥಿತ್ವದ ಅಂತರ್ ಭಾಗವನ್ನು ಪ್ರವೇಶಿಸಬೇಕು. ಏಕಾಂತವಾದ, ನರ‍್ಮಾನುಷ್ಯವಾದ, ನಿರ್ವಸ್ತುಕವಾದ ಆ ಮಂದಿರಕ್ಕೆ ಪ್ರವೇಶಿಸಬೇಕು. ಅಲ್ಲಿ ಯಾರು ಇರುವುದಿಲ್ಲ. ಯಾವ ವಸ್ತುವೂ ಇರುವುದಿಲ್ಲ. ನಾವು ಸಹ – ಅಂದರೆ ಅಹಂಕಾರವೂ ಇರುವುದಿಲ್ಲ. ಆದಕಾರಣ ಅಲ್ಲಿ ಸಂಬಂಧವಿಲ್ಲ. ಮೋಹವಿಲ್ಲ. ಅದು ಸಂಪೂರ್ಣವಾದ ಮೌನ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಅಹಂಕಾರವು ಎಲ್ಲಿ ಇಲ್ಲವಾಗುವುದೋ ಅದೇ ನಮ್ಮ ಸ್ವರೂಪ. ಅಹಂಕಾರಕ್ಕೂ ಸ್ವರೂಪಕ್ಕೂ ಯಾವ ಸಂಬಂಧವೂ ಇಲ್ಲ. ಅಹಂಕಾರ ಇರುವಾಗಲೂ, ಅಹಂಕಾರವು ಇಲ್ಲದಿರುವಾಗಲೂ ಯಾವುದಿರುವುದೋ ಅದೇ ನಮ್ಮ ಸ್ವರೂಪ. ಒಮ್ಮೆ ನಿದ್ರಾನುಭವವನ್ನು ನೋಡಿಕೊಳ್ಳಿ. ನಿದ್ದೆಯ ಬಗ್ಗೆ ಜಾಗ್ರತ್ ಅವಸ್ಥೆಯ ಬುದ್ಧಿ ಹೇಳುವುದನ್ನು ಕೇಳಬೇಡಿ. ಯಾವರೀತಿ ಅನುಭವಿಸುತ್ತೀರೋ ಆ ರೀತಿ ನೋಡಿಕೊಳ್ಳಿ. ನೋಡಿಕೊಂಡಾಗ, ಪ್ರಪಂಚವಿಲ್ಲ, ಅಹಂಕಾರವಿಲ್ಲ, ಸಂಬಂಧವಿಲ್ಲ, ಮೋಹವಿಲ್ಲ, ಆದರೂ ನೀವಿದ್ದೀರ, ನೀವಿದ್ದೀರ ಎಂದಾಗ ಈ ವ್ಯಕ್ತಿತ್ವದ ಛಾಯೆ ಕಾಣುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದಲ್ಲಿ ಪ್ರಪಂಚವಿಲ್ಲದೆ, ಅಹಂಕಾರವಿಲ್ಲದೆ, ಸಂಬಂಧಕ್ಕೆ ಅವಕಾಶವಿಲ್ಲದೆ, ಮೋಹವಿಲ್ಲದೆ, ಯಾವುದೋ ಒಂದು ಉಳಿದಿದೆ. ಅದೇ ನಮ್ಮುಗಳ ಅಸ್ಥಿತ್ವ. ಎಚ್ಚರ. ಕನಸುಗಳಲ್ಲಿ ಅಹಂಕಾರ ವ್ಯವಹಾರ ನಡೆಯುತ್ತಿರುವಾಗಲೂ ನೀವು ಅದೇ ಸ್ವರೂಪ. ಅಹಂಕಾರ, ಅಹಂಕಾರದ ವ್ಯವಹಾರ ನಿಮಗೆ ಅಂಟಿಲ್ಲ. ಮೋಹ ಮುಕ್ತರು. ಜಾಗ್ರತ್ತು, ಕನಸು, ನಿದ್ದೆಗಳಲ್ಲೂ ನೀವು ಮೋಹ ಮುಕ್ತರು. ನೀವೇ ಮೋಹ ಮುಕ್ತ ಮಂದಿರ, ಮೋಹ ಮುಕ್ತ ದೇವರು.
ಸ್ವರೂಪತಃ ನಿಮಗೆ ಯಾವುದೂ ಅಂಟಿಲ್ಲ. ಯಾರೂ ಅಂಟಿಲ್ಲ. ಆದಕಾರಣ ನೀವು ನಿತ್ಯ ಮುಕ್ತರು. ಈ ವಸ್ತುಸ್ಥಿತಿಯನ್ನು ಗುರ್ತಿಸದೆ, ಜೀವನ ಎಷ್ಟು ವರ್ಷ ಮಾಡಿದರೇನು! – ವ್ಯರ್ಥ. ಗುರ್ತಿಸಲು ಇರುವ ಏಕೈಕ ಮಾರ್ಗ, ಗುರುಮುಖೇನ ಉಪನಿಷತ್ ತತ್ವವನು ಗುರ್ತಿಸಬೇಕು.
– ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Prerane : ಶ್ರೇಯಸ್ಸೆಂದರೆ ಎಲ್ಲರಿಗೂ ಗೊತ್ತು; ಪ್ರೇಯಸ್ ಎಂದರೆ ಗೊತ್ತೇ?