ಶ್ರೀ ಕೈವಲ್ಯಾನಂದ ಸರಸ್ವತೀ
ಶ್ರೀ ಶ್ರೀ ಶಂಕರಭಗವತ್ಪಾದರು ʻಮೋಹ’ವೆಂದರೆ ಅವಿವೇಕ ಎನ್ನುತ್ತಾರೆ. ಆತ್ಮಾನತ್ಮಗಳನ್ನು ಕಲೆಬೆರಕೆ ಮಾಡಿಕೊಂಡಿರುವ ತಪ್ಪು ತಿಳಿವಳಿಕೆ. ಈ ತಪ್ಪು ತಿಳಿವಳಿಕೆಯಿರುವುದರಿಂದ, ಆತ್ಮಾನಾತ್ಮವಿವೇಕಜ್ಞಾನವನ್ನು ಕದಡಿಬಿಡುತ್ತದೆ. ಮನಸ್ಸು ವಿಷಯದ ಕಡೆಗೆ ಹರಿಯುವಂತೆ ಮಾಡುತ್ತದೆ. ವಿಷಯಗಳಿಗೆ ಮನಸ್ಸು ಅಂಟಿಕೊಳ್ಳುತ್ತದೆ. (ಭ.ಗೀ. ಭಾಷ್ಯಾಭಿಪ್ರಾಯ 2-52, ಭಾ.ಭಾ.103 ಭಾಷ್ಯ ಭಾಗಗಳ ಸಂಖ್ಯೆ, ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, ಹೊಳೇನರಸೀಪುರ – ಇವರಿಂದ ಪ್ರಕಟಿತವಾದ ಗೀತಾಭಾಷ್ಯ ಗ್ರಂಥವನ್ನು ಆಧರಿಸಿದೆ).
ಮನುಷ್ಯ ಜೀವನದಲ್ಲಿ ಎರಡು ರೀತಿ ಕತ್ತಲಿದೆ. ಒಂದು ಪ್ರಕಾಶ ತರುವುದರಿಂದ ಹೊರಟುಹೋಗುತ್ತದೆ. ಇದು ಭೌತಿಕವಾದ ಅಂಧಕಾರ ಎಲ್ಲರಿಗೂ ಗೊತ್ತಿರುವಂತಹುದು. ಮತ್ತೊಂದು ಅಂಧಕಾರ, ಮನುಷ್ಯನ ಸ್ವಭಾವವನ್ನು – ಆತ್ಮವನ್ನು ನಾಲ್ಕು ದಿಕ್ಕುಗಳಿಂದ ಆಕ್ರಮಿಸಿಕೊಳ್ಳುತ್ತದೆ. ನಾವು ಇಂತಹವರೆಂದು ಅಭಿಮಾನಿಸುವುದು, ಆ ಮೋಹದಿಂದ ನಾವು ಮಾಡುವುದು, ನಮ್ಮಿಂದ ಇತ್ಯಾದಿ ಎಲ್ಲವೂ ಅಂಧಕಾರದಲ್ಲಿ ತಡಕಾಡುತ್ತಾ ಹೋದಂತೆ. ಏನೊಂದು ಗೊತ್ತಾಗದು. ಏನಾಗುತ್ತಿದೆ ಎಂದು ಗೊತ್ತಾಗುವುದಿಲ್ಲ. ಏನು ಮಾಡುತ್ತಿದ್ದೇನೆಂಬುದು ಸಹ ಗೊತ್ತಾಗದು. ಯಾವುದು ಮಾರ‍್ಗ ಎಂಬುದು ಗೊತ್ತಾಗದು. ಕಣ್ಣುಗಳು ಇರುವುದಿಲ್ಲ – ಅಂದರೆ ಸರಿಯಾದ ದೃಷ್ಟಿಯಿಲ್ಲ. ಮನುಷ್ಯ
ಜೀವನಕ್ಕೆ ಮೋಹವೇ ಮೂಲವಾಗುತ್ತದೆ. ಮೋಹದಿಂದಲೇ ಚಿಂತನೆಗೊಳಗಾಗುತ್ತಾರೆ.
ಮೋಹದಿಂದಲೇ ಸಂತಸವು ಪ್ರಾಪ್ತಿಯಾಗುತ್ತದೆ. ಮೋಹವೇ ಸುತ್ತುವಂತೆ ಮಾಡುತ್ತದೆ. ಮೋಹವೇ ಕೆಳಕ್ಕೆ ಉರುಳಿಸುತ್ತದೆ. ಮೋಹವೇ ಜೀವನದ ದುಃಖ.
ಒಂದು ಉದಾಹರಣೆಯಿಂದ ಇದು ಸ್ಪಷ್ಟವಾಗುವುದು; ಒಬ್ಬ ತನ್ನ ಮನೆಗೆ ಬೆಂಕಿ ಬಿದ್ದಿರುವುದನ್ನು ನೋಡಿ ಅಳುತ್ತಿರುತ್ತಾನೆ. ಯಾರೋ ನಿಮ್ಮದಲ್ಲ ಮನೆ. ನಿಮ್ಮ ಮಗ ನೀವು ಊರಿನಲ್ಲಿ ಇಲ್ಲದಾಗ ಮನೆ ಮಾರಾಟ ಮಾಡಿರುತ್ತಾನೆ ಎನ್ನುತ್ತಾರೆ. ಈ ಮಾತು ಕೇಳಿದ ತಕ್ಷಣ, ಅದೇ ಮನೆ, ಅದೇ ಬೆಂಕಿ ಇವರಿಗೆ ಸಂತಸವೆನಿಸುತ್ತದೆ.
ಅಷ್ಟರಲ್ಲಿ ಮಗ ಬಂದು ಮಾರಾಟವಾಗಲಿಲ್ಲ, ನಮ್ಮದೇ ಮನೆ ಎನ್ನುತ್ತಾನೆ. ಈಗ ಅದೇ ಮನೆ, ಅದೇ ಬೆಂಕಿ ಸಂತಾಪವಾಗುತ್ತದೆ. ಇಲ್ಲಿ ಪ್ರಶ್ನೆ ಮನೆಗೆ ಬೆಂಕಿ ಬಿದ್ದಿರುವುದಲ್ಲ ʻʻನನ್ನ ಮನೆʼʼ ಎಂಬುದು ಪ್ರಶ್ನೆ. ನನ್ನ ಎಂಬುದು ದುಃಖಕ್ಕೆ ಮೂಲ. ಈ ಮೋಹದ ಗರ್ಭದಲ್ಲಿ ಒಂದು ರಹಸ್ಯ ಗುಣವಿದೆ. ಅದಾವುದೆಂದರೆ ಯಾವುದು ನನ್ನದಲ್ಲವೋ ಅದು ನನ್ನದೆನಿಸುತ್ತದೆ. ಇದೇ ಮೋಹದ ಒಂದು ಸಂಮೋಹ. ಯಾವುದು ನನ್ನದೋ, ಅದರ ಯಾವ ಪರಿಚಯವೂ ಇರುವುದಿಲ್ಲ. ಮನೆ, ಜಮೀನು, ಹೆಂಡತಿ, ಗಂಡ, ತಂದೆ, ಧರ್ಮ, ಧರ್ಮಗ್ರಂಥ, ಮಂದಿರ ಮಸೀದಿ – ಇವೆಲ್ಲವೂ ವ್ಯವಹಾರದಲ್ಲಿ ನನ್ನದೆನಿಸಿಕೊಂಡರೂ, ನನ್ನದೆಂದು ವ್ಯವಹಾರ ಮಾಡಿದರೂ ವಾಸ್ತವಿಕವಾಗಿ ನನ್ನದಾಗಲು ಸಾಧ್ಯವಿಲ್ಲ. ಏಕೆಂದರೆ ಇವೆಲ್ಲವೂ ನಾನಿರುವಾಗಲೂ ಇರುತ್ತವೆ. ನಾನಿಲ್ಲದಾಗಲೂ ಇರುತ್ತವೆ. ಆದರೂ ನಾವುಗಳು ವಿವೇಕವಿಲ್ಲದೆ ಮೋಹವನ್ನು ಬೆಳೆಸಿಕೊಳ್ಳುತ್ತೇವೆ.
ಟೀವಿ ನೋಡುವ (ಕು)ಸಂಸ್ಕೃತಿ ಬರುವುದಕ್ಕೆ ಮುನ್ನ ಅಜ್ಜಿ, ತಾತ, ಚಿಕ್ಕಮಕ್ಕಳಿಗೆ ಕಥೆ ಹೇಳುವುದನ್ನು ನೀವುಗಳು ಕೇಳಿರಬಹುದು. ಒಬ್ಬ ರಾಜ – ಆ ರಾಜನನ್ನು ಸಾಯಿಸಲು ಎಷ್ಟು ಪ್ರಯತ್ನ ಮಾಡಿದರೂ ಸಾಯುವುದಿಲ್ಲ – ರಾಜನನ್ನು ಸಾಯಿಸಲು, ರಾಜನ ಪ್ರಾಣ ಯಾವುದೋ ಒಂದು ಪಕ್ಷಿಯಲ್ಲಿ – ಒಂದು ಗಿಣಿಯಲ್ಲಿ ಇರುತ್ತದೆ. ಆ ಗಿಣಿಯ ಕುತ್ತಿಗೆ ಹಿಸುಕಿದರೆ ರಾಜ ಸಾಯುತ್ತಾನೆ. ಮಕ್ಕಳಿಗೆ ಹೇಳುವ ಈ ಕಥೆ ಬಹಳ ಮಹತ್ತರವಾದದ್ದು. ವೃದ್ಧರೂ ಅರ್ಥಮಾಡಿಕೊಳ್ಳಬೇಕಾದದ್ದು ಬಹಳಷ್ಟಿದೆ. ಮೋಹದ ಅರ್ಥ ನೀವು ನಿಮ್ಮಲ್ಲಿ ಜೀವಿಸುತ್ತಿಲ್ಲ. ಯಾರಲ್ಲಿಯೋ ಜೀವಿಸುತ್ತಿರುತ್ತೀರ. ಒಬ್ಬರ ಪ್ರಾಣ ಕಬ್ಬಿಣದ ಪೆಟ್ಟಿಗೆಯಲ್ಲಿ. ನೀವು ಅವರ ಕುತ್ತಿಗೆ ಹಿಸುಕಿದರೂ ಸಾಯರು. ಕಬ್ಬಿಣದ ಪೆಟ್ಟಿಗೆ ಯಾರಾದರೂ ಮುಟ್ಟಿದರೆ, ಅವರು ಸತ್ತಂತೆಯೇ. ಆತನ ಪ್ರಾಣ ಅಲ್ಲಿದೆ.
ಮೋಹವೆಂದರೆ ನೀವು ನಿಮ್ಮ ಪ್ರಾಣವನ್ನು ನಿಮ್ಮಿಂದ ತೆಗೆದು ಬಾಹ್ಯದಲ್ಲಿ ಎಲ್ಲಿಯೋ ಇಟ್ಟಿರುತ್ತೀರ. ಒಬ್ಬನು ತನ್ನ ಮಗನಲ್ಲಿ, ಮತ್ತೊಬ್ಬ ತನ್ನ ಹೆಂಡತಿಯಲ್ಲಿ, ಇನ್ನೊಬ್ಬ ಹಣದಲ್ಲಿ ಇಟ್ಟಿರುತ್ತಾನೆ. ಮಗದೊಬ್ಬ ಪದವಿ ಪ್ರತಿಷ್ಠೆಗಳ ಮೇಲೆ. ಈ ರೀತಿ ಪ್ರಾಣವನ್ನು ಎಲ್ಲೋ ಬಾಹ್ಯದಲ್ಲಿ ಇಟ್ಟಿರುತ್ತಾರೆ. ಪ್ರಾಣವು ಎಲ್ಲಿರಬೇಕೋ ಅಲ್ಲಿಲ್ಲ. ನಿಮ್ಮಲ್ಲಿ ಪ್ರಾಣವು ಸ್ಪಂದನವಾಗದು…. ಮತ್ತೆಲ್ಲೋ ಅದು ಸ್ಪಂದಿಸುವುದು. ಹೀಗಾದಾಗ ನೀವು ಬಹಳ ಕಷ್ಟಕ್ಕೆ ಗುರಿಯಾಗುತ್ತೀರ.
ಮೋಹವೇ ಸಂಸಾರ. ಮೋಹವು ಎಲ್ಲಿದೆಯೋ, ಯಾವುದರಲ್ಲಿದೆಯೋ ಯಾರಲ್ಲಿದೆಯೋ ಅವರಿಗೆ ನೀವು ಗುಲಾಮರಾಗುತ್ತೀರ. ರಾಜ ತನ್ನನ್ನು ತಾನು ನೋಡಿಕೊಳ್ಳುವುದರ ಬದಲು ಗಿಣಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಒಬ್ಬ ರಾಜನ ಆಸ್ಥಾನದಲ್ಲಿ ಒಬ್ಬ ಜೋತಿಷಿ ಮಂತ್ರಿಗೆ ಭವಿಷ್ಯವನ್ನು ಹೇಳುತ್ತಾನೆ. ಅವನು ಹೇಳಿದ ಸಮಯಕ್ಕೆ ಮಂತ್ರಿ ಸಾಯುತ್ತಾನೆ. ರಾಜನಿಗೆ ಜ್ಯೋತಿಷಿಯ ಮೇಲೆ ಒಳ್ಳೆ ನಂಬಿಕೆ ಬರುತ್ತದೆ. ಈ ಜ್ಯೋತಿಷಿ ಭವಿಷ್ಯ ಹೇಳಿದರೆ ಇನ್ನು ಯರ‍್ಯಾರು ಸಾಯುತ್ತಾರೋ – ಈ ಜ್ಯೋತಿಷಿಗೆ ಮರಣದಂಡನೆ ವಿಧಿಸುವುದು ಲೇಸೆಂದು, ಮರಣದಂಡನೆ ವಿಧಿಸುತ್ತಾನೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಆ ಜ್ಯೋತಿಷಿ, ʻʻರಾಜ ನಾನು ಸತ್ತ ಮರುದಿವಸ ನೀನು ಸಾಯುತ್ತೀಯೆ’’ – ಎನ್ನುತ್ತಾನೆ. ಈಗ ರಾಜ ಜ್ಯೋತಿಷಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ನೀವು ನಿಮ್ಮ ಜೀವವನ್ನು ಎಲ್ಲಿಯೋ ಇಟ್ಟಿರುತ್ತೀರ. ಹಗಲುರಾತ್ರಿ ಅದಕ್ಕಾಗಿ ಕೆಲಸಮಾಡಬೇಕು. ಮೋಹದ ಆವರಣವೆಂದರೆ ನಿಮ್ಮ ಆತ್ಮ ನಿಮ್ಮಲ್ಲಿಯೇ ಇದ್ದೂ ಸಹ ನಿಮ್ಮಲ್ಲಿ ಇಲ್ಲವಾಗಿದೆ. ಮತ್ತೆಲ್ಲೋ ಇನ್ನೊಂದು ಕಡೆ ಬಚ್ಚಿಟ್ಟುಕೊಂಡಿದೆ. ಅದು ಪತ್ನಿಯಲ್ಲಿರಬಹುದು / ಪತಿಯಲ್ಲಿರಬಹುದು, ಮಕ್ಕಳಲ್ಲಿರಬಹುದು. ಧನ, ಪ್ರತಿಷ್ಠೆಗಳಲ್ಲಿ ಇರಬಹುದು, ಎಲ್ಲಿದ್ದರೂ ಹೆಚ್ಚು ವ್ಯತ್ಯಾಸವಿಲ್ಲ.
ನಿಮ್ಮಲ್ಲಿ ಇಲ್ಲ ಅದೇ ಮುಖ್ಯ. ಎಲ್ಲಿನವರೆಗೂ ಮತ್ತೊಬ್ಬರ ಇರುವಿಕೆಯ ಮೇಲೆ ನಿಮ್ಮ ಇರುವಿಕೆ ಅವಲಂಬಿತವಾಗಿದೆಯೋ ಅಲ್ಲಿನವರೆಗೂ ನಿಮಗೆ ಮೋಹದ ಕ್ಲೇಶ ತಪ್ಪಿದ್ದಲ್ಲ. ಅಲ್ಲಿಯವರೆಗೂ ಮತ್ತೊಬ್ಬರನ್ನು ಬಿಟ್ಟಿರಲು ಸಾಧ್ಯವಿಲ್ಲ. ಅವರನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೀರ. ಅವರೆಲ್ಲಿ ಕೈಬಿಟ್ಟುಹೋಗುತ್ತಾರೋ, ಕೈಜಾರಿ ಹೋಗುತ್ತಾರೋ ಎಂಬ ಆತಂಕ. ಅವರಿಲ್ಲದೆ ನಾ ಇರಲಾರೆ ಎಂಬ ಮಾನಸಿಕ ವ್ಯಕ್ತಿ ನೀವು ರೋದಿಸುವುದಕ್ಕೆ ಕಾರಣವಾಗುವ(ಳೋ)ನಾರೋ ಅದೇ ನಿಮ್ಮ ಮೋಹ. ಯಾವು ವಸ್ತುವನ್ನೂ, ವ್ಯಕ್ತಿಯನ್ನೂ ಕಳೆದುಕೊಂಡಾಗ ನಿಮ್ಮಲ್ಲಿ ಅಭಾವವು ವ್ಯಕ್ತವಾಗುವುದೋ, ಅದೇ ನಿಮ್ಮ ಮೋಹದ ವಸ್ತು. ಯಾವ ವಸ್ತು ಕೈಜಾರಿಹೋದಲ್ಲಿ ನಿಮ್ಮಲ್ಲಿ ತಕ್ಷಣ ದೈನ್ಯತೆಯ ಭಾವವನ್ನು ಹೊಂದಲಾಗುವುದೊ ಅದೇ ಮೋಹದ ಬಿಂದು.
– ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Prerane : ವಿದ್ಯೆ ಇಲ್ಲದವರು ಪಶುಗಳಿಗೆ ಸಮಾನರು! ಅದು ಹೇಗೆ?