Site icon Vistara News

Prerane : ಶ್ರೇಯಸ್ಸೆಂದರೆ ಎಲ್ಲರಿಗೂ ಗೊತ್ತು; ಪ್ರೇಯಸ್‌ ಎಂದರೆ ಗೊತ್ತೇ?

Shreyas and Preyas prerane

#image_title

Kannada Motivational Video | ಹೀಗೆ ಮಾಡಿದರೆ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತೀರಾ..! | Vistara Omkara

ಪ್ರೊ. ಕೆ. ಎಸ್. ಕಣ್ಣನ್
ಯಾರಾದರೂ ನಮಗೆ ಉಪಕಾರ ಮಾಡಿದಲ್ಲಿ ಅಥವಾ ಯಾವುದೇ ನಿಃಸ್ವಾರ್ಥವಾದ ಕರ್ಮವನ್ನು ಮಾಡಿದಲ್ಲಿ “ನಿನಗೆ ಒಳ್ಳೆಯದಾಗಲಿ, ಶ್ರೇಯಸ್ಸಾಗಲಿ” ಎಂದು ಹೇಳುವೆವು, ಅಥವಾ ಬಯಸುವೆವು, ಅಲ್ಲವೆ? “ನಿನ್ನ ಶ್ರೇಯಸ್ಸಿಗಾಗಿ ಹೇಳುತ್ತಿದ್ದೇನೆ” ಎಂದೂ ಹೇಳುವುದುಂಟು. ಆದರೆ ಶ್ರೇಯಸ್ ಎಂದರೇನು? – ಎಂದು ಯಾರಾದರೂ ಏನಾದರೂ ಕೇಳಿದರೆ, ಅದಕ್ಕೆ ಏನು ಉತ್ತರ ಹೇಳಬಲ್ಲೆವು?

ಈ ಪ್ರಶ್ನೆಗೆ ಉತ್ತರ ಕಠೋಪನಿಷತ್ತಿನಲ್ಲಿದೆ. ಕಿರಿಯನಾದರೂ ಜಾಣನಾದ ನಚಿಕೇತನಿಗೆ ಈ ಬಗ್ಗೆ ತಿಳಿವಳಿಕೆಯನ್ನು ಯಮನು ಅಲ್ಲಿ ಕೊಡುತ್ತಾನೆ. ಶ್ರೇಯಸ್ಸಿನ ಬಗ್ಗೆ ಮಾತ್ರವೇ ಅಲ್ಲಿ ಹೇಳಿಲ್ಲ. ಜೊತೆಗೇ ಪ್ರೇಯಸ್ಸಿನ ಬಗ್ಗೆಯೂ ಹೇಳಿದೆ. ಶ್ರೇಯಸ್ ಮತ್ತು ಪ್ರೇಯಸ್ – ಇವೆರಡರ ವ್ಯತ್ಯಾಸವನ್ನೂ ಹೇಳಿದೆ.

ಹಾಗಾದರೆ ಪ್ರೇಯಸ್ ಎಂದರೇನು? – ಎಂದೂ ತಿಳಿದುಕೊಳ್ಳಬೇಕಲ್ಲವೆ? ಅದಕ್ಕಿರುವ ಒಂದು ಸುಲಭ ಮಾರ್ಗವೆಂದರೆ, ಮೊದಲು ಆ ಪದಗಳೇ ಹೇಗೆ ಬಂದಿವೆಯೆಂಬುದನ್ನು ತಿಳಿದುಕೊಳ್ಳುವುದು. ನಮಗೆ ಯಾವುದಾದರೂ ಇಷ್ಟವಾದಲ್ಲಿ ’ಅದು ನನಗೆ ಪ್ರಿಯ’ ಎನ್ನುತ್ತೇವೆ. ಹೆಚ್ಚು ಪ್ರಿಯವಾದುದನ್ನು ಪ್ರಿಯತರ ಎಂದೂ, ತುಂಬಾ ಪ್ರಿಯವಾದದ್ದನ್ನು ಪ್ರಿಯತಮವೆಂದೂ ಹೇಳುತ್ತೇವೆ. ಇವನ್ನೇ ಕ್ರಮವಾಗಿ ಪ್ರಿಯ-ಪ್ರೇಯಸ್-ಪ್ರೇಷ್ಠ ಎನ್ನುವುದು. ಹಾಗೆಯೇ, ಯಾವುದು ಪ್ರಶಂಸೆಗೆ ಯೋಗ್ಯವೋ ಅದನ್ನು ಪ್ರಶಸ್ಯ ಎಂದೂ, ಹೆಚ್ಚು ಪ್ರಶಸ್ಯವಾದುದನ್ನು ಶ್ರೇಯಸ್ ಎಂದೂ, ಅತ್ಯಂತ ಪ್ರಶಸ್ಯವಾದುದನ್ನು ಶ್ರೇಷ್ಠ ಎಂದೂ ಹೇಳಲಾಗುತ್ತದೆ.

ಯಮನು ಹೇಳುವ ಮಾತಿನ ಸಾರವಿದು: “ಅಯ್ಯಾ ನಚಿಕೇತನೇ, ಶ್ರೇಯಸ್ಸೇ ಬೇರೆ, ಪ್ರೇಯಸ್ಸೇ ಬೇರೆ. ಎರಡರ ಪ್ರಯೋಜನಗಳೂ ಬೇರೆ ಬೇರೆ. ಎರಡೂ ಮನುಷ್ಯನ ಬಳಿ ಬರುತ್ತವೆ. ಯಾರು ಶ್ರೇಯಸ್ಸನ್ನು ಆರಿಸಿಕೊಳ್ಳುತ್ತಾರೋ ಅವರಿಗೆ ಒಳ್ಳೆಯದಾಗುತ್ತದೆ, ಆದರೆ ಯಾರು ಪ್ರೇಯಸ್ಸನ್ನು ಆಯ್ದುಕೊಳ್ಳುತ್ತಾರೋ ಅಂತಹವರಿಗೆ ಪುರುಷಾರ್ಥವು ಸಿದ್ಧಿಸುವುದಿಲ್ಲ. ಅಷ್ಟೇ ಅಲ್ಲ, ಇದು ಶ್ರೇಯಸ್ಸು, ಇದು ಪ್ರೇಯಸ್ಸು – ಎಂದು ವಿಭಾಗಮಾಡಿಕೊಂಡು, ಪ್ರೇಯಸ್ಸನ್ನು ಬಿಟ್ಟು ಶ್ರೇಯಸ್ಸನ್ನೇ ಆಯ್ದುಕೊಳ್ಳುವವನು ಧೀರ. ಆದರೆ, ಇದಕ್ಕೆ ಪ್ರತಿಯಾಗಿ, ಪ್ರೇಯಸ್ಸನ್ನೇ ಹಿಡಿಯುವವ ಮಂದ.”
ಅಲ್ಲಿಗೆ ಧೀರನ ಬಗೆಯೇ ಬೇರೆ, ಮಂದನ ಬಗೆಯೇ ಬೇರೆ ಎಂದಾಯಿತು. ಮಂದ ಅಥವಾ ಮಂದಮತಿ ಎಂದರೆ, ಚುರುಕಿಲ್ಲದವನು, ಜಾಣ್ಮೆಯಿಲ್ಲದವನು. ಸರಿಯಾದ ವಿವೇಕವಿರುವುದು ಜಾಣ್ಮೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ವಿವೇಕವೆಂದರೆ ವಿಂಗಡಿಸಿಕೊಳ್ಳುವುದು. ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು? ಎಂದು ವಿಭಾಗಮಾಡಿಕೊಳ್ಳುವುದು ವಿವೇಕ. ಯಾವುದು ಸುಖವನ್ನು ಕೊಡುತ್ತದೆ, ಯಾವುದು ದುಃಖವನ್ನು? ಎಂದು ಬೇರ್ಪಡಿಸಿಕೊಳ್ಳುವುದು ವಿವೇಕ. ಯಾವುದು ಕಡಿಮೆ ಸುಖವನ್ನು ಕೊಡುತ್ತದೆ, ಯಾವುದು ಹೆಚ್ಚು ಸುಖವನ್ನು? – ಎಂದು ಬೇರೆ ಬೇರೆ ಮಾಡಿಕೊಳ್ಳುವುದು ವಿವೇಕ. ಯಾವುದು ತಾತ್ಕಾಲಿಕ ಸುಖವನ್ನು ಕೊಡುತ್ತದೆ, ಯಾವುದು ದೀರ್ಘಸುಖವನ್ನು? – ಎಂದು ವಿಭಜಿಸಿಕೊಳ್ಳುವುದೂ ವಿವೇಕವೇ. ಮಂದಮತಿಯು ಇವಕ್ಕೆಲ್ಲಾ ಗಮನವನ್ನೇ ಕೊಡುವುದಿಲ್ಲ. ಅವನಿಗೆ ಗೊತ್ತಾಗುವುದು. ಇದು ನನಗೆ ಈಗ ಇಷ್ಟ’ ಎಂಬುದಷ್ಟೇ.

ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗುವುದು ಹೇಗೆ? ಈ ವಿಡಿಯೋ ನೋಡಿ.

ನಾಲಿಗೆಗೆ ರುಚಿಯೆನಿಸಿವುದು ಪ್ರೇಯಸ್ಸು. ಆರೋಗ್ಯಕ್ಕೆ ಒಳ್ಳೆಯದಾದದ್ದು ಶ್ರೇಯಸ್ಸು. ಭೋಗಗಳು ಪ್ರೇಯಸ್ಸು. ಯೋಗವು ಶ್ರೇಯಸ್ಸು. ಅನೇಕ ಪ್ರೇಯಸ್ಸುಗಳನ್ನು – ಹೆಣ್ಣು-ಹೊನ್ನು-ಮಣ್ಣು ಮುಂತಾದವುಗಳನ್ನು – ಯಮನು ತನ್ನ ಮುಂದಿಟ್ಟರೂ, ನಚಿಕೇತನು ಕೇಳಿಕೊಂಡದ್ದು ಶ್ರೇಯಸ್ಸನ್ನೇ. ನಚಿಕೇತ ಕಿರಿಯ; ಆತನ ಆದರ್ಶ ಹಿರಿದು!

– ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ : Prerane : ಮೋಹ-ಮಮಕಾರ; ಏನಿದರ ನಿಜ ಸಾರ?

Exit mobile version