ಶ್ರೀ ಕೈವಲ್ಯಾನಂದ ಸರಸ್ವತೀ
ಇತ್ತೀಚಿನ ದಿನಗಳಲ್ಲಿ ಹಲವಾರು ಧಾರ್ಮಿಕ ಸಂಘ- ಸಸ್ಥೆಗಳು ತಲೆಎತ್ತಿವೆ. ಅವುಗಳ ನಾಯಕರು, ಸ್ವಯಂಘೋಷಿತ ಧಾರ್ಮಿಕ ಮುಖಂಡರು, ಆಧ್ಯಾತ್ಮಿಕ ದಾರಿಯಲ್ಲಿ ಮೋಹ ಉಂಟು ಮಾಡುವ ವಸ್ತುಗಳಿಂದ ದೂರಹೋಗುವುದೇ ಪರಿಹಾರವೆಂದು ಹೇಳುತ್ತಾರೆ. ಮೋಹದ ವ್ಯಕ್ತಿಯಿಂದ ಪಲಾಯನ ಮಾಡುವುದೇ ಪರಿಹಾರವೆಂದು ಹೇಳುತ್ತಾರೆ. ನೀವು ಮನೆಯನ್ನು ಬಿಡಿ, ನಮ್ಮ ಸಂಸ್ಥೆಯಲ್ಲಿ ಬಂದಿರಿ- ಎನ್ನುತ್ತಾರೆ. ಇವರುಗಳಿಗೆ ಯಾವ ರೀತಿಯ ಪ್ರಮಾಣ ಗ್ರಂಥವಿಲ್ಲ. ಹೋಗಲಿ, ಹೇಳುವುದಾದರೂ ಯುಕ್ತಿ ಯುಕ್ತವೇ? ಎಂದರೆ ಅದೂ ಅಲ್ಲ. ಅನುಭವ ಸಮ್ಮತವೇ ಎಂದರೆ ಅದೂ ಇಲ್ಲ. ಮುಮುಕ್ಷುಗಳು ಇಂತಹವರಿಂದ ದೂರವಿರಬೇಕು. ಓಡಿಹೋಗುವುದರಿಂದ, ಇಲ್ಲಿ ಸಂಸಾರವೂ ಇಲ್ಲದೆ, ಉಭಯ ಭ್ರಷ್ಟರಾಗುವುದೊಂದೇ ದಾರಿ. ತಸ್ಮಾತ್ ಜಾಗ್ರತ, ಜಾಗ್ರತ.
ಕೆಲವರು ಮೋಹದ ಅಂಧಕಾರವನ್ನು ಭೇದಿಸಲು ಪ್ರಯತ್ನಮಾಡುವುದಿಲ್ಲ. ಮೋಹಕ್ಕೆ ವಿರುದ್ಧವಾಗಿ ಅಮೋಹ ಸಾಧಿಸಲು ತೊಡಗುತ್ತಾರೆ. ಮನೆಯಲ್ಲಿ ಮೋಹವಿದೆಯೆಂದು ಮನೆಯನ್ನು ಬಿಟ್ಟುಬಿಡುತ್ತಾರೆ. ಕಾಡಿಗೆ ಹೋಗುತ್ತಾರೆ. ಆದರೆ ಮೋಹವೆಂಬುದು ಮನೆಯಲ್ಲಿತ್ತೊ ಅಥವಾ ಮನೆ ಬಿಟ್ಟು ಹೋದವನಲ್ಲಿ ಇತ್ತೊ? ಒಂದು ವೇಳೆ ಮನೆಯ ಮೇಲೆ ಇದ್ದಿದ್ದೇ ಆದರೆ, ಮನೆ ಬಿಟ್ಟಾಗ ಮೋಹದಿಂದ ಹೊರಹೋದನೆಂದು ಹೇಳಬಹುದು. ಆದರೆ ಮನೆಗೆ ನಿಮ್ಮ ಬಗ್ಗೆ ಯಾವ ಮೋಹವೂ ಇಲ್ಲ. ಮನೆಯ ಬಗ್ಗೆ ನಿಮ್ಮಲ್ಲಿ ಮೋಹವಿದೆ. ಆದ್ದರಿಂದ ನೀವೆಲ್ಲಿ ಹೋದರೂ ಮೋಹ ಅಲ್ಲೂ ಸೇರಿಕೊಳ್ಳುತ್ತದೆ.
ಅದು ನಿಮ್ಮ ಜತೆಯಲ್ಲೇ ಬರುತ್ತದೆ. ಅದು ನಿಮ್ಮ ನೆರಳು. ಮತ್ತೇ ಆಶ್ರಮದಲ್ಲಿ ʻನನ್ನ ಆಶ್ರಮ’ ಎಂಬ ಮೋಹವುಂಟಾಗುತ್ತದೆ. ಮನೆಗೆ ಅಂಟಿಕೊಂಡಂತೆ ಆಶ್ರಮಕ್ಕೆ ಅಂಟಿಕೊಳ್ಳುತ್ತೇವೆ. ಹೆಂಡತಿ ಮಕ್ಕಳನ್ನು ಬಿಟ್ಟುಹೋದಲ್ಲಿ, ಅವರ ಸ್ಥಾನದಲ್ಲಿ ಗುರು-ಶಿಷ್ಯರು ಬರುತ್ತಾರೆ. ಸಂಸಾರದಲ್ಲಿರುವವರಿಗೆ ಅಂಟಿಕೊಂಡಂತೆ ಇವರಿಗೂ ಅಂಟಿಕೊಳ್ಳುತ್ತಾರೆ. ಅರಮನೆಗೆ ಅಂಟಿಕೊಂಡಂತೆ ಈಗ ಒಂದು ಗುಡಿಸಲಿಗೆ ಅಂಟಿಕೊಳ್ಳಬಹುದು.
ಬೆಲೆಬಾಳುವ ವಸ್ತುಗಳನ್ನು ಬಿಟ್ಟು ಹುಲಿ ಚರ್ಮವನ್ನು ಧರಿಸಬಹುದು. ಆದರೆ ರಾಜನ ವಸ್ತ್ರಗಳಂತೆ ಹುಲಿ ಚರ್ಮವೂ ಬಂಧನವೇ. ನಗ್ನವಾಗಿ ತಿರುಗಿದರೂ ನಗ್ನತ್ವಕ್ಕೆ ಮೋಹ ಬರುವುದು. ನನ್ನ ಮನೆ, ನನ್ನ ಆಶ್ರಮ; ನನ್ನ ಮಗ, ನನ್ನ ಶಿಷ್ಯ – ಇವುಗಳಲ್ಲಿ ವ್ಯತ್ಯಾಸವೇನು?ಮೋಹವು ಹೊಸ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತದೆ. ಮೋಹವು ಹೊಸ ಗೃಹಸ್ಥೆಯಾಗಿ, ಗೃಹಸ್ಥನಾಗಿ ಪುನಃ ವಾಸಮಾಡುತ್ತದೆ. ಮನೆ ಎಂಬುದರ ಅರ್ಥ ಕಟ್ಟಡವಲ್ಲ. ಮನೆ ಎಂಬುದರ ಅರ್ಥ ಅದರಲ್ಲಿ ವಾಸಮಾಡುವವರ ಮೋಹ – ಯಾರು ಮನೆಯನ್ನು ಮಾಡಿಕೊಂಡಿರುತ್ತಾರೋ, ಅವರ ಮೋಹದಿಂದ ಮನೆ ಎನಿಸಿಕೊಳ್ಳುತ್ತದೆ. ಅಂತಹ ವ್ಯಕ್ತಿ ಎಲ್ಲಾದರೂ ಮನೆಯನ್ನು ಮಾಡಿಕೊಳ್ಳುತ್ತಾನೆ. ಒಂದು ಮರದ ಕೆಳಗೆ ಕೂತರೂ ಅದು ʻʻನನ್ನ’’ದಾಗುವುದು.
ನನಗಿಂತಲೂ ಭಿನ್ನವಾದ ಇತರ ವಸ್ತುಗಳು ಸರ್ವತ್ರ ಇವೆ. ಈ ಪ್ರಪಂಚದಲ್ಲಿ ಇತರ ವಸ್ತುಗಳನ್ನು ತಪ್ಪಿಸಿಕೊಂಡು ಓಡಿಹೋಗಲು ಸಾಧ್ಯವಿಲ್ಲ. ಏಕೆಂದರೆ ಪ್ರಪಂಚವೇ ಇತರ ವಸ್ತುಗಳು. ಹಾಗೂ ಎಲ್ಲಿ ಹೋದರೂ ಪ್ರಪಂಚ ನಿನ್ನ ಜತೆಯಲ್ಲಿಯೇ ಇರುತ್ತದೆ. ಪ್ರಪಂಚದಿಂದ ಆಚೆಗೆ ನೀನು ಹೋಗಲಾಗದು. ಎಲ್ಲಿ ಹೋದರೂ ʻʻಇತರೆ’’ ಎನ್ನುವುದು ಅಲ್ಲಿ ಇರುವುದು. ಆದ್ದರಿಂದ ʻʻಇತರೆ’’ ಎಂಬುದರಿಂದ ಓಡಿಹೋಗಲಾರದು. ‘ಇತರೆ’ ಎಂಬುದು ಹೊಸರೂಪವನ್ನು ಪಡೆಯಬಹುದು. ಆದರೆ ಅಲ್ಲಿ ತಪ್ಪದೆ ಇರುತ್ತದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ದೃಶ್ಯವನ್ನು ಬದಲಾಯಿಸುವುದರಿಂದ ಮೋಹದಿಂದ ಮುಕ್ತಿಯಾಗದು. ಎಲ್ಲಿ ಹೋದರೂ ʻಇತರೆ’ ಎಂಬುದು ದೃಶ್ಯರೂಪದಲ್ಲಿರುತ್ತದೆ ಎಂಬ ಸತ್ಯವನ್ನು ಬದಲಾಯಿಸಲಾಗದು. ಈ ಸತ್ಯದ ಇನ್ನೊಂದು ಮುಖವೇನೆಂದರೆ ಎಲ್ಲಿ ಹೋದರೂ ʻಅಹಂ’ ಎಂಬುದು ಇದ್ದೇ ಇರುತ್ತದೆ. ನೀನು ʻʻಅಹಂ’’ ರೂಪದಲ್ಲಿ ಇರುವವರೆಗೂ ʻʻಇತರೆ’’ ಎಂಬುದು ಇದ್ದೇ ಇರುತ್ತದೆ. ಕಣ್ಣುಮುಚ್ಚಿಕೊಂಡರು ʻʻಇತರೆ’’ ಎಂಬುದು ಅದೃಶ್ಯವಾಗದು. ʻʻಇತರೆ’’ ಎಂಬುದು ಮುಚ್ಚಿದ ಕಣ್ಣಿನ ಹಿಂಭಾಗದಲ್ಲಿರುವುದು. ನಿನ್ನ ಆಸೆಗಳಲ್ಲಿ, ಆತುರತೆಯ ಆಸೆಗಳಲ್ಲಿ, ನಿನ್ನಿ ಕನಸಿನಲ್ಲಿ – ಹಗಲುಕನಸಿನಲ್ಲಿ – ‘ಇತರೆ’ ಎಂಬುದು ಇರುವುದು. ಅಹಂ ಇರುವವರೆಗೂ, ʻʻಇತರೆ’’ ಎಂಬುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲಿ ಹೋದರೂ ಪ್ರಪಂಚವಿದೆ, ಅಹಂ ಇದೆ. ಇವೆರಡಕ್ಕೂ ಸಂಬಂಧ ತಪ್ಪದೇ ಬರುತ್ತದೆ. ಸಂಬಂಧದಲ್ಲಿ ʻಮೋಹ’ದ ಉಗಮವಾಗುತ್ತದೆ. ಆದ್ದರಿಂದ ಪಲಾಯನ ಪರಿಹಾರವಲ್ಲ.
ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Navavidha Bhakti : ಭಕ್ತಿ- ಮುಕ್ತಿಗಳನ್ನೀವ ಭಗವಂತನ ಸ್ಮರಣೆ