ಸದ್ಗುರು ಜಗ್ಗಿ ವಾಸುದೇವ್
ನಿಮ್ಮ ಜೀವನವನ್ನು ನೀವು ಹೇಗೆ ಅನುಭವಿಸುತ್ತಿದ್ದೀರಿ ಎಂಬುದನ್ನು ಗಮನಿಸಿ ನೋಡಿದ್ದೀರಾ? ನೀವು ಯಾರೇ ಆಗಿರಲಿ, ಏನೇ ಆಗಿರಲಿ, ನಿಮ್ಮಲ್ಲಿರುವ ಯಾವುದೋ ಒಂದು ಅಜ್ಞಾತ ಭಾವ, ನೀವೀಗ ಇರುವುದಕ್ಕಿಂತ ಸ್ವಲ್ಪ ಹೆಚ್ಚಾಗಿರಬೇಕೆಂದು ಒತ್ತಾಯಿಸುತ್ತಲೇ ಇರುತ್ತದೆ, ಅಲ್ಲವೆ? ಇದು ನೀವು ಅರ್ಥಮಾಡಿಕೊಳ್ಳಬೇಕಾಗಿರುವ ಮೂಲಭೂತ ರಹಸ್ಯ. ನೀವು ಹಣಸಂಗ್ರಹಣೆಯಲ್ಲಿ ನಿಸ್ಸೀಮರಾದರೆ, ಹೆಚ್ಚು ಹಣ, ಅಧಿಕಾರಪ್ರಿಯರಾದರೆ ಉನ್ನತ ಪದವಿಗಳು, ಆಸ್ತಿಪಾಸ್ತಿ ಸಂಪಾದನೆ ಪ್ರಿಯವಾದರೆ, ಇನ್ನಷ್ಟು ಸ್ವತ್ತು-ಇದನ್ನಲ್ಲವೇ ನೀವು ಬಯಸುವುದು.
ಪ್ರೀತಿಯೆಂದರೂ ಇನ್ನಷ್ಟು ಬೇಕೆನ್ನುತ್ತೀರ. ಜ್ಞಾನವೆಂದರೆ ಹೆಚ್ಚೆಚ್ಚು ಜ್ಞಾನಿಗಳಾಗಬೇಕೆಂದು ಬಯಸುತ್ತೀರಿ. ಯಾವುದೇ ಆದರೂ ನಿರ್ದಿಷ್ಟ ಮಿತಿಯಲ್ಲಿ ನಿಮ್ಮ ಆಸೆ ನಿಲ್ಲುವುದಿಲ್ಲ. ವಾಹನದಲ್ಲಿ ಹೋಗುತ್ತಿರುವಿರಿ. ರಸ್ತೆಯಲ್ಲೊಂದು ಗುಂಡಿಯನ್ನು ಗಮನಿಸುತ್ತೀರಿ. ಅದನ್ನು ತಪ್ಪಿಸಿ ಹೋಗಬೇಕೆಂದರೆ, ರಸ್ತೆಯ ಬೇರೆ ಭಾಗಗಳನ್ನು ಗಮನಿಸ ಬೇಕಾಗುತ್ತದೆ. ಆದರೆ? ಗುಂಡಿಯನ್ನೇ ಗಮನಿಸುತ್ತಾ ಅದರಲ್ಲಿಯೇ ಹೋಗಿ ಸಿಕ್ಕಿಬೀಳುತ್ತೀರಿ.
ಇದು ಮನಸ್ಸಿನ ವೈಚಿತ್ರ್ಯ, ಯಾವುದು ಮನಸ್ಸಿನಲ್ಲಿ ಬೇಡವೆಂದು ನೆನೆಯುತ್ತೇವೆಯೋ ಅದೇ ನಡೆಯುತ್ತದೆ. ಒಂದು ಪರೀಕ್ಷೆ ಮಾಡೋಣ, ಐದು ನಿಮಿಷಗಳವರೆಗೆ ಕೋತಿಯನ್ನು ಕುರಿತು ನೆನೆಯಬಾರದೆಂದು, ಮನಸ್ಸಿನಲ್ಲಿ ಅಂದುಕೊಳ್ಳಿ. ಏನು ನಡೆಯುತ್ತದೆಂಬುದನ್ನು ಗಮನಿಸಿ. ಪೂರಾ ಐದು ನಿಮಿಷಗಳೂ ಕೋತಿಗಳೇ ನಿಮ್ಮ ಮನಸ್ಸನ್ನು ಆಕ್ರಮಿಸಿಬಿಡುತ್ತವೆ.
ಹಾಗೆಯೇ, ಒಂದು ಕುಟುಂಬದಲ್ಲಿ ಒಂದು ಸಮಸ್ಯೆಯುಂಟಾದರೆ ಅದನ್ನೇ ಕುರಿತು ಯೋಚಿಸುತ್ತಾ ಮುಳುಗಿದರೆ ಮುಂದೆ ಮಾಡಬೇಕಾಗಿರುವುದನ್ನು ಮಾಡಲಾರದೆ ಕೆಲಸವೆಲ್ಲವೂ ನಿಂತುಹೋಗುತ್ತದೆ. ಇರುವುದು ಸಾಲದೆ, ಮತ್ತಷ್ಟು ತೊಂದರೆಗಳು ಬಂದುಬಿಡುತ್ತವೆ. ತಲೆಯೆತ್ತಲು ಸಾಧ್ಯವಾಗುವುದೇ ಇಲ್ಲ.
ಯಾವುದೇ ಕಷ್ಟ ಬಂದರೂ ನಂಬಿಕೆಯನ್ನು ಬಿಡದೆ, ಮಾಡಬೇಕಾಗಿರುವುದನ್ನು ಗಮನವಿಟ್ಟು ಮಾಡಿದರೆ ಈಗಾಗಲೇ ಕಷ್ಟದಲ್ಲಿರುವ ಕುಟುಂಬ ಮತ್ತಷ್ಟು ಏಕೆ ಕೆಡುತ್ತದೆ?
ಸಮಸ್ಯೆಗಳು ತಾವಾಗಿಯೇ ಬರುವುದಿಲ್ಲ. ನಿಮಗೆ ತಿಳಿಯದಂತೆ ಅವುಗಳನ್ನು ನೀವೇ ಸೃಷ್ಟಿಸಿಕೊಳ್ಳುತ್ತೀರಿ. ಎಡವಿದ ಕಾಲಿನತ್ತ, ತೊಂದರೆಯ ಕುಟುಂಬದತ್ತ ಗಮನವಿಡದೆ, ಮಾಡಬೇಕಾಗಿರುವುದನ್ನು ಸರಿಯಾದ ರೀತಿಯಲ್ಲಿ ಮಾಡಲು ಯೋಚಿಸಿ. ಅದನ್ನು ಪೂರ್ಣವಾಗಿ ಮನಸ್ಸಿಟ್ಟು ತಲೀನತೆಯಿಂದ ಮಾಡಿ ನೋಡಿ. ಈ ಭಯ ಅರ್ಥವಿಲ್ಲದ್ದೆಂದು ಆಗ ತಿಳಿದುಬರುತ್ತದೆ.
ಹೀಗೆ ಯಾವಾಗಲೂ ನಿಮ್ಮ ಮನಸ್ಸಿನಲ್ಲಿ, ವಿಸ್ತರಿಸುವಿಕೆಗೆ ಇನ್ನೊಂದು ಮಾರ್ಗವು ಇದ್ದೇ ಇರುತ್ತದೆಯಲ್ಲವೆ? ಇನ್ನೂ ಸ್ವಲ್ಪ, ಇನ್ನೂ ಸ್ವಲ್ಪ ಬೇಕೆಂಬ ಆಸೆ, ನೀವಿರುವ ಸ್ಥಿತಿಯಿಂದ ಮತ್ತಷ್ಟು ಮೇಲಕ್ಕೆ, ವಿಸ್ತಾರಕ್ಕೆ ಹೋಗಬೇಕೆಂಬ ಆಸೆ.
ನಿಮ್ಮನ್ನು ಇಡೀ ಭೂಮಂಡಲಕ್ಕೆ ರಾಜನನ್ನಾಗಿಯೋ ರಾಣಿಯನ್ನಾಗಿಯೋ ಮಾಡಿಬಿಟ್ಟೆವೆಂದು ಭಾವಿಸೋಣ.
ನೀವು ಅದರಿಂದಲಾದರೂ ತೃಪ್ತರಾಗುತ್ತೀರಾ? ‘ಅದು ಸರಿ, ಆ ಚಂದ್ರ….’ಎಂದಲ್ಲವೇ ನೀವು ಯೋಚನೆ ಮಾಡುವುದು? ಗಮನವಿಟ್ಟು ನೋಡಿ. ಹಾಗಾದರೆ ನೀವು ನಿಜವಾಗಿಯೂ ಬಯಸುವುದು ಏನು? ಹಣವೆ, ಸ್ವತ್ತೆ, ಪ್ರೀತಿಯೆ, ಜ್ಞಾನವೆ? ನಿಮಗೆ ಬೇಕಾಗಿರುವುದಾದರೂ ಏನು? ವಾಸ್ತವದಲ್ಲಿ ನೀವು ಹುಡುಕುತ್ತಿರುವುದೇನು? ವಿಸ್ತಾರವಾಗುತ್ತಾ ಹೋಗುವುದು ಮಾತ್ರ, ಅಲ್ಲವೆ?
ಈಗಿರುವುದಕ್ಕಿಂತ ಸ್ವಲ್ಪ ಹೆಚ್ಚಿನದನ್ನೇ ನೀವು ಬಯಸುತ್ತೀರಿ. ನೀವು ಜೀವನವೆಂಬ ಮರದಲ್ಲಿ, ಪ್ರತಿದಿನ ಮೇಲಕ್ಕೆ ಏರುತ್ತಾ, ಅಲ್ಲಿ ದೊರೆಯುವ ಫಲವನ್ನು ಸವಿಯಬೇಕೆಂದು ಎಣಿಸುತ್ತಿದ್ದೀರಿ, ಅಲ್ಲವೆ? ಹಾಗಾದರೆ ನೀವು ಹುಡುಕುತ್ತಿರುವ ವಿಸ್ತಾರ, ಯಾವ ಅಳತೆಯದಾಗಿದ್ದರೆ ಸಾಕೆಂದು ನಿಶ್ಚಯಿಸಿಕೊಳ್ಳುತ್ತೀರಿ? ಎಷ್ಟು ವಿಸ್ತಾರವಾದರೆ ಇದು ನಿಲ್ಲುತ್ತದೆ? ಅದು ಏನು? ಎಲ್ಲಿದೆ? ಅದರ ಗಡಿ ಏನಾದರೂ ತಿಳಿಯುತ್ತದೆಯೆ? ನೋಡಿ, ನೀವು ಎಲ್ಲೆಯಿಲ್ಲದ ವಿಸ್ತಾರವನ್ನು ಆಸೆಪಡುತ್ತಿದ್ದೀರಿ. ಎಲ್ಲೆ ಮೀರಿದ ವಿಸ್ತಾರವನ್ನು ಬಯಸುತ್ತಿದ್ದೀರಿ. ಅದನ್ನು ಪಡೆದು ಅನುಭವಿಸಲು ನಿಮ್ಮ ಬಳಿ ಇರುವ ಸಾಧನಗಳಾದರೂ ಯಾವುವು?
ಹೀಗೆ ಜೀವನದಲ್ಲಿ ಮುನ್ನಡೆದು ಉನ್ನತ ಗುರಿಗಳನ್ನು ಸಾಧಿಸಬೇಕಾದರೆ, ಎಲ್ಲವನ್ನು ಅನುಭವಿಸಬೇಕಾದರೆ, ಎಲ್ಲೆಗೆ ಸೀಮಿತವಾಗಿರುವ ನಮ್ಮ ಐದು ಪಂಚೇಂದ್ರಿಯಗಳನ್ನು ದಾಟಿ ಹೋಗಬೇಕು.
ಈ ಪಂಚೇಂದ್ರಿಯಗಳನ್ನು ಅರ್ಥಮಾಡಿಕೊಂಡು, ಅವನ್ನು ದಾಟಿ ಹೋಗಲು, ನಿಮ್ಮ ಗ್ರಹಿಕೆಯ ಸಾಮರ್ಥ್ಯ ಉನ್ನತ ಮಟ್ಟಕ್ಕೇರಬೇಕು. ಗ್ರಹಿಕೆ ಉನ್ನತ ಮಟ್ಟಕ್ಕೇರಬೇಕಾದರೆ, ಮೊತ್ತಮೊದಲು ನಿಮ್ಮ ಗ್ರಹಿಕೆಯಲ್ಲಿರುವ ದೋಷಕ್ಕೆ ಕಾರಣವೇನೆಂದು ಮತ್ತು ಸರಿಯಾದ ಅರ್ಥವನ್ನು ಗ್ರಹಿಸುವುದಕ್ಕೆ ಏನು ಅಡ್ಡಿಯಾಗುತ್ತಿದೆ, ಎಂಬುದನ್ನು ತಿಳಿದುಕೊಳ್ಳಬೇಕು.
ಜೀವನದ ಉನ್ನತ ರಹಸ್ಯಗಳು ಕೆಲವರಿಗೆ ಮಾತ್ರ ಸುಲಭವಾಗಿ ಅರ್ಥವಾಗುತ್ತದೆ, ಮತ್ತೆ ಕೆಲವರಿಗೆ ಅರ್ಥವಾಗದ ಒಗಟಾಗಿ ಪರಿಣಮಿಸುವುದು ಏಕೆ? ಇದಕ್ಕೆ ಕಾರಣ ಅವರು ಬೇರೆ ರೀತಿಯಲ್ಲಿ ಹುಟ್ಟಿರಬಹುದೆಂದು ಹೇಳಲಾಗದು.
ಇದಕ್ಕಿರುವ ಕಾರಣವೆಂದರೆ, ಈಗ ನಾವಿರುವ ರೀತಿಯಲ್ಲಿ ಕೆಲವು ಮೂಲಭೂತವಾದ ನ್ಯೂನತೆಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಹಾಗೆ, ನಿಮಗೆ ನೀವಾಗಿಯೇ ಮಾಡಿಕೊಂಡ ಅಡಚಣೆಗಳು ಯಾವುವು? ಅಂತಹ ಅಡಚಣೆಗಳನ್ನು ಹೋಗಲಾಡಿಸುವುದು ಹೇಗೆ? ಅದಕ್ಕೆ ಅಗತ್ಯವಾದ ತಂತ್ರಜ್ಞಾನ ಯಾವುದು? ಆ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನು ಒಂದೊಂದಾಗಿ ನೋಡೋಣ.
ಒಬ್ಬ ಹೊಸದಾದ ಡಾಕ್ಟರಿದ್ದರು. ಅವರು ಪರೀಕ್ಷೆ ಪಾಸು ಮಾಡಬೇಕೆಂದು ಓದಿದವರಲ್ಲ. ಒಬ್ಬ ಒಳ್ಳೆಯ ಡಾಕ್ಟರಾಗಬೇಕೆಂದು, ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಗುರಿಯಿದ್ದವರು. ಅವರ ಬಳಿಗೆ ರೋಗಿಯೊಬ್ಬ ಬಂದ.
ಆ ರೋಗಿಯದು, ತತ್‌ಕ್ಷಣ ಗಮನ ನೀಡದಿದ್ದರೆ, ಪ್ರಾಣ ಹೋಗಿಬಿಡುವಂತಹ ಪರಿಸ್ಥಿತಿ. ಈ ಡಾಕ್ಟರು ಎಲ್ಲವನ್ನೂ ಶ್ರದ್ಧೆಯಿಂದ ಕೇಳಿ, ಸಮಸ್ಯೆ ಏನೆಂಬುದನ್ನು ಕಂಡುಹಿಡಿದು, ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಮಾಡಿದರು. ಆ ರೋಗಿ ಎರಡೇ ದಿನಗಳಲ್ಲಿ ಎದ್ದು ಕುಳಿತುಕೊಳ್ಳುವಂತಾದರು. ಒಂದೇ ವಾರದಲ್ಲಿ ಓಡಾಡುವಂತೆಯೂ ಆಯಿತು.
‘ಅವರು ಸಾಯುವ ಸ್ಥಿತಿಯಲ್ಲಿದ್ದರು. ಬೇರೆ ಯಾವ ಡಾಕ್ಟರ ಬಳಿ ಹೋಗಿದ್ದರೂ ಬದುಕುತ್ತಿರಲಿಲ್ಲ. ನಾನು ಸರಿಯಾಗಿ ಓದಿಕೊಂಡು ಎಲ್ಲವನ್ನು ಸರಿಯಾಗಿ ಮಾಡಿದ್ದರಿಂದ ಈಗವರು ಜೀವಂತವಾಗಿದ್ದಾರೆ. ಇವರಿಗೆ ಪ್ರಾಣವನ್ನು ಕೊಟ್ಟವನು ನಾನೇ’, ಎಂದುಕೊಂಡರು.
ಇನ್ನೊಂದು ದಿನ ಅವರ ಬಳಿಗೆ ಮತ್ತೊಬ್ಬ ರೋಗಿ ಬಂದರು. ಅವರ ದೇಹಸ್ಥಿತಿಯೂ, ಒಡನೆಯೇ ಗಮನ ನೀಡದಿದ್ದರೆ, ಪ್ರಾಣ ಹೋಗಿಬಿಡುವಂತಿತ್ತು. ಮತ್ತೆ ಡಾಕ್ಟರು ಸಮಸ್ಯೆ ಏನೆಂಬುದನ್ನು ಸರಿಯಾಗಿ ಪರೀಕ್ಷಿಸಿ ತಕ್ಕ ರೀತಿಯಲ್ಲಿ ಚಿಕಿತ್ಸೆ ನೀಡಿದರು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಆದರೆ ರೋಗಿ ನಿಧನನಾದನು. ಈಗ ಇದೇ ಡಾಕ್ಟರು ಏನು ಹೇಳುತ್ತಾರೆ? ‘ಎಷ್ಟು ಸರಿಯಾಗಿ ನಾನು ಅವರನ್ನು ಮೇಲಕ್ಕೆ ಕಳುಹಿಸಿಬಿಟ್ಟೆ!’ ಎಂದೆ? ಇಲ್ಲ, ‘ಇದು ದೇವರಿಚ್ಛೆ. ಆ ರೋಗಿಯ ಹಣೆಬರಹ, ಅವರನ್ನು ಕರೆದುಕೊಂಡು ಬಂದವರು ತಡವಾಗಿ ಬಂದರು, ’ಎಂದು ಏನಾದರೊಂದನ್ನು ಹೇಳಿ, ಅಪವಾದ ವರ್ಗಾಯಿಸುತ್ತಾರೆ. ನಾವು ನೆನೆದಂತೆಯೇ ನಡೆದರೆ ಅಂಥದನ್ನು‘ನಾನು ಮಾಡಿದೆ’ ಎಂದೂ, ಹಾಗೆ ನಡೆಯದಿದ್ದರೆ ‘ನಾನು ಜವಾಬ್ದಾರನಲ್ಲ’ ಎನ್ನುವುದು ನಮ್ಮ ಜಾಯಮಾನ.
ನೀವು ಎಲ್ಲವನ್ನೂ ಹೀಗೆಯೇ ನಡೆಯಬೇಕೆಂದು ಬಯಸುತ್ತೀರಿ. ಅದು ಹಾಗೆಯೇ ನಡೆದರೆ ಅದಕ್ಕೆ ನೀವೇ ಜವಾಬ್ದಾರರು. ಹಾಗೆ ನಡೆಯದಿದ್ದರೆ ಅದರ ಜವಾಬ್ದಾರಿಯನ್ನು ಯಾರ ಮೇಲೆ ಹೊರಿಸಬೇಕು? ಯಾರೂ ದೊರೆಯದೆ ಹೋದರೆ, ಯಾವಾಗಲೂ ನಾವು ಹೇಳುವುದೆಲ್ಲವನ್ನೂ ಕೇಳಲು ಮೇಲೆ ಒಬ್ಬ ಮೂರ್ಖನಿದ್ದಾನೆ. ಅಲ್ಲವೆ!
ನೀವು ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದರೆ ‘ಚೆನ್ನಾಗಿ ಬರೆದಿದ್ದೇನೆ’ ಎನ್ನುತ್ತೀರಿ. ಸರಿಯಾಗಿ ಬರೆಯದಿದ್ದರೆ?
‘ಸಮಯವೇ ಸಾಲದು’, ‘ಸಿಲಬಸ್‌ನಲ್ಲಿ ಇಲ್ಲದ ಪ್ರಶ್ನೆಗಳೆಲ್ಲವೂ ಬಂದುಬಿಟ್ಟಿವೆ’ ಎನ್ನುತ್ತೀರಿ. ಇಲ್ಲವೆ, ಬೇರೇನಾದರೂ ಕಾರಣಗಳನ್ನು ಹುಡುಕುತ್ತೀರಿ. ಏಕೆ?
ಗೆಲುವಿಗೆ ತಕ್ಷಣವೇ ಹೊಣೆಯನ್ನು ಹೊತ್ತುಕೊಳ್ಳುತ್ತ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿರುವ ನಾವು, ತಪ್ಪು ನಡೆದಾಗ ಮಾತ್ರ ಅದಕ್ಕೆ ಬೇರೆಯದೇ ಹೊಣೆಗಾರಿಕೆಯನ್ನು ಯೋಚಿಸುತ್ತೇವೆ.
ಈಗ ನಾನು ಕೇಳುವುದೇನೆಂದರೆ, ನೀವು ನೆನೆದಂತೆ ನಡೆಯದಿದ್ದರೂ ಅದಕ್ಕೆ ನೀವೇ ಜವಾಬ್ದಾರರೆ? ಈಗ, ನೀವೆಂದುಕೊಂಡಂತೆ ನಡೆಯದ ಘಟನೆಗೆ ನೀವು ಜವಾಬ್ದಾರನೆಂದು ತಿಳಿಯುವುದಾದರೆ, ಅದನ್ನು ಹೇಗೆ ನಡೆಸುವುದೆಂಬ ಸಾಮರ್ಥ್ಯವನ್ನು ನೀವು ಸಂಪಾದಿಸಲು ಸಾಧ್ಯವಾಗುತ್ತದೆ. ಈಗ ನಿಮ್ಮ ಸಾಮರ್ಥ್ಯಕ್ಕೆ ನೀವು ಜವಾಬ್ದಾರರಾದರೆ ನಿಮ್ಮ ಅಸಾಮರ್ಥ್ಯಕ್ಕೂ ನೀವೇ ತಾನೆ?
ಇದನ್ನೂ ಓದಿ :Prerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ!
ನಾಳೆ ನಾನು ಹೀಗಿರಬೇಕು, ನನ್ನ ಜೀವನ ಹೀಗೆ ಅರಳಬೇಕೆಂದು ಆಸೆಪಡುತ್ತೀರಿ. ಈಗ ನೀವಿರುವ ಸ್ಥಿತಿಗೆ ‘ನಾನೇ ಜವಾಬ್ದಾರ’ಎಂದು ಹೊಣೆ ಹೊರಲು ನೀವು ಸಿದ್ಧರಾಗಿಲ್ಲದಿದ್ದರೆ, ನಾಳೆ ಹೇಗಿರಬೇಕೆಂಬುದನ್ನು ನೀವು ರೂಪುಗೊಳಿಸಲು ಸಾಧ್ಯವೆ? ‘ಈಗ ನಾನು ಹೇಗಿದ್ದೇನೆಯೋ ಅದಕ್ಕೆ ಸಂಪೂರ್ಣವಾಗಿ ನಾನೇ ಹೊಣೆ’ ಎಂದು ಹೇಳುವ ಸ್ಥಿತಿ ನಿಮಗೆ ಬಂದರೆ ಮಾತ್ರ, ನಾಳೆ ಹೇಗೆ ಇರಬೇಕೆಂಬುದನ್ನು ಕನಸು ಕಾಣಲು ನಿಮಗೆ ಹಕ್ಕು ದೊರೆಯುತ್ತದೆ. ನಿಮ್ಮ ಜೀವನದ ಮಟ್ಟ ಉನ್ನತವಾಗಿರಲಿ, ಕೆಳಮಟ್ಟದಲ್ಲಿರಲಿ, ಸುಂದರವಾಗಿಯೋ, ಕೊಳಕಾಗಿಯೋ, ಅದು ಹೇಗಾದರೂ ಇರಲಿ, ನೀವು ಅದಕ್ಕೆ ಸಂಪೂರ್ಣವಾಗಿ ಹೊಣೆ ಹೊರುತ್ತೀರಾ?
ನಿಮ್ಮ ಉತ್ತರ ‘ಹೌದು, ನಾನೇ ಜವಾಬ್ದಾರ’ ಎಂದರೆ, ಗೆಲುವಿನ ಹಾದಿಯಲ್ಲಿ ನೀವು ಮೊದಲ ಪ್ರಮುಖ ಹೆಜ್ಜೆಯನ್ನಿಟ್ಟಿದ್ದೀರೆಂದು ಅರ್ಥ.