ಬೆಂಗಳೂರು: ಬೆಂಗಳೂರಿನ ಕನಕಪುರ ರಸ್ತೆ ವಸಂತಪುರದಲ್ಲಿ ಇಸ್ಕಾನ್ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಲಾಗಿರುವ ತಿರುಮಲ ಮಾದರಿಯ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಾಯಿತು. ಆಗಸ್ಟ್ 1 ರಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಇದರ ಭಾಗವಾಗಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಾರ್ಪಣೆ ಮಾಡಿದರು. ಸಮಾರಂಭದಲ್ಲಿ ರಾಷ್ಟ್ರಪತಿಯವರ ಪತ್ನಿ ಸವಿತಾ ಕೋವಿಂದ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಎಂ ಕೃಷ್ಣಪ್ಪ, ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಮಧುಪಂಡಿತ ದಾಸ್ ಮತ್ತು ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ | ಬೆಂಗಳೂರಲ್ಲಿ ರಾಷ್ಟ್ರಪತಿ ಸಂಚಾರ, ಹಲವೆಡೆ ಟ್ರಾಫಿಕ್ ಜಾಮ್ ಅಲರ್ಟ್! ಎಲ್ಲೆಲ್ಲಿ ಜಾಮ್ ಆಗ್ತಿದೆ?
ಲೋಕಾರ್ಪಣೆ ಬಳಿಕ ಮಾತಾನಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್, ಈ ದೇವಾಲಯ ಭಕ್ತಿ ಭಾವದ ಪ್ರತೀಕವಾಗಿದ್ದು ಸುಂದರವಾಗಿದೆ. ದೇವಾಲಯಗಳು ಹಿಂದೂಧರ್ಮದ ಚಿಹ್ನೆಯಾಗಿದ್ದು ಅದ್ವೈತ್ವ, ವಿಶಿಷ್ಟಾದೈತ್ವ , ಜ್ಞಾನ, ಕರ್ಮ, ಭಕ್ತಿ ಮಾರ್ಗಗಳಿಂದ ಬಂದಿವೆ. ಭಗವದ್ಗೀತೆಯು ಅನೇಕ ಪಾಠಗಳನ್ನು ಅನೇಕ ಜನರಿಗೆ ನೀಡುತ್ತದೆ. ಭಗವದ್ಗೀತೆಯನ್ನು ಸ್ಮರಿಸುವಾಗ ಪ್ರಭುಪಾದರನ್ನು ನೆನೆಯುತ್ತೇವೆ. ಈ ವರ್ಷ ಶ್ರೀಪ್ರಭುಪಾದರು 125ನೇ ವರ್ಷ ಪೂರೈಸುತ್ತಿದ್ದಾರೆ ಎನ್ನುವುದೂ ಸಂತಸದ ವಿಚಾರ.
ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಬೆಂಗಳೂರಿನ ರಾಜಾಜಿನಗರದ ಇಸ್ಕಾನ್ ದರ್ಶನಕ್ಕೆ ಸೌಭಾಗ್ಯ ಕಲ್ಪಿಸಲಾಗಿತ್ತು. ಅನೇಕ ಬಾರಿ ಇಸ್ಕಾನ್‌ಗೆ ಭೇಟಿ ನೀಡಿ ಮೂಕವಿಸ್ಮಿತನಾಗಿದ್ದೆ. ದೇಶ ವಿದೇಶಗಳಿಂದ ಜನರು ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡುತ್ತಾ ಬಂದಿದ್ದಾರೆ. ಯಾವುದೇ ಜಾತಿ ಭೇದ ಇಲ್ಲದೆ ಸರ್ವರಿಗೂ ದೇವಾಲಯಕ್ಕೆ ಪ್ರವೇಶವಿದೆ. ಶ್ರಿಲ ಪ್ರಭುಪಾದರು ಹಲವೆಡೆ ದೇವಾಲಯಗಳನ್ನು ಸ್ಥಾಪಿಸಿದ್ದು, ರಾಜಾಧಿರಾಜ ಗೋವಿಂದ ದೇವಾಲಯ ಭಕ್ತಿ ಭಾವ ನೀಡಿ ಸಕಾರಾತ್ಮಕ ಚಿಂತನೆಯನ್ನು ಜನರ ಮನಸ್ಸಿನಲ್ಲಿ ಬಿತ್ತಲಿಸಿರುವ ವಿಶ್ವಾಸವಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತಾನಾಡಿ, ಬೆಂಗಳೂರು ನಗರ ಮಾತ್ರವಲ್ಲದೆ ವಿಶ್ವಕ್ಕೇ ಭಕ್ತಿಯ ಚೈತನ್ಯ ನೀಡಿದ ದಿನವಿದು. ಪ್ರಭು ರಾಜಾಧಿರಾಜ ಗೋವಿಂದರ ಆಗಮನ ಇಲ್ಲಿ ಆಗಿದ್ದು, ಮಧುಪಂಡಿತ್ ದಾಸ್ ಎರಡು ದಶಕಗಳ ಕಾಲ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ದೇವರ ಮೂರ್ತಿ ಪ್ರತಿಷ್ಠಾಪಿಸಿ ಲೋಕ ಕಲ್ಯಾಣ ಸಂಕಲ್ಪ ಮಾಡಿದ್ದು, ರಾಷ್ಟ್ರಪತಿಗಳು ಈ ದೇವಸ್ಥಾನ ಲೋಕಾರ್ಪಣೆ ಮಾಡಿದ್ದಾರೆ. ನಮ್ಮ ದೇಶ ಎಂತಹ ದೈವೀ ಸಂಸ್ಕೃತಿ ಹೊಂದಿದೆ ಎಂಬುದನ್ನ ತೋರಿಸಿದ್ದಾರೆ ಅಂದರು.
ನಾಗರಿಕತೆ ಹಾಗೂ ಸಂಸ್ಕೃತಿ ಬಗ್ಗೆ ಹಲವರಿಗೆ ವ್ಯತ್ಯಾಸ ಗೊತ್ತಿಲ್ಲ. ನಾಗರಿಕತೆ ಎಂದರೆ ನಾವು ಏನು ಎಂದು ಅರಿತುಕೊಳ್ಳುವುದು. ಹಾಗೆಯೇ ಸಂಸ್ಕೃತಿ ಎಂದರೆ ನಮ್ಮ ಬಳಿ ಏನಿದೆ ಎಂಬುದು. ಸಾಕಷ್ಟು ಜನರಿಗೆ ಸಂಸ್ಕೃತಿ ಹಾಗೂ ಅಧ್ಯಾತ್ಮದ ಜ್ಞಾನ ಕಡಿಮೆ ಇದೆ. ಭಾರತ ದೇಶದಲ್ಲೇ ಅತಿ ಹೆಚ್ಚು ಭಕ್ತಿ ಚಳವಳಿಗಳು ನಡೆದಿವೆ. ದೇಶದ ಅನೇಕ ಕಡೆ ದೇವಸ್ಥಾನಗಳನ್ನು ಇಸ್ಕಾನ್ ನಿರ್ಮಿಸಿದ್ದು, ಅಧ್ಯಾತ್ಮದ ಚಿಂತನೆಗಳನ್ನು ಸಾರುವಲ್ಲಿ ಇಸ್ಕಾನ್ ಪಾತ್ರ ದೊಡ್ಡದಿದೆ. ಅಕ್ಷಯ ಪಾತ್ರೆ ಯೋಜನೆ ರಾಜ್ಯದಲ್ಲಿ ನಡೆಯುತ್ತಿದ್ದು, ನಮ್ಮ ಸರ್ಕಾರದ ಪೂರ್ಣ ಸಹಕಾರವನ್ನು ಈ ಯೋಜನೆಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಷ್ಟ್ರಪತಿ ನಿರ್ಗಮನ
ಎರಡು ದಿನಗಳ ಬೆಂಗಳೂರು ಪ್ರವಾಸದ ನಂತರ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಭಾರತದ ಮಹಿಳಾ ಪ್ರಥಮ ಪ್ರಜೆ ಸವಿತಾ ಕೊವಿಂದ್ ಅವರು ಎಚ್‌ಎಎಲ್ ವಿಮಾನದಲ್ಲಿ ನಿಲ್ದಾಣದ ಮೂಲಕ ಬೀಳ್ಕೊಡಲಾಯಿತು. ಗೋವಾ ರಾಜ್ಯಕ್ಕೆ ತೆರಳಿದ ರಾಷ್ಟ್ರಪತಿಯವರನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಬೀಳ್ಕೊಟ್ಟರು.
ಇದನ್ನೂ ಓದಿ | ಬೆಂಗಳೂರಿಗೆ ರಾಷ್ಟ್ರಪತಿ ಕೋವಿಂದ್ ಆಗಮನ: ಇಂದು ಮಿಲಿಟರಿ ಶಾಲೆ ಅಮೃತ ಮಹೋತ್ಸವ