ಪ್ರತಿ ವರ್ಷದ ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯೂ ಹಿಂದೂಗಳ ಪಾಲಿಗೆ ಪವಿತ್ರ ರಕ್ಷಾಬಂಧನದ (Raksha bandhan 2023) ಹಬ್ಬ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ (Rakhi festival) ಕಟ್ಟುವ ಪರ್ವಕಾಲ. ಸಹೋದರರು ತಮ್ಮ ಸೋದರಿಯರ ಸುರಕ್ಷೆಯ ದೀಕ್ಷೆಯನ್ನು ಮತ್ತೆ ನೆನಪಿಸಿಕೊಳ್ಳುವ ಕಾಲ. ಪ್ರೀತಿಯ ಮಾತು ಮತ್ತು ಉಡುಗೊರೆಗಳ ವಿನಿಮಯ. ತವರಿನ ಮತ್ತು ಬಂಧುಗಳ ಬಂಧ- ಇವೆಲ್ಲವೂ ಸೋದರಿಗೆ ಮತ್ತೆ ನೆನಪಾಗುವ ಸಮಯ. ಶ್ರಾವಣ ಬಂತೆಂದರೆ ಲಗ್ಗೆಯಿಡುವ ಹಬ್ಬಗಳ (shravana masa festivals) ಸಾಲಿನಲ್ಲಿ ಇದೂ ಒಂದು.
ಭಾರತೀಯ ಸಹೋದರ ಸಹೋದರಿಯರಿಗೆ ಪ್ರಿಯವಾದ ಈ ʼರಕ್ಷಾ ಬಂಧನ’ ಅಥವಾ ʼರಾಖಿ ಹಬ್ಬ’ ಜಾತಿ ಧರ್ಮಗಳೆಂಬ ಅಂತರ, ಊರು ದೇಶಗಳೆಂಬ ಎಲ್ಲೆಯನ್ನು ಮೀರಿದ್ದು. ಸಹೋದರತ್ವದ ಅಚಲವಾದ ಪ್ರೀತಿ ಹಾಗೂ ಬಾಂಧವ್ಯದ ಮೌಲ್ಯಗಳನ್ನಾಧರಿತ ಆಚರಣೆ. ಇದರ ಕುರಿತಾಗಿ ಪುರಾಣ ಹಾಗೂ ಇತಿಹಾಸದಲ್ಲಿ ಅನೇಕ ಕಥೆಗಳಿವೆ. ಇದಕ್ಕೆ ಸಂಬಂಧಪಟ್ಟ ಪ್ರತಿಯೊಂದು ಕತೆಯೂ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ. ಹಾಗೆಯೇ ಪುರುಷರು ತಮ್ಮ ಹಳೆಯ ಯಜ್ಞೋಪವೀವನ್ನು ತೆಗೆದು ಹೊಸತನ್ನು ಧರಿಸುವುದರಿಂದ ಈ ದಿನವನ್ನು ʼನೂಲು ಹುಣ್ಣಿಮೆʼ ಅಥವಾ ʼಯಜುರ್ ಉಪಾಕರ್ಮʼ ಎಂದೂ ಕರೆಯಲಾಗುತ್ತದೆ.
ಇಂದ್ರಪ್ರಸ್ಥದಲ್ಲಿ ಯುಧಿಷ್ಠಿರನು ರಾಜಸೂಯ ಯಜ್ಞವನ್ನು ನಡೆಸುತ್ತಿದ್ದಾಗ ಅಲ್ಲಿದ್ದ ಶಿಶುಪಾಲ ಭಗವಾನ್ ಶ್ರೀ ಕೃಷ್ಣನನ್ನು ಅವಮಾನಗೊಳಿಸಿದ. ಆತನ ನೂರನೇ ತಪ್ಪಿಗೆ ಶ್ರೀಕೃಷ್ಣ ತನ್ನ ಸುದರ್ಶನ ಚಕ್ರದಿಂದ ಶಿಶುಪಾಲನ ವಧೆಗೈದ. ಆ ಚಕ್ರ ಹಿಂದಿರುಗುವಾಗ ಶ್ರೀಕೃಷ್ಣನ ಮುಂಗೈಗೆ ಗಾಯವಾಗಿ ರಕ್ತ ಚಿಮ್ಮಲಾರಂಭಿಸಿತು. ಕೃಷ್ಣನ ಸಮ್ಮುಖವೇ ಇದ್ದ ದ್ರೌಪದಿ ಆ ಕ್ಷಣವೇ ಸಹೋದರ ಶ್ರೀಕೃಷ್ಣನ ಕೈಗೆ ತನ್ನ ಸೀರೆಯ ಸೆರಗನ್ನು ಹರಿದು ಕಟ್ಟಿ, ರಕ್ತ ಸೋರುವುದನ್ನು ನಿಲ್ಲಿಸಿದಳಂತೆ. ಆಗ ಕೃಷ್ಣನು, “ಪ್ರೀತಿಯಿಂದ ನೀನು ನನ್ನ ಕೈಗೆ ಕಟ್ಟಿದ ಬಟ್ಟೆಯ ಪ್ರತಿಯೊಂದು ನೂಲಿನ ಸಾಲವನ್ನು ಸಮಯ ಬಂದಾಗ ಮರುಪಾವತಿಸುವೆ” ಎಂದು ಶಪಥ ಮಾಡಿದ. ಮುಂದೆ ತುಂಬು ಸಭೆಯಲ್ಲಿ ದುರುಳ ದುಃಶಾಸನ, ದ್ರೌಪದಿಯ ವಸ್ತ್ರಾಪಹರಣ ಮಾಡುವಾಗ, ಆಕೆ ಉಟ್ಟ ಸೀರೆ ಅಕ್ಷಯವಾಗುವಂತೆ ಆಶೀರ್ವದಿಸಿದ. ಆ ದಿನವೂ ಶ್ರಾವಣ ಪೂರ್ಣಿಮೆಯೇ ಆಗಿತ್ತು. ಕೃಷ್ಣನಂತಹ ತನ್ನ ಸಹೋದರ ತನ್ನನ್ನು ಸದಾ ರಕ್ಷಿಸಲೆಂದು ದ್ರೌಪದಿಯಂತಹ ಸಹೋದರಿ ಪ್ರತಿವರ್ಷ ನೂಲೆಳೆಯ ರಾಖಿ ಕಟ್ಟಿ ಆತನ ಶ್ರೀರಕ್ಷೆ ಪಡೆಯುತ್ತಾಳೆ.
ಇನ್ನು ಕ್ರಿಸ್ತಪೂರ್ವದಲ್ಲಿ ಗ್ರೀಕ್ ಚಕ್ರವರ್ತಿ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಿದ್ದ. ಆತ ಪಂಜಾಬಿನ ಚಕ್ರವರ್ತಿ ಪೌರವವನ್ನು ಎದುರಿಸಬೇಕಿತ್ತು. ಈ ಸಮಯದಲ್ಲಿ ಅಲೆಕ್ಸಾಂಡರ್‌ನ ಪತ್ನಿ ರೊಕ್ಸಾನಾ ಪತಿಯ ಜೀವದ ಬಗ್ಗೆ ಚಿಂತಿತಳಾಗಿದ್ದಳು. ಆಕೆಗೆ ಪೌರವನ ಶೌರ್ಯದ ಬಗ್ಗೆ ತಿಳಿದಿದ್ದಳು. ರಾಖಿಯ ಪವಿತ್ರತೆಯ ಕುರಿತೂ ಆಕೆಗೆ ಗೊತ್ತಿತ್ತು. ಆಕೆ ಪೌರವನಿಗೆ ರಾಖಿ ಕಳುಹಿಸಿ ಯುದ್ಧಭೂಮಿಯಲ್ಲಿ ತನ್ನ ಪತಿಗೆ ಯಾವ ಹಾನಿಯೂ ಆಗದಂತೆ ನೋಡಿಕೊಳ್ಳಲು ಕೋರಿದಳಂತೆ. ಯುದ್ಧದ ವೇಳೆ ಪೌರವನು ಅಲೆಕ್ಸಾಂಡರ್ ಕುತ್ತಿಗೆಗೆ ಕತ್ತಿ ಹಿಡಿದಾಗ ರೊಕ್ಸಾನಾಳಿಗೆ ತಾನು ಭರವಸೆ ನೀಡಿದ್ದರ ನೆನಪಾಗಿ ಅವನನ್ನು ಬಿಟ್ಟುಬಿಟ್ಟನಂತೆ. ರಾಖಿಯ ಗೌರವವನ್ನು, ಆಕೆಗೆ ಸಹೋದರನ ಮೇಲಿದ್ದ ಭರವಸೆಯನ್ನೂ ಉಳಿಸಿದ್ದ ಪೌರವ.
ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಚಕ್ರವರ್ತಿ ಬಹದ್ದೂರ್ ಷಾ ಈಕೆಯ ರಾಜ್ಯದ ಮೇಲೆ ದಂಡೆತ್ತಿ ಬರುವ ನಿರ್ಧಾರಕ್ಕೆ ಬಂದಿದ್ದ. ಆಕೆಯು ಚಕ್ರವರ್ತಿ ಹುಮಾಯೂನನ ಸಹಾಯವನ್ನು ಬಯಸಿ ಆತನಿಗೆ ರಾಖಿ ಕಳುಹಿಸಿದಳು. ಇದನ್ನು ಸ್ವೀಕರಿಸಿದ ಹುಮಾಯೂನನು ತನ್ನ ಸೇನೆಯನ್ನು ರಾಣಿ ಕರ್ಣಾವತಿಯ ಸಹಾಯಕ್ಕೆ ಧಾವಿಸುವಂತೆ ಸೂಚಿಸಿದನು. ಆದರೆ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು. ಕರ್ಣಾವತಿಯು ಇತರೆ ಹೆಂಗಸರೊಂದಿಗೆ ಜೌಹರ್ ಮಾಡಿಕೊಂಡು ಪ್ರಾಣತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾನನ್ನು ಹುಮಾಯೂನ್ ಹೊರಗೆ ಹಾಕಿ, ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಕೂರಿಸಿದನು.
ಇದನ್ನೂ ಓದಿ: Rakshabandhan Festival: ರಕ್ಷಾ ಬಂಧನಕ್ಕೆ ಟ್ರೆಂಡಿಯಾದ 5 ಶೈಲಿಯ ಆಕರ್ಷಕ ರಾಖಿ
ಹೀಗೆ ಹಲವು ಕತೆಗಳು ರಾಖಿಯ ಜತೆಗೆ ಜೋಡಿಕೊಂಡಿವೆ. ಗುರುಪೂರ್ಣಿಮೆಯ ದಿನದಂದು ಪ್ರಾರಂಭವಾಗುವ ಪ್ರಸಿದ್ಧ ಅಮರನಾಥ ಯಾತ್ರೆ ಕೂಡ ಶ್ರಾವಣ ಶುದ್ಧ ಪೂರ್ಣಿಮೆಯ ದಿನ ಸಂಪೂರ್ಣಗೊಳ್ಳುತ್ತದೆ. ಅನೇಕ ಪೌರಾಣಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯುಳ್ಳ ರಕ್ಷಾಬಂಧನದ ಈ ಪಾವನ ಪರ್ವಕ್ಕೆ ದ್ವೇಷ, ಕೋಪಗಳನ್ನು ತಣಿಸಿ ಹೊಸ ಬಾಂಧವ್ಯ ಬೆಸೆಯುವ ಶಕ್ತಿಯಿದೆ. ಜಾತಿ ಮತ ಪಂಥಗಳ ಬೇಧವಿಲ್ಲದೆ ಆಚರಿಸಲ್ಪಡುವ ರಕ್ಷಾ ಬಂಧನದ ಪಾವನ ಪರ್ವ ಭಾರತದ ಭವ್ಯ ಸಂಸ್ಕೃತಿಯ ಸಂಕೇತ.